Connect with us

ಅಪರಾಧ

ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ: ಕುಡುಕನೊಬ್ಬ ಗೋಪುರ ಏರಿ ಅವಾಂತರ, 3 ಗಂಟೆಗಳ ರೆಸ್ಕ್ಯೂ

ತಿರುಪತಿ, ಜನವರಿ 3: ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದ್ದು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕಂಪೌಂಡ್ ಹಾರಿ ದೇಗುಲದ ಆವರಣ ಪ್ರವೇಶಿಸಿ ಗೋಪುರ ಏರಿ ಅವಾಂತರ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಘಟನೆ ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಸಂಭವಿಸಿದ್ದು, ಭಕ್ತರು ಹಾಗೂ ದೇಗುಲ ಸಿಬ್ಬಂದಿಯಲ್ಲಿ ಆತಂಕ ಉಂಟುಮಾಡಿದೆ.

ದೇಗುಲದಲ್ಲಿ ‘ಏಕಾಂತ ಸೇವೆ’ ಮುಗಿದ ತಕ್ಷಣ, ಆಗಂತುಕನೊಬ್ಬ ಭದ್ರತಾ ಪಡೆಗಳ ಕಣ್ತಪ್ಪಿಸಿ ಒಳನುಗ್ಗಿ ಏಕಾಏಕಿ ಗೋಪುರ ಏರಿದ್ದಾನೆ. ಗೋಪುರದ ಮೇಲಿನಿಂದ ಕಳಶಗಳನ್ನು ಎಳೆಯಲು ಯತ್ನಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಇದನ್ನು ಗಮನಿಸಿದ ದೇಗುಲ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಆತ ಮದ್ಯದ ಅಮಲಿನಲ್ಲಿ ಇದ್ದು, ಕೆಳಗಿಳಿಯಲು ನಿರಾಕರಿಸಿದ್ದಾನೆ. ಅಲ್ಲದೆ, ಪೊಲೀಸರಿಗೆ ಮದ್ಯದ ಬಾಟಲ್ ಕೊಡಬೇಕು ಎಂದು ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಪೂರ್ವ ತಿರುಪತಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ರೆಸ್ಕ್ಯೂ ಕಾರ್ಯಾಚರಣೆ ನಡೆಸಿದರು. ಕಬ್ಬಿಣದ ಏಣಿಗಳು ಮತ್ತು ಹಗ್ಗಗಳ ಸಹಾಯದಿಂದ ಚಾಣಾಕ್ಷತೆಯಿಂದ ಆತನನ್ನು ಗೋಪುರದಿಂದ ಸುರಕ್ಷಿತವಾಗಿ ಕೆಳಕ್ಕೆ ಕರೆತಂದು ಬಳಿಕ ವಶಕ್ಕೆ ಪಡೆಯಲಾಯಿತು.

ಘಟನೆಯ ಕುರಿತು ವಿವರವಾದ ತನಿಖೆ ಆರಂಭಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ. ಈ ಘಟನೆಯಿಂದ ತಿರುಪತಿ ದೇಗುಲದ ಭದ್ರತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವಿಸಿವೆ.

ಅಪರಾಧ

ಬಿಕ್ಲು ಶಿವ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಾಸಕ ಬೈರತಿ ಬಸವರಾಜ್

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ (Bairati Basavaraj) ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆ ಮಾತ್ರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ನ್ಯಾಸುನೀಲ್ ದತ್ ಯಾದವ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಈಗಾಗಲೇ 20 ಆರೋಪಿಗಳ ಪೈಕಿ ಎ-1 ಆರೋಪಿ ಜಗದೀಶ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ತಿರಸ್ಕರಿಸಿತ್ತು.

ಇದಕ್ಕೂ ಮುನ್ನ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಾಪತ್ತೆಯಾಗಿದ್ದ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಂತರ ಜಾಮೀನು ಮಂಜೂರಾದರೂ, ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ರದ್ದುಪಡಿಸಿತ್ತು.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ಅಪರಾಧ

BENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ

ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ (Bengaluru Accident) ಹೆಣ್ಣೂರು ಸಂಚಾರ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.

ಮೃತರನ್ನು ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರ ಮಕ್ಕಳಾದ ವರ್ಷ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ನಾಗನಗೌಡ ಅವರು ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ತೆರಳಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಬಳಿ ಎದುರುಗಡೆಯಿಂದ ಬಂದ ಅಜ್ ಮೋನಿ ಶಾಲೆಯ ಬಸ್ ಏಕಾಏಕಿ ತಿರುವು ಪಡೆದುಕೊಂಡಿದೆ. ಈ ವೇಳೆ ಸ್ಕೂಟರ್ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಪೊಲೀಸರು ಮಹಜರು ನಡೆಸಿ, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಅವಶ್ಯಕತೆ ಮತ್ತೆ ಒತ್ತಿ ಹೇಳಲಾಗಿದೆ.

Continue Reading

ಅಪರಾಧ

ಮನುಷ್ಯತ್ವ ಹೂತುಹೋದ ಎಪ್‌ಸ್ಟೀನ್ ದ್ವೀಪ: ಜಗತ್ತಿನ ಎಲೈಟ್‌ಗಳನ್ನು ನಡುಗಿಸುತ್ತಿರುವ ‘ಲೋಲಿಟಾ ಎಕ್ಸ್‌ಪ್ರೆಸ್’ ರಹಸ್ಯ

ನವದೆಹಲಿ/ವಾಷಿಂಗ್ಟನ್:
ಮನುಷ್ಯತ್ವವೇ ಮರಳಲ್ಲಿ ಹೂತುಹೋದ ದ್ವೀಪವೊಂದು ವರ್ಷಗಳ ಕಾಲ ಜಗತ್ತಿನ ಕಣ್ಣು ತಪ್ಪಿಸಿ ಅನಾಚಾರದ ಸ್ವರ್ಗವಾಗಿ ಬೆಳೆದಿತ್ತು. ‘ಲೋಲಿಟಾ ಎಕ್ಸ್‌ಪ್ರೆಸ್’ ಎಂಬ ಖಾಸಗಿ ಜೆಟ್‌ ವಿಮಾನ ದಿನವೂ ಲಿಟಲ್ ಸೇಂಟ್ ಜೇಮ್ಸ್ ದ್ವೀಪಕ್ಕೆ ಹಾರಾಟ ನಡೆಸುತ್ತಿತ್ತು. ಹದಿಹರೆಯದ ಹುಡುಗಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಬಲಿಕೊಡುತ್ತಿದ್ದ ಈ ದ್ವೀಪವನ್ನು ಇಂದು ಜಗತ್ತು ‘ಎಪ್‌ಸ್ಟೀನ್ ದ್ವೀಪ’ ಅಥವಾ ‘ಪೆಡೋಪೈಲ್ ಐಲ್ಯಾಂಡ್’ ಎಂದೇ ಕರೆಯುತ್ತಿದೆ.

1998ರಲ್ಲಿ ಅಮೆರಿಕದ ಶತಕೋಟ್ಯಧಿಪತಿ ಜೆಫ್ರಿ ಎಪ್‌ಸ್ಟೀನ್ 8 ಮಿಲಿಯನ್ ಡಾಲರ್ ನೀಡಿ ಖರೀದಿಸಿದ 71 ಎಕರೆ ವಿಸ್ತೀರ್ಣದ ಈ ದ್ವೀಪದಲ್ಲಿ ಐಷಾರಾಮಿ ರೆಸಾರ್ಟ್‌ಗಳು, ವಿಲ್ಲಾಗಳು, ಹೆಲಿಪ್ಯಾಡ್‌ಗಳು ನಿರ್ಮಾಣವಾಗಿದ್ದವು. ಹೊರಜಗತ್ತಿನಿಂದ ಸಂಪೂರ್ಣ ಕಡಿದುಹಾಕಲ್ಪಟ್ಟ ಈ ಪ್ರದೇಶದಲ್ಲಿ ನೂರಾರು ಅಪ್ರಾಪ್ತ ಬಾಲಕಿಯರನ್ನು ಬಂಧಿಸಿ, ಜಗತ್ತಿನ ಎಲೈಟ್‌ಗಳಿಗೆ ಪೂರೈಸಲಾಗುತ್ತಿತ್ತು ಎಂಬ ಆರೋಪಗಳು ತನಿಖೆಯಲ್ಲಿ ಬಹಿರಂಗವಾದವು.

2005ರಲ್ಲಿ ಫ್ಲೋರಿಡಾದ 14 ವರ್ಷದ ಬಾಲಕಿಯ ತಾಯಿಯೊಬ್ಬರು ನೀಡಿದ ದೂರು ಈ ಮಹಾ ಲೈಂಗಿಕ ಹಗರಣದ ಮೊದಲ ಕಿಡಿಯಾಗಿತ್ತು. ಬಳಿಕ 50ಕ್ಕೂ ಹೆಚ್ಚು ಅಪ್ರಾಪ್ತೆಯರು ದೂರು ದಾಖಲಿಸಿದರು. 2008ರಲ್ಲಿ ಎಪ್‌ಸ್ಟೀನ್ ತಪ್ಪಿತಸ್ಥನಾಗಿದ್ದರೂ, ಕೇವಲ 13 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದನು. 2019ರಲ್ಲಿ ಪುನಃ ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಬಂಧನಕ್ಕೊಳಗಾದ ಎಪ್‌ಸ್ಟೀನ್, ವಿಚಾರಣೆಗೆ ಮುನ್ನವೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕ ಸರ್ಕಾರ ಘೋಷಿಸಿತು. ಆದರೆ, ಈ ಸಾವಿನ ಸುತ್ತ ಇನ್ನೂ ಹಲವು ಅನುಮಾನಗಳಿವೆ.

ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸುಮಾರು 30 ಲಕ್ಷ ಪುಟಗಳ ದಾಖಲೆಗಳು ಜಗತ್ತನ್ನೇ ಬೆಚ್ಚಿಬೀಳುವಂತೆ ಮಾಡಿವೆ. ರಾಜಕೀಯ ನಾಯಕರು, ಬಿಲಿಯನೇರ್‌ಗಳು, ರಾಜಮನೆತನದವರು, ವಿಜ್ಞಾನಿಗಳು, ಉದ್ಯಮಿಗಳೆಂದರೆ ಯಾರೂ ಹೊರತಲ್ಲ. 80ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ತನಿಖೆಗೆ ಒಳಗಾಗಿದ್ದು, ಯುರೋಪ್‌ನ ಹಲವೆಡೆ ರಾಜೀನಾಮೆ ಅಲೆ ಎದ್ದಿದೆ.

ಆದರೆ, ಎಪ್‌ಸ್ಟೀನ್ ಫೈಲ್‌ನಲ್ಲಿ ಹೆಸರು ಕಾಣಿಸಿಕೊಂಡ ಮಾತ್ರಕ್ಕೆ ಅಪರಾಧ ಸಾಬೀತಾಗುವುದಿಲ್ಲ ಎಂದು ಅಮೆರಿಕದ ನ್ಯಾಯಾಲಯ ಸ್ಪಷ್ಟಪಡಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಅಥವಾ ಹಣಕಾಸು ದಾಖಲೆಗಳಿದ್ದಾಗ ಮಾತ್ರ ಕಾನೂನು ಕ್ರಮ ಸಾಧ್ಯವೆಂದು ಹೇಳಿದೆ.

ಈ ಎಲ್ಲದ ನಡುವೆ, ಈ ಮಹಾ ಹಗರಣದ ನಿಜವಾದ ಬಲಿಪಶುಗಳು ನೂರಾರು ಅಪ್ರಾಪ್ತ ಬಾಲಕಿಯರು ಎಂಬ ಸತ್ಯ ಮಾತ್ರ ಬದಲಾಗಿಲ್ಲ. ಅಧಿಕಾರ, ಹಣ ಮತ್ತು ಪ್ರಭಾವದ ಅಡ್ಡೆಗೋಡೆಯ ಹಿಂದೆ ನಡೆದ ಈ ಅಮಾನುಷ ಕೃತ್ಯಗಳು ಇಂದು ಜಗತ್ತಿನ ಅಂತರಾತ್ಮವನ್ನೇ ಪ್ರಶ್ನಿಸುತ್ತಿವೆ.

Continue Reading

Trending