Connect with us

ದೇಶ

“ಬೆಂಗಳೂರು ನನಗೆ ದುಪ್ಪಟ್ಟು ಶಕ್ತಿ ನೀಡುತ್ತದೆ!” – ಮರ್ಸಿಡಿಸ್ ಸಿಇಒ

ಬೆಂಗಳೂರು: “ನಾನು ಪ್ರತಿ ಬಾರಿ ಬೆಂಗಳೂರಿಗೆ ಭೇಟಿ ನೀಡಿದಾಗ, ನನ್ನಲ್ಲಿ ದುಪ್ಪಟ್ಟು ಶಕ್ತಿ ಸಂಚಯವಾಗುತ್ತದೆ!” — ಇದು ವಿಶ್ವದ ಅತಿದೊಡ್ಡ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಮರ್ಸಿಡಿಸ್ ಬೆಂಜ್ನ ಸಿಇಒ ಓಲಾ ಕೆಲೆನಿಯಸ್ ಅವರ ಮನದಾಳದ ಹೇಳಿಕೆ.

ಇತ್ತೀಚಿನ ‘ಗ್ಲೋಬಲ್ ಡೈಲಾಗ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಲ್ಲಿನ ವಾತಾವರಣ ಅದ್ಭುತ. ನಾನು ಜರ್ಮನಿಗೆಂದೂ ಭೇಟಿ ನೀಡದ, ಆದರೆ ನಿರರ್ಗಳವಾಗಿ ಜರ್ಮನ್ ಮಾತನಾಡುವ ಪ್ರತಿಭಾವಂತರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದೇನೆ. ಇಂತಹ ಪ್ರತಿಭೆಗಳು ಎಲ್ಲಿದ್ದರೂ, ನಾವು ಅಲ್ಲಿಗೆ ಹೋಗುತ್ತೇವೆ,” ಎಂದು ಬೆಂಗಳೂರಿನ ಜ್ಞಾನಕೇಂದ್ರಿತ ಪರಿಸರವನ್ನು ಶ್ಲಾಘಿಸಿದರು.

ಬೆಂಗಳೂರಿನ ಪ್ರತಿಭೆಗೆ ಬೆಂಜ್ ಬಾಸ್ ಫಿದಾ!
ಓಲಾ ಕೆಲೆನಿಯಸ್ ಅವರ ಮಾತುಗಳು ಬೆಂಗಳೂರಿನ ಜಾಗತಿಕ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಇದು ಬೆಂಗಳೂರಿನ ನಿಜವಾದ ಸಾಮರ್ಥ್ಯದ ಸಾಕ್ಷಿ. ನಾವು ಈಗ ಕೇವಲ ಔಟ್‌ಸೋರ್ಸಿಂಗ್ ನಗರವಲ್ಲ — ಜಾಗತಿಕ ನಾವೀನ್ಯತೆಯ ಕೇಂದ್ರಬಿಂದು,” ಎಂದು ಹೇಳಿದರು.

ಸಾಮರ್ಥ್ಯಕ್ಕೆ ಬೆಲೆ, ಅಗ್ಗದ ಕೆಲಸಕ್ಕೆ ಅಲ್ಲ:
“ಜಾಗತಿಕ ಸಿಇಒಗಳನ್ನು ಬೆಂಗಳೂರಿಗೆ ಸೆಳೆಯುತ್ತಿರುವುದು ಅಗ್ಗದ ಮಾನವ ಶಕ್ತಿಯಲ್ಲ, ಆದರೆ ಇಲ್ಲಿರುವ ಆಳವಾದ ತಾಂತ್ರಿಕ ಪರಿಣತಿ,” ಎಂದು ಖರ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಏಷ್ಯಾ-ಪೆಸಿಫಿಕ್‌ನಲ್ಲಿ ನಂಬರ್ ಒನ್ ನಗರ:
ಅವರು ಮುಂದುವರಿಸಿ, “ಇಂದು ತಂತ್ರಜ್ಞಾನ ಪ್ರತಿಭೆಗಳನ್ನು ಆಕರ್ಷಿಸುವುದರಲ್ಲಿ ಬೆಂಗಳೂರು ಏಷ್ಯಾ-ಪೆಸಿಫಿಕ್ ವಲಯದಲ್ಲಿ ಮೊದಲ ಸ್ಥಾನದಲ್ಲಿದೆ. ನಮ್ಮ ನಗರ ಜಗತ್ತಿನ ನಾಯಕತ್ವ ಸೃಷ್ಟಿಸುವ ಕೇಂದ್ರವಾಗಿದೆ,” ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ಬೆಂಗಳೂರಿನ ಐಟಿ ಮತ್ತು ಟೆಕ್ ವಲಯದ ಸಾಮರ್ಥ್ಯವನ್ನು ಜಗತ್ತಿನ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.

