Connect with us

ಕ್ರೀಡೆ

LATEST NEWS : ಸಿಎಂ ಕಪ್‌ 2026: ಐಪಿಎಲ್ ಮಾದರಿಯಲ್ಲಿ ಶಟಲ್ ಬ್ಯಾಡ್ಮಿಂಟನ್ ಮಹಾಕೂಟ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯ ವ್ಯಕ್ತಿಗಳ ಕ್ರೀಡಾಸಕ್ತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ಸಿಎಂ ಕಪ್‌ 2026’ (CM Cup 2026) ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಕೂಟದ ಆಟಗಾರರ ಆಯ್ಕೆ ಹಾಗೂ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮ ಭಾನುವಾರ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ.ಎ ಸಲೀಂ, ಡಿಜಿಪಿ ಅಲೋಕ್ ಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಂಡಗಳ ಜೆರ್ಸಿಗಳನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಡಾ. ಎಂ.ಎ ಸಲೀಂ, ಐಪಿಎಲ್ ಮಾದರಿಯಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಖುಷಿ ನೀಡಿದೆ. ನಾನೂ ಬ್ಯಾಡ್ಮಿಂಟನ್ ಆಟಗಾರನಾಗಿರುವುದರಿಂದ ಈ ಟೂರ್ನಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುತ್ತದೆ. ಇಲಾಖೆಯವರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.

ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ರಾಜಕೀಯ ನಾಯಕರು, ಅಧಿಕಾರಿಗಳು, ವೈದ್ಯರು, ಮಾಧ್ಯಮದವರು ಹಾಗೂ ಕಲಾವಿದರು ಒಂದೇ ವೇದಿಕೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಅಪರೂಪದ ಸಂಗತಿ. ಸಿಎಂ ಕಪ್‌ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಅಗ್ರಗಣ್ಯ ಮಾಧ್ಯಮ ಅನುಭವ ಹೊಂದಿರುವ ಜಿ.ವೈ. ಮಂಜುನಾಥ್ ಅವರ ಪರಿಕಲ್ಪನೆಯಲ್ಲಿ ಸಿಎಂ ಕಪ್‌ 2026 ಆಯೋಜನೆಯಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಚಲನಚಿತ್ರ ಕಲಾವಿದರು ಹಾಗೂ ಪತ್ರಕರ್ತರು ಒಂದೇ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದು ಸಿಎಂ ಕಪ್‌ನ ವಿಶೇಷತೆ.

8 ತಂಡಗಳ ನಡುವೆ ಹಣಾಹಣಿ

ಸಿಎಂ ಕಪ್‌ 2026ರಲ್ಲಿ ಒಟ್ಟು 8 ಫ್ರಾಂಚೈಸಿ ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡದಲ್ಲೂ ವಿವಿಧ ಕ್ಷೇತ್ರಗಳ ಆಟಗಾರರ ಮಿಶ್ರಣ ಇರಲಿದೆ. ಪ್ರತಿಯೊಂದು ತಂಡದಲ್ಲೂ 15 ಆಟಗಾರರು (ಪುರುಷ ಮತ್ತು ಮಹಿಳೆ) ಇರಲಿದ್ದಾರೆ. ಮೆನ್ಸ್ ಸಿಂಗಲ್ಸ್‌, ಮೆನ್ಸ್ ಡಬಲ್ಸ್‌, ವುಮೆನ್ಸ್ ಸಿಂಗಲ್ಸ್‌, ವುಮೆನ್ಸ್ ಡಬಲ್ಸ್‌, ಮಿಕ್ಸ್ಡ್ ಡಬಲ್ಸ್‌, ಪವರ್ ಡಬಲ್ಸ್ ಜೊತೆಗೆ ‘ಗೇಮ್ ಚೇಂಜರ್’ ಎಂಬ ಹೊಸ ಪರಿಕಲ್ಪನೆಯನ್ನೂ ಪರಿಚಯಿಸಲಾಗಿದೆ.

ವಿಜೇತ ತಂಡಕ್ಕೆ 7 ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.


ಫೆ. 21–22ರಂದು ಕ್ರೀಡಾಕೂಟ

ಸಿಎಂ ಕಪ್‌ 2026 ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಫೆಬ್ರವರಿ 21 ಮತ್ತು 22ರಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಜನವರಿ 25ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ನಡೆಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಕ್ರೀಡೆ

T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.

ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.

ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.

Continue Reading

ಕ್ರೀಡೆ

“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್

ಇಸ್ಲಾಮಾಬಾದ್:

ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.

ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.

ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.

“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.

ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.

ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Continue Reading

ಕ್ರೀಡೆ

T20 WORLD CUP : ಪಾಕ್‌ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ

ನವದೆಹಲಿ:
ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯಗಳಿಗಿಂತ ಇದೀಗ ನಡೆಯುತ್ತಿರುವ ಗೊಂದಲ, ವಿವಾದಗಳೇ ಭಾರೀ ಸದ್ದು ಮಾಡುತ್ತಿವೆ. ಫೆಬ್ರವರಿ 15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಅಹಂಕಾರದ ಮಾತುಗಳು ಇದೀಗ ಸಂಪೂರ್ಣವಾಗಿ ಹಿನ್ನಡೆ ಕಂಡಿವೆ. ಐಸಿಸಿ ತಿರಸ್ಕಾರ ಹಾಗೂ ಬಿಸಿಸಿಐ ಮನವಿಯ ಬಳಿಕ, ಟೀಮ್ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಆಡಲು ಪಾಕಿಸ್ತಾನ ಒಪ್ಪಿಗೆ ನೀಡಿದೆ.

ಈ ಮಧ್ಯೆ, ಟಿ20 ವಿಶ್ವಕಪ್‌ ಟೂರ್ನಿಯ ಭಾಗವಾಗಿ ಮಂಗಳವಾರ (ಫೆ.10) ಕೊಲಂಬೊದಲ್ಲಿ ಪಾಕಿಸ್ತಾನ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಯುಎಸ್ಎ ತಂಡದ ಆಟಗಾರ ಮೊಹಮ್ಮದ್ ಮೊಹ್ಸಿನ್ ನೀಡಿರುವ ಖಡಕ್‌ ಎಚ್ಚರಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಖಡಕ್‌ ಎಚ್ಚರಿಕೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಮೊಹ್ಸಿನ್,
“ನಮ್ಮ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ಎಲ್ಲಾ ಒತ್ತಡ ಇರುವುದು ಪಾಕಿಸ್ತಾನ ತಂಡದ ಮೇಲೇ. ಕಳೆದ ಕೆಲ ವರ್ಷಗಳಲ್ಲಿ ಯುಎಸ್ಎ ಆಟಗಾರರ ಕೌಶಲ್ಯಗಳು ಸಾಕಷ್ಟು ಸುಧಾರಿಸಿಕೊಂಡಿವೆ. ಈ ಕಾರಣಕ್ಕೆ ಮತ್ತೊಮ್ಮೆ ಪಾಕಿಸ್ತಾನ ವಿರುದ್ಧ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ.

“2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಆಗ ಮತ್ತು ಈಗಿನ ನಡುವಿನ ವ್ಯತ್ಯಾಸವೆಂದರೆ – ನಮ್ಮ ಶಕ್ತಿ ಈಗ ದ್ವಿಗುಣವಾಗಿದೆ. ಈ ಪಂದ್ಯದಲ್ಲೂ ನಾವು ಗೆಲುವು ಸಾಧಿಸುತ್ತೇವೆ” ಎಂದು ಮೊಹ್ಸಿನ್ ಸ್ಪಷ್ಟಪಡಿಸಿದರು.

2024ರ ವಿಶ್ವಕಪ್‌: ಸೂಪರ್ ಓವರ್‌ನಲ್ಲಿ ಯುಎಸ್ಎ ರೋಚಕ ಗೆಲುವು

2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಯುಎಸ್ಎ, ಆ ಪಂದ್ಯವನ್ನು ಟೈಗೆ ತಲುಪಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಯುಎಸ್ಎ ಕೂಡ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ 18 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 13 ರನ್ ಗಳಿಸುವ ಮೂಲಕ ಸೋಲು ಕಂಡಿತು. ಈ ಐತಿಹಾಸಿಕ ಗೆಲುವನ್ನೇ ಮುಂದಿಟ್ಟುಕೊಂಡು ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸವನ್ನು ಮೊಹಮ್ಮದ್ ಮೊಹ್ಸಿನ್ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

Continue Reading

Trending