Connect with us

ದೇಶ

30 ವರ್ಷಗಳಲ್ಲಿ 80 ಸಾವಿರ ಮಂದಿ ಬಲಿ – ಜರ್ಮನ್‌ವಾಚ್ ವರದಿ ಬಹಿರಂಗ

Published

on

ಉತ್ತರಾಖಂಡದಲ್ಲಿ ಸಂಭವಿಸಿದ ಭೂಕುಸಿತದ ಫೋಟೋ

ನವದೆಹಲಿ: ಕಳೆದ ಮೂವತ್ತು ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಅತ್ಯಧಿಕವಾಗಿ ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 9ನೇ ಸ್ಥಾನ ದೊರೆತಿದೆ ಎಂದು ಜರ್ಮನ್‌ವಾಚ್ ಬಿಡುಗಡೆ ಮಾಡಿದ ಇತ್ತೀಚಿನ ವರದಿ ತಿಳಿಸಿದೆ. ಈ ಅವಧಿಯಲ್ಲಿ ಭಾರತವು ಸುಮಾರು 430 ತೀವ್ರ ಹವಾಮಾನ ವಿಕೋಪಗಳನ್ನು ಎದುರಿಸಿದ್ದು, ಇದರ ಪರಿಣಾಮವಾಗಿ 80,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ COP30 ಜಾಗತಿಕ ಹವಾಮಾನ ಸಮ್ಮೇಳನದ ವೇಳೆ ಬಿಡುಗಡೆಗೊಂಡ ಹವಾಮಾನ ಅಪಾಯ ಸೂಚ್ಯಂಕ (Climate Risk Index – CRI 2026) ವರದಿ ಪ್ರಕಾರ, ಹವಾಮಾನ ವಿಕೋಪಗಳು 1.3 ಬಿಲಿಯನ್ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಿವೆ. ಅಂದಾಜು 170 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರವಾಹ, ಚಂಡಮಾರುತ, ಶಾಖದ ಅಲೆ ಮತ್ತು ಬರಗಳಂತಹ ಘಟನೆಗಳು ಭಾರತದಲ್ಲಿ ಹೆಚ್ಚಾಗುತ್ತಿವೆ. 1998ರ ಗುಜರಾತ್ ಚಂಡಮಾರುತ, 1999ರ ಒಡಿಶಾ ಚಂಡಮಾರುತ, 2013ರ ಉತ್ತರಾಖಂಡ ಪ್ರವಾಹ ಹಾಗೂ ಇತ್ತೀಚಿನ ಶಾಖದ ಅಲೆಗಳು ಭಾರತದ ಮೇಲೆ ಭೀಕರ ಪರಿಣಾಮ ಬೀರಿವೆ. 2024ರಲ್ಲಿ ಮಾತ್ರ ಅತಿವೃಷ್ಠಿ ಹಾಗೂ ದಿಢೀರ್ ಪ್ರವಾಹದಿಂದ 8 ಮಿಲಿಯನ್‌ಗೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ವರದಿ ಉಲ್ಲೇಖಿಸುತ್ತದೆ.

1995ರಿಂದ 2024ರವರೆಗೆ ವಿಶ್ವಾದ್ಯಂತ 9,700ಕ್ಕೂ ಹೆಚ್ಚು ಹವಾಮಾನ ವೈಪರೀತ್ಯಗಳು ಸಂಭವಿಸಿ, 8.3 ಲಕ್ಷಕ್ಕೂ ಹೆಚ್ಚು ಜನರ ಸಾವು ಹಾಗೂ 4.5 ಟ್ರಿಲಿಯನ್ ಯುಎಸ್ ಡಾಲರ್‌ಗಳ ನಷ್ಟ ಉಂಟಾಗಿದೆ ಎಂದು ವರದಿ ಹೇಳುತ್ತದೆ. ಈ ಅವಧಿಯಲ್ಲಿ ಡೊಮಿನಿಕಾ, ಮ್ಯಾನ್ಮಾರ್, ಹೊಂಡುರಾಸ್, ಲಿಬಿಯಾ, ಹೈಟಿ, ಫಿಲಿಪ್ಪೀನ್ಸ್, ನಿಕರಾಗುವಾ ಮತ್ತು ಭಾರತ ಅತಿ ಹೆಚ್ಚು ಬಾಧಿತ ರಾಷ್ಟ್ರಗಳಾಗಿವೆ.

ಜರ್ಮನ್‌ವಾಚ್ ಚಿಂತಕರ ಚಾವಡಿಯ ಪ್ರಕಾರ, ಅಭಿವೃದ್ಧಿಶೀಲ ರಾಷ್ಟ್ರಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅಸಮಾನವಾಗಿ ಅನುಭವಿಸುತ್ತಿವೆ. ಕಡಿಮೆ ನಿಭಾಯಿಸುವ ಸಾಮರ್ಥ್ಯ ಮತ್ತು ಹಣಕಾಸಿನ ಕೊರತೆಯಿಂದಾಗಿ ಈ ರಾಷ್ಟ್ರಗಳು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿವೆ.

ಎಲ್ ನಿನೊ ಪರಿಸ್ಥಿತಿಗಳು 2024ರಲ್ಲಿ ಹವಾಮಾನ ಮಾದರಿಗಳಿಗೆ ಪ್ರಭಾವ ಬೀರಿದ್ದರೂ, ಮಾನವಸೃಷ್ಟ ಹವಾಮಾನ ಬದಲಾವಣೆಗಳು ಶಾಖದ ಅಲೆಗಳು ಮತ್ತು ಪ್ರವಾಹಗಳನ್ನು ತೀವ್ರಗೊಳಿಸುತ್ತಿವೆ ಎಂಬುದು ವರದಿಯ ಪ್ರಮುಖ ಅಂಶವಾಗಿದೆ. ವರದಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಹವಾಮಾನ ವಿಕೋಪಗಳು “ಹೊಸ ಸಾಮಾನ್ಯ”ವಾಗಿ ಮಾರ್ಪಟ್ಟಿವೆ ಎಂದು ಎಚ್ಚರಿಸಿದೆ. ಸಾರ್ವಜನಿಕ ಹಣಕಾಸು ಮತ್ತು ಜನರ ಜೀವನೋಪಾಯವನ್ನು ರಕ್ಷಿಸಲು ತುರ್ತು ಹಾಗೂ ಉತ್ತಮ ಹಣಕಾಸಿನ ಹೊಂದಾಣಿಕೆ ಕ್ರಮಗಳು ಅಗತ್ಯ ಎಂದು ವರದಿ ಸಲಹೆ ನೀಡಿದೆ.

ದೇಶ

ಕೇರಳದಲ್ಲಿ ಮತ್ತೆ ಪ್ರಕೃತಿ ವಿಕೋಪ! ವಯನಾಡಿನ ಕಲ್ಲಾಡಿ ಗ್ರಾಮದಲ್ಲಿ ಭಾರೀ ಭೂ ಕುಸಿತ

Published

on

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ವಯನಾಡ್ ಜಿಲ್ಲೆಯಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಮೇಪ್ಪಾಡಿ ಸಮೀಪದ ಕಲ್ಲಾಡಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭಾರಿ ಪ್ರಮಾಣದ ಭೂ ಕುಸಿತ ಸಂಭವಿಸಿದ್ದು, ಅವಶೇಷಗಳಡಿ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿಯ ಪ್ರಕಾರ, ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ಮಾರ್ಗ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಮೀನಾಕ್ಷಿ ಸೇತುವೆ ಸಮೀಪ ಈ ಭೂಕುಸಿತ ಸಂಭವಿಸಿದೆ. ನಿರಂತರ ಮಳೆಯಿಂದಾಗಿ ಮಣ್ಣು ಸಡಿಲಗೊಂಡ ಪರಿಣಾಮ ಬೆಟ್ಟದ ಭಾಗ ಕುಸಿದಿದ್ದು, ಕಾಮಗಾರಿ ಪ್ರದೇಶ ಸಂಪೂರ್ಣವಾಗಿ ಮಣ್ಣಿನಡಿ ಮುಚ್ಚಿಹೋಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಕಲ್ಪೆಟ್ಟಾದಿಂದ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಸದ್ಯ ಎಷ್ಟು ಮಂದಿ ಸಿಲುಕಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ನಿರಂತರ ಮಳೆ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದರೆ ಹೆಚ್ಚುವರಿ ರಕ್ಷಣಾ ತಂಡಗಳನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದ್ದು, ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ನಿರಂತರ ನಿಗಾ ವಹಿಸುತ್ತಿವೆ.

Continue Reading

ದೇಶ

30 ನಿಮಿಷ ಸಿಂಹದ ಹಿಡಿತದಲ್ಲೇ ವ್ಯಕ್ತಿ! ಗ್ರಾಮಸ್ಥರ ಕೂಗಾಟಕ್ಕೂ ಜಗ್ಗದ ಕಾಡಿನ ರಾಜ

Published

on

ಗಾಂಧಿನಗರ: ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ದನ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಸಿಂಹವೊಂದು ಹಠಾತ್ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ಭಾವನಗರ ಜಿಲ್ಲೆಯ ಗರಾಜಿಯಾ ಗ್ರಾಮದಲ್ಲಿ ಭಾನುವಾರ (ಜುಲೈ 5) ಬೆಳಿಗ್ಗೆ ಸುಮಾರು 8:30ರ ವೇಳೆಗೆ ಈ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕಾಲುಭಾಯ್ ಬೋಘಾಭಾಯ್ ಪರ್ಮಾರ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಮನೆಯ ಸಮೀಪ ಹಸುಗಳಿಗೆ ಮೇವು ಹಾಕುತ್ತಿದ್ದ ವೇಳೆ ಪೊದೆಯಲ್ಲಿದ್ದ ಸಿಂಹ ಏಕಾಏಕಿ ದಾಳಿ ನಡೆಸಿದೆ.

ವೈರಲ್ ವಿಡಿಯೋದಲ್ಲಿ ಸಿಂಹವು ಕಾಲುಭಾಯ್ ಅವರನ್ನು ನೆಲಕ್ಕೆ ಕೆಡವಿ, ಅವರ ಕಾಲನ್ನು ತನ್ನ ಪಂಜಗಳಿಂದ ಬಿಗಿಯಾಗಿ ಹಿಡಿದುಕೊಂಡಿರುವುದು ಹಾಗೂ ಕೈಯನ್ನು ದವಡೆಯಲ್ಲಿ ಕಚ್ಚಿರುವ ದೃಶ್ಯಗಳು ಕಂಡುಬರುತ್ತವೆ. ತೀವ್ರ ರಕ್ತಸ್ರಾವವಾಗುತ್ತಿದ್ದರೂ ಸಂತ್ರಸ್ತರು ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯವೂ ಸೆರೆಯಾಗಿದೆ.

ಘಟನೆಯನ್ನು ಕಂಡ ಗ್ರಾಮಸ್ಥರು ಜೋರಾಗಿ ಕೂಗುತ್ತಾ, ಸಿಂಹವನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರ ಕೂಗಾಟಕ್ಕೂ ಜಗ್ಗದ ಸಿಂಹವು ಸುಮಾರು 30 ನಿಮಿಷಗಳ ಕಾಲ ವ್ಯಕ್ತಿಯನ್ನು ತನ್ನ ಹಿಡಿತದಲ್ಲೇ ಇರಿಸಿತು. ಬಳಿಕ ಗ್ರಾಮಸ್ಥರ ನಿರಂತರ ಪ್ರತಿರೋಧದ ನಂತರ ಸಂತ್ರಸ್ತನನ್ನು ಬಿಟ್ಟು ಹತ್ತಿರದಲ್ಲಿದ್ದ ಹಸುವಿನತ್ತ ಓಡಿಹೋಗಿದೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ಕಾಲುಭಾಯ್ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದೇ ವೇಳೆ, ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಮರುಕಳಿಸುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆಯ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದ್ದು, ಸಿಂಹದ ಚಲನವಲನದ ಮೇಲೂ ನಿಗಾ ವಹಿಸಲಾಗಿದೆ.

Continue Reading

ದೇಶ

Grama Panchayat Election ಬಿಗ್ ಅಪ್‌ಡೇಟ್! ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಆದೇಶ

Published

on

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ಅಧಿಕೃತವಾಗಿ ವೇಗ ಸಿಕ್ಕಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಲು ಆರಂಭಿಸಿವೆ.

2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಹೊಸದಾಗಿ ಪುನರ್ರಚನೆಯಾಗಿರುವ 42 ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಿದೆ.

ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳ ನಿಯೋಜನೆಗೆ ಹೊಸ ಮಾರ್ಗಸೂಚಿಯನ್ನೂ ರೂಪಿಸಲಾಗಿದೆ. ಇದರ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಗ್ರೂಪ್-ಬಿ ಅಧಿಕಾರಿ ಚುನಾವಣಾಧಿಕಾರಿಯಾಗಿ ನೇಮಕವಾಗಲಿದ್ದಾರೆ. ಇವರಿಗೆ ನೆರವಾಗಲು ಶಿರಸ್ತೇದಾರ್, ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜಿಸಲು ಸೂಚಿಸಲಾಗಿದೆ.

ಯಾವುದೇ ಅಧಿಕಾರಿಯನ್ನು ಅವರ ಸ್ವಂತ ಊರು ಅಥವಾ ತವರು ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ. ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಆಧರಿಸಿ ಅಧಿಕಾರಿಗಳ ನಿಯೋಜನೆಯ ಪ್ರಮಾಣವೂ ನಿಗದಿಯಾಗಿದೆ. 25 ಸದಸ್ಯ ಸ್ಥಾನಗಳವರೆಗೆ ಇರುವ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿ, 25ರಿಂದ 35 ಸ್ಥಾನಗಳಿರುವ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಮತ್ತು ಇಬ್ಬರು ಸಹಾಯಕರು, 35ಕ್ಕಿಂತ ಹೆಚ್ಚು ಸ್ಥಾನಗಳಿರುವ ದೊಡ್ಡ ಪಂಚಾಯಿತಿಗಳಿಗೆ ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ.

ಇದರ ಜೊತೆಗೆ, 2027ರ ಏಪ್ರಿಲ್ ನಂತರ ಅವಧಿ ಮುಕ್ತಾಯಗೊಳ್ಳಲಿರುವ 56 ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನೂ ಆಯೋಗ ಸುತ್ತೋಲೆಯೊಂದಿಗೆ ಲಗತ್ತಿಸಿದೆ. ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ.

Continue Reading

Trending