Connect with us

ಅಪರಾಧ

ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಅಶಾಂತಿ: ಲಾಂಗ್–ಮಚ್ಚು ಝಳಪ

ಮೈಸೂರು, ಜನವರಿ 19: ಮೈಸೂರಿನ ಉದಯಗಿರಿ ಪ್ರದೇಶ ಮತ್ತೊಮ್ಮೆ ಅಶಾಂತಿಯ ವಾತಾವರಣಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ ನಡೆದ ಗಲಭೆಯ ಬಳಿಕ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉದಯಗಿರಿಯಲ್ಲಿ ಇದೀಗ ಸಾರ್ವಜನಿಕವಾಗಿ ಲಾಂಗ್ ಮತ್ತು ಮಚ್ಚುಗಳನ್ನು ಝಳಪಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೈಸೂರಿನ ಅಬುಜರ್ ಮಸೀದಿ ಸಮೀಪದ ಪಾರ್ಕಿನಲ್ಲಿ ಕ್ರಿಕೆಟ್ ಆಟದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಉದಯಗಿರಿಯ ಶಕಿಬುಲ್ ರೆಹಮಾನ್ ಅಲಿಯಾಸ್ ಟಿಪ್ಪು, ಇಮ್ರಾನ್, ಆಸೀಫ್, ಅಜಾಂ, ಅಜೀಜ್ ಎಂಬವರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಲಾಂಗ್ ಹಾಗೂ ಮಚ್ಚುಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ್ದಾರೆ ಎನ್ನಲಾಗಿದೆ.

ಘಟನೆ ವೇಳೆ ಆರೋಪಿತರು ಸಾರ್ವಜನಿಕ ಸ್ಥಳದಲ್ಲೇ ಆಯುಧಗಳನ್ನು ಪ್ರದರ್ಶಿಸಿದ್ದು, ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮತ್ತು ಆತಂಕ ಉಂಟಾಗಿದೆ. ಭಾನುವಾರ ನಡೆದ ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಳೆದ ವರ್ಷ ಉದಯಗಿರಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಮೇಲೆಯೇ ಕಲ್ಲು ತೂರಾಟ ನಡೆದಿದ್ದ ಹಿನ್ನೆಲೆಯಲ್ಲಿ, ಈ ಹೊಸ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬರುತ್ತಿದೆ.

ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಪರಿಸ್ಥಿತಿ ಹದಗೆಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದಾರೆ.

ಅಪರಾಧ

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್

ದಾಂಡೇಲಿ (ಉತ್ತರ ಕನ್ನಡ):

ಉತ್ತರ ಕನ್ನಡ ಜಿಲ್ಲೆಯ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ್ಯಾಯಾಲಯದ ಶರತ್ತುಬದ್ಧ ಮಧ್ಯಂತರ ಆದೇಶದ ಅಡಿಯಲ್ಲಿ ನಡೆದಿದ್ದರೂ, ಇದೀಗ ಮತ್ತೆ ತೀವ್ರ ವಿವಾದಗಳ ಕೇಂದ್ರಬಿಂದುವಾಗಿದೆ.
ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದ್ದು, ದಾಂಡೇಲಿ ನ್ಯಾಯಾಲಯವು ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದಲ್ಲಿ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ (ಬಿ.ಎನ್. ವಾಸರೆ) ಮೊದಲ ಪ್ರತಿವಾದಿಯಾಗಿದ್ದು, ಕ.ಸಾ.ಪ. ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಎರಡನೇ ಪ್ರತಿವಾದಿಯಾಗಿದ್ದಾರೆ. ಫೆಬ್ರವರಿ 5ರಂದು ನಡೆದ ವಿಚಾರಣೆಗೆ ಆಡಳಿತಾಧಿಕಾರಿ ಹಾಜರಾಗದ ಹಿನ್ನೆಲೆ, ರಾಜ್ಯಾಧ್ಯಕ್ಷರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.

ಸಮ್ಮೇಳನ ಆಯೋಜನೆಗೆ ಸಂಬಂಧಿಸಿದ ವಿವಾದ

2025ರ ಡಿಸೆಂಬರ್‌ನಲ್ಲಿ ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಯೋಜಿಸಿದ್ದರು. ಆದರೆ, ಅಜೀವ ಸದಸ್ಯರಾದ ಅಕ್ರಂ ವುಲ್ಲಾ ಖಾನ್, ಪ್ರವೀಣ ಕೊಠಾರಿ ಮತ್ತು ಸಂದೀಪ ಬಂಡಾರಿ, ಹಣ ದುರುಪಯೋಗ ಪ್ರಕರಣ ತನಿಖೆಯ ನಡುವೆ ಸರ್ಕಾರದ ಅಗತ್ಯ ಅನುಮತಿ ಪಡೆಯದೇ ಸಾರ್ವಜನಿಕ ವಂತಿಕೆ ಸಂಗ್ರಹಿಸಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ತಹಶೀಲ್ದಾರ್ ಮತ್ತು ಪಿಎಸ್‌ಐ ಅನುಮತಿ ಹೊರತುಪಡಿಸಿ, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ, ಡಿವೈಎಸ್‌ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆಯಲಾಗಿಲ್ಲ ಎಂದು ಅವರು ದೂರಿದ್ದಾರೆ.

