Connect with us

ಕ್ರೀಡೆ

ಆಯ್ಕೆಗಾರರಿಗೆ ಬ್ಯಾಟ್ನಿಂದಲೇ ಉತ್ತರ: ರಣಜಿಯಲ್ಲಿ ಸರ್ಫರಾಜ್ ಖಾನ್ ಭರ್ಜರಿ ದ್ವಿಶತಕ

ಅದ್ಭುತ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ಸರ್ಫರಾಜ್ ಖಾನ್ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಆಟವನ್ನು ಮುಂದುವರೆಸಿದ್ದಾರೆ. 2026ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದಿರುವ ಸರ್ಫರಾಜ್ ಖಾನ್ ಮತ್ತೊಂದು ಭರ್ಜರಿ ದ್ವಿಶತಕ ಬಾರಿಸುವ ಮೂಲಕ ಆಯ್ಕೆಗಾರರಿಗೆ ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್–ಡಿ ಪಂದ್ಯದಲ್ಲಿ ಆತಿಥೇಯ ಹೈದರಾಬಾದ್ ವಿರುದ್ಧ ಸರ್ಫರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ದಿನ 142 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದ ಅವರು, ತಂಡದ ನಾಯಕ ಸಿದ್ಧೇಶ್ ಲಾಡ್ ಅವರೊಂದಿಗೆ 249 ರನ್‌ಗಳ ಮಹತ್ವದ ಜೊತೆಯಾಟವನ್ನು ನಿರ್ಮಿಸಿದ್ದರು. ಲಾಡ್ 104 ರನ್‌ಗಳಿಸಿ ಔಟಾದರು.

ಪಂದ್ಯದ ಎರಡನೇ ದಿನವೂ ದಾಳಿ ಮುಂದುವರೆಸಿದ ಸರ್ಫರಾಜ್, ಆರಂಭದಿಂದಲೇ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಪರಿಣಾಮವಾಗಿ ಕೇವಲ 206 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರೈಸಿದರು. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ ಐದನೇ ದ್ವಿಶತಕವಾಗಿದ್ದು, ಕೇವಲ 61 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ದ್ವಿಶತಕದ ಬಳಿಕವೂ ನಿಲ್ಲದ ಸರ್ಫರಾಜ್ ಖಾನ್ 219 ಎಸೆತಗಳಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್‌ಗಳೊಂದಿಗೆ 227 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಅವರ ಈ ಅಮೋಘ ಆಟದ ನೆರವಿನಿಂದ ಮುಂಬೈ ತಂಡ 488 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಈಗ ರಣಜಿಯಲ್ಲಿ ದ್ವಿಶತಕ—ನಿರಂತರ ರನ್ ಗಳಿಸುವ ಮೂಲಕ ಸರ್ಫರಾಜ್ ಖಾನ್ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮತ್ತೊಮ್ಮೆ ಬಲವಾದ ಸಂದೇಶ ರವಾನಿಸಿದ್ದಾರೆ.

ಕ್ರೀಡೆ

“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್

ಇಸ್ಲಾಮಾಬಾದ್:

ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.

ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.

ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.

“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.

ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.

ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Continue Reading

ಕ್ರೀಡೆ

T20 WORLD CUP : ಪಾಕ್‌ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ

ನವದೆಹಲಿ:
ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯಗಳಿಗಿಂತ ಇದೀಗ ನಡೆಯುತ್ತಿರುವ ಗೊಂದಲ, ವಿವಾದಗಳೇ ಭಾರೀ ಸದ್ದು ಮಾಡುತ್ತಿವೆ. ಫೆಬ್ರವರಿ 15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಅಹಂಕಾರದ ಮಾತುಗಳು ಇದೀಗ ಸಂಪೂರ್ಣವಾಗಿ ಹಿನ್ನಡೆ ಕಂಡಿವೆ. ಐಸಿಸಿ ತಿರಸ್ಕಾರ ಹಾಗೂ ಬಿಸಿಸಿಐ ಮನವಿಯ ಬಳಿಕ, ಟೀಮ್ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಆಡಲು ಪಾಕಿಸ್ತಾನ ಒಪ್ಪಿಗೆ ನೀಡಿದೆ.

ಈ ಮಧ್ಯೆ, ಟಿ20 ವಿಶ್ವಕಪ್‌ ಟೂರ್ನಿಯ ಭಾಗವಾಗಿ ಮಂಗಳವಾರ (ಫೆ.10) ಕೊಲಂಬೊದಲ್ಲಿ ಪಾಕಿಸ್ತಾನ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಯುಎಸ್ಎ ತಂಡದ ಆಟಗಾರ ಮೊಹಮ್ಮದ್ ಮೊಹ್ಸಿನ್ ನೀಡಿರುವ ಖಡಕ್‌ ಎಚ್ಚರಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಖಡಕ್‌ ಎಚ್ಚರಿಕೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಮೊಹ್ಸಿನ್,
“ನಮ್ಮ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ಎಲ್ಲಾ ಒತ್ತಡ ಇರುವುದು ಪಾಕಿಸ್ತಾನ ತಂಡದ ಮೇಲೇ. ಕಳೆದ ಕೆಲ ವರ್ಷಗಳಲ್ಲಿ ಯುಎಸ್ಎ ಆಟಗಾರರ ಕೌಶಲ್ಯಗಳು ಸಾಕಷ್ಟು ಸುಧಾರಿಸಿಕೊಂಡಿವೆ. ಈ ಕಾರಣಕ್ಕೆ ಮತ್ತೊಮ್ಮೆ ಪಾಕಿಸ್ತಾನ ವಿರುದ್ಧ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ.

“2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಆಗ ಮತ್ತು ಈಗಿನ ನಡುವಿನ ವ್ಯತ್ಯಾಸವೆಂದರೆ – ನಮ್ಮ ಶಕ್ತಿ ಈಗ ದ್ವಿಗುಣವಾಗಿದೆ. ಈ ಪಂದ್ಯದಲ್ಲೂ ನಾವು ಗೆಲುವು ಸಾಧಿಸುತ್ತೇವೆ” ಎಂದು ಮೊಹ್ಸಿನ್ ಸ್ಪಷ್ಟಪಡಿಸಿದರು.

2024ರ ವಿಶ್ವಕಪ್‌: ಸೂಪರ್ ಓವರ್‌ನಲ್ಲಿ ಯುಎಸ್ಎ ರೋಚಕ ಗೆಲುವು

2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಯುಎಸ್ಎ, ಆ ಪಂದ್ಯವನ್ನು ಟೈಗೆ ತಲುಪಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಯುಎಸ್ಎ ಕೂಡ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ 18 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 13 ರನ್ ಗಳಿಸುವ ಮೂಲಕ ಸೋಲು ಕಂಡಿತು. ಈ ಐತಿಹಾಸಿಕ ಗೆಲುವನ್ನೇ ಮುಂದಿಟ್ಟುಕೊಂಡು ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸವನ್ನು ಮೊಹಮ್ಮದ್ ಮೊಹ್ಸಿನ್ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

Continue Reading

ಕ್ರೀಡೆ

CRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್

ನವದೆಹಲಿ, ಫೆ.10:
ಭಾರತೀಯ ತಂಡದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಬೇಕೆಂಬ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಬೇಡಿಕೆಯನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ತಿರಸ್ಕರಿಸಿದೆ. 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಆಡಲು ಅನುಮತಿ ನೀಡದಿರುವುದಾಗಿ ಪಾಕಿಸ್ತಾನ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ನಡೆದ ಸಭೆಯಲ್ಲಿ ಪಿಸಿಬಿ ಈ ಬೇಡಿಕೆ ಮುಂದಿಟ್ಟಿತ್ತು.

ಟಿ20 ವಿಶ್ವಕಪ್ ಬಹಿಷ್ಕಾರ ವಿವಾದದ ಹಿನ್ನೆಲೆಯಲ್ಲಿ ಪಿಸಿಬಿ ಐಸಿಸಿಗೆ ಮೂರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿತ್ತು. ಭಾರತ–ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಪುನರಾರಂಭಿಸಬೇಕು, ಭಾರತ–ಬಾಂಗ್ಲಾದೇಶ–ಪಾಕಿಸ್ತಾನ ನಡುವೆ ತ್ರಿಕೋನ ಸರಣಿ ಆಯೋಜಿಸಬೇಕು ಹಾಗೂ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವಿತ ಸರಣಿಗಾಗಿ ಭಾರತ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕು ಎಂಬುದು ಆ ಬೇಡಿಕೆಗಳಾಗಿದ್ದವು.

ಆದರೆ ಈ ಎಲ್ಲಾ ಬೇಡಿಕೆಗಳನ್ನು ಐಸಿಸಿ ಸ್ಪಷ್ಟವಾಗಿ ತಿರಸ್ಕರಿಸಿದೆ. ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲು ಟೀಮ್ ಇಂಡಿಯಾಗೆ ಅನುಮತಿ ನೀಡುವ ಅಧಿಕಾರ ನಮ್ಮದಲ್ಲ. ಆ ನಿರ್ಧಾರ ಸಂಪೂರ್ಣವಾಗಿ ಬಿಸಿಸಿಐ ಮತ್ತು ಭಾರತ ಸರ್ಕಾರದ ಅಧೀನದಲ್ಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

ಲಾಹೋರ್‌ನಲ್ಲಿ ನಡೆದ ಸಭೆಯ ಬಳಿಕ, ಫೆಬ್ರವರಿ 15ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ ಪಿಸಿಬಿಗೆ ಒಂದು ದಿನ ಕಾಲಾವಕಾಶ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಿಸಿಬಿ ಅಧ್ಯಕ್ಷ ನಖ್ವಿ, “ನಾವು ಐಸಿಸಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಅವರ ಪ್ರತಿಕ್ರಿಯೆ ಸಿಕ್ಕ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಐಸಿಸಿ ಉತ್ತರ ಬಂದ ನಂತರ ನಮ್ಮ ಪ್ರಧಾನಿ ಶೆಹಬಾಜ್ ಶರೀಫ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು” ಎಂದಿದ್ದಾರೆ.

Continue Reading

Trending