Connect with us

ದೇಶ

ಆಸ್ಕರ್‌ ವೇದಿಕೆಗೆ ಹೊಂಬಾಳೆ ಫಿಲ್ಮ್ಸ್ ಸದ್ದು: ‘ಕಾಂತಾರ: ಚಾಪ್ಟರ್ 1’ ಮತ್ತು ‘ಮಹಾವತಾರ್‌ ನರಸಿಂಹ’ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ

ಬೆಂಗಳೂರು: ಆಸ್ಕರ್‌ ವೇದಿಕೆಯಲ್ಲಿ ಹೊಂಬಾಳೆ ಫಿಲ್ಮ್ಸ್‌ (Hombale Films) ಸದ್ದು ಮಾಡುವ ಕ್ಷಣ ಹತ್ತಿರವಾಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಅಧಿಕೃತವಾಗಿ ಆಸ್ಕರ್‌ ಜನರಲ್ ಎಂಟ್ರಿ ಲಿಸ್ಟ್‌ಗೆ ಪ್ರವೇಶಿಸಿದೆ. ಇದರ ಜೊತೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಮಹಾವತಾರ್‌ ನರಸಿಂಹ’ ಚಿತ್ರವೂ ಆಸ್ಕರ್ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿರುವ ಚಿತ್ರಗಳ ಅಂತಿಮ ಪಟ್ಟಿ ಜನವರಿ 22ರಂದು ಪ್ರಕಟವಾಗಲಿದ್ದು, ಮಾರ್ಚ್ 15ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಳೆದ ವರ್ಷ ತೆರೆಕಂಡ ‘ಕಾಂತಾರ’ ಹಾಗೂ ‘ಮಹಾವತಾರ್‌ ನರಸಿಂಹ’ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದು, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದ್ದವು. ಈ ಚಿತ್ರಗಳನ್ನು ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನವನ್ನು ಹೊಂಬಾಳೆ ಫಿಲ್ಮ್ಸ್ ಆಗಲೇ ಘೋಷಿಸಿತ್ತು.

ವಿಶೇಷವೆಂದರೆ, ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದಿರುವ 5 ಭಾರತೀಯ ಚಿತ್ರಗಳಲ್ಲಿ 2 ಚಿತ್ರಗಳು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವುದು. ಆನಿಮೇಟೆಡ್ ವಿಭಾಗದಲ್ಲಿ ‘ಮಹಾವತಾರ್‌ ನರಸಿಂಹ’ ಪರಿಗಣನೆಗೆ ಬಂದಿದ್ದು, ‘ಕಾಂತಾರ: ಚಾಪ್ಟರ್ 1’ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.

ಇದುವರೆಗೆ ಭಾರತದಿಂದ ಕೆಲ ಡಾಕ್ಯುಮೆಂಟರಿ ಹಾಗೂ ಶಾರ್ಟ್ ಫಿಲ್ಮ್‌ಗಳಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದರೂ, ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿಲ್ಲ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು’ ಹಾಡು ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಮತ್ತು ‘ಮಹಾವತಾರ್‌ ನರಸಿಂಹ’ ಹಾಲಿವುಡ್ ಸಿನಿಮಾಗಳೊಂದಿಗೆ ಪೈಪೋಟಿ ನಡೆಸುತ್ತಿರುವುದು ಭಾರತೀಯ ಚಿತ್ರರಂಗದ ಹೊಸ ಮೈಲುಗಲ್ಲಾಗಿದೆ. ಅಂತಿಮ ನಾಮಿನೇಷನ್ ಪಟ್ಟಿಗೆ ‘ಕಾಂತಾರ: ಚಾಪ್ಟರ್ 1’ ಪ್ರವೇಶಿಸಿದರೂ ಅದು ದೊಡ್ಡ ಸಾಧನೆಯಾಗಲಿದೆ.

Continue Reading
Click to comment

Leave a Reply

Your email address will not be published. Required fields are marked *

ಅಪರಾಧ

ಬಿಕ್ಲು ಶಿವ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಾಸಕ ಬೈರತಿ ಬಸವರಾಜ್

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ (Bairati Basavaraj) ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆ ಮಾತ್ರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ನ್ಯಾಸುನೀಲ್ ದತ್ ಯಾದವ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಈಗಾಗಲೇ 20 ಆರೋಪಿಗಳ ಪೈಕಿ ಎ-1 ಆರೋಪಿ ಜಗದೀಶ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ತಿರಸ್ಕರಿಸಿತ್ತು.

ಇದಕ್ಕೂ ಮುನ್ನ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಾಪತ್ತೆಯಾಗಿದ್ದ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಂತರ ಜಾಮೀನು ಮಂಜೂರಾದರೂ, ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ರದ್ದುಪಡಿಸಿತ್ತು.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ದೇಶ

LATEST NEWS “ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ”: ಅಮೆರಿಕಾ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಅಮೆರಿಕದೊಂದಿಗೆ ನಡೆದ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಭಾರತ ಯಾರಿಂದ ತೈಲ ಖರೀದಿಸಬೇಕು ಎಂಬುದನ್ನೂ ಅಮೆರಿಕ ನಿರ್ಧರಿಸುತ್ತಿದೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲವೇ?” ಎಂದು ಪ್ರಶ್ನಿಸಿದರು.

ಸಮಾನ ಪ್ರಯೋಜನಗಳನ್ನು ಪಡೆಯದೇ ಒಪ್ಪಂದ ಮಾಡಿಕೊಂಡಿರುವುದು ಸರ್ಕಾರದ ಶರಣಾಗತಿ ರಾಜಕೀಯ ಎಂದು ಅವರು ಆರೋಪಿಸಿದರು. ಈ ಹಿಂದೆ ಭಾರತದ ಉತ್ಪನ್ನಗಳಿಗೆ 3% ಟ್ಯಾರಿಫ್ ಇದ್ದದ್ದು, ಈಗ ಅದನ್ನು 18%ಕ್ಕೆ ಏರಿಸಲಾಗಿದೆ. ಇದನ್ನು ಸರ್ಕಾರ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ಟೀಕಿಸಿದರು.

ಟೆಕ್ಸ್‌ಟೈಲ್ ವಸ್ತುಗಳಿಗೆ ಭಾರತಕ್ಕೆ 18% ಟ್ಯಾರಿಫ್ ವಿಧಿಸಿರುವಾಗ, ಬಾಂಗ್ಲಾದೇಶಕ್ಕೆ 0% ಟ್ಯಾರಿಫ್ ನೀಡಲಾಗಿದೆ. “ಇದು ಭಾರತೀಯ ಕೈಗಾರಿಕೆಗಳಿಗೆ ಹಿನ್ನಡೆಯಾಗಿದೆ. ಟ್ರಂಪ್ ಮೋದಿ ಮೇಲೆ ಬಿಗಿಪಟ್ಟು ಹಾಕಿದ್ದಾರೆ” ಎಂದು ಹೇಳಿದರು.

ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಿದ ರಾಹುಲ್, “ಅಮೆರಿಕಕ್ಕೆ ಭಾರತದ ಬಗ್ಗೆ ಬದ್ಧತೆ ಇಲ್ಲ. ಆದರೆ ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿದೆ. ನಾವು ಮೂರ್ಖರಂತೆ ನಿಂತಿದ್ದೇವೆ” ಎಂದು ಕಿಡಿಕಾರಿದರು.

Continue Reading

ದೇಶ

BIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್‌, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.

600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಷ್ಕರದ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್‌, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಹಾಗೂ ವಿವಿಧ ಗುತ್ತಿಗೆ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಪ್ರತಿಭಟನೆಗಳಲ್ಲಿ ಭಾಗಿಯಾಗಲಿವೆ.

ನವೆಂಬರ್ 2025ರಲ್ಲಿ ಸೂಚಿಸಲಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ. ಒಡಿಶಾ ಮತ್ತು ಅಸ್ಸಾಂ ರಾಜ್ಯಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಾಲೆ-ಕಾಲೇಜುಗಳ ಮುಚ್ಚುವಿಕೆ ಕುರಿತು ಅಧಿಕೃತ ಘೋಷಣೆ ಇಲ್ಲದಿದ್ದರೂ, ಕೆಲವು ರಾಜ್ಯಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಸಾರ್ವಜನಿಕ ಸಾರಿಗೆ ಸೇವೆಗಳು ಅಸ್ತವ್ಯಸ್ತವಾಗಬಹುದು. ಆದರೆ ಹಾಲು, ಆಸ್ಪತ್ರೆ, ಮೆಡಿಕಲ್‌, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

Continue Reading

Trending