Connect with us

ಅಪರಾಧ

ಕರ್ತವ್ಯಲೋಪ ಆರೋಪ: ಜ್ಞಾನಭಾರತಿ ಠಾಣೆ ಇನ್ಸ್ಪೆಕ್ಟರ್ ರವಿ ಅಮಾನತು

ಬೆಂಗಳೂರು: ಕರ್ತವ್ಯಲೋಪದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಅಮಾನತು ಆದೇಶಕ್ಕೆ ಅಧಿಕೃತವಾಗಿ ಸಹಿ ಹಾಕಿದ್ದಾರೆ.

ಪೊಲೀಸ್ ಇಲಾಖೆಯ ಆಂತರಿಕ ಪರಿಶೀಲನೆಯಲ್ಲಿ ಇನ್ಸ್ಪೆಕ್ಟರ್ ರವಿ ಅವರ ಕರ್ತವ್ಯ ನಿರ್ವಹಣೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಸೇವೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು, ಮೇಲಧಿಕಾರಿಗಳ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿರುವುದು ಸೇರಿದಂತೆ ಹಲವು ಅಂಶಗಳು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಇದಲ್ಲದೆ, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಡರ್‌ಗಳು ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರೊಂದಿಗೆ ರವಿ ಸೌಹಾರ್ದ ಸಂಬಂಧ ಹೊಂದಿದ್ದರು ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿದ್ದವು. ಅವರು ಸದಾ ಕೃಷ್ಣ ಅರಮನೆ ಹೋಟೆಲ್‌ನಲ್ಲಿ ಡೀಲಿಂಗ್‌ಗಳಲ್ಲಿ ನಿರತರಾಗಿರುತ್ತಿದ್ದರು ಎಂಬ ಆರೋಪವೂ ಇದೆ. ಠಾಣೆಗೆ ದೂರು ನೀಡಲು ಬಂದ ಸಾರ್ವಜನಿಕರೊಂದಿಗೆ ದುರಹಂಕಾರದಿಂದ ವರ್ತಿಸುತ್ತಿದ್ದರು ಎಂಬ ದೂರೂ ದಾಖಲಾಗಿತ್ತು.

ಈ ಎಲ್ಲಾ ಆರೋಪಗಳು ಹಾಗೂ ಪರಿಶೀಲನಾ ವರದಿ ಆಧರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇನ್ಸ್ಪೆಕ್ಟರ್ ರವಿಯನ್ನು ಅಮಾನತುಗೊಳಿಸಲಾಗಿದೆ. ಮುಂದಿನ ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕರ್ತವ್ಯಲೋಪ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇಲಾಖೆಯ ಶಿಸ್ತು ಹಾಗೂ ನೈತಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ದೃಢ ನಿಲುವು ತಾಳಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ

CRIME : ಬೆಂಗಳೂರಿನಲ್ಲಿ ಮತ್ತೆ ರೋಡ್‌ ರೇಜ್‌: ಬಾನೆಟ್‌ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಫೆ.11ರಂದು ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹೆಚ್ಎಎಲ್ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 12.45ರ ವೇಳೆಗೆ ಕಾರು ಮತ್ತು ಗೂಡ್ಸ್ ವಾಹನ ಟಚ್ ಆದ ವಿಚಾರಕ್ಕೆ ಚಾಲಕರ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಗೂಡ್ಸ್ ವಾಹನ ಚಾಲಕ ನಂಜುಂಡ ಕಾರಿನ ಮುಂದೆ ನಿಂತು ನಷ್ಟಪೂರೈಕೆ ಕೇಳಿದ್ದಾನೆ. ಆದರೆ ಕಾರು ಚಾಲಕ ಏಕಾಏಕಿ ವಾಹನ ಚಲಾಯಿಸಿದ್ದು, ನಂಜುಂಡ ಬಾನೆಟ್ ಮೇಲೆ ಬಿದ್ದರೂ ಸುಮಾರು 1 ಕಿ.ಮೀ ಹೆಚ್ಚು ದೂರ ಕಾರು ನಿಲ್ಲಿಸದೆ ಚಲಾಯಿಸಿದ್ದಾನೆ. ಟ್ರಿನಿಟಿ ಜಂಕ್ಷನ್‌ನಿಂದ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಕಾರು ಸಾಗಿದ ದೃಶ್ಯ ರಸ್ತೆಬದಿ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇತರೆ ವಾಹನ ಚಾಲಕರು ಅಡ್ಡಹಾಕಿದ ಬಳಿಕ ಕಾರು ನಿಲ್ಲಿಸಲಾಯಿತು.

ಕಾರು ಚಾಲಕ ಬಂಧನ

ಪೊಲೀಸರು ಕಾರು ಚಾಲಕನನ್ನು ಪುಲಕೇಶಿ ನಗರದ 52 ವರ್ಷದ ಸುರೇಶ್ ಎಂದು ಗುರುತಿಸಿದ್ದಾರೆ. ಘಟನೆಯ ವೇಳೆ ಕಾರಿನಲ್ಲಿ ಪತ್ನಿಯೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ (Attempt to Murder) ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆಯಲ್ಲಿ ಸುರೇಶ್ ವಿರುದ್ಧ ಈ ಹಿಂದೆಯೂ ಅತಿವೇಗ ಚಾಲನೆ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಇರುವುದಾಗಿ ತಿಳಿದುಬಂದಿದೆ.

ರಾಜಧಾನಿಯಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌

ಇತ್ತೀಚೆಗೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ರೋಡ್‌ ರೇಜ್‌ ಪ್ರಕರಣದಲ್ಲಿ ಕಾರು ಚಾಲಕ ತನ್ನ ಸ್ನೇಹಿತನನ್ನೇ ಗೋಡೆ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ ಘಟನೆ ಸ್ಮರಣೀಯವಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌ ಘಟನೆಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

Continue Reading

ಅಪರಾಧ

ಬಿಕ್ಲು ಶಿವ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಾಸಕ ಬೈರತಿ ಬಸವರಾಜ್

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ (Bairati Basavaraj) ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆ ಮಾತ್ರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ನ್ಯಾಸುನೀಲ್ ದತ್ ಯಾದವ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಈಗಾಗಲೇ 20 ಆರೋಪಿಗಳ ಪೈಕಿ ಎ-1 ಆರೋಪಿ ಜಗದೀಶ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ತಿರಸ್ಕರಿಸಿತ್ತು.

ಇದಕ್ಕೂ ಮುನ್ನ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಾಪತ್ತೆಯಾಗಿದ್ದ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಂತರ ಜಾಮೀನು ಮಂಜೂರಾದರೂ, ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ರದ್ದುಪಡಿಸಿತ್ತು.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ಅಪರಾಧ

BENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ

ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ (Bengaluru Accident) ಹೆಣ್ಣೂರು ಸಂಚಾರ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.

ಮೃತರನ್ನು ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರ ಮಕ್ಕಳಾದ ವರ್ಷ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ನಾಗನಗೌಡ ಅವರು ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ತೆರಳಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಬಳಿ ಎದುರುಗಡೆಯಿಂದ ಬಂದ ಅಜ್ ಮೋನಿ ಶಾಲೆಯ ಬಸ್ ಏಕಾಏಕಿ ತಿರುವು ಪಡೆದುಕೊಂಡಿದೆ. ಈ ವೇಳೆ ಸ್ಕೂಟರ್ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಪೊಲೀಸರು ಮಹಜರು ನಡೆಸಿ, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಅವಶ್ಯಕತೆ ಮತ್ತೆ ಒತ್ತಿ ಹೇಳಲಾಗಿದೆ.

Continue Reading

Trending