Connect with us

ದೇಶ

KPSC ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ; ಸಮಗ್ರ ತನಿಖೆಗೆ ಸಿಎಂಗೆ ಪ್ರಲ್ಹಾದ್ ಜೋಶಿ ಪತ್ರ

Published

on

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗ (KPSC) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ವಿರುದ್ಧ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.

ಕೈಗಾರಿಕಾ ವಿಸ್ತರಣಾಧಿಕಾರಿ (Industrial Extension Officer) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು KPSC ಕಾರ್ಯದರ್ಶಿಯವರು ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿರುವುದಾಗಿ ಜೋಶಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಜೋಶಿ ಅವರ ಆರೋಪದ ಪ್ರಕಾರ, ನೇಮಕಾತಿ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರೂ ಅಭ್ಯರ್ಥಿಗಳಾಗಿದ್ದರು. ಆಯೋಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲೇ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಅಂತಿಮ ಆಯ್ಕೆ ನಡಾವಳಿಗಳಿಗೂ ಸಹಿ ಹಾಕಿರುವುದು ಸಹಜ ನ್ಯಾಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಅಧ್ಯಕ್ಷರ ಪುತ್ರಿಯರಲ್ಲಿ ಒಬ್ಬರು ಮೀಸಲಾತಿ ಪಡೆಯಲು ಅಗತ್ಯವಾದ ಆದಾಯ ಮಾನದಂಡಗಳನ್ನು ಪೂರೈಸಿಲ್ಲ ಹಾಗೂ ತಪ್ಪು ಮಾಹಿತಿ ನೀಡಿ ಮೀಸಲಾತಿ ಸೌಲಭ್ಯ ಪಡೆದಿರುವ ಆರೋಪವೂ ಕೇಳಿಬಂದಿದೆ. ಇದು ಅರ್ಹ ಅಭ್ಯರ್ಥಿಗಳ ಹಕ್ಕಿಗೆ ಧಕ್ಕೆ ತರುವ ವಿಚಾರವಾಗಿದ್ದು, KPSC ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಪಾರದರ್ಶಕ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪ್ರತ್ಯೇಕ ಪತ್ರ ಬರೆದಿರುವ ಪ್ರಲ್ಹಾದ್ ಜೋಶಿ, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರಕಬೇಕಾದರೆ ಸತ್ಯಾಸತ್ಯತೆ ಬಹಿರಂಗವಾಗುವುದು ಅಗತ್ಯ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯ ಹಾಗೂ ಉದ್ಯೋಗಾಕಾಂಕ್ಷಿಗಳ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ದೇಶ

ಪಾಕಿಸ್ತಾನದಲ್ಲಿ 125 ವರ್ಷದ ಗುರುದ್ವಾರ ಧ್ವಂಸ; ಭಾರತದಿಂದ ತೀವ್ರ ಖಂಡನೆ

Published

on

ನವದೆಹಲಿ: ಪಾಕಿಸ್ತಾನದ ಫಾರೂಕಾಬಾದ್‌ನಲ್ಲಿ ಇರುವ ಸುಮಾರು 125 ವರ್ಷಗಳ ಇತಿಹಾಸ ಹೊಂದಿರುವ ‘ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್’ ಧ್ವಂಸಗೊಳಿಸಿರುವ ಘಟನೆಗೆ ಭಾರತ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಕೃತ್ಯವನ್ನು “ಉದ್ದೇಶಪೂರ್ವಕ ಧ್ವಂಸ” ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದೆ.

ಜೂನ್ 24 ಮತ್ತು 25ರ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಗಳು ಗುರುದ್ವಾರದ ಕೆಲವು ಭಾಗಗಳನ್ನು ಹಾನಿಗೊಳಿಸಿರುವ ವರದಿಗಳ ಹಿನ್ನೆಲೆಯಲ್ಲಿ ಭಾರತ ಅಧಿಕೃತ ಪ್ರತಿಕ್ರಿಯೆ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ಐತಿಹಾಸಿಕ ಧಾರ್ಮಿಕ ಕ್ಷೇತ್ರದ ಮೇಲಿನ ಈ ದಾಳಿಯು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದ್ದು, ಇಂತಹ ಕೃತ್ಯಗಳನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಭಾರತದ ಪ್ರಕಾರ, ಇದು ಪ್ರತ್ಯೇಕ ಘಟನೆ ಅಲ್ಲ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಅವರ ಆರಾಧನಾ ಕೇಂದ್ರಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಈ ಘಟನೆ ಕೂಡ ಅದೇ ಸರಣಿಯ ಭಾಗವಾಗಿದೆ ಎಂದು ವಿದೇಶಾಂಗ ಸಚಿವಾಲಯ ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣಗಳಲ್ಲಿ ಸ್ಥಳೀಯ ಆಡಳಿತ ಹಾಗೂ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ತಕ್ಷಣ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು, ಧ್ವಂಸಗೊಂಡ ಗುರುದ್ವಾರವನ್ನು ಪುನರ್ ನಿರ್ಮಿಸಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದೆ.

ಈ ನಡುವೆ, ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪಕ ಸಮಿತಿ (DSGMC) ಕೂಡ ಭಾರತ ಸರ್ಕಾರ ಮಧ್ಯಪ್ರವೇಶಿಸಿ ಸಿಖ್ ಧಾರ್ಮಿಕ ಪರಂಪರೆಯ ರಕ್ಷಣೆಗೆ ಅಗತ್ಯ ರಾಜತಾಂತ್ರಿಕ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

Continue Reading

ದೇಶ

15 ದಿನಕ್ಕೆ ಕಾಶ್ಮೀರಕ್ಕೆ ಹೋದ ವ್ಯಕ್ತಿ, 700 ಅನಾಥ ಹೆಣ್ಣುಮಕ್ಕಳ ಬದುಕು ಬದಲಿಸಿದ ಮಹಾನ್ ಸೇವಕ!

Published

on

ಅಹ್ಮದ್‌ನಗರ/ಶ್ರೀನಗರ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದ ಅಧಿಕ್ ಕದಂ ಅವರ ಜೀವನ ಇಂದು ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದೆ. 1997ರಲ್ಲಿ ಕೇವಲ 15 ದಿನಗಳ ಸಂಶೋಧನಾ ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಅವರು, ಹಿಂಸಾಚಾರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳ ದುಸ್ಥಿತಿಯನ್ನು ಕಂಡು ತಮ್ಮ ಜೀವನವನ್ನೇ ಅವರ ಸೇವೆಗೆ ಮುಡಿಪಾಗಿಟ್ಟರು.

ಗಡಿ ನಿಯಂತ್ರಣ ರೇಖೆ (LoC) ಸಮೀಪದ ಕುಪ್ವಾರ ಪ್ರದೇಶದಲ್ಲಿ ಕೆಲಸ ಆರಂಭಿಸಿದ ವೇಳೆ ಉಗ್ರರು ಅವರನ್ನು 19 ಬಾರಿ ಅಪಹರಿಸಿದ್ದರು. ಆದರೆ ಸ್ಥಳೀಯ ಕಾಶ್ಮೀರಿಗಳ ಬೆಂಬಲದಿಂದ ಪ್ರತಿ ಬಾರಿ ಅವರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದರು. ಜೀವ ಬೆದರಿಕೆಯ ನಡುವೆಯೂ ಅವರು ತಮ್ಮ ಸೇವಾ ಕಾರ್ಯವನ್ನು ನಿಲ್ಲಿಸಲಿಲ್ಲ.

2002ರಲ್ಲಿ ಅವರು ಬಾರ್ಡರ್‌ಲೆಸ್ ವರ್ಲ್ಡ್ ಫೌಂಡೇಶನ್ (BWF) ಸ್ಥಾಪಿಸಿ, ‘ಬಸೇರಾ-ಎ-ತಬಸ್ಸುಮ್’ ಹೆಸರಿನ ಅನಾಥಾಶ್ರಮಗಳ ಮೂಲಕ ಹಿಂಸಾಚಾರದಲ್ಲಿ ಸರ್ವಸ್ವ ಕಳೆದುಕೊಂಡ 700ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಆಶ್ರಯ, ಶಿಕ್ಷಣ ಹಾಗೂ ಹೊಸ ಬದುಕು ನೀಡಿದರು. ಇಂದು ಅವರಲ್ಲಿ ಹಲವರು ವೈದ್ಯರು, ಇಂಜಿನಿಯರ್‌ಗಳು ಮತ್ತು ವಕೀಲರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ಇದರ ಜೊತೆಗೆ ‘ರಾಹ್-ಎ-ನಿಸ್ವಾನ್’ ಯೋಜನೆಯಡಿ ಮಹಿಳೆಯರಿಗೆ ಸ್ವಾವಲಂಬನೆಯ ತರಬೇತಿ ನೀಡುವುದರೊಂದಿಗೆ, ದಾಲ್ ಸರೋವರದ ನಿವಾಸಿಗಳಿಗಾಗಿ ಆಮ್ಲಜನಕ ಹಾಗೂ ವೈದ್ಯಕೀಯ ಸೌಲಭ್ಯ ಹೊಂದಿರುವ ‘ಶಿಖಾರಾ ವಾಟರ್ ಆಂಬ್ಯುಲೆನ್ಸ್’ ಸೇವೆಯನ್ನು ಆರಂಭಿಸಿ ನೂರಾರು ಜೀವಗಳನ್ನು ರಕ್ಷಿಸಿದ್ದಾರೆ. ‘ಕಾಶ್ಮೀರ್ ಲೈಫ್ ಲೈನ್’ ಯೋಜನೆಯಡಿ ಉಚಿತ ಆಂಬ್ಯುಲೆನ್ಸ್ ಸೇವೆ ಹಾಗೂ ಪೆಲೆಟ್ ಗನ್‌ನಿಂದ ದೃಷ್ಟಿ ಕಳೆದುಕೊಂಡ ಯುವಕರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದಲೈ ಲಾಮಾ ಅವರಿಂದ ಪ್ರತಿಷ್ಠಿತ ‘ಮದರ್ ತೆರೇಸಾ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಪ್ರೀತಿ, ಕರುಣೆ ಮತ್ತು ಸೇವೆಯ ಮೂಲಕ ಸಮಾಜವನ್ನು ಬದಲಾಯಿಸಬಹುದು ಎಂಬುದಕ್ಕೆ ಅಧಿಕ್ ಕದಂ ಅವರ ಬದುಕು ಜೀವಂತ ಉದಾಹರಣೆಯಾಗಿದೆ.

Continue Reading

ಅಪರಾಧ

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅವಘಡ; ಅಕ್ರಮ ಕ್ವಾರೆಯಲ್ಲಿ 7 ಕಾರ್ಮಿಕರು ಬಲಿ

Published

on

ಬೆಂಗಳೂರು, ಜು. 2: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಸಮೀಪದ ಕಲ್ಲು ಕ್ವಾರೆಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿ ಕ್ರಷರ್ನಲ್ಲಿ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಬಹುತೇಕರು ಬಿಹಾರ ಹಾಗೂ ಅಸ್ಸಾಂ ಮೂಲದ ಕಾರ್ಮಿಕರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕನಹಳ್ಳಿ (ಹುಲವೇನಹಳ್ಳಿ ಗ್ರಾಮ) ಸಮೀಪ ಈ ಘಟನೆ ನಡೆದಿದೆ. ಕ್ವಾರಿಯಲ್ಲಿ ಬಂಡೆ ಸ್ಫೋಟಿಸುವ ವೇಳೆ ದೊಡ್ಡ ಬಂಡೆ ಕುಸಿದು ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯ ಈ ಕ್ವಾರಿಯನ್ನು ಸೂಕ್ತ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ದೊಡ್ಡ ಬಂಡೆಗಳನ್ನು ಪುಡಿಮಾಡಲು ಅತಿ ತೀವ್ರ ಸ್ಫೋಟಕಗಳನ್ನು ಬಳಸಿದ್ದರಿಂದಲೇ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಪನ ಉಂಟಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಗಣಿಗಾರಿಕೆ ನಡೆದಿದೆಯೇ ಎಂಬ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದೆ.

Continue Reading

Trending