ಅಪರಾಧ
ಬೆಂಗಳೂರು ಕಲ್ಲು ಕ್ವಾರಿ ದುರಂತ: ‘ಕ್ವಾರಿ ಮಾಲೀಕನನ್ನು ತಕ್ಷಣ ಬಂಧಿಸಿ, ₹1 ಕೋಟಿ ಪರಿಹಾರ ನೀಡಲಿ’ – ಶಾಸಕ ಎಸ್.ಟಿ. ಸೋಮಶೇಖರ್ ಆಗ್ರಹ
ಬೆಂಗಳೂರು/ರಾಮನಗರ, ಜು. 3: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಬಳಿ ಸಂಭವಿಸಿದ ಭೀಕರ ಕಲ್ಲು ಕ್ವಾರಿ ದುರಂತಕ್ಕೆ ಸಂಬಂಧಿಸಿದಂತೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (ST Somashekar) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ವಾರಿ ಮಾಲೀಕನನ್ನು ತಕ್ಷಣವೇ ಬಂಧಿಸಿ ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ಕ್ವಾರಿಗಳಲ್ಲಿ ಅಕ್ರಮ ಬ್ಲಾಸ್ಟಿಂಗ್ ಬಗ್ಗೆ ತಾವು ಈ ಹಿಂದೆಯೇ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದಾಗಿ ಹೇಳಿದರು. ಕಾನೂನುಬದ್ಧವಾಗಿ ಮಾತ್ರ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸುವಂತೆ ಕ್ವಾರಿ ಮಾಲೀಕರ ಸಭೆ ಕರೆದು ಎಚ್ಚರಿಕೆ ನೀಡಲಾಗಿತ್ತು. ಗರ್ಭಿಣಿ ಚಿರತೆ ಸಾವನ್ನಪ್ಪಿದ ಸಂದರ್ಭದಲ್ಲಿಯೂ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದೆ ಎಂದು ಅವರು ನೆನಪಿಸಿದರು.
ದುರಂತ ಬೆಳಗ್ಗೆ ಸುಮಾರು 7 ಗಂಟೆ ವೇಳೆಗೆ ಸಂಭವಿಸಿದ್ದು, 10 ಕಾರ್ಮಿಕರ ಪೈಕಿ 8 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ಸೋಮಶೇಖರ್ ಹೇಳಿದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕ್ವಾರಿ ಸಂಪೂರ್ಣ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ತಾವು ಹಿಂದೆ ವಿಧಾನಸಭೆಯಲ್ಲೂ ಹಾಗೂ ಪಿಟಿಷನ್ ಸಮಿತಿ ಸಭೆಯಲ್ಲೂ ಪ್ರಶ್ನೆ ಎತ್ತಿದ್ದೆ ಎಂದು ಹೇಳಿದರು. ಆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ವೈಫಲ್ಯ ಎಂದು ಆರೋಪಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲವು ಅಧಿಕಾರಿಗಳ ಪಾತ್ರದ ಬಗ್ಗೆಯೂ ಗಂಭೀರ ಅನುಮಾನ ವ್ಯಕ್ತಪಡಿಸಿದ ಅವರು, ಕ್ವಾರಿ ಮಾಲೀಕ ಮಾತ್ರವಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೂ ತಂದು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ತಿಳಿಸಿದ ಸೋಮಶೇಖರ್, ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ದೊರೆಯಬೇಕು ಹಾಗೂ ಕ್ವಾರಿ ಮಾಲೀಕನಿಂದಲೇ ₹1 ಕೋಟಿ ಪರಿಹಾರ ನೀಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಅಪರಾಧ
ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅವಘಡ; ಅಕ್ರಮ ಕ್ವಾರೆಯಲ್ಲಿ 7 ಕಾರ್ಮಿಕರು ಬಲಿ
ಬೆಂಗಳೂರು, ಜು. 2: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಸಮೀಪದ ಕಲ್ಲು ಕ್ವಾರೆಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿ ಕ್ರಷರ್ನಲ್ಲಿ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಬಹುತೇಕರು ಬಿಹಾರ ಹಾಗೂ ಅಸ್ಸಾಂ ಮೂಲದ ಕಾರ್ಮಿಕರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕನಹಳ್ಳಿ (ಹುಲವೇನಹಳ್ಳಿ ಗ್ರಾಮ) ಸಮೀಪ ಈ ಘಟನೆ ನಡೆದಿದೆ. ಕ್ವಾರಿಯಲ್ಲಿ ಬಂಡೆ ಸ್ಫೋಟಿಸುವ ವೇಳೆ ದೊಡ್ಡ ಬಂಡೆ ಕುಸಿದು ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯ ಈ ಕ್ವಾರಿಯನ್ನು ಸೂಕ್ತ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ದೊಡ್ಡ ಬಂಡೆಗಳನ್ನು ಪುಡಿಮಾಡಲು ಅತಿ ತೀವ್ರ ಸ್ಫೋಟಕಗಳನ್ನು ಬಳಸಿದ್ದರಿಂದಲೇ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಪನ ಉಂಟಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಗಣಿಗಾರಿಕೆ ನಡೆದಿದೆಯೇ ಎಂಬ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದೆ.
ಅಪರಾಧ
ಸಂಸದೆ ಆಲಿಯಾ ನಾಸಿಫ್ ಬಂಧನ; ಮನೆಯಲ್ಲಿ ₹146 ಕೋಟಿ ನಗದು ಪತ್ತೆ
ಬಾಗ್ದಾದ್: ಇರಾಕ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಸರ್ಕಾರ ಕೈಗೊಂಡಿರುವ ಅತಿದೊಡ್ಡ ಕಾರ್ಯಾಚರಣೆಯಲ್ಲಿ ಹಲವು ಸಂಸದರು ಹಾಗೂ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ ಹಾಗೂ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ಅಲಿ ಅಲ್ ಜೈದಿ ಅವರ ನಿರ್ದೇಶನದ ಮೇರೆಗೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಈ ಕಾರ್ಯಾಚರಣೆ ನಡೆಸಿವೆ. ವರದಿಗಳ ಪ್ರಕಾರ, ಹಲವು ಸ್ಥಳಗಳಲ್ಲಿ ಶೋಧ ನಡೆಸಿದ ಅಧಿಕಾರಿಗಳು ಸುಮಾರು ₹3,000 ಕೋಟಿ ಮೌಲ್ಯದ ನಗದು, ಚಿನ್ನ ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇರಾಕ್ ಸಂಸದೆ ಆಲಿಯಾ ನಾಸಿಫ್ ಅವರ ನಿವಾಸದಿಂದ ಸುಮಾರು 20 ಬಿಲಿಯನ್ ಇರಾಕಿ ದಿನಾರ್ (ಸುಮಾರು ₹146 ಕೋಟಿ) ನಗದು, ಅಪಾರ ಪ್ರಮಾಣದ ಚಿನ್ನ ಹಾಗೂ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಿಯಾ ನಾಸಿಫ್ ಹಾಗೂ ಅವರ ಪುತ್ರರನ್ನು ಬಂಧಿಸಲಾಗಿದೆ ಎಂಬ ವರದಿಗಳು ಹೊರಬಿದ್ದಿವೆ.
ಆಲಿಯಾ ನಾಸಿಫ್ ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಗುರುತಿಸಿಕೊಂಡಿದ್ದ ರಾಜಕಾರಣಿಯಾಗಿದ್ದರು. ಇದೀಗ ಅವರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದು ದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವ ಅದ್ನಾನ್ ಅಲ್ ಜುಮೈಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.
ಇದೇ ವೇಳೆ ಕೆಲವು ಖಾಸಗಿ ನಿವಾಸಗಳ ನೆಲದಡಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಇರಾಕಿ ಕರೆನ್ಸಿ ಮತ್ತು ಅಮೂಲ್ಯ ಆಸ್ತಿಗಳನ್ನು ಸಹ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ಅಲಿ ಅಲ್ ಜೈದಿ, ದೇಶದಲ್ಲಿನ ಭ್ರಷ್ಟಾಚಾರ ಜಾಲಗಳನ್ನು ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದರು. ಅದರ ಭಾಗವಾಗಿ ಈ ಕಾರ್ಯಾಚರಣೆ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಸೂಚನೆ: ಈ ವರದಿಯಲ್ಲಿರುವ ಮಾಹಿತಿ ವಿವಿಧ ಅಂತರರಾಷ್ಟ್ರೀಯ ವರದಿಗಳು ಮತ್ತು ಅಧಿಕಾರಿಗಳ ಹೇಳಿಕೆಗಳ ಆಧಾರಿತವಾಗಿದೆ. ಆರೋಪಿತರ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅವು ಆರೋಪಗಳಾಗಿಯೇ ಪರಿಗಣಿಸಲಾಗುತ್ತದೆ.
ಅಪರಾಧ
ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರೀ ನೇಮಕಾತಿ ಅಕ್ರಮ? ₹20 ಲಕ್ಷ ಲಂಚ ಆರೋಪ ಸ್ಫೋಟ!
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗಂಭೀರ ಭ್ರಷ್ಟಾಚಾರ ಮತ್ತು ಅವ್ಯವಹಾರದ ಆರೋಪಗಳು ಕೇಳಿಬಂದಿದ್ದು, ಸಂಘದ ಆಡಳಿತ ಮಂಡಳಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಸಂಘದಲ್ಲಿ ಸುಮಾರು 480 ಹುದ್ದೆಗಳ ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭಾರೀ ಅಕ್ರಮ ನಡೆದಿದೆ ಎಂದು ಕೆಲ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಆರೋಪಗಳ ಪ್ರಕಾರ, ಒಂದು ಹುದ್ದೆಗೆ ₹10 ಲಕ್ಷದಿಂದ ₹20 ಲಕ್ಷವರೆಗೆ ಲಂಚ ಪಡೆದು ನೇಮಕಾತಿ ಮಾಡಲಾಗಿದೆ ಎನ್ನಲಾಗಿದೆ. ಕೇಡರ್ ಮತ್ತು ರಿಕ್ರೂಟ್ಮೆಂಟ್ (C&R) ನಿಯಮಗಳ ಪ್ರಕಾರ, ಯಾವುದೇ ಹುದ್ದೆ ಭರ್ತಿ ಮಾಡುವ ಮುನ್ನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕು. ಜೊತೆಗೆ ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಅನುಭವ, ಸಂದರ್ಶನ ಹಾಗೂ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು. ಆದರೆ ಈ ಎಲ್ಲ ನಿಯಮಗಳನ್ನು ಕಡೆಗಣಿಸಿ, ಸಂಬಂಧಿಕರು ಹಾಗೂ ಹಣ ನೀಡಿದವರಿಗೆ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಜಾಹೀರಾತು ನೀಡದೇ, ಅರ್ಜಿ ಆಹ್ವಾನಿಸದೇ ನೇಮಕಾತಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಕಂಪ್ಯೂಟರ್ ಜ್ಞಾನವಿಲ್ಲದವರಿಗೂ ಎಸ್‌ಡಿಎ/ಕಂಪ್ಯೂಟರ್ ಆಪರೇಟರ್ ಹುದ್ದೆ ನೀಡಲಾಗಿದೆ ಎಂದು ದೂರಲಾಗಿದೆ.
ಈ ಸಂಬಂಧ ಸಹಕಾರ ಸಂಘಗಳ ನೋಂದಣಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ಆರೋಪಿಸಿರುವ ಪದಾಧಿಕಾರಿಗಳು, ತಮ್ಮ ಬಳಿ ದಾಖಲೆಗಳು, ಆಡಿಯೊ ಮತ್ತು ವಿಡಿಯೊ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ, ಪ್ರಕರಣವನ್ನು ನ್ಯಾಯಾಲಯಕ್ಕೂ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.
ಆದರೆ, ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ. ಆರೋಪಗಳ ಸತ್ಯಾಸತ್ಯತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ತನಿಖೆಯ ಬಳಿಕವೇ ಸ್ಪಷ್ಟತೆ ದೊರೆಯಲಿದೆ.
-
ದೇಶ19 hours agoಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಶೀಘ್ರ? ಡಿಕೆ ಶಿವಕುಮಾರ್ ನೀಡಿದ ಮಹತ್ವದ ಸುಳಿವು
-
ದೇಶ22 hours ago‘ದೇವಸ್ಥಾನಗಳ ಮುಂದೆ ಈಗ ಹುಂಡಿ ಹಣ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಬೇಕು’ – ಹರಿಪ್ರಸಾದ್ ವ್ಯಂಗ್ಯ
-
ಬೆಂಗಳೂರು19 hours agoಆಯೋಗದ ನೋಟಿಸ್ಗೂ ಕ್ಯಾರೆ ಇಲ್ಲ! ಬೆಂಗಳೂರು ಉತ್ತರ ಎಸಿಗೆ ಭಾರೀ ದಂಡ
-
ದೇಶ23 hours ago‘ರಾಜಕೀಯ ಟೀಕೆ ಇರಲಿ, ಕುಟುಂಬದ ಬಗ್ಗೆ ಮಾತನಾಡಬೇಡಿ’; ಪ್ರದೀಪ್ ಈಶ್ವರ್ ಪ್ರಕರಣಕ್ಕೆ ಮಧು ಬಂಗಾರಪ್ಪ ಹೇಳಿಕೆ
-
ಕ್ರೀಡೆ23 hours agoಎಸ್. ಶ್ರೀಶಾಂತ್ ಮೇಲಿನ 3 ವರ್ಷದ ನಿಷೇಧ ವಾಪಸ್: ಕ್ಷಮೆಯಾಚನೆ ಬಳಿಕ ಕೇರಳ ಕ್ರಿಕೆಟ್ ಅಸೋಸಿಯೇಶನ್ ಮಹತ್ವದ ನಿರ್ಧಾರ
-
ಅಪರಾಧ22 hours agoಸಂಸದೆ ಆಲಿಯಾ ನಾಸಿಫ್ ಬಂಧನ; ಮನೆಯಲ್ಲಿ ₹146 ಕೋಟಿ ನಗದು ಪತ್ತೆ
-
ಅಪರಾಧ6 hours agoಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅವಘಡ; ಅಕ್ರಮ ಕ್ವಾರೆಯಲ್ಲಿ 7 ಕಾರ್ಮಿಕರು ಬಲಿ
-
ದೇಶ19 hours agoಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಎಸ್.ಟಿ. ಸೋಮಶೇಖರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
