Connect with us

ರಾಜ್ಯ

ಅಂಜನಾದ್ರಿ ಬೆಟ್ಟದಲ್ಲಿ ಚಿರತೆ ಸಂಚಾರ

ಗಂಗಾವತಿ: ಐತಿಹಾಸಿಕ ಮತ್ತು ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 2 ಮತ್ತು 3ರಂದು ನಡೆಯಲಿರುವ ಹನುಮ ಮಾಲೆ ಕಾರ್ಯಕ್ರಮಕ್ಕೆ ತಯಾರಿಗಳು ಜೋರಾಗಿ ಸಾಗುತ್ತಿವೆ. ಈ ಭಕ್ತಿಭಾವದ ಉತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆದರೆ, ಈ ನಡುವೆ ಅಂಜನಾದ್ರಿ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವುದು ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚಿಕ್ಕರಾಂಪುರದಿಂದ ಅಂಜನಹಳ್ಳಿಗೆ ಸಂಪರ್ಕಿಸುವ ಬೆಟ್ಟದ ಮಾರ್ಗದಲ್ಲಿ ಕಳೆದ 15 ದಿನಗಳಲ್ಲಿ ಮೂರನೇ ಬಾರಿ ಚಿರತೆ ಕಂಡುಬಂದಿರುವುದನ್ನು ಆನೆಗೊಂದಿ ಗ್ರಾಮ ಪಂಚಾಯಿತಿಯ 4ನೇ ವಾರ್ಡಿನ ಸದಸ್ಯೆ ಗಾಳೆಮ್ಮ ತಿಳಿಸಿದ್ದಾರೆ. “ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹನುಮ ಮಾಲೆ ಸಮಯದಲ್ಲಿ ಹಗಲು-ರಾತ್ರಿ ಸಾವಿರಾರು ಜನರು ತಿರುಗಾಡುವ ಪ್ರದೇಶ ಇದು. ಆದ್ದರಿಂದ ಚಿರತೆಯನ್ನು ತಕ್ಷಣ ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದೇ ವೇಳೆ ಸಿದ್ದುಕೇರಿ ರಸ್ತೆ ಸಮೀಪದ ಗಾಯಕ್ವಾಡ್ ಫಾರ್ಮ್ ಹೌಸ್‌ನಲ್ಲಿ ಚಿರತೆ ಕರುವಿನ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದ ಘಟನೆ ಭಾನುವಾರ ನಡೆದಿದೆ. ಕಾಂಗ್ರೆಸ್ ಮುಖಂಡ ಗಿರೀಶ್ ರಾವ್ ಗಾಯಕ್ವಾಡ್ ಅವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿತ್ತು. ಜಾನುವಾರುಗಳ ಗದ್ದಲದಿಂದ ಹೆದರಿ ಚಿರತೆ ಓಡಿ ಹೋಗಿದೆ. ಘಟನೆಯ ನಂತರ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿರುವ ಕಾರಣ ಸ್ಥಳೀಯರು ಸೆರೆಹಿಡಿಯುವ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇತ್ತೀಚೆಗಷ್ಟೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೋಹಳ್ಳಿ ಕ್ರಾಸ್ ಸಮೀಪದ ಭತ್ತದ ಗದ್ದೆಯಲ್ಲಿ ಚಿರತೆ ಮರಿಯೊಂದು ಪತ್ತೆಯಾಗಿದ್ದ ಘಟನೆ ಕೂಡ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಕೃಷಿಭೂಮಿಗಳು, ಗ್ರಾಮ ಪ್ರದೇಶಗಳು ಮತ್ತು ಅರಣ್ಯ ಗಡಿಯಲ್ಲಿರುವ ಹಳ್ಳಿಗಳಲ್ಲಿ ಚಿರತೆ ಸಂಚಾರ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ಲಕ್ಷಾಂತರ ಭಕ್ತರು ಭಾಗವಹಿಸುವ ಧಾರ್ಮಿಕ ಉತ್ಸವದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸುವುದು ಹಾಗೂ ಚಿರತೆಯ ಸಂಚಾರ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


ದೇಶ

ಸಿಎಂ ಕುರ್ಚಿ ಉಳಿಸಿಕೊಳ್ಳಲು ಶಾಸಕರ ವಿದೇಶ ಪ್ರವಾಸ? ವಿಜಯೇಂದ್ರ ಗಂಭೀರ ಆರೋಪ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಸರ್ಕಾರ ಬಂದ ಬಳಿಕ ಅನುದಾನ ಬೇಡಿಕೆ ಇಟ್ಟಿದ್ದರೂ ಗಂಗಕಲ್ಯಾಣ ಯೋಜನೆ, ಮನೆ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳು ನಡೆಯದೆ ಜನರಲ್ಲಿ ಅಸಮಾಧಾನ ಮೂಡಿದೆ ಎಂದು ಆರೋಪಿಸಿದರು. ಶಾಸಕರು ತಮ್ಮ ಖರ್ಚಿನಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬ ಸಿಎಂ ಹೇಳಿಕೆಯನ್ನು ಪ್ರಶ್ನಿಸಿ, “ತಮ್ಮ ಕುರ್ಚಿ ಉಳಿಸಿಕೊಳ್ಳಲು ತಾವೇ ಅವರನ್ನು ಕಳಿಸುತ್ತಿದ್ದಾರೆ” ಎಂದು ಟೀಕಿಸಿದರು.

ರೆಸಾರ್ಟ್ ರಾಜಕೀಯದ ಮೇಲೆ ಲೇವಡಿ

ಕಾಂಗ್ರೆಸ್ ಶಾಸಕರು ರೆಸಾರ್ಟ್ ಬುಕ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ಅವರಿಗೆ ಅನುಕೂಲವಾಗಲಿ ಎಂದು ಬಿಜೆಪಿಯಿಂದ ಬಡಿಗೆ ರೆಡಿ ಮಾಡಿಸಿದ್ದೇವೆ” ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಂತರದ ರಾಜಕೀಯ ನಡೆಯುತ್ತಿದೆ ಎಂದು ಹೇಳಿದರು.

₹5,000 ಕೋಟಿ ಎಲ್ಲಿಗೆ ಹೋಯ್ತು?

ಗೃಹ ಲಕ್ಷ್ಮೀ ಯೋಜನೆಯ ₹5,000 ಕೋಟಿ ಹಣದ ಬಗ್ಗೆ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಆರೋಪಿಸಿದ ಅವರು, “ಹಣ ಉಪಯೋಗ ಆಯ್ತಾ? ದುರಪಯೋಗ ಆಯ್ತಾ? ಸಿಎಂ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರಕ್ಕೆ ನಕಲಿ ದಾಖಲೆ ನೀಡಿರುವ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ವಿವರವಾದ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದರು.

ಪ್ರಾದೇಶಿಕ ಅಸಮಾನತೆ ಹೆಚ್ಚಳ

ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿ ವರದಿ ಉಲ್ಲೇಖಿಸಿ, ರಾಜ್ಯದಲ್ಲಿ ಅಸಮಾನತೆ ಶೇಕಡಾ 60ರಿಂದ 72.08ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಹಿಂದುಳಿದಿದೆ ಎಂದು ಆರೋಪಿಸಿದರು.

ಕುರಿಗಾರರಿಗೆ ಪರಿಹಾರ ಬಾಕಿ

ಅನುಗ್ರಹ ಯೋಜನೆಯಡಿ 45 ಕೋಟಿ ರೂ. ಬಾಕಿ ಇಟ್ಟಿದ್ದು, 90 ಸಾವಿರ ಸಾವಿನ ಪೈಕಿ ಕೇವಲ 30 ಸಾವಿರ ಕುರಿಮರಿಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕಾರಿಣಿ ಸಭೆ

ಫೆಬ್ರವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸರ್ಕಾರದ ವೈಫಲ್ಯಗಳು ಮತ್ತು ಮುಂದಿನ ಚುನಾವಣಾ ತಂತ್ರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

Continue Reading

ದೇಶ

BESCOMಗೆ C-ರೇಟಿಂಗ್ ಶಾಕ್: ದೇಶದ 54 ಎಸ್ಕಾಂಗಳಲ್ಲಿ 51ನೇ ಸ್ಥಾನ

ಬೆಂಗಳೂರು: ದೇಶದ 54 ವಿದ್ಯುತ್ ವಿತರಣಾ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ವಿದ್ಯುತ್ ಸಚಿವಾಲಯ ಮೌಲ್ಯಮಾಪನ ಮಾಡಿದ್ದು, ಕರ್ನಾಟಕದ ಬೆಸ್ಕಾಂ (BESCOM) 51ನೇ ಸ್ಥಾನಕ್ಕೆ ಕುಸಿದಿದೆ. 14ನೇ ವಾರ್ಷಿಕ ಸಂಯೋಜಿತ ರೇಟಿಂಗ್ ಮತ್ತು ಶ್ರೇಯಾಂಕ ವರದಿಯಲ್ಲಿ ಬೆಸ್ಕಾಂ ಕಳಪೆ ಪ್ರದರ್ಶನ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿದೆ.

ವಿದ್ಯುತ್ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಸಂಗ್ರಹಣಾ ದಕ್ಷತೆ, ಬಿಲ್ಲಿಂಗ್ ದಕ್ಷತೆ, ಪ್ರಸರಣ ನಷ್ಟ, ಆಡಿಟ್ ಖಾತೆಗಳ ಲಭ್ಯತೆ ಸೇರಿದಂತೆ 15 ಪ್ರಮುಖ ಮಾನದಂಡಗಳ ಆಧಾರದಲ್ಲಿ ಶ್ರೇಯಾಂಕ ನೀಡಲಾಗಿದೆ. ಈ ಸಾಲಿನ ವರದಿಯಲ್ಲಿ ಬೆಸ್ಕಾಂ 100ರಲ್ಲಿ ಕೇವಲ 12.44 ಅಂಕಗಳನ್ನು ಪಡೆದು C-ರೇಟಿಂಗ್ ಮತ್ತು ‘ಕೆಂಪು ಕಾರ್ಡ್’ ಪಡೆದಿದೆ.

ವರದಿ ಪ್ರಕಾರ, ಬೆಸ್ಕಾಂ 13,819 ಕೋಟಿ ರೂ. ಸಂಚಿತ ನಷ್ಟ ಹಾಗೂ 22,611 ಕೋಟಿ ರೂ. ಸ್ಥಾಯಿ ಸಾಲವನ್ನು ಹೊಂದಿದೆ. 2025ನೇ ಹಣಕಾಸು ವರ್ಷದಲ್ಲಿ ಮಾತ್ರ 5,476 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷಕ್ಕಿಂತ ಕುಸಿತ

ಹಿಂದಿನ 13ನೇ ವಾರ್ಷಿಕ ರೇಟಿಂಗ್‌ನಲ್ಲಿ ಬೆಸ್ಕಾಂ 100ರಲ್ಲಿ 40.43 ಅಂಕಗಳನ್ನು ಪಡೆದು B-ದರ್ಜೆಯೊಂದಿಗೆ 34ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 51ನೇ ಸ್ಥಾನಕ್ಕೆ ಜಾರಿದ್ದು ಕಾರ್ಯಕ್ಷಮತೆಯಲ್ಲಿ ಕುಸಿತ ಸ್ಪಷ್ಟವಾಗಿದೆ.

ಆಶ್ಚರ್ಯಕರವಾಗಿ, ಕರ್ನಾಟಕದ ಯಾವುದೇ ಎಸ್ಕಾಂಗಳು ಟಾಪ್ 10 ಅಥವಾ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಮೆಸ್ಕಾಂ (MESCOM) 26ನೇ ಸ್ಥಾನ ಪಡೆದು ರಾಜ್ಯದ ಇತರ ಸಂಸ್ಥೆಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ.

ಸುಧಾರಣೆ ಅಗತ್ಯ

ತಜ್ಞರು ರಾಜ್ಯ ಸರ್ಕಾರವು ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರದ ಹೊರತು ಎಸ್ಕಾಂಗಳ ಪರಿಸ್ಥಿತಿ ಸುಧಾರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. KERC ಸಲಹಾ ಸಮಿತಿಯ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್, “ಗುರುಚರಣ್ ಸಮಿತಿ ವರದಿ ಎಸ್ಕಾಂಗಳನ್ನು ಪುನರುಜ್ಜೀವನಗೊಳಿಸಲು ರಚನಾತ್ಮಕ ಮತ್ತು ಕ್ರಿಯಾತ್ಮಕ ಸುಧಾರಣೆಗಳನ್ನು ಸೂಚಿಸಿತ್ತು. ಇಂತಹ ಸುಧಾರಣೆಗಳನ್ನು ತ್ವರಿತವಾಗಿ ಜಾರಿಗೆ ತರುವ ಅವಶ್ಯಕತೆ ಇದೆ” ಎಂದು ಹೇಳಿದ್ದಾರೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, “ಕೆಲವು ಲೆಕ್ಕಪತ್ರ ಸಮಸ್ಯೆಗಳಿವೆ. ಅವನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇತರ ಅಂಶಗಳಲ್ಲಿ ಕಾರ್ಯಕ್ಷಮತೆ ತೃಪ್ತಿಕರವಾಗಿದೆ. ಆದಾಯದ ಬೆಳವಣಿಗೆ ಆರೋಗ್ಯಕರವಾಗಿದೆ” ಎಂದು ತಿಳಿಸಿದ್ದಾರೆ.

Continue Reading

ದೇಶ

ಮೆಟ್ರೋ ರೆಡ್ ಲೈನ್‌ಗೆ ಕೇಂದ್ರ ಶಾಕ್: ಯೋಜನೆ ಸ್ಥಗಿತ

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿವಾದದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಮೆಟ್ರೋ ರೆಡ್ ಲೈನ್ ಹಾಗೂ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿ, ಮರುಪರಿಶೀಲನೆಗೆ ಸೂಚಿಸಿದೆ.

ಈ ಕುರಿತು ಮಾಹಿತಿ ನೀಡಿದ ಸಂಸದ ಪಿ.ಸಿ. ಮೋಹನ್, ಸರ್ಜಾಪುರ–ಹೆಬ್ಬಾಳ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರದಿಂದ ಅನುಮೋದನೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಮಾರು ₹28,405 ಕೋಟಿ ವೆಚ್ಚದ ಡಿಪಿಆರ್ (DPR) ಹಿನ್ನೆಲೆ ಯೋಜನೆಯನ್ನು ಮತ್ತೆ ಪರಿಶೀಲಿಸಲು ಸೂಚಿಸಲಾಗಿದೆ.

ಡಬಲ್ ಡೆಕ್ಕರ್ ವ್ಯವಸ್ಥೆ ಮಾಡಿದರೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಕೇಂದ್ರ ವ್ಯಕ್ತಪಡಿಸಿದೆ. ಆದ್ದರಿಂದ ರೆಡ್ ಲೈನ್ ಕಾರಿಡಾರ್‌ನಲ್ಲಿ ಸಂಪೂರ್ಣ ಡಬಲ್ ಡೆಕ್ಕರ್ ಬದಲು, ಆಯ್ದ ಜಂಕ್ಷನ್‌ಗಳಲ್ಲಿ ಮಾತ್ರ ಪರಿಗಣಿಸಬಹುದು ಎಂದು ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರವು ಮುಂಬರುವ ಮೆಟ್ರೋ ಮಾರ್ಗಗಳಲ್ಲೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿತ್ತು. ಆದರೆ ಯೋಜನಾ ವೆಚ್ಚ ಹೆಚ್ಚಳದ ಕಾರಣಕ್ಕೆ ಈ ಹಿಂದೆ ಕೂಡ ಡಿಪಿಆರ್ ವಾಪಸ್ ಕಳುಹಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೇಂದ್ರದ ನಿರ್ಧಾರದಿಂದ ಯೋಜನೆಗೆ ವಿಳಂಬ ಸಂಭವಿಸುವ ಸಾಧ್ಯತೆ ಇದೆ.

ಸರ್ಜಾಪುರ–ಹೆಬ್ಬಾಳ ಮಾರ್ಗದಲ್ಲಿ ಒಟ್ಟು 28 ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿದ್ದು, ಸುಮಾರು 37 ಕಿಮೀ ಉದ್ದ ಹೊಂದಿದೆ. ಈ ಬೆಳವಣಿಗೆ ನಗರ ಸಂಚಾರ ವ್ಯವಸ್ಥೆಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

Trending