Connect with us

ದೇಶ

ಶಾಂತಿ ಮಾತುಕತೆ ನಡುವೆಯೇ ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ

ಕೀವ್: ರಷ್ಯಾ–ಉಕ್ರೇನ್ ನಡುವಿನ ಸುಧೀರ್ಘ ಯುದ್ಧಕ್ಕೆ ಅಂತ್ಯಹಾಡುವ ಉದ್ದೇಶದಿಂದ ಅಮೆರಿಕ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವ ನಡುವೆಯೇ, ಯುದ್ಧದ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ರಷ್ಯಾ ಮತ್ತೆ ಉಕ್ರೇನ್‌ನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳನ್ನು ಮುಂದುವರೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.

ಮಂಗಳವಾರ (ಜನವರಿ 27) ಉಕ್ರೇನ್‌ನ ಪೂರ್ವ ಭಾಗದ ಖಾರ್ಕೀವ್ ಪ್ರದೇಶದಲ್ಲಿ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ನಾಗರಿಕ ರೈಲನ್ನು ಗುರಿಯಾಗಿಸಿಕೊಂಡ ಈ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿ, 4 ಮಂದಿ ನಾಪತ್ತೆಯಾಗಿದ್ದಾರೆ. ಹಂಗೇರಿ ಮತ್ತು ಸ್ಲೋವಾಕಿಯಾ ಗಡಿಗಳ ಸಮೀಪದ ಚಾಪ್ ಪಟ್ಟಣದಿಂದ ಬಾರ್ವಿಂಕೋವ್ ಕಡೆಗೆ ಸಾಗುತ್ತಿದ್ದ ಸುಮಾರು 200 ಪ್ರಯಾಣಿಕರಿದ್ದ ರೈಲಿಗೆ ಡ್ರೋನ್ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದು, “ನಾಗರಿಕ ರೈಲಿನ ಮೇಲೆ ಡ್ರೋನ್ ದಾಳಿ ನಡೆಸುವುದು ಭಯೋತ್ಪಾದಕ ಕೃತ್ಯವೇ ಹೊರತು ಯಾವುದೇ ಸೈನಿಕ ಉದ್ದೇಶವಿಲ್ಲ” ಎಂದು ಹೇಳಿದ್ದಾರೆ.

ಖಾರ್ಕೀವ್ ಮಾತ್ರವಲ್ಲದೆ, ಉಕ್ರೇನ್‌ನ ದಕ್ಷಿಣ ಭಾಗದ ಒಡೆಸ್ಸಾ ನಗರದಲ್ಲಿಯೂ ರಷ್ಯಾ ಸುಮಾರು 50 ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದು, ಇದರಲ್ಲಿ 3 ಮಂದಿ ಸಾವನ್ನಪ್ಪಿ, 30 ಜನ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಉಕ್ರೇನ್‌ನ ಇಂಧನ ಮೂಲಸೌಕರ್ಯಕ್ಕೂ ಭಾರೀ ಹಾನಿಯಾಗಿದೆ. ಅಲ್ಲದೆ, ಬ್ಲಾಕ್ ಸೀ ಕರಾವಳಿ ಪ್ರದೇಶಗಳಲ್ಲಿ ನಡೆದ ದಾಳಿಯಲ್ಲಿ 39 ವಾರಗಳ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಹಲವಾರು ವಸತಿ ಕಟ್ಟಡಗಳು, ಒಂದು ಶಾಲೆ ಮತ್ತು ಚರ್ಚ್ ಕೂಡ ಹಾನಿಗೊಳಗಾಗಿದೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ.

ಇತ್ತ ರಷ್ಯಾದ ಮಿಲಿಟರಿ ಮುಖ್ಯಸ್ಥ ವ್ಯಾಲೆರಿ ಗೆರಾಸಿಮೊವ್ ಪೂರ್ವ ಉಕ್ರೇನ್‌ನ ರಷ್ಯಾ ಪಡೆಗಳಿಗೆ ಭೇಟಿ ನೀಡಿ ಯುದ್ಧ ಕಾರ್ಯಾಚರಣೆಗಳ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಈ ನಡುವೆ ಶಾಂತಿ ಮಾತುಕತೆಗಳ ಮೇಲೆ ಈ ದಾಳಿಗಳು ಗಂಭೀರ ನೆರಳು ಬೀರುವ ಸಾಧ್ಯತೆ ಇದೆ.

ಅಪರಾಧ

CRIME : ಬೆಂಗಳೂರಿನಲ್ಲಿ ಮತ್ತೆ ರೋಡ್‌ ರೇಜ್‌: ಬಾನೆಟ್‌ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೋಡ್‌ ರೇಜ್‌ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಫೆ.11ರಂದು ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹೆಚ್ಎಎಲ್ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 12.45ರ ವೇಳೆಗೆ ಕಾರು ಮತ್ತು ಗೂಡ್ಸ್ ವಾಹನ ಟಚ್ ಆದ ವಿಚಾರಕ್ಕೆ ಚಾಲಕರ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಗೂಡ್ಸ್ ವಾಹನ ಚಾಲಕ ನಂಜುಂಡ ಕಾರಿನ ಮುಂದೆ ನಿಂತು ನಷ್ಟಪೂರೈಕೆ ಕೇಳಿದ್ದಾನೆ. ಆದರೆ ಕಾರು ಚಾಲಕ ಏಕಾಏಕಿ ವಾಹನ ಚಲಾಯಿಸಿದ್ದು, ನಂಜುಂಡ ಬಾನೆಟ್ ಮೇಲೆ ಬಿದ್ದರೂ ಸುಮಾರು 1 ಕಿ.ಮೀ ಹೆಚ್ಚು ದೂರ ಕಾರು ನಿಲ್ಲಿಸದೆ ಚಲಾಯಿಸಿದ್ದಾನೆ. ಟ್ರಿನಿಟಿ ಜಂಕ್ಷನ್‌ನಿಂದ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಕಾರು ಸಾಗಿದ ದೃಶ್ಯ ರಸ್ತೆಬದಿ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇತರೆ ವಾಹನ ಚಾಲಕರು ಅಡ್ಡಹಾಕಿದ ಬಳಿಕ ಕಾರು ನಿಲ್ಲಿಸಲಾಯಿತು.

ಕಾರು ಚಾಲಕ ಬಂಧನ

ಪೊಲೀಸರು ಕಾರು ಚಾಲಕನನ್ನು ಪುಲಕೇಶಿ ನಗರದ 52 ವರ್ಷದ ಸುರೇಶ್ ಎಂದು ಗುರುತಿಸಿದ್ದಾರೆ. ಘಟನೆಯ ವೇಳೆ ಕಾರಿನಲ್ಲಿ ಪತ್ನಿಯೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ (Attempt to Murder) ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆಯಲ್ಲಿ ಸುರೇಶ್ ವಿರುದ್ಧ ಈ ಹಿಂದೆಯೂ ಅತಿವೇಗ ಚಾಲನೆ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಇರುವುದಾಗಿ ತಿಳಿದುಬಂದಿದೆ.

ರಾಜಧಾನಿಯಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌

ಇತ್ತೀಚೆಗೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ರೋಡ್‌ ರೇಜ್‌ ಪ್ರಕರಣದಲ್ಲಿ ಕಾರು ಚಾಲಕ ತನ್ನ ಸ್ನೇಹಿತನನ್ನೇ ಗೋಡೆ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ ಘಟನೆ ಸ್ಮರಣೀಯವಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌ ಘಟನೆಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

Continue Reading

ದೇಶ

GBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಜಿಬಿಎ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರಡು ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (SOP) ಕುರಿತು ಚರ್ಚೆ ನಡೆಯಿತು. ಅಧಿಸೂಚನಾ ವಿವರಣೆಗಳಿಗೆ ಅನುಗುಣವಾಗಿ ವಾರ್ಡ್ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸಲು ಐಟಿ ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ. ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ನಡೆಸುವಂತೆ ಸೂಚಿಸಲಾಗಿದೆ.

ಚುನಾವಣಾ ವಿಭಾಗ ರಚನೆ

ಪ್ರತಿ ಪಾಲಿಕೆಯಲ್ಲಿ ತಹಸೀಲ್ದಾರ್, ವ್ಯವಸ್ಥಾಪಕ, ಎಫ್‌ಡಿ, ಎಸ್‌ಡಿಎ ಹಾಗೂ ಡೇಟಾ ಎಂಟ್ರಿ ಆಪರೇಟರ್ ಒಳಗೊಂಡ ವಿಶೇಷ ಚುನಾವಣಾ ವಿಭಾಗ ರಚಿಸಲು ಸೂಚಿಸಲಾಗಿದೆ.