Connect with us

ದೇಶ

ವಾಟ್ಸಾಪ್ ಹೈಜಾಕ್ ಮಾಡುವ ಹೊಸ ತಂತ್ರ

ನಾನಾ ರೀತಿಯ ಸೈಬರ್ ವಂಚನೆಗಳ ಸಾಲಿಗೆ ಇದೀಗ ಭಯಾನಕವಾದ ಹೊಸ ತಂತ್ರ ಸೇರ್ಪಡೆಯಾಗಿದೆ. ಅದೇ ‘ಘೋಸ್ಟ್ ಪೇರಿಂಗ್’ (Ghost Pairing Scam). ಈ ದಂಧೆಯಲ್ಲಿ ಒಟಿಪಿ ಕೇಳುವುದಿಲ್ಲ, ಸಿಮ್ ಸ್ವಾಪ್ ಮಾಡುವುದಿಲ್ಲ, ವೆರಿಫಿಕೇಶನ್ ಕೋಡ್ ಕಳುಹಿಸದೆ, ಡಿಜಿಟಲ್ ಅರೆಸ್ಟ್ ಕೂಡ ಮಾಡುವುದಿಲ್ಲ. ಆದರೆ ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್‌ನ್ನು ನಿಮ್ಮ ಅರಿವಿಲ್ಲದೇ ಹ್ಯಾಕರ್‌ಗಳ ಮೊಬೈಲ್‌ಗೆ ಪೇರ್ ಮಾಡಿ, ಸಂಪೂರ್ಣವಾಗಿ ಹೈಜಾಕ್ ಮಾಡಲಾಗುತ್ತದೆ.

👻 ಏನಿದು ಘೋಸ್ಟ್ ಪೇರಿಂಗ್?

ನಮಗೆ ತಿಳಿಯದೆಯೇ ನಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್ ಖಾತೆಯನ್ನು ಇನ್ನೊಬ್ಬರು ತಮ್ಮ ಡಿವೈಸ್‌ಗೆ ಪೇರಿಂಗ್ ಮಾಡಿಕೊಂಡು ಬಳಸುವುದೇ ಘೋಸ್ಟ್ ಪೇರಿಂಗ್. ಪ್ರಾರಂಭದಲ್ಲಿ ಕೇವಲ ವಾಟ್ಸಾಪ್‌ ಮಾತ್ರ ಹ್ಯಾಕ್ ಆಗುತ್ತದೆ. ಆದರೆ ಅದರಲ್ಲಿರುವ ಮಾಹಿತಿ ಆಧರಿಸಿ ಹಂತ ಹಂತವಾಗಿ ಇಡೀ ಫೋನಿನ ನಿಯಂತ್ರಣವನ್ನು ದಂಧೆಕೋರರು ಪಡೆದುಕೊಳ್ಳುತ್ತಾರೆ.

OTP, ಪಾಸ್‌ವರ್ಡ್ ಬೇಡ!

ಈ ವಂಚನೆಗೆ ಒಟಿಪಿ ಅಥವಾ ಪಾಸ್‌ವರ್ಡ್ ಅಗತ್ಯವಿಲ್ಲ. ವಿಶ್ವಾಸಾರ್ಹ ವ್ಯಕ್ತಿಗಳಿಂದಲೇ ಬರುವ ಸಂದೇಶಗಳ ಮೂಲಕ ಬಳಕೆದಾರರನ್ನು ಮೋಸಕ್ಕೆ ಒಳಪಡಿಸುವುದೇ ಈ ತಂತ್ರದ ವಿಶೇಷ. ಹೀಗಾಗಿ ಹ್ಯಾಕ್ ಆದವರಿಗೂ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗುವುದಿಲ್ಲ.

ನಂಬಿಕಸ್ಥರಿಂದಲೇ ಹರಡುವ ಸ್ಕ್ಯಾಮ್

ನಿಮ್ಮ ವಾಟ್ಸಾಪ್ ಹೈಜಾಕ್ ಆದರೆ, ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ಎಲ್ಲರಿಗೂ ನಿಮ್ಮ ಹೆಸರಲ್ಲೇ ಸಂದೇಶ ಹೋಗುತ್ತದೆ. ಅವರು ಮತ್ತೆ ಅದೇ ಲಿಂಕ್ ಒತ್ತಿದರೆ ಈ ಸ್ಕ್ಯಾಮ್ ಸರಪಳಿ ರೀತಿಯಲ್ಲಿ ಹರಡುತ್ತದೆ.

ನೀವು ಹೇಗೆ ಹ್ಯಾಕ್ ಆಗುತ್ತೀರಿ?

ಪರಿಚಯಸ್ಥರಿಂದ “ನಿನ್ನ ಫೋಟೋ ನೋಡಿದೆ” ಎಂಬಂತೆ ಸಾಮಾನ್ಯ ಸಂದೇಶ ಬರುತ್ತದೆ. ಜೊತೆಗೆ ಫೇಸ್‌ಬುಕ್ ಪ್ರಿವ್ಯೂ ತರಹ ಕಾಣಿಸುವ ಲಿಂಕ್ ಇರುತ್ತದೆ. ನೀವು ಒತ್ತಿದಾಗ ಫೇಕ್ ವೆಬ್‌ಪೇಜ್ ತೆರೆದು, ‘Verify’ ಮಾಡಲು ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ. ನಂಬರ್ ಹಾಕಿದರೆ ವಾಟ್ಸಾಪ್ ಪೇರಿಂಗ್ ಕೋಡ್ ಜನರೇಟ್ ಆಗುತ್ತದೆ. ಆ ಕೋಡ್ ನಮೂದಿಸಿದ ಕ್ಷಣದಿಂದಲೇ ನಿಮ್ಮ ವಾಟ್ಸಾಪ್ ಹ್ಯಾಕರ್‌ ಡಿವೈಸ್‌ಗೆ ಪೇರ್ ಆಗುತ್ತದೆ.

ಪಾರಾಗುವುದು ಹೇಗೆ?

  • ವಾಟ್ಸಾಪ್‌ನ Linked Devices ಅನ್ನು ನಿಯಮಿತವಾಗಿ ಪರಿಶೀಲಿಸಿ
  • ಗೊತ್ತಿಲ್ಲದ ಡಿವೈಸ್ ಕಂಡರೆ ತಕ್ಷಣ Remove ಮಾಡಿ
  • ಯಾವುದೇ ಕಾರಣಕ್ಕೂ ಪೇರಿಂಗ್ ಕೋಡ್ ನಮೂದಿಸಬೇಡಿ
  • 2-Step Verification ಕಡ್ಡಾಯವಾಗಿ ಆನ್ ಮಾಡಿ
  • ಪರಿಚಿತರಿಂದ ಬಂದ ಅನಿರೀಕ್ಷಿತ ಸಂದೇಶಗಳನ್ನೂ ಒಮ್ಮೆ ದೃಢಪಡಿಸಿ

ಜೆನ್ ಡಿಜಿಟಲ್ (Gen Digital) ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆ ಈ ಘೋಸ್ಟ್ ಪೇರಿಂಗ್ ದಂಧೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದೆ.

ದೇಶ

ಎಪ್ಸ್ಟೀನ್ ಫೈಲ್ಸ್‌ನಲ್ಲಿ ಹರ್ದೀಪ್ ಪುರಿ ಹೆಸರು? ಸಂಸತ್ತಿನಲ್ಲಿ ಗದ್ದಲ, ಸಚಿವರ ಸ್ಪಷ್ಟನೆ

ಹೊಸದಿಲ್ಲಿ: ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಜೆಫ್ರಿ ಎಪ್ಸ್ಟೀನ್‌ (Jeffrey Epstein) ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆಗೊಳಿಸಿರುವ ಮಿಲಿಯನ್‌ಗಟ್ಟಲೆ ಇಮೇಲ್‌ಗಳು ಮತ್ತು ದಾಖಲೆಗಳು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಈ ದಾಖಲೆಗಳಲ್ಲಿ ಕೆಲವು ಭಾರತೀಯರ ಹೆಸರುಗಳು ಕಾಣಿಸಿಕೊಂಡಿರುವುದು ಸಂಸತ್ತಿನಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಹೆಸರು ಉಲ್ಲೇಖವಾಗಿರುವುದಾಗಿ ವರದಿಯಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ತಿನೊಳಗೂ ಹೊರಗೂ ಮಾತನಾಡಿದ ಅವರು, ಎಪ್ಸ್ಟೀನ್ ಪ್ರಕರಣದ ಉಲ್ಲೇಖದೊಂದಿಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಹರ್ದೀಪ್ ಪುರಿ, “ನಾನು ಜೆಫ್ರಿ ಎಪ್ಸ್ಟೀನ್ ಅವರನ್ನು ಕೆಲವೇ ಬಾರಿ, ಅದೂ ಔಪಚಾರಿಕ ಸಂದರ್ಭಗಳಲ್ಲಿ ಮಾತ್ರ ಭೇಟಿ ಮಾಡಿದ್ದೇನೆ. ಅವರ ಅಕ್ರಮ ಚಟುವಟಿಕೆಗಳಿಗೆ ನನ್ನೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ಮೂರು ಮಿಲಿಯನ್‌ ಇಮೇಲ್‌ಗಳಲ್ಲಿ ತಮ್ಮ ಹೆಸರು ಕೇವಲ 3-4 ಬಾರಿ ಮಾತ್ರ ಉಲ್ಲೇಖವಾಗಿದೆ. ನಿಯೋಗದ ಭಾಗವಾಗಿ ಕೆಲ ಸಂದರ್ಭಗಳಲ್ಲಿ ಭೇಟಿಯಾಗಿದ್ದು, ಕೇವಲ ಒಂದು ಇಮೇಲ್ ವಿನಿಮಯ ಮಾಡಿಕೊಂಡಿದ್ದೇನೆ ಅಷ್ಟೇ ಹೊರತು, ಯಾವುದೇ ಅಕ್ರಮ ಸಂಬಂಧ ಇಲ್ಲ ಎಂದು ಹೇಳಿದರು.

ಇದೇ ವೇಳೆ, 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ಕುರಿತ ಉಲ್ಲೇಖಗಳನ್ನೂ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. “ಇದು ಅಧಿಕೃತ ಭೇಟಿಯೇ ಹೊರತು, ಉಳಿದ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯ ವ್ಯರ್ಥ ಕಲ್ಪನೆಗಳಾಗಿವೆ” ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಎಪ್ಸ್ಟೀನ್ ಫೈಲ್ಸ್ ಪ್ರಕರಣ ಇದೀಗ ಭಾರತೀಯ ರಾಜಕೀಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಪ್ರತಿಕ್ರಿಯೆಗಳು ಎದುರಾಗುವ ಸಾಧ್ಯತೆ ಇದೆ.

Continue Reading

ಕ್ರೀಡೆ

JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ

ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.

ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.

ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.

ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.

ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.

ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.

ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.

ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

ದೇಶ

LATEST : ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ? ರಿಜುಜು ಕಿಡಿ

ನವದೆಹಲಿ: ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹಕ್ಕುಚ್ಯುತಿ (Breach of Privilege) ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು (Kiren Rijiju) ತಿಳಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವು ‘ಭಾರತ ಮಾತೆಯನ್ನು ಮಾರಿಬಿಟ್ಟಿದೆ’ ಎಂದು ಆರೋಪಿಸಿದ್ದರು. ಭಾರತ–ಅಮೆರಿಕ ವಾಣಿಜ್ಯ ಒಪ್ಪಂದವನ್ನು ‘ಸಂಪೂರ್ಣ ಶರಣಾಗತಿ’ ಎಂದು ಟೀಕಿಸಿದ ಅವರು, ದೇಶದ ಶಕ್ತಿ ಸುರಕ್ಷತೆ ಅಮೆರಿಕಕ್ಕೆ ಒಪ್ಪಿಸಲಾಗಿದೆ ಹಾಗೂ ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಕಿರಣ್ ರಿಜುಜು, ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಮಂತ್ರಿ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು. “ಭಾರತವನ್ನು ಯಾರೂ ಮಾರಲಾರರು, ಖರೀದಿಸಲಾರರು. ಗಂಭೀರ ಆರೋಪ ಮಾಡಲು ನಿಯಮಾನುಸಾರ ಮುಂಚಿತ ನೋಟಿಸ್ ನೀಡಬೇಕು ಮತ್ತು ಪುರಾವೆ ಸಲ್ಲಿಸಬೇಕು. ಆದರೆ ರಾಹುಲ್ ಗಾಂಧಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡಿದ್ದಾರೆ,” ಎಂದು ರಿಜುಜು ಹೇಳಿದರು.

ಇದಲ್ಲದೆ, ರಾಹುಲ್ ಗಾಂಧಿ ಅವರ ಭಾಷಣದಲ್ಲಿ ದಾಖಲಾಗಿರುವ ತಪ್ಪು ಹೇಳಿಕೆಗಳು ಮತ್ತು ಅಸಭ್ಯ ಪದಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧವೂ ನೋಟಿಸ್ ಇಲ್ಲದೆ ಗಂಭೀರ ಆರೋಪ ಮಾಡಲಾಗಿದೆ ಎಂದು ರಿಜುಜು ತಿಳಿಸಿದರು.

ಈ ಬೆಳವಣಿಗೆಗಳ ನಡುವೆ ಸಂಸತ್ ಕಲಾಪದಲ್ಲಿ ಮತ್ತಷ್ಟು ರಾಜಕೀಯ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ.

Continue Reading

Trending