ದೇಶ
ಬೆಂಗಳೂರು ಮೆಟ್ರೋ ದರ ಮತ್ತೆ ಏರಿಕೆ? ಫೆಬ್ರವರಿಯಿಂದ 5% ಹೆಚ್ಚಳಕ್ಕೆ BMRCL ಸಿದ್ಧತೆ
ಬೆಂಗಳೂರು: ಮತ್ತೆ ಬೆಂಗಳೂರಿನ ಜನರಿಗೆ ಮೆಟ್ರೋ ಪ್ರಯಾಣ ದುಬಾರಿಯಾಗುವ ಸೂಚನೆ ಸಿಕ್ಕಿದೆ. ಫೆಬ್ರವರಿಯಿಂದ ನಮ್ಮ ಮೆಟ್ರೋ (Namma Metro) ಟಿಕೆಟ್ ದರವನ್ನು 5% ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಮುಂದಾಗಿದೆ. ಈಗಾಗಲೇ 2025ರಲ್ಲಿ ಭಾರಿ ಪ್ರಮಾಣದ ದರ ಏರಿಕೆ ಕಂಡಿರುವ ಪ್ರಯಾಣಿಕರಿಗೆ ಇದು ಮತ್ತೊಂದು ಹೊರೆ ಆಗಲಿದೆ.
ಕಳೆದ ವರ್ಷ ನಮ್ಮ ಮೆಟ್ರೋ ಟಿಕೆಟ್ ದರವನ್ನು ಸರಾಸರಿ 71% ವರೆಗೆ ಹೆಚ್ಚಿಸಲಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದರ ಏರಿಕೆಯ ಪರಿಣಾಮವಾಗಿ ಬೆಂಗಳೂರು ಮೆಟ್ರೋ ದೇಶದ ಅತ್ಯಂತ ದುಬಾರಿ ಮೆಟ್ರೋ ಸೇವೆ ನೀಡುವ ಸಂಸ್ಥೆ ಎಂಬ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೆ ದರ ಹೆಚ್ಚಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.
ಶುಲ್ಕ ನಿಗದಿ ಸಮಿತಿ (Fare Fixation Committee – FFC) ಶಿಫಾರಸಿನಂತೆ ಪ್ರತಿ ವರ್ಷ ಟಿಕೆಟ್ ದರದಲ್ಲಿ 5% ರಷ್ಟು ಹೆಚ್ಚಳ ಮಾಡಲು ಅವಕಾಶವಿದೆ. ಮೆಟ್ರೋ ರೈಲು ನಿರ್ವಹಣೆ ಕಾಯ್ದೆ–2002ರ ಸೆಕ್ಷನ್ 33ರ ಅಡಿಯಲ್ಲಿ ಈ ಶಿಫಾರಸುಗಳು ಕಾನೂನುಬದ್ಧವಾಗಿದ್ದು, ಅವುಗಳನ್ನು ಅನುಷ್ಠಾನಗೊಳಿಸಲು BMRCL ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಷಿಕ ದರ ಏರಿಕೆ ಅನಿವಾರ್ಯ ಎನ್ನುವ ವಾದವನ್ನು ಅಧಿಕಾರಿಗಳು ಮುಂದಿಟ್ಟಿದ್ದಾರೆ.
ಆದರೆ, ಇಂಧನ ದರ, ಆಹಾರ, ಬಾಡಿಗೆ ಸೇರಿದಂತೆ ದಿನಬಳಕೆ ಖರ್ಚು ಈಗಾಗಲೇ ಹೆಚ್ಚಿರುವ ಸಂದರ್ಭದಲ್ಲಿ ಮೆಟ್ರೋ ದರ ಏರಿಕೆ ಜನರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ದಿನನಿತ್ಯ ಮೆಟ್ರೋ ಅವಲಂಬಿಸಿರುವ ಪ್ರಯಾಣಿಕರಿಗೆ ಇದು ಹೆಚ್ಚುವರಿ ಆರ್ಥಿಕ ಒತ್ತಡ ತರಲಿದೆ.
ಇನ್ನೊಂದೆಡೆ, ಮೆಟ್ರೋ ವಿಸ್ತರಣೆ, ನಿರ್ವಹಣೆ ಮತ್ತು ಆರ್ಥಿಕ ಸ್ಥಿರತೆಗಾಗಿ ದರ ಏರಿಕೆ ಅಗತ್ಯ ಎಂಬುದಾಗಿ BMRCL ಸಮರ್ಥಿಸಿಕೊಳ್ಳುತ್ತಿದೆ. ಆದರೂ, ಪ್ರಯಾಣಿಕ ಸ್ನೇಹಿ ದರ ನೀತಿ ರೂಪಿಸಬೇಕೆಂಬ ಬೇಡಿಕೆ ಮತ್ತೆ ಕೇಳಿಬರುತ್ತಿದೆ.
ದೇಶ
LATEST NEWS “ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ”: ಅಮೆರಿಕಾ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ
ನವದೆಹಲಿ: ಅಮೆರಿಕದೊಂದಿಗೆ ನಡೆದ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಭಾರತ ಯಾರಿಂದ ತೈಲ ಖರೀದಿಸಬೇಕು ಎಂಬುದನ್ನೂ ಅಮೆರಿಕ ನಿರ್ಧರಿಸುತ್ತಿದೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲವೇ?” ಎಂದು ಪ್ರಶ್ನಿಸಿದರು.
ಸಮಾನ ಪ್ರಯೋಜನಗಳನ್ನು ಪಡೆಯದೇ ಒಪ್ಪಂದ ಮಾಡಿಕೊಂಡಿರುವುದು ಸರ್ಕಾರದ ಶರಣಾಗತಿ ರಾಜಕೀಯ ಎಂದು ಅವರು ಆರೋಪಿಸಿದರು. ಈ ಹಿಂದೆ ಭಾರತದ ಉತ್ಪನ್ನಗಳಿಗೆ 3% ಟ್ಯಾರಿಫ್ ಇದ್ದದ್ದು, ಈಗ ಅದನ್ನು 18%ಕ್ಕೆ ಏರಿಸಲಾಗಿದೆ. ಇದನ್ನು ಸರ್ಕಾರ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ಟೀಕಿಸಿದರು.
ಟೆಕ್ಸ್‌ಟೈಲ್ ವಸ್ತುಗಳಿಗೆ ಭಾರತಕ್ಕೆ 18% ಟ್ಯಾರಿಫ್ ವಿಧಿಸಿರುವಾಗ, ಬಾಂಗ್ಲಾದೇಶಕ್ಕೆ 0% ಟ್ಯಾರಿಫ್ ನೀಡಲಾಗಿದೆ. “ಇದು ಭಾರತೀಯ ಕೈಗಾರಿಕೆಗಳಿಗೆ ಹಿನ್ನಡೆಯಾಗಿದೆ. ಟ್ರಂಪ್ ಮೋದಿ ಮೇಲೆ ಬಿಗಿಪಟ್ಟು ಹಾಕಿದ್ದಾರೆ” ಎಂದು ಹೇಳಿದರು.
ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಿದ ರಾಹುಲ್, “ಅಮೆರಿಕಕ್ಕೆ ಭಾರತದ ಬಗ್ಗೆ ಬದ್ಧತೆ ಇಲ್ಲ. ಆದರೆ ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿದೆ. ನಾವು ಮೂರ್ಖರಂತೆ ನಿಂತಿದ್ದೇವೆ” ಎಂದು ಕಿಡಿಕಾರಿದರು.
ದೇಶ
BIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ
ಹೊಸದಿಲ್ಲಿ: ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.
600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಷ್ಕರದ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಹಾಗೂ ವಿವಿಧ ಗುತ್ತಿಗೆ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಪ್ರತಿಭಟನೆಗಳಲ್ಲಿ ಭಾಗಿಯಾಗಲಿವೆ.
ನವೆಂಬರ್ 2025ರಲ್ಲಿ ಸೂಚಿಸಲಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ. ಒಡಿಶಾ ಮತ್ತು ಅಸ್ಸಾಂ ರಾಜ್ಯಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶಾಲೆ-ಕಾಲೇಜುಗಳ ಮುಚ್ಚುವಿಕೆ ಕುರಿತು ಅಧಿಕೃತ ಘೋಷಣೆ ಇಲ್ಲದಿದ್ದರೂ, ಕೆಲವು ರಾಜ್ಯಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಸಾರ್ವಜನಿಕ ಸಾರಿಗೆ ಸೇವೆಗಳು ಅಸ್ತವ್ಯಸ್ತವಾಗಬಹುದು. ಆದರೆ ಹಾಲು, ಆಸ್ಪತ್ರೆ, ಮೆಡಿಕಲ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ದೇಶ
638 ಕನ್ನಡ ಶಾಲೆ ಮುಚ್ಚಿದ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ
ನವದೆಹಲಿ: ರಾಜ್ಯದಾದ್ಯಂತ 638 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿರುವುದು ಕನ್ನಡ ಮತ್ತು ಕನ್ನಡ ಶಿಕ್ಷಣದ ವಿರುದ್ಧದ ಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು. “ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ” ಎಂದು ಹೇಳಿದರು. ಈ ನಿರ್ಧಾರದಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ಬದ್ಧವಾಗಿರಬೇಕು. ಆದರೆ ಪ್ರಸ್ತುತ ಸರ್ಕಾರದ ನಡೆ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದ ಬೊಮ್ಮಾಯಿ, ಕೂಡಲೇ ಮುಚ್ಚಿರುವ ಎಲ್ಲಾ ಕನ್ನಡ ಶಾಲೆಗಳನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಜೊತೆಗೆ, ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ನಿರಂತರ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಹತಾಶಗೊಂಡಿದೆ” ಎಂದು ಹೇಳಿದರು. ಸಂಸತ್ತಿನಲ್ಲಿ ಬೆಂಚ್‌ಗಳ ಮೇಲೆ ನಿಂತು ಗದ್ದಲ ಮಾಡುವುದು, ಸ್ಪೀಕರ್ ವಿರುದ್ಧ ದಾಳಿ ನಡೆಸುವುದು ಹಾಗೂ ಪ್ರಧಾನಮಂತ್ರಿಯ ಆಸನದವರೆಗೆ ತೆರಳಿ ತಡೆ ಮಾಡುವ ಪ್ರಯತ್ನ ಮಿತಿಮೀರಿದ ವರ್ತನೆ ಎಂದು ಅವರು ಆರೋಪಿಸಿದರು.
ರಾಜಕೀಯದಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಗದ್ದಲ ಹಾಗೂ ಅಶಾಂತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.
-
ದೇಶ9 hours agoಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
-
ದೇಶ2 hours agoರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯ
-
ಚುನಾವಣೆ8 hours agoBENGALURU : ವಾರ್ಡ್ ಮರುವಿಂಗಡಣೆ ವಿರೋಧಿಸಿ ಶಾಸಕ ಎಂ. ಕೃಷ್ಣಪ್ಪ ಹೈಕೋರ್ಟ್ ಅರ್ಜಿ
-
ದೇಶ9 hours agoDigital Services Tax: ಡಿಜಿಟಲ್ ತೆರಿಗೆಗೆ ಅಮೆರಿಕದ ವಿರೋಧ ಏಕೆ?
-
ದೇಶ9 hours agoಚರ್ಚೆ ಮುಗಿಯುವವರೆಗೆ ಸದನಕ್ಕೆ ಹಾಜರಾಗಲ್ಲ ಎಂದ ಲೋಕಸಭಾ ಸ್ಪೀಕರ್
-
ಕ್ರೀಡೆ2 hours agoT20 WORLD CUP : ಡಬಲ್ ಸೂಪರ್ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
-
ದೇಶ9 hours agoಹಿರಿಯ ಪತ್ರಕರ್ತ ಹಾಗೂ ಮಾಜಿ ಎಂಎಲ್ಸಿ ಪಿ. ರಾಮಯ್ಯ ನಿಧನ: ಪತ್ರಿಕೋದ್ಯಮದ ‘ತಪಸ್ವಿ’ಗೆ ಅಂತಿಮ ವಿದಾಯ
-
ದೇಶ2 hours agoPOK-ಅಕ್ಸಾಯ್ ಚಿನ್ ಭಾರತದ ಭಾಗ ಎಂದ US… ನಂತರ ಡಿಲೀಟ್!