ದೇಶ

ಜೈರಾಮ್ ರಮೇಶ್‌ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”

ಹೊಸದಿಲ್ಲಿ: ಪರಿಸರ ಪರವಾನಿಗೆಗೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ಇದೆಲ್ಲವನ್ನೂ ನೀವು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾಡುತ್ತಿದ್ದೀರಾ?” ಎಂದು ತ್ರಿಸದಸ್ಯ ಪೀಠ ಕಿಡಿಕಾರಿತು.

ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ನ್ಯಾ. ಸೂರ್ಯಕಾಂತ್, ನ್ಯಾ. ಜಾಯ್‌ಮಾಲ್ಯ ಬಾಗ್ಚಿ ಹಾಗೂ ನ್ಯಾ. ಉಜ್ಜಲ್ ಭುಯಾನ್ ಇದ್ದರು. ಪರಿಸರ ಪರವಾನಿಗೆಯನ್ನು ಪೂರ್ವ ಅನ್ವಯವಾಗುವಂತೆ (Retrospective Environmental Clearance) ನೀಡುವ ಕ್ರಮವನ್ನು ಪ್ರಶ್ನಿಸಿ ಜೈರಾಮ್ ರಮೇಶ್ ರಿಟ್ ಅರ್ಜಿ ಸಲ್ಲಿಸಿದ್ದರು.

ರಿಟ್ ಅರ್ಜಿ ಸ್ವೀಕರಿಸಲು ನಿರಾಕರಣೆ

ವಿಚಾರಣೆ ವೇಳೆ ಪೀಠ, ಈ ಅರ್ಜಿ ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಹೈಲೆಟ್ ಮಾಡುವ ಬದಲು ಸಾರ್ವಜನಿಕ ಗಮನ ಸೆಳೆಯಲು ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟಿತು. ನವೆಂಬರ್ 2025ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಫೆ.12) ಸ್ವೀಕರಿಸಲು ನಿರಾಕರಿಸಿತು.

“ದಂಡ ಎದುರಿಸಲು ಸಿದ್ದರಾಗಿ” ಎಚ್ಚರಿಕೆ

“ತೀರ್ಪಿನ ವಿರುದ್ಧ ರಿಟ್ ಅರ್ಜಿ ಯಾಕೆ? ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸಬಹುದು ಅಲ್ಲವೇ? ರಿಟ್ ಮೂಲಕ ಮರುಪರಿಶೀಲನೆ ಸಾಧ್ಯವಿಲ್ಲ ಎಂಬುದು ತಿಳಿದಿಲ್ಲವೇ? ದಂಡ ಎದುರಿಸಲು ಸಿದ್ದರಾಗಿ” ಎಂದು ನ್ಯಾ. ಸೂರ್ಯಕಾಂತ್ ಎಚ್ಚರಿಸಿದರು.

ನ್ಯಾಯಾಲಯದ ಎಚ್ಚರಿಕೆಯ ಬಳಿಕ ಜೈರಾಮ್ ರಮೇಶ್ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ವಿನಂತಿಸಿಕೊಂಡರು. ನ್ಯಾಯಪೀಠ ಅದಕ್ಕೆ ಅನುಮತಿ ನೀಡಿ, ಕಾನೂನಿನ ಪ್ರಕಾರ ಲಭ್ಯವಿರುವ ಪರಿಹಾರವನ್ನು ಪಡೆಯುವಂತೆ ಸೂಚಿಸಿತು.


ಪ್ರಕರಣದ ಹಿನ್ನೆಲೆ

ಜೈರಾಮ್ ರಮೇಶ್ ಯಾವುದೇ ಯೋಜನೆ ಆರಂಭವಾದ ನಂತರ ಪರಿಸರ ಪರವಾನಿಗೆ ನೀಡುವ ಕ್ರಮವನ್ನು ಪ್ರಶ್ನಿಸಿದ್ದರು. ಈ ರೀತಿಯ ಅನುಮತಿ ಕಾನೂನುಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ವಾದಿಸಿದ್ದರು.

ಕೇಂದ್ರ ಸರ್ಕಾರದ ನಿಯಮ ಏನು?

  • 2006ರಲ್ಲಿ ಯೋಜನೆ ಆರಂಭಿಸುವ ಮೊದಲು ಪರಿಸರ ಪರವಾನಿಗೆ ಕಡ್ಡಾಯಗೊಳಿಸಲಾಗಿತ್ತು.
  • 2017 ಮತ್ತು 2021ರ ಅಧಿಸೂಚನೆಗಳ ಮೂಲಕ ಕೆಲವು ಯೋಜನೆಗಳಿಗೆ ಷರತ್ತುಬದ್ದ ಪೂರ್ವಾನ್ವಯ ಅನುಮತಿ ಅವಕಾಶ ನೀಡಲಾಗಿತ್ತು.
  • ಮೇ 2025ರಲ್ಲಿ ಈ ಕ್ರಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
  • ಆದರೆ ನವೆಂಬರ್ 2025ರಲ್ಲಿ CREDAI ಅರ್ಜಿಯ ವಿಚಾರಣೆ ವೇಳೆ ಹಿಂದಿನ ತೀರ್ಪಿನಲ್ಲಿ ಸಡಿಲಿಕೆ ನೀಡಲಾಗಿತ್ತು.

ಈ ಮರುಪರಿಶೀಲಿತ ತೀರ್ಪನ್ನೇ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.

Continue Reading

ದೇಶ

HAL ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?

ಬೆಂಗಳೂರು: ತನಗೆ ಹಾಗೂ ಸ್ನೇಹಿತೆಯಾಗಿರುವ ನಟಿಗೆ ಉದ್ಯಮಿ ಅರವಿಂದ್ ರೆಡ್ಡಿಯ ಕಾಲು ಹಿಡಿಯುವಂತೆ ಎಚ್‌ಎಎಲ್ ಠಾಣೆಯ ಇನ್ಸ್‌ಪೆಕ್ಟರ್ ಬೆದರಿಸಿದ್ದಾರೆ ಎಂದು ಆರೋಪಿಸಿ ಬಿ.ಕೆ. ವೈಶಾಕ್ ಕರ್ನಾಟಕ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿದ ಪ್ರಕರಣದಲ್ಲಿ ಎಚ್‌ಎಎಲ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಹಾಗೂ ಇನ್ಸ್‌ಪೆಕ್ಟರ್ ಅಜರುದ್ದೀನ್ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವೈಶಾಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಇನ್ಸ್‌ಪೆಕ್ಟರ್ ಅಜರುದ್ದೀನ್ ಹಾಗೂ ಅರವಿಂದ್ ರೆಡ್ಡಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಕಾಲಿಗೆ ಬೀಳುವಂತೆ ಸೂಚನೆ?

ಗುರುವಾರ ಅರ್ಜಿ ವಿಚಾರಣೆಗೆ ಬಂದಾಗ, ವೈಶಾಕ್ ಪರ ವಕೀಲರು ಹಾಜರಾಗಿ ಮಹತ್ವದ ಆರೋಪ ಮಂಡಿಸಿದರು. ಫೆಬ್ರವರಿ 6ರಂದು ಅರ್ಜಿದಾರರನ್ನು ಬಿಡುಗಡೆ ಮಾಡಲು ಹೈಕೋರ್ಟ್ ಸೂಚಿಸಿದ್ದರೂ, ಠಾಣೆಗೆ ಪ್ರಕರಣದಲ್ಲಿ ಹೆಸರು ಕೇಳಿಬಂದ ನಟಿಯನ್ನೂ ಕರೆಸಲಾಗಿತ್ತು. ಅಲ್ಲದೆ, ಅರವಿಂದ್ ರೆಡ್ಡಿಯ ಕಾಲಿಗೆ ಬೀಳುವಂತೆ ವೈಶಾಕ್‌ಗೆ ಸೂಚನೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಪ್ರಕರಣದ ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

ಜನವರಿಯಲ್ಲಿ ವೈಶಾಕ್ ಕೊರಿಯರ್ ಮೂಲಕ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ, ನಟಿಯೊಂದಿಗೆ ಇರುವ ಜಗಳ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ 6ರಿಂದ 7 ಕೋಟಿ ರೂ. ಹಣವನ್ನು ಕಳುಹಿಸಬೇಕು ಎಂದು ಒತ್ತಾಯಿಸಿದ್ದರು ಎಂಬ ಆರೋಪ ಇದೆ. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಅರವಿಂದ್ ರೆಡ್ಡಿ ದೂರು ನೀಡಿದ್ದು, ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಫೆಬ್ರವರಿ 2ರಂದು ನಟಿಯ ಮನೆಯಲ್ಲಿ ವೈಶಾಕ್ ಅವರನ್ನು ಬಂಧಿಸಲಾಗಿತ್ತು.

ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದೆ.

Continue Reading

ದೇಶ

Mumbai Musical Road: ‘ಜೈ ಹೋ’ ರಾಗ ಕೇಳಿಸುವ ಭಾರತದ ಮೊದಲ ಮ್ಯೂಸಿಕಲ್ ರಸ್ತೆ

ಮುಂಬೈ: ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ‘ಮ್ಯೂಸಿಕಲ್ ರೋಡ್’ ಅನ್ನು ಮುಂಬೈ ಕರಾವಳಿ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಈ ವಿಶೇಷ ರಸ್ತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವತಿಯಿಂದ ನಿರ್ಮಿಸಲಾದ ಈ ರಸ್ತೆ, ನಾರಿಮನ್ ಪಾಯಿಂಟ್‌ನಿಂದ ವರ್ಲಿ ಕಡೆಗೆ ಸಾಗುವ ಲೇನ್‌ನಲ್ಲಿ, ವರ್ಲಿ ಸುರಂಗದಿಂದ ಹೊರಬಂದ ಬಳಿಕ ಸುಮಾರು 500 ಮೀಟರ್ ದೂರದಲ್ಲಿ ಸ್ಥಾಪಿಸಲಾಗಿದೆ. ಈ ರಸ್ತೆಗೆ ‘ಛತ್ರಪತಿ ಸಂಭಾಜಿ ಮಹಾರಾಜ್’ ಹೆಸರು ಇಡಲಾಗಿದೆ.

70–80 ಕಿಮೀ ವೇಗದಲ್ಲಿ ‘ಜೈ ಹೋ’ ರಾಗ

ವಾಹನಗಳು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಸಂಚರಿಸಿದಾಗ, ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆಯಿಂದ ಶಬ್ದ ತರಂಗಗಳು ಉಂಟಾಗಿ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ‘ಜೈ ಹೋ’ ಹಾಡಿನ ರಾಗ ಕೇಳಿಸಿಕೊಳ್ಳುತ್ತದೆ ಎಂದು ಬಿಎಂಸಿ ತಿಳಿಸಿದೆ.

ಚಾಲಕರಿಗೆ ಸೂಚನೆ ನೀಡಲು 500 ಮೀಟರ್, 100 ಮೀಟರ್ ಹಾಗೂ 60 ಮೀಟರ್ ದೂರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ವಿಶ್ವದ ಐದನೇ ಮ್ಯೂಸಿಕಲ್ ರೋಡ್

ಈ ಕಲ್ಪನೆಯನ್ನು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದರು. 2007ರಲ್ಲಿ ಜಪಾನ್‌ನಲ್ಲಿ ಮೊದಲ ಬಾರಿಗೆ ಮ್ಯೂಸಿಕಲ್ ರಸ್ತೆ ಪರಿಚಯಿಸಲಾಯಿತು. ಬಳಿಕ ಹಂಗೇರಿ, ದಕ್ಷಿಣ ಕೊರಿಯಾ ಮತ್ತು ಯುಎಇ ದೇಶಗಳಲ್ಲಿ ಇಂತಹ ರಸ್ತೆಗಳನ್ನು ನಿರ್ಮಿಸಲಾಗಿದೆ. ಮುಂಬೈನಲ್ಲಿ ನಿರ್ಮಿತ ಈ ರಸ್ತೆ ವಿಶ್ವದ ಐದನೇ ಮತ್ತು ಭಾರತದ ಮೊದಲ ಮ್ಯೂಸಿಕಲ್ ರೋಡ್ ಎಂದು ಬಿಎಂಸಿ ಹೇಳಿದೆ.

ಈ ಹೊಸ ಪ್ರಯೋಗ ಪ್ರವಾಸಿಗರು ಮತ್ತು ವಾಹನ ಚಾಲಕರಿಗೆ ವಿಶಿಷ್ಟ ಅನುಭವ ನೀಡಲಿದ್ದು, ಮುಂಬೈ ನಗರದ ಮತ್ತೊಂದು ಆಕರ್ಷಣೆಯಾಗಿ ಹೊರಹೊಮ್ಮಲಿದೆ.

Continue Reading

Trending