ಅಪರಾಧ
ಅಂಕುಶ್ ಪ್ರಧಾನ್ ಕೆಸರಿನಲ್ಲಿ ಅಧಿಕಾರಿಯನ್ನು ಎಳೆದ ವಿಡಿಯೋ ವೈರಲ್
ಉತ್ತರ ಪ್ರದೇಶ: ಮುಜಫರ್ ನಗರದಲ್ಲಿ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ಅಂಕುಶ್ ಪ್ರಧಾನ್ ಅವರು ನೀರಾವರಿ ಇಲಾಖೆಯ ಉದ್ಯೋಗಿಯನ್ನು ಕೆಸರಿನಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಮುಜಫರ್ ನಗರ ಜಿಲ್ಲೆಯ ಖತೌಲಿ ತಹಸಿಲ್‌ನ ಭೂದ್ ಗ್ರಾಮದಲ್ಲಿ ನಡೆದಿದೆ. ನೀರಾವರಿ ಇಲಾಖೆಯ ತಂಡವು ಕಾಲುವೆ ಸ್ವಚ್ಛಗೊಳಿಸುವ ಕಾರ್ಯ ನಡೆಸುತ್ತಿದ್ದ ವೇಳೆ, ಹೂಳು ತೆಗೆದು ದಡದ ಮೇಲೆ ಸುರಿಸಲಾಯಿತು. ಈ ವೇಳೆ ಅಂಕುಶ್ ಪ್ರಧಾನ್ ಮತ್ತು ಕೆಲವು ಗ್ರಾಮಸ್ಥರು ಸ್ಥಳಕ್ಕೆ ಬಂದು, ರಸ್ತೆಯ ಪಕ್ಕದಲ್ಲಿ ಹೂಳು ಸುರಿಯುವಿಕೆಗೆ ವಿರೋಧ ವ್ಯಕ್ತಪಡಿಸಿದರು. ಬಳಿಕ ವಾಗ್ವಾದ ತೀವ್ರಗೊಂಡು ಅಂಕುಶ್ ಪ್ರಧಾನ್ ಅವರು ಇಲಾಖೆಯ ಅಧಿಕಾರಿ ಅರವಿಂದ್ ಕುಮಾರ್ ಅವರನ್ನು ಕೆಸರಿನಲ್ಲಿ ತಳ್ಳಿದ ದೃಶ್ಯಗಳು ವೈರಲ್ ಆಗಿವೆ.
ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆಯೇ, ನೀರಾವರಿ ಇಲಾಖೆಯ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಅಂಕುಶ್ ಪ್ರಧಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಅಂಕುಶ್ ಪ್ರಧಾನ್ ಹೇಳಿಕೆ:
ತಾನು ಯಾರನ್ನೂ ಅವಮಾನಿಸಲಿಲ್ಲ, ಆದರೆ ಇಲಾಖೆಯವರು ಕಾಲುವೆಯ ಹೂಳನ್ನು ರಸ್ತೆಯ ಮೇಲೆ ಸುರಿದು ಗ್ರಾಮಸ್ಥರ ಹಾದಿಯನ್ನು ಮುಚ್ಚಿದ್ದಾರೆ ಎಂದು ಪ್ರಧಾನ್ ಹೇಳಿದ್ದಾರೆ. “ನೀರಾವರಿ ಇಲಾಖೆ ಸ್ವಚ್ಛಗೊಳಿಸುವ ನೆಪದಲ್ಲಿ ಕಸ ಹರಡುತ್ತಿದೆ. ಜನರು ಹೇಗೆ ಸಂಚರಿಸುತ್ತಾರೆ? ನಾವು ಸಮಸ್ಯೆ ಪರಿಹರಿಸಬೇಕೆಂದು ಕೇಳಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.
ನೀರಾವರಿ ಇಲಾಖೆಯ ಸ್ಪಷ್ಟೀಕರಣ:
ವಿಭಾಗದ ಜಿಇ ಸಚಿನ್ ಪಾಲ್ ಅವರು, “ಕಾಲುವೆಯ ಶುದ್ಧೀಕರಣ ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆ. ಹೂಳು ಒಣಗಿದ ನಂತರ ಹಳಿಗಳ ಮೇಲೆ ಸುರಿಯಲಾಗುತ್ತದೆ. ಆದರೆ ಪ್ರತಿಭಟನಾಕಾರರು ನಮ್ಮ ಅಧಿಕಾರಿ ಅರವಿಂದ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯು ಈಗ ಉತ್ತರ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿ ಬದಲಾಗಿದೆ.
ಅಪರಾಧ
CRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಫೆ.11ರಂದು ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹೆಚ್ಎಎಲ್ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 12.45ರ ವೇಳೆಗೆ ಕಾರು ಮತ್ತು ಗೂಡ್ಸ್ ವಾಹನ ಟಚ್ ಆದ ವಿಚಾರಕ್ಕೆ ಚಾಲಕರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಗೂಡ್ಸ್ ವಾಹನ ಚಾಲಕ ನಂಜುಂಡ ಕಾರಿನ ಮುಂದೆ ನಿಂತು ನಷ್ಟಪೂರೈಕೆ ಕೇಳಿದ್ದಾನೆ. ಆದರೆ ಕಾರು ಚಾಲಕ ಏಕಾಏಕಿ ವಾಹನ ಚಲಾಯಿಸಿದ್ದು, ನಂಜುಂಡ ಬಾನೆಟ್ ಮೇಲೆ ಬಿದ್ದರೂ ಸುಮಾರು 1 ಕಿ.ಮೀ ಹೆಚ್ಚು ದೂರ ಕಾರು ನಿಲ್ಲಿಸದೆ ಚಲಾಯಿಸಿದ್ದಾನೆ. ಟ್ರಿನಿಟಿ ಜಂಕ್ಷನ್‌ನಿಂದ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಕಾರು ಸಾಗಿದ ದೃಶ್ಯ ರಸ್ತೆಬದಿ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇತರೆ ವಾಹನ ಚಾಲಕರು ಅಡ್ಡಹಾಕಿದ ಬಳಿಕ ಕಾರು ನಿಲ್ಲಿಸಲಾಯಿತು.
ಕಾರು ಚಾಲಕ ಬಂಧನ
ಪೊಲೀಸರು ಕಾರು ಚಾಲಕನನ್ನು ಪುಲಕೇಶಿ ನಗರದ 52 ವರ್ಷದ ಸುರೇಶ್ ಎಂದು ಗುರುತಿಸಿದ್ದಾರೆ. ಘಟನೆಯ ವೇಳೆ ಕಾರಿನಲ್ಲಿ ಪತ್ನಿಯೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ (Attempt to Murder) ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆಯಲ್ಲಿ ಸುರೇಶ್ ವಿರುದ್ಧ ಈ ಹಿಂದೆಯೂ ಅತಿವೇಗ ಚಾಲನೆ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಇರುವುದಾಗಿ ತಿಳಿದುಬಂದಿದೆ.
ರಾಜಧಾನಿಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್
ಇತ್ತೀಚೆಗೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ರೋಡ್ ರೇಜ್ ಪ್ರಕರಣದಲ್ಲಿ ಕಾರು ಚಾಲಕ ತನ್ನ ಸ್ನೇಹಿತನನ್ನೇ ಗೋಡೆ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ ಘಟನೆ ಸ್ಮರಣೀಯವಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.
ಅಪರಾಧ
ಬಿಕ್ಲು ಶಿವ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಾಸಕ ಬೈರತಿ ಬಸವರಾಜ್
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ (Bairati Basavaraj) ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.
ನಿನ್ನೆ ಮಾತ್ರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ನ್ಯಾಸುನೀಲ್ ದತ್ ಯಾದವ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಈಗಾಗಲೇ 20 ಆರೋಪಿಗಳ ಪೈಕಿ ಎ-1 ಆರೋಪಿ ಜಗದೀಶ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ತಿರಸ್ಕರಿಸಿತ್ತು.
ಇದಕ್ಕೂ ಮುನ್ನ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಾಪತ್ತೆಯಾಗಿದ್ದ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಂತರ ಜಾಮೀನು ಮಂಜೂರಾದರೂ, ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ರದ್ದುಪಡಿಸಿತ್ತು.
ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಅಪರಾಧ
BENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ
ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ (Bengaluru Accident) ಹೆಣ್ಣೂರು ಸಂಚಾರ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.
ಮೃತರನ್ನು ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರ ಮಕ್ಕಳಾದ ವರ್ಷ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ನಾಗನಗೌಡ ಅವರು ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ತೆರಳಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಬಳಿ ಎದುರುಗಡೆಯಿಂದ ಬಂದ ಅಜ್ ಮೋನಿ ಶಾಲೆಯ ಬಸ್ ಏಕಾಏಕಿ ತಿರುವು ಪಡೆದುಕೊಂಡಿದೆ. ಈ ವೇಳೆ ಸ್ಕೂಟರ್ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಂತರ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಪೊಲೀಸರು ಮಹಜರು ನಡೆಸಿ, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಅವಶ್ಯಕತೆ ಮತ್ತೆ ಒತ್ತಿ ಹೇಳಲಾಗಿದೆ.
-
ಬೆಂಗಳೂರು1 hour agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ19 hours agoರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯ
-
ದೇಶ18 hours agoBIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ
-
ಕ್ರೀಡೆ19 hours agoT20 WORLD CUP : ಡಬಲ್ ಸೂಪರ್ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
-
ದೇಶ17 hours agoLATEST : ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ? ರಿಜುಜು ಕಿಡಿ
-
ದೇಶ17 hours agoಎಪ್ಸ್ಟೀನ್ ಫೈಲ್ಸ್ನಲ್ಲಿ ಹರ್ದೀಪ್ ಪುರಿ ಹೆಸರು? ಸಂಸತ್ತಿನಲ್ಲಿ ಗದ್ದಲ, ಸಚಿವರ ಸ್ಪಷ್ಟನೆ
-
ದೇಶ19 hours agoPOK-ಅಕ್ಸಾಯ್ ಚಿನ್ ಭಾರತದ ಭಾಗ ಎಂದ US… ನಂತರ ಡಿಲೀಟ್!
-
ಅಪರಾಧ18 hours agoBENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ
