Connect with us

ದೇಶ

ಸಿಸಿಟಿವಿ ದೃಶ್ಯದಲ್ಲಿ ಸ್ಫೋಟದ ಕ್ಷಣ – ಜನ ಬೆಚ್ಚಿಬೀಳುವಂತ ದೃಶ್ಯ

ಶ್ರೀನಗರ (ಜಮ್ಮು ಕಾಶ್ಮೀರ): ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ಕಾಶ್ಮೀರದ ಮತ್ತೊಬ್ಬ ವೈದ್ಯನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಇದೀಗ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ.

ಈ ಭೀಕರ ಸ್ಫೋಟದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ ಎಂಟು ಜನರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಡಾ. ತಜಮುಲ್ ಅಹ್ಮದ್ ಮಲಿಕ್ ಎಂಬ ವೈದ್ಯನನ್ನು ವಶಕ್ಕೆ ಪಡೆದಿದ್ದು, ಆತ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ (SMHS) ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಪೊಲೀಸರು ಈತನನ್ನು ಏಕೆ ವಶಕ್ಕೆ ಪಡೆದಿದ್ದಾರೆ ಎಂಬುದರ ಕುರಿತು ಅಧಿಕೃತ ಮಾಹಿತಿ ನೀಡದಿದ್ದರೂ, ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ “ವೈಟ್ ಕಾಲರ್” ಟ್ರಾನ್ಸ್-ಸ್ಟೇಟ್ ಭಯೋತ್ಪಾದನಾ ಘಟಕದ ಭಾಗಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಕಾಶ್ಮೀರದ ಐದನೇ ವೈದ್ಯನಾಗಿ ಈತನ ಹೆಸರು ತನಿಖೆಯಲ್ಲಿ ಹೊರಬಂದಿದೆ.

ಈ ಸ್ಫೋಟದಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರತಾಗಿ ಹರಿಯಾಣದ ಫರಿದಾಬಾದ್ ಮತ್ತು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಕೂಡ ಸಾವನ್ನಪ್ಪಿದ್ದಾರೆಂಬ ಶಂಕೆ ಇದೆ. ಕಳೆದ ತಿಂಗಳಿಂದಲೇ ಪೊಲೀಸರು ಡಾ. ಉಮರ್ ನಬಿ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದಕ್ಕೂ ಮುನ್ನ, ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಅನಂತ್‌ನಾಗ್‌ನ ಡಾ. ಅದೀಲ್ ಅಹ್ಮದ್ ರಾಥರ್ರನ್ನು ವಶಕ್ಕೆ ಪಡೆದಿದ್ದರು.

ಸ್ಫೋಟದ ಸಿಸಿಟಿವಿ ದೃಶ್ಯಾವಳಿ:
ಕೆಂಪು ಕೋಟೆ ಕ್ರಾಸಿಂಗ್‌ನಲ್ಲಿ ಅಳವಡಿಸಲಾದ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯದಲ್ಲಿ, ಜನನಿಬಿಡ ಪ್ರದೇಶದಲ್ಲಿ ಕಾರು ಹಠಾತ್ ಸ್ಫೋಟಗೊಂಡು ಬೆಂಕಿಯ ಜ್ವಾಲೆ ಆವರಿಸುತ್ತಿರುವುದು ಕಾಣುತ್ತದೆ. ಸೋಮವಾರ ಸಂಜೆ 6.50ರ ಸುಮಾರಿಗೆ ಈ ಘಟನೆ ನಡೆದಿದ್ದು, ಬಳಿಕ ಜನರು ರಕ್ಷಣೆಗಾಗಿ ಓಡುತ್ತಿರುವ ದೃಶ್ಯಗಳು ಭಯದ ವಾತಾವರಣವನ್ನು ತೋರಿಸುತ್ತವೆ.

ಮೂವರು ವೈದ್ಯರು ಸೇರಿದಂತೆ 8 ಶಂಕಿತರನ್ನು ಬಂಧಿಸಿ, 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದ್ದರಿಂದ ತನಿಖಾ ಸಂಸ್ಥೆಗಳು ಎಚ್ಚರಗೊಂಡಿವೆ.

ದೇಶ

ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ: ಕೋಟಿ ಸಂಭಾವನೆ ಚರ್ಚೆ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್‌ಗೆ ಖ್ಯಾತ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 2025ರಿಂದ 2027ರವರೆಗೆ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸಿ, ಹೊಸ ಪ್ಯಾಕ್‌ನ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಸಂಸ್ಥೆಯ 57 ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಗಂಧದ ಎಣ್ಣೆ, ಮಲ್ಲಿಗೆ ಪರಿಮಳದ ಸೋಪು, ಸುಗಂಧ ದ್ರವ್ಯ, ಟೂತ್‌ಪೇಸ್ಟ್, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ ಮತ್ತು ಸಾವಯವ ಉತ್ಪನ್ನಗಳು ಬಿಡುಗಡೆಗೊಂಡವು.

6.20 ಕೋಟಿ ಸಂಭಾವನೆಗೆ ಟೀಕೆ

ತಮನ್ನಾಗೆ 6.20 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಬಹಿರಂಗವಾದ ಬಳಿಕ ಚರ್ಚೆಗಳು ಆರಂಭವಾಗಿವೆ. ಆದರೆ ಕೈಗಾರಿಕೆ ಇಲಾಖೆ ಮತ್ತು ಸಚಿವ ಎಂಬಿ ಪಾಟೀಲ್ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಹಳೆಯ ರಾಯಭಾರಿಗಳು

1992-93ರಲ್ಲಿ ದೀಪಿಕಾ ಚಿಖ್ಲಿಯಾ (₹25 ಲಕ್ಷ), 2003-04ರಲ್ಲಿ ದೊಡ್ಡ ನರಸಿಂಹ ಗಣೇಶ್ (₹25 ಲಕ್ಷ), 2013-14ರಲ್ಲಿ ಮುಗ್ಧಾ ಗೋಡ್ಸೆ (₹25 ಲಕ್ಷ) ರಾಯಭಾರಿಗಳಾಗಿದ್ದರು. ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ದೋನಿ ಅವರಿಗೆ 2013-14ರಲ್ಲಿ ₹84 ಲಕ್ಷ ನೀಡಲಾಗಿತ್ತು.

ಉತ್ತರ ಭಾರತ ಗುರಿ

KSDL ಮಾರಾಟದಲ್ಲಿ ಕರ್ನಾಟಕದ ಪಾಲು 18% (₹324 ಕೋಟಿ) ಮಾತ್ರ; ಇತರೆ ರಾಜ್ಯಗಳಲ್ಲಿ 82% (₹1500 ಕೋಟಿ) ವಹಿವಾಟು ಇದೆ. ಉತ್ತರ ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ ಗುರಿಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ 28 ಮಿಲಿಯನ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ, 5.8 ಮಿಲಿಯನ್ ಟ್ವಿಟರ್ ಅನುಯಾಯಿಗಳನ್ನು ಹೊಂದಿರುವ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Continue Reading

ಅಪರಾಧ

CRIME : ಬೆಂಗಳೂರಿನಲ್ಲಿ ಮತ್ತೆ ರೋಡ್‌ ರೇಜ್‌: ಬಾನೆಟ್‌ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಫೆ.11ರಂದು ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹೆಚ್ಎಎಲ್ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 12.45ರ ವೇಳೆಗೆ ಕಾರು ಮತ್ತು ಗೂಡ್ಸ್ ವಾಹನ ಟಚ್ ಆದ ವಿಚಾರಕ್ಕೆ ಚಾಲಕರ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಗೂಡ್ಸ್ ವಾಹನ ಚಾಲಕ ನಂಜುಂಡ ಕಾರಿನ ಮುಂದೆ ನಿಂತು ನಷ್ಟಪೂರೈಕೆ ಕೇಳಿದ್ದಾನೆ. ಆದರೆ ಕಾರು ಚಾಲಕ ಏಕಾಏಕಿ ವಾಹನ ಚಲಾಯಿಸಿದ್ದು, ನಂಜುಂಡ ಬಾನೆಟ್ ಮೇಲೆ ಬಿದ್ದರೂ ಸುಮಾರು 1 ಕಿ.ಮೀ ಹೆಚ್ಚು ದೂರ ಕಾರು ನಿಲ್ಲಿಸದೆ ಚಲಾಯಿಸಿದ್ದಾನೆ. ಟ್ರಿನಿಟಿ ಜಂಕ್ಷನ್‌ನಿಂದ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಕಾರು ಸಾಗಿದ ದೃಶ್ಯ ರಸ್ತೆಬದಿ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇತರೆ ವಾಹನ ಚಾಲಕರು ಅಡ್ಡಹಾಕಿದ ಬಳಿಕ ಕಾರು ನಿಲ್ಲಿಸಲಾಯಿತು.

ಕಾರು ಚಾಲಕ ಬಂಧನ

ಪೊಲೀಸರು ಕಾರು ಚಾಲಕನನ್ನು ಪುಲಕೇಶಿ ನಗರದ 52 ವರ್ಷದ ಸುರೇಶ್ ಎಂದು ಗುರುತಿಸಿದ್ದಾರೆ. ಘಟನೆಯ ವೇಳೆ ಕಾರಿನಲ್ಲಿ ಪತ್ನಿಯೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ (Attempt to Murder) ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆಯಲ್ಲಿ ಸುರೇಶ್ ವಿರುದ್ಧ ಈ ಹಿಂದೆಯೂ ಅತಿವೇಗ ಚಾಲನೆ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಇರುವುದಾಗಿ ತಿಳಿದುಬಂದಿದೆ.

ರಾಜಧಾನಿಯಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌

ಇತ್ತೀಚೆಗೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ರೋಡ್‌ ರೇಜ್‌ ಪ್ರಕರಣದಲ್ಲಿ ಕಾರು ಚಾಲಕ ತನ್ನ ಸ್ನೇಹಿತನನ್ನೇ ಗೋಡೆ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ ಘಟನೆ ಸ್ಮರಣೀಯವಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌ ಘಟನೆಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

Continue Reading

ದೇಶ

GBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಜಿಬಿಎ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರಡು ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (SOP) ಕುರಿತು ಚರ್ಚೆ ನಡೆಯಿತು. ಅಧಿಸೂಚನಾ ವಿವರಣೆಗಳಿಗೆ ಅನುಗುಣವಾಗಿ ವಾರ್ಡ್ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸಲು ಐಟಿ ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ. ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ನಡೆಸುವಂತೆ ಸೂಚಿಸಲಾಗಿದೆ.

ಚುನಾವಣಾ ವಿಭಾಗ ರಚನೆ

ಪ್ರತಿ ಪಾಲಿಕೆಯಲ್ಲಿ ತಹಸೀಲ್ದಾರ್, ವ್ಯವಸ್ಥಾಪಕ, ಎಫ್‌ಡಿ, ಎಸ್‌ಡಿಎ ಹಾಗೂ ಡೇಟಾ ಎಂಟ್ರಿ ಆಪರೇಟರ್ ಒಳಗೊಂಡ ವಿಶೇಷ ಚುನಾವಣಾ ವಿಭಾಗ ರಚಿಸಲು ಸೂಚಿಸಲಾಗಿದೆ.

ವಿಭಜಿತ ವಾರ್ಡ್‌ಗಳ ವಿಶೇಷ ಪರಿಶೀಲನೆ

ವಿಭಜಿತ ವಾರ್ಡ್‌ಗಳ ಮಾಹಿತಿಯನ್ನು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಪಾಲಿಕೆ ಆಯುಕ್ತರು ಸ್ವತಂತ್ರವಾಗಿ ಮಾಹಿತಿ ದೃಢೀಕರಿಸಬೇಕು ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ನೇಮಕ

ಡೇಟಾ ಸಮಸ್ಯೆಗಳ ಪರಿಹಾರ ಹಾಗೂ ಜಿಬಿಎ ಚುನಾವಣಾ ವಿಭಾಗದೊಂದಿಗೆ ಸಮನ್ವಯಕ್ಕಾಗಿ ಕಂದಾಯ ವಿಭಾಗದ ಅಪರ ಆಯುಕ್ತರನ್ನು ಐದು ಪಾಲಿಕೆಗಳಲ್ಲೂ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲು ಸೂಚಿಸಲಾಗಿದೆ.

“ಕರಡು ಮತದಾರರ ಪಟ್ಟಿಯ ಪರಿಶೀಲನೆಯಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ವಿಶ್ವಾಸಾರ್ಹತೆ ಖಚಿತಪಡಿಸಲು SOP ಕಟ್ಟುನಿಟ್ಟಾಗಿ ಅನುಸರಿಸಬೇಕು” ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಸಭೆಯಲ್ಲಿ ವಿವಿಧ ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending