ದೇಶ
ರಸೆಲ್ ಮಾರುಕಟ್ಟೆಗೆ ಹೊಸ ರೂಪ: ಜಿಬಿಎ ಶೀಘ್ರ ಟೆಂಡರ್
ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಐತಿಹಾಸಿಕ ರಸೆಲ್ ಮಾರುಕಟ್ಟೆಯನ್ನು ಆಧುನಿಕ ಸ್ಪರ್ಶದೊಂದಿಗೆ ಪುನರ್ ಅಭಿವೃದ್ಧಿಪಡಿಸುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಶಿವಾಜಿನಗರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು, ರಸೆಲ್ ಮಾರುಕಟ್ಟೆ ಪುನರ್ ಅಭಿವೃದ್ಧಿಗಾಗಿ ತಕ್ಷಣವೇ ಟೆಂಡರ್ ಆಹ್ವಾನಿಸಲು ನಿರ್ದೇಶನ ನೀಡಿದರು. ಮಾರುಕಟ್ಟೆ ಪುನರ್ ಅಭಿವೃದ್ಧಿಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಈಗಾಗಲೇ ಸಿದ್ಧವಾಗಿದ್ದು, ಯೋಜನೆಯನ್ನು ವಿಳಂಬವಿಲ್ಲದೆ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸೆಲ್ ಮಾರುಕಟ್ಟೆ ಒಂದು ಐತಿಹಾಸಿಕ ಕಟ್ಟಡವಾಗಿದ್ದು, ಅದರ ಪರಂಪರೆಯನ್ನು ಕಾಪಾಡಿಕೊಂಡು ಆಧುನಿಕ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಬೇಕು. ಇದು ಬೆಂಗಳೂರು ನಗರಕ್ಕೆ ದೀರ್ಘಕಾಲಿಕ ಹಾಗೂ ಜನಸ್ನೇಹಿ ಮಾರುಕಟ್ಟೆಯಾಗಿ ರೂಪುಗೊಳ್ಳಬೇಕು ಎಂದು ಮಹೇಶ್ವರ ರಾವ್ ಹೇಳಿದರು.
ಪುನರ್ ಅಭಿವೃದ್ಧಿ ಕಾಮಗಾರಿಯ ವೇಳೆ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಕಾಮಗಾರಿ ಆರಂಭಿಸುವ ಮುನ್ನ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಮಾರುಕಟ್ಟೆ ಅಭಿವೃದ್ಧಿಯ ಭಾಗವಾಗಿ ಸಮರ್ಪಕ ಒಳಚರಂಡಿ ವ್ಯವಸ್ಥೆ, ವಾಹನ ನಿಲುಗಡೆ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ, ಕಸ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್ ವ್ಯವಸ್ಥೆಯನ್ನು ಸಮಗ್ರವಾಗಿ ಅಳವಡಿಸುವಂತೆ ಸೂಚಿಸಿದರು.
ಅಗ್ನಿ ಸುರಕ್ಷತಾ ವ್ಯವಸ್ಥೆ, ಶೌಚಾಲಯ ಸೌಲಭ್ಯ, ಪಾದಚಾರಿಗಳಿಗೆ ಗ್ರಾನೈಟ್ ನೆಲಹಾಸು, ಗಡಿಯಾರ ಗೋಪುರ ವಿನ್ಯಾಸ ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳನ್ನು ಉನ್ನತ ಗುಣಮಟ್ಟದಲ್ಲಿ ನಿರ್ವಹಿಸಬೇಕೆಂದು ತಿಳಿಸಿದರು. ಜೊತೆಗೆ ರಸೆಲ್ ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ತಿ ತೆರಿಗೆ ಮರುಪರಿಶೀಲನೆ ನಡೆಸಿದ ಅವರು, ತೆರಿಗೆ ಸಂಗ್ರಹ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನಾ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶ
‘ನಮಸ್ಕಾರ ಬೆಂಗಳೂರು’ ಎಂದೇ ಕನ್ನಡದಲ್ಲಿ ಮಾತು ಆರಂಭಿಸಿದ ಹುಮಾ ಖುರೇಷಿ; ‘ಟಾಕ್ಸಿಕ್’ ಬಗ್ಗೆ ಕೊಟ್ಟ ಹೊಸ ಅಪ್ಡೇಟ್
ಬೆಂಗಳೂರು, ಜು.8: ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ ಬೆಂಗಳೂರಿಗೆ ಭೇಟಿ ನೀಡಿ ತಮ್ಮ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಹಾಗೂ ತಮ್ಮದೇ ನಿರ್ಮಾಣದ ‘ಬೇಬಿ ಡು ಡೈ ಡು’ ಚಿತ್ರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. “ನಮಸ್ಕಾರ ಬೆಂಗಳೂರು… ಅಲ್ಪ ಸ್ವಲ್ಪ ಕನ್ನಡ ಗೊತ್ತು” ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಅವರು, ನೆರೆದಿದ್ದವರಿಂದ ಭರ್ಜರಿ ಚಪ್ಪಾಳೆ ಗಳಿಸಿದರು.
ತಮ್ಮ ಸಹೋದರ ಸಾಕಿಬ್ ಸಲೀಮ್ ಅವರೊಂದಿಗೆ ನಿರ್ಮಿಸಿರುವ ‘ಬೇಬಿ ಡು ಡೈ ಡು’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹುಮಾ, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದರು. “ನಮ್ಮ ಸಣ್ಣ ಬಜೆಟ್ ಚಿತ್ರದ ಬಗ್ಗೆ ಯಶ್ ಮತ್ತು ಗೀತೂ ಮೋಹನ್ ದಾಸ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಅವರ ಬೆಂಬಲದಿಂದ ಬೆಂಗಳೂರಿನಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ದೊರೆತು, ಪ್ರದರ್ಶನಗಳ ಸಂಖ್ಯೆಯೂ ಹೆಚ್ಚಾಯಿತು” ಎಂದು ಹೇಳಿದರು.
‘ಗ್ಯಾಂಗ್ಸ್ ಆಫ್ ವಾಸಿಪುರ್’ ಖ್ಯಾತಿಯ ಹುಮಾ, ‘ಬೇಬಿ ಡು ಡೈ ಡು’ ಚಿತ್ರದಲ್ಲಿ ಕಿವುಡ ಮತ್ತು ಮೂಗಿಯಾದ ಹಿಟ್‌ವುಮನ್ ‘ಬೇಬಿ ಕರ್ಮಾಕರ್’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ಸನ್ನೆ ಭಾಷೆಯ ತಜ್ಞರಿಂದ ವಿಶೇಷ ತರಬೇತಿ ಪಡೆದಿದ್ದು, ವಿಶೇಷ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದಿರುವುದಾಗಿ ತಿಳಿಸಿದರು. ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಸಾರ್ವತ್ರಿಕ ಸನ್ನೆ ಭಾಷೆಯನ್ನು ಚಿತ್ರದಲ್ಲಿ ಬಳಸಲಾಗಿದೆ ಎಂದರು.
ಇದೇ ವೇಳೆ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಮಾತನಾಡಿದ ಹುಮಾ, “ಇಡೀ ಜಗತ್ತೇ ಈ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದೆ. ಯಶ್ ದೇಶದ ಅತ್ಯಂತ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರೊಂದಿಗೆ ಕೆಲಸ ಮಾಡುವುದರಿಂದ ಪ್ರತಿದಿನ ಹೊಸದನ್ನು ಕಲಿಯುತ್ತಿದ್ದೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದು ಅವರು ಮನವಿ ಮಾಡಿದರು.
ಅಪರಾಧ
ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ! ಸ್ಟೀರಿಂಗ್ ಮೇಲೆ ಮೊಣಕೈ, ಕೈಯಲ್ಲಿ ಮೊಬೈಲ್; ವೈರಲ್ ವಿಡಿಯೊ
ನವದೆಹಲಿ, ಜು.8: ರಸ್ತೆ ಸುರಕ್ಷತೆ ಕುರಿತು ಸರ್ಕಾರ ಮತ್ತು ಸಾರಿಗೆ ಇಲಾಖೆ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಕೆಲವರ ನಿರ್ಲಕ್ಷ್ಯದಿಂದ ಅಪಘಾತಗಳ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೆಹಲಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ನ ಚಾಲಕ ಸುಮಾರು 100 ಕಿ.ಮೀ ವೇಗದಲ್ಲಿ ಬಸ್ ಚಲಾಯಿಸುತ್ತಿದ್ದರೂ, ರಸ್ತೆಯತ್ತ ಸಂಪೂರ್ಣ ಗಮನ ಹರಿಸುವ ಬದಲು ತನ್ನ ಮೊಬೈಲ್‌ನಲ್ಲಿ ರೀಲ್ಸ್ ವೀಕ್ಷಿಸುತ್ತಿರುವುದು ವೈರಲ್ ವಿಡಿಯೊದಲ್ಲಿ ಕಾಣಿಸಿದೆ. ಚಾಲಕ ಸ್ಟೀರಿಂಗ್ ಮೇಲೆ ಮೊಣಕೈ ಇಟ್ಟುಕೊಂಡೇ ಮೊಬೈಲ್ ನೋಡುತ್ತಿರುವ ದೃಶ್ಯ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.
ವೈರಲ್ ವಿಡಿಯೊದಲ್ಲಿ ಚಾಲಕ ಕೆಲ ಕ್ಷಣಗಳಿಗೊಮ್ಮೆ ಮಾತ್ರ ರಸ್ತೆಯತ್ತ ಕಣ್ಣಾಡಿಸಿ ಮತ್ತೆ ಮೊಬೈಲ್‌ಗೆ ಗಮನ ಹರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನೂ ಆತನ ಪಕ್ಕದಲ್ಲಿದ್ದ ಕಂಡಕ್ಟರ್ ಕೂಡ ಚಾಲಕನಿಗೆ ಎಚ್ಚರಿಕೆ ನೀಡುವ ಬದಲು ತನ್ನ ಮೊಬೈಲ್‌ನಲ್ಲೇ ತೊಡಗಿಸಿಕೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಘಟನೆ ನಡೆದ ನಿಖರ ದಿನಾಂಕ ಹಾಗೂ ಚಾಲಕನ ಗುರುತು ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೂ ಈ ವಿಡಿಯೊ ರಸ್ತೆ ಸುರಕ್ಷತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಚಾಲಕನ ಚಾಲನಾ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಬೇಕು” ಎಂದು ಹಲವರು ಆಗ್ರಹಿಸಿದ್ದಾರೆ. ಮತ್ತೊಬ್ಬರು “ನೂರಾರು ಪ್ರಯಾಣಿಕರ ಜೀವದೊಂದಿಗೆ ಆಟವಾಡುವುದು ಕ್ಷಮಿಸಲಾಗದ ಅಪರಾಧ. ಚಾಲಕ ಹಾಗೂ ಕರ್ತವ್ಯ ನಿರ್ಲಕ್ಷ್ಯ ತೋರಿದ ಕಂಡಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ನೆನಪಿಸಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿಹೇಳಿದೆ.
ಕ್ರೀಡೆ
ಇಂಗ್ಲೆಂಡ್ ವಿರುದ್ಧ ಮುಖಭಂಗ; ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 125 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಇನ್ನೂ ಗೆಲುವಿನ ಖಾತೆ ತೆರೆಯದೆ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಅವರ 44 ಎಸೆತಗಳಲ್ಲಿ 70 ರನ್‌ಗಳ ಸ್ಫೋಟಕ ಆಟದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ಕೊನೆಯಲ್ಲಿ ಸ್ಯಾಮ್ ಕರನ್ ಅಜೇಯ 41 ರನ್ ಹಾಗೂ ವಿಲ್ ಜಾಕ್ಸ್ ಅವರ ವೇಗದ ಇನ್ನಿಂಗ್ಸ್‌ನಿಂದ ಇಂಗ್ಲೆಂಡ್ 20 ಓವರ್‌ಗಳಲ್ಲಿ 201 ರನ್ ಗಳಿಸಿತು.
202 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟರ್‌ಗಳು ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ಭಾರತ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗೆ ಆಲೌಟ್ ಆಗಿ 125 ರನ್‌ಗಳ ಭಾರೀ ಸೋಲು ಕಂಡಿತು. ವೈಭವ್ ಸೂರ್ಯವಂಶಿ ಹಾಗೂ ಇಶಾನ್ ಕಿಶನ್ ತಲಾ 13 ರನ್ ಗಳಿಸಿದ್ದೇ ಭಾರತದ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, “ನಾವು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದೇವೆ. ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ ಅದನ್ನು ಸ್ವೀಕರಿಸಲೇಬೇಕು. ಟ್ರೆಂಟ್ ಬ್ರಿಡ್ಜ್ ಪಿಚ್‌ನಲ್ಲಿ ನಮ್ಮ ಬೌಲರ್‌ಗಳು ಸರಿಯಾದ ಲೆಂತ್‌ನಲ್ಲಿ ಬೌಲಿಂಗ್ ಮಾಡಲು ವಿಫಲರಾದರು. ಪವರ್‌ಪ್ಲೇನಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಕಳೆದ ತಪ್ಪುಗಳನ್ನು ನೆನೆದು ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು. ಇದೀಗ ಸರಣಿಯಲ್ಲಿ ಉಳಿಯಲು ಭಾರತಕ್ಕೆ ಮುಂದಿನ ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ.
-
ದೇಶ24 hours agoಅಂಜನಾದ್ರಿ ಹುಂಡಿ ಎಣಿಕೆ ಬಳಿಕ 4 ದಿನ ಮೌನ! ಈಗ ಪ್ರಕಟಣೆ ಹೊರಬಿದ್ದಿದ್ದು ಏಕೆ?
-
ದೇಶ5 hours agoರಸ್ತೆ ಮಧ್ಯೆ ಹೆಡೆ ಎತ್ತಿ ನಿಂತ ನಾಗರಹಾವು: ಪ್ಯಾಲೇಸ್ ರಸ್ತೆಯಲ್ಲಿ ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತ
-
ದೇಶ9 hours agoಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಿದರೆ ಕ್ರೆಡಿಟ್ ಕಾರ್ಡ್ ಬಂದ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
-
ದೇಶ23 hours ago‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ
-
ಅಪರಾಧ4 hours agoಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೆ ರೌಡಿಗಳ ದಾಳಿ: ಫ್ಲೈ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ
-
ದೇಶ4 hours ago‘ಮೋದಿ ಒಂದೂವರೆ ಗಂಟೆ ನನಗೆ ಬುದ್ಧಿ ಹೇಳಿದರು’ : ಎಚ್.ಡಿ.ಕುಮಾರಸ್ವಾಮಿ
-
ಅಪರಾಧ3 hours agoಆಸ್ಪತ್ರೆ ದೌರ್ಜನ್ಯ ಪ್ರಕರಣ: ವೈರಲ್ ದೃಶ್ಯಗಳ ನಡುವೆ ಕಾರ್ಪೊರೇಟರ್ ಸ್ಪಷ್ಟನೆ ಏನು?
-
ಅಪರಾಧ2 hours agoವೈರಲ್ ವಿಡಿಯೋ: ಲಾರಿ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ
