Connect with us

ದೇಶ

ರಾಜ್ಯ ರಾಜಕಾರಣಕ್ಕೆ ಬರಲು ಸಿದ್ಧ: ಹೈಕಮಾಂಡ್ ತೀರ್ಮಾನಕ್ಕೆ ಬದ್ಧೆ – ಸುಮಲತಾ ಅಂಬರೀಷ್

ಬೆಂಗಳೂರು: ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ರಾಜಕೀಯ ಭವಿಷ್ಯದ ಕುರಿತು ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದು, ಅವರ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಬುಧವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಮಲತಾ, ಮುಂದಿನ ಚುನಾವಣೆಗೆ ಸಂಬಂಧಿಸಿದ ಎಲ್ಲ ನಿರ್ಣಯಗಳು ಹೈಕಮಾಂಡ್ ಮತ್ತು ಪಕ್ಷದ ರಾಜ್ಯ ನಾಯಕತ್ವದ ಕೈಯಲ್ಲಿದೆ ಎಂದರು. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಸಂಪೂರ್ಣ ಬದ್ಧಳಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಾನು ಈಗಾಗಲೇ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಜತೆ ಚರ್ಚೆ ನಡೆಸುವ ಉದ್ದೇಶವಿದೆ ಎಂದು ಹೇಳಿದರು. ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಯಾವುದೇ ವಿರೋಧವಿಲ್ಲ. ಸಮಯ ಮತ್ತು ಸಂದರ್ಭಗಳು ಕೂಡಿ ಬಂದಾಗ ಎಲ್ಲವೂ ಸಾಧ್ಯ ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯನ್ನು ಕೆಳಮಟ್ಟದಿಂದ ಗಟ್ಟಿಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಜಿಲ್ಲೆಯ ಮಟ್ಟದಲ್ಲಿ ನಡೆಯುವ ಪಕ್ಷದ ಹೋರಾಟಗಳು, ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಾನು ನಿರಂತರವಾಗಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೂ ವಿರೋಧವಿಲ್ಲ. ಆದರೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಾಯಕರು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ದುರ್ಘಟನೆ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಆ ಘಟನೆ ಅತ್ಯಂತ ಬೇಸರ ತರಿಸಿದೆ ಎಂದರು. ಪಕ್ಷದ ಒಳಗಿನ ಕಲಹವಾಗಿರಲಿ ಅಥವಾ ಬೆಂಬಲಿಗರ ನಡುವಿನ ಸಂಘರ್ಷವಾಗಿರಲಿ, ಇಂತಹ ಕಚ್ಚಾಟದಲ್ಲಿ ಒಬ್ಬ ವ್ಯಕ್ತಿಯ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ. ಶತ್ರುತ್ವ ಈ ಮಟ್ಟಕ್ಕೆ ಹೋಗಬಾರದು ಎಂದು ಕಳವಳ ವ್ಯಕ್ತಪಡಿಸಿದರು.

ಅಪರಾಧ

BAIRATHI BASAVARJU BREAKING NEWS : ಸಿಐಡಿ ಲುಕ್‌ಔಟ್ ನೋಟಿಸ್ ಜಾರಿ, ತನಿಖೆ ತೀವ್ರ

ಬೆಂಗಳೂರು: ರೌಡಿಶೀಟರ್ ಬಿಲ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರಿಗೆ ಮತ್ತೊಂದು ಕಾನೂನು ಹಿನ್ನಡೆ ಎದುರಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅವರ ಬಂಧನದ ಭೀತಿ ಮತ್ತಷ್ಟು ಗಟ್ಟಿಯಾಗಿದೆ.

ಈ ಹಿಂದೆ ಇದೇ ಪ್ರಕರಣದಲ್ಲಿ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದರ ನಂತರ ಬೈರತಿ ಬಸವರಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಸಹ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ವಿಚಾರಣೆ ವೇಳೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಗಮನಾರ್ಹ.

ಈ ಬೆಳವಣಿಗೆಯೊಂದಿಗೆ ತನಿಖಾ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈಗಾಗಲೇ ಸಿಐಡಿ ಪೊಲೀಸರು ಬೈರತಿ ಬಸವರಾಜ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳಿವೆ.

ರಾಜಕೀಯ ವಲಯದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರಕರಣ ಹೊಸ ತಿರುವು ಪಡೆದಿದೆ.

Continue Reading

ದೇಶ

“ಉರ್ಕೆ ಉಂಡ್ರಾ?”: ಮಧುಗಿರಿಯಲ್ಲಿ ‘ಸಿಎಂ ಆಗಿ’ ಘೋಷಣೆಗೆ ಪರಮೇಶ್ವರ್ ತೆಲುಗಿನಲ್ಲಿ ತಿರುಗೇಟು

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ “ಸಿಎಂ ಆಗಬೇಕು” ಎಂಬ ಘೋಷಣೆ ಕೇಳಿಬಂದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬರು “ನೀವು ಸಿಎಂ ಆಗಬೇಕು” ಎಂದು ಕೂಗಿದ ಪ್ರಸಂಗ ನಡೆದಿದೆ.

ಭಾಷಣದ ಅಂತ್ಯದಲ್ಲಿ ಈ ಘೋಷಣೆ ಕೇಳಿಬಂದಾಗ, ಪರಮೇಶ್ವರ್ ಅವರು ಕ್ಷಣಮಾತ್ರ ನಿಂತು ಕಾರ್ಯಕರ್ತನ ಮಾತಿಗೆ ತೆಲುಗಿನಲ್ಲಿ ಪ್ರತಿಕ್ರಿಯಿಸಿದರು. “ಉರ್ಕೆ ಉಂಡ್ರ… ನೀನು ಸಿಎಂ ಅಂಟ?” ಎಂದು ಹೇಳಿ, “ನಾನು ಸಿಎಂ ಆಗಬೇಕಂತೆ… ಸುಮ್ಮನಿರು” ಎಂದು ಹಾಸ್ಯಭರಿತವಾಗಿ ಹೇಳಿ ಕಾರ್ಯಕರ್ತನ ಬಾಯಿ ಮುಚ್ಚಿಸಿದರು.

ಈ ದೃಶ್ಯ ಅಲ್ಲಿದ್ದ ಜನರಲ್ಲಿ ನಗೆರಸ ಮೂಡಿಸಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಜಕೀಯ ವಲಯದಲ್ಲೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಪರಮೇಶ್ವರ್ ಅವರ ಪ್ರತಿಕ್ರಿಯೆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಭಿವೃದ್ಧಿ, ಮೂಲಸೌಕರ್ಯ ಬಲಪಡಿಸುವುದು ಮತ್ತು ಸಾರ್ವಜನಿಕ ಸೇವೆ ಸುಧಾರಣೆ ಕುರಿತು ಗೃಹ ಸಚಿವರು ಮಾತನಾಡಿದರು. ಆದರೆ “ಸಿಎಂ ಆಗಿ” ಘೋಷಣೆಯ ಘಟನೆ ಸಮಾರಂಭದ ಪ್ರಮುಖ ಹೈಲೈಟ್ ಆಗಿದೆ.

Continue Reading

ದೇಶ

ACTOR SRI LEELA : ಬಹುಭಾಷಾ ನಟಿ ಶ್ರೀಲೀಲಾ ಎಂಬಿಬಿಎಸ್ ಪದವಿ ಪೂರ್ಣ

ಬೆಂಗಳೂರು/ಮುಂಬೈ: ಬಹುಭಾಷಾ ನಟಿ ಶ್ರೀಲೀಲಾ ತಮ್ಮ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಂಬೈನ ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಪದವಿ ಸ್ವೀಕರಿಸಿದ್ದಾರೆ. ಫೆಬ್ರವರಿ 10ರಂದು ನಡೆದ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆ ಹರಿದುಬಂದಿದೆ.

24 ವರ್ಷದ ನಟಿ ಮೆರೂನ್ ಬಣ್ಣದ ಪದವಿ ಗೌನ್ ಮತ್ತು ಕ್ಯಾಪ್ ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ದೃಶ್ಯಗಳು ಅಭಿಮಾನಿಗಳ ಮನಸೆಳೆದಿವೆ. ಒಂದು ವಿಡಿಯೋದಲ್ಲಿ ತಮ್ಮ ಹೆಸರನ್ನು ಘೋಷಿಸುವ ಮೊದಲು ಸಹಪಾಠಿಗಳೊಂದಿಗೆ ಸಾಲಿನಲ್ಲಿ ನಿಂತು ಕಾಯುತ್ತಿರುವುದು ಕಾಣಿಸುತ್ತದೆ. ನಂತರ ಪ್ರಮಾಣಪತ್ರವನ್ನು ನಗುಮೊಗದಿಂದ ಸ್ವೀಕರಿಸಿದ ಅವರು, ವೇದಿಕೆಯಿಂದ ಇಳಿಯುವಾಗ ಕುಟುಂಬ ಸದಸ್ಯರನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು.

ಬಿಡುವಿಲ್ಲದ ಚಿತ್ರರಂಗದ ವೃತ್ತಿಜೀವನದ ನಡುವೆಯೂ ವೈದ್ಯಕೀಯ ಶಿಕ್ಷಣವನ್ನು ಸಮತೋಲನಗೊಳಿಸಿರುವ ಶ್ರೀಲೀಲಾ ಅವರ ಸಾಧನೆಗೆ ಅಭಿಮಾನಿಗಳು ಹಾಗೂ ಸಿನಿ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಹಲವು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ವಿದ್ಯಾಭ್ಯಾಸವನ್ನು ಕಡೆಗಣಿಸದೇ ಯಶಸ್ವಿಯಾಗಿ ಮುಗಿಸಿರುವುದು ಯುವಜನತೆಗೆ ಸ್ಪೂರ್ತಿಯಾಗಿದೆ.

ನಟನೆ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಅವರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, “ಡಾಕ್ಟರ್ ಶ್ರೀಲೀಲಾ” ಎಂದು ಅಭಿಮಾನಿಗಳು ಕರೆದಾಡುತ್ತಿದ್ದಾರೆ.

Continue Reading

Trending