ಅಪರಾಧ
ದೇವನಹಳ್ಳಿ NH-7ನಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು
ದೇವನಹಳ್ಳಿ (ಬೆಂಗಳೂರು ಗ್ರಾಮಾಂತ): ದೇವನಹಳ್ಳಿ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಿಯಾ ಕಾರು ಮೊದಲು ಡಿವೈಡರ್ಗೆ ಬಲವಾಗಿ ಡಿಕ್ಕಿ ಹೊಡೆದು, ಅಲ್ಲಿಂದ ಹಾರಿ ಬಂದು ಪಕ್ಕದ ಮಾರ್ಗದಲ್ಲಿ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದ ಮೋಹನ್ ಕುಮಾರ್ (33), ಸುಮನ್ (28) ಮತ್ತು ಸಾಗರ್ (23) ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರದಿಂದ ದೇವನಹಳ್ಳಿ ಕಡೆಗೆ ಅತಿವೇಗದಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ನಲ್ಲಿದ್ದ ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ తరలಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ದುರಂತದ ತೀವ್ರತೆ ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇನ್ನೊಂದೆಡೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ರಾತ್ರಿ ಬೈಕ್ ಮತ್ತು ರಾಜಹಂಸ ಬಸ್ ನಡುವಿನ ಡಿಕ್ಕಿಯಲ್ಲಿ ಯುವ ಅಭಿಮಾನಿ ಪುನೀತ್ (25) ದಾರುಣವಾಗಿ ಮೃತಪಟ್ಟಿದ್ದಾನೆ. ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರ ಸಂಭ್ರಮಾಚರಣೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯಿಂದ ತೀವ್ರ ರಕ್ತಸ್ರಾವಗೊಂಡ ಪುನೀತ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ
ದೆಹಲಿ ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ; 10 ಮಂದಿ ಸಾವು, ಹಲವರ ರಕ್ಷಣೆ
ನವದೆಹಲಿ, ಜೂ. 3: ದೆಹಲಿಯ ಮಾಳವೀಯ ನಗರದಲ್ಲಿರುವ ಲೆಮನ್ ಗ್ರೀನ್ ರೆಸ್ಟೋರೆಂಟ್ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಕಿ ಅವಘಾತದ ಬಳಿಕ ಅಗ್ನಿಶಾಮಕ ದಳ, ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ತಕ್ಷಣ ಕಾರ್ಯಾಚರಣೆ ಆರಂಭಿಸಿ ಹಲವರನ್ನು ಸುರಕ್ಷಿತವಾಗಿ ರಕ್ಷಿಸಿವೆ.
ಬೆಳಗ್ಗೆ ಸುಮಾರು 8.50ರ ವೇಳೆಗೆ ರೆಸ್ಟೋರೆಂಟ್ನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಹೊಗೆ ಮತ್ತು ಜ್ವಾಲೆಗಳು ಕಟ್ಟಡದ ವಿವಿಧ ಭಾಗಗಳಿಗೆ ವ್ಯಾಪಿಸಿವೆ. ಕಟ್ಟಡದೊಳಗೆ ಹಲವರು ಸಿಲುಕಿಕೊಂಡಿರುವ ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ದೆಹಲಿ ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಬಂದ ತಕ್ಷಣ ಎರಡು ವಾಟರ್ ಟೆಂಡರ್ಗಳು, ಎರಡು ವಾಟರ್ ಬೌಸರ್ಗಳು, ತ್ವರಿತ ಪ್ರತಿಕ್ರಿಯಾ ವಾಹನ ಸೇರಿದಂತೆ ಹಲವು ಅಗ್ನಿಶಾಮಕ ಘಟಕಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಈ ಕುರಿತು ಪ್ರತಿಕ್ರಿಯಿಸಿರುವ Satish Upadhyay, “ಘಟನೆ ಅತ್ಯಂತ ದುಃಖಕರವಾಗಿದೆ. ಮಾಹಿತಿ ಸಿಕ್ಕ ತಕ್ಷಣವೇ ಎಲ್ಲಾ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಬೆಂಕಿಗೆ ನಿಖರ ಕಾರಣ ಏನು ಎಂಬುದು ಸಮಗ್ರ ತನಿಖೆಯ ಬಳಿಕವೇ ತಿಳಿಯಲಿದೆ” ಎಂದು ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಂಡಾಗ ರೆಸ್ಟೋರೆಂಟ್ನಲ್ಲಿ ಎಷ್ಟು ಮಂದಿ ಇದ್ದರು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ ಅಥವಾ ತಾಂತ್ರಿಕ ದೋಷದಿಂದ ದುರಂತ ಸಂಭವಿಸಿತೇ ಎಂಬುದರ ಕುರಿತು ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಜಂಟಿ ತನಿಖೆ ಆರಂಭಿಸಿವೆ
ಅಪರಾಧ
ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ದಾಳಿ; ಗುಂಡಿನ ಸದ್ದುಗೆ ಬೆಚ್ಚಿಬಿದ್ದ ಪಾಟ್ನಾ
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಖ್ಯಾತ ಶಿಕ್ಷಣ ತಜ್ಞ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ Khan Sir ಅವರ ಕೋಚಿಂಗ್ ಸೆಂಟರ್ನಲ್ಲಿ ಮಂಗಳವಾರ ಸಂಜೆ ಆತಂಕಕಾರಿ ಘಟನೆ ನಡೆದಿದೆ. ಮುಸಲ್ಲಾಪುರ್ ಹಾತ್ ಪ್ರದೇಶದಲ್ಲಿರುವ ಸಂಸ್ಥೆಯ ಹೊರಭಾಗ ಮತ್ತು ಒಳಭಾಗದಲ್ಲಿ ಕೆಲ ದುಷ್ಕರ್ಮಿಗಳು ದಾಳಿ ನಡೆಸಿ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಕೋಚಿಂಗ್ ಸೆಂಟರ್ನ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಟ್ನಾ ಎಸ್ಎಸ್ಪಿ, ಎಸ್ಪಿ ಸೇರಿದಂತೆ ಹಲವು ಪೊಲೀಸ್ ತಂಡಗಳು ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ Kartikeya K Sharma, ಇದು ದೈಹಿಕ ಹಲ್ಲೆಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಕಾವಲುಗಾರನಿಗೆ ಗಾಯಗಳಾಗಿವೆ. ಗಾಯಾಳುವಿನ ಹೇಳಿಕೆ ಹಾಗೂ ಸ್ಥಳೀಯರ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ದಾಳಿಯ ಹಿಂದೆ ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಗಳ ಕೈವಾಡ ಇರಬಹುದೆಂಬ ಅನುಮಾನವನ್ನು ಖಾನ್ ಸರ್ ವ್ಯಕ್ತಪಡಿಸಿದ್ದಾರೆ. “ನಾವು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಕೆಲವರಿಗೆ ಸಮಸ್ಯೆಯಾಗಿದೆ. ಇತ್ತೀಚೆಗೆ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಮ್ಮ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಿಂದ ಕೆಲ ಸಮಾಜವಿರೋಧಿ ಶಕ್ತಿಗಳು ಬೆದರಿಕೆ ಹಾಕಲು ಆರಂಭಿಸಿವೆ” ಎಂದು ಆರೋಪಿಸಿದ್ದಾರೆ.
ದಾಳಿಕೋರರು ಕಚೇರಿಯ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿ ಗುಂಡು ಹಾರಿಸಿದ್ದಾರೆ ಎಂದು ಹೇಳಿರುವ ಖಾನ್ ಸರ್, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ನಿಖರ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ
“ನನ್ನ ಸಾವಿಗೆ ಹೈಕಮಾಂಡ್ ಕಾರಣ”: ಪ್ರತಿಭಟನೆಯಲ್ಲಿ ಆಕ್ರೋಶ
ಯಾದಗಿರಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗುತ್ತಿದೆ. ಅದರ ನಡುವೆಯೇ ಯಾದಗಿರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆತಂಕ ಮೂಡಿಸಿದೆ.
ನಗರದ ಸುಭಾಷ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಿದ್ದರಾಮಯ್ಯ ಬೆಂಬಲಿಗರು, “ಸಿದ್ದರಾಮಯ್ಯ ಬೇಕು” ಎಂದು ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಭೀಮು ಪೂಜಾರಿ ಎಂಬ ಅಭಿಮಾನಿಯೊಬ್ಬರು ಸಾರ್ವಜನಿಕರ ಎದುರೇ ಕ್ರಿಮಿನಾಶಕದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದರು.
“ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಾರಣ. ನನ್ನ ಸಾವಿಗೂ ಅವರೇ ಹೊಣೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಭೀಮು ಪೂಜಾರಿ, ವಿಷ ಸೇವಿಸಲು ಮುಂದಾದರು ಎನ್ನಲಾಗಿದೆ.
ಘಟನೆ ಗಮನಿಸಿದ ಪ್ರತಿಭಟನಾಕಾರರು ಹಾಗೂ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ, ಅವರ ಕೈಯಲ್ಲಿದ್ದ ಕ್ರಿಮಿನಾಶಕದ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ. ಬಳಿಕ ಅವರನ್ನು ಸಮಾಧಾನಪಡಿಸಿ ಸ್ಥಳದಿಂದ ಕರೆದೊಯ್ಯಲಾಗಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಅವರ ಬೆಂಬಲಿಗರು ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ಹಿಂದುಳಿದ ವರ್ಗ ಹಾಗೂ ಅಹಿಂದ ಸಮುದಾಯದ ಕಾರ್ಯಕರ್ತರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇದೀಗ ಯಾದಗಿರಿಯಲ್ಲಿ ನಡೆದ ಈ ಘಟನೆ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳ ಭಾವನಾತ್ಮಕ ಪ್ರತಿಕ್ರಿಯೆಗಳು ಗಮನ ಸೆಳೆಯುತ್ತಿವೆ.
-
ದೇಶ3 hours agoಡಿಕೆಶಿ ಕ್ಯಾಬಿನೆಟ್ ಘೋಷಣೆ: ಪರಮೇಶ್ವರ್ ಡಿಸಿಎಂ, ಪ್ರಿಯಾಂಕ್ಗೆ ಗೃಹ ಖಾತೆ
-
ದೇಶ3 hours agoಆತ್ಮೀಯ ಆಲಿಂಗನದಿಂದ ಗಮನ ಸೆಳೆದ ಡಿಕೆಶಿ ಮತ್ತು ಯಡಿಯೂರಪ್ಪ
-
ದೇಶ5 hours agoಮಮತಾ ಬ್ಯಾನರ್ಜಿ ಎದುರು ಅಸಮಾಧಾನದ ಅಲೆ, ಏನಾಗಲಿದೆ ಟಿಎಂಸಿ ಭವಿಷ್ಯ?
-
ದೇಶ6 hours agoಮಾನವೀಯತೆ ಮೆರೆದ CM ಡಿಕೆಶಿ: ತಾವು ಓದಿದ ಶಾಲೆಯ ಮಕ್ಕಳಿಗೆ ಪಟ್ಟಾಭಿಷೇಕ ವೀಕ್ಷಣೆಯ ಅವಕಾಶ
-
ದೇಶ3 hours agoGBA : ‘1 ಕಿಲೋಮೀಟರ್ ಚಾಲೆಂಜ್’ಗೆ ನೆಟ್ಟಿಗರ ಆಕ್ರೋಶ; “ಮೊದಲು ಫುಟ್ಪಾತ್ ಸರಿಪಡಿಸಿ”
-
ಆರೋಗ್ಯ6 hours agoಬೇಸಿಗೆಯ ಬಿಸಿಗೆ ರಾಮಬಾಣ: ಮೋದಿ ಮೆಚ್ಚಿದ ಸಾಂಪ್ರದಾಯಿಕ ಭಾರತೀಯ ಪಾನೀಯಗಳು
-
ದೇಶ7 hours agoಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
-
ಅಪರಾಧ3 hours agoದೆಹಲಿ ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ; 10 ಮಂದಿ ಸಾವು, ಹಲವರ ರಕ್ಷಣೆ