ನ್ಯಾಯಾಲಯದ ಮಹತ್ವದ ಆದೇಶ

O.S. No.216/25 ಪ್ರಕರಣದಲ್ಲಿ, ಸಮ್ಮೇಳನ ನಡೆಸಲು ಅಗತ್ಯವಿರುವ ಯಾವುದೇ ಅಧಿಕೃತ ಅನುಮತಿಗಳನ್ನು ಪ್ರತಿವಾದಿಗಳು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಹೆಚ್ಚಿನ ಜನರು ಸೇರುವ ಸಾಧ್ಯತೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆ, ಎಲ್ಲಾ ಇಲಾಖೆಗಳ ಅನುಮತಿ, ಆಡಳಿತಾಧಿಕಾರಿಯಿಂದ ಲಿಖಿತ ಆದೇಶ, ಹಾಗೂ ಅನುಮತಿ ಪಡೆದ ಬಳಿಕ ಮಾತ್ರ ಸಮ್ಮೇಳನ ನಡೆಸಬೇಕು ಎಂಬ ಶರತ್ತುಗಳೊಂದಿಗೆ ಡಿಸೆಂಬರ್ 12ರ ಸಂಜೆ 6 ಗಂಟೆಗೆ ಮಧ್ಯಂತರ ಆದೇಶ ನೀಡಲಾಗಿತ್ತು.

ರಾತ್ರಿ ಇ-ಮೇಲ್ ಅನುಮತಿಗೆ ಸಂಶಯ

ಆದರೆ, ಅದೇ ದಿನ ರಾತ್ರಿ 9 ಗಂಟೆಗೆ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಂದ ಇ-ಮೇಲ್ ಮೂಲಕ ಅನುಮತಿ ಬಂದಿದೆ ಎಂದು ಜಿಲ್ಲಾಧ್ಯಕ್ಷ ವಾಸರೆ ಉದ್ಘಾಟನಾ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ, ನ್ಯಾಯಾಲಯಕ್ಕೆ ಮೊರೆ ಹೋದ ಅಜೀವ ಸದಸ್ಯರ ವಿರುದ್ಧ ತೀವ್ರ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಇದೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಚೇರಿ ವೇಳೆಯಲ್ಲೇ ಕಡತ ಪರಿಶೀಲನೆ ನಡೆಯಬೇಕು. ರಾತ್ರಿ ವೇಳೆ ಇಂತಹ ಆದೇಶ ಸಂಶಯಾಸ್ಪದ ಎಂದು ವಾದಿಗಳ ಪರ ವಕೀಲ ರಾಘವೇಂದ್ರ ವಿ. ಗಡೆಪ್ಪನವರ ವಾದಿಸಿದ್ದಾರೆ.

RTI ಮೂಲಕ ಬಯಲಾದ ಅಂಶ

RTI ಮೂಲಕ ಲಭ್ಯವಾದ ಮಾಹಿತಿಯಲ್ಲಿ, ಆಡಳಿತಾಧಿಕಾರಿಗಳ ಅಧಿಕೃತ ಇ-ಮೇಲ್‌ನಲ್ಲಿ ಕೇವಲ ಎರಡು ಸಾಲಿನ ಉತ್ತರ ಮಾತ್ರ ಲಭ್ಯವಾಗಿದ್ದು, ಯಾವುದೇ ಡಿಜಿಟಲ್ ಸಹಿ, ಕಡತ, ಟಿಪ್ಪಣಿ ಅಥವಾ ಅಧಿಕೃತ ದಾಖಲೆಗಳು ಇಲ್ಲ ಎಂದು ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಆಡಳಿತ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು

ಡಿಸೆಂಬರ್ 12ರಂದು ಆಡಳಿತಾಧಿಕಾರಿ ಗಾಯತ್ರಿ ಅವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಹಾಜರಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಕಚೇರಿಯಿಂದ ಕಡತವಿಲ್ಲದೇ ಇ-ಮೇಲ್ ಆದೇಶ ನೀಡಿದರೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇದೀಗ ಕೇಂದ್ರ ಕ.ಸಾ.ಪ. ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾದ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

ಅಪರಾಧ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಿಸಿದ ಯೂಟ್ಯೂಬರ್ ವಿರುದ್ಧ FIR

ಚಿಕ್ಕಬಳ್ಳಾಪುರ:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಿಯಮಬಾಹಿರವಾಗಿ ಡ್ರೋನ್ ಹಾರಿಸಿದ ಆರೋಪದಡಿ ನಗರದ ಯೂಟ್ಯೂಬರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ವಾಂಡರ್‌ಲಸ್ಟ್’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಯೂಟ್ಯೂಬರ್, ವಿಮಾನ ನಿಲ್ದಾಣದ ಟರ್ಮಿನಲ್–1 ಮುಂಭಾಗದಿಂದ ಯಲಹಂಕ ಮಾರ್ಗವಾಗಿ ಏರ್‌ಫೋರ್ಸ್ ಪ್ರದೇಶದವರೆಗೆ ಡ್ರೋನ್ ಹಾರಿಸಿದ್ದಾನೆ. ಸುಮಾರು 7–8 ನಿಮಿಷಗಳ ಕಾಲ ಡ್ರೋನ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎನ್ನಲಾಗಿದೆ.

ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳ ಮೇಲೆಯೂ ಡ್ರೋನ್ ಹಾರಿಸಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರದೇಶವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೆಡ್ ಝೋನ್ ವ್ಯಾಪ್ತಿಗೆ ಒಳಪಡುವುದರಿಂದ, ಇಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೋ–ಫ್ಲೈಯಿಂಗ್ ಝೋನ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿರುವುದರಿಂದ, ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಯೂಟ್ಯೂಬರ್ ವಿರುದ್ಧ ಎಯರ್‌ಕ್ರಾಫ್ಟ್ ಆಕ್ಟ್ 1943 (ಸೆಕ್ಷನ್ 10(1ಎ)) ಹಾಗೂ ಬಿಎನ್‌ಎಸ್ ಸೆಕ್ಷನ್ 125 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಸ್ತುತ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

ಅಪರಾಧ

ಮದುವೆ ವೇದಿಕೆಯಲ್ಲಿ ಗನ್ ಹಿಡಿದು ಕಾಂಗ್ರೆಸ್ ನಾಯಕ ಡ್ಯಾನ್ಸ್

ಕಲಬುರಗಿ: ಆಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಮದುವೆ ಕಾರ್ಯಕ್ರಮದಲ್ಲಿ ಕೈಯಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ‘ಧುರಂದರ್’ ಹಾಡಿನ ತಾಳಕ್ಕೆ ವೇದಿಕೆಯ ಮೇಲೆ ಕುಣಿದಿರುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಗೂ ಅತಿಥಿಗಳು ಉಪಸ್ಥಿತರಿದ್ದ ವೇಳೆ ಈ ಘಟನೆ ನಡೆದಿದೆ. ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋಗಳಲ್ಲಿ, ಸಂಗೀತದ ಮಧ್ಯೆ ಮತೀನ್ ಪಟೇಲ್ ಗನ್ ಹಿಡಿದು ಕುಣಿಯುತ್ತಿರುವುದು ಹಾಗೂ ಕೆಲವರು ಅವರೊಂದಿಗೆ ಫೋಟೋ ಮತ್ತು ವೀಡಿಯೋ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತವೆ.

ಇದಕ್ಕುಮೇಲೆ, ಮದುವೆ ಸಮಾರಂಭಕ್ಕೆ ಆಗಮಿಸುವ ವೇಳೆ ಕಾರಿನಿಂದ ಇಳಿಯುತ್ತಿದ್ದಂತೆಯೇ ಅವರ ಸಿಬ್ಬಂದಿಗಳು ಗನ್ ಹಿಡಿದು ‘ವೆಲ್ಕಂ’ ಮಾಡುವ ದೃಶ್ಯವೂ ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದ್ದು, ಅದು ಕೂಡಾ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿರುವುದು ಕಾನೂನು ಉಲ್ಲಂಘನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರು, “ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡುವುದು ಅಪರಾಧ. ಈ ಸಂಬಂಧ ಸುಮೊಟೊ ಕೇಸ್ ದಾಖಲಿಸಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ಹಿಂದೆ ಏನಾಗಿತ್ತು?

ಸಾರ್ವಜನಿಕ ಜೀವನದಲ್ಲಿರುವ ನಾಯಕರು ಇಂತಹ ವಿವಾದಗಳಿಗೆ ಸಿಲುಕುವುದು ಇದೇ ಮೊದಲಲ್ಲ. 2022ರಲ್ಲಿ ಆಗಿನ ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಹೊಸಕೋಟೆಯಲ್ಲಿ ನಡೆದ ಬಿಜೆಪಿ ಅಲ್ಪಸಂಖ್ಯಾತರ ಸಭೆಯ ವಿಡಿಯೋವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶಾಸಕರು ಹಾಗೂ ರಾಜಕೀಯ ನಾಯಕರು ಸಮಾಜಕ್ಕೆ ಮಾದರಿಯಾಗಬೇಕಾದವರು. ಅವರ ನಡೆ-ನುಡಿ ಅನೇಕರು ಅನುಸರಿಸುವುದರಿಂದ, ಇಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುವ ಆತಂಕವಿದೆ. ಇದೀಗ ಅಫಜಲಪುರ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಪ್ರಕರಣವೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳಿಗೆ ಗುರಿಯಾಗಿದೆ.

Continue Reading

Trending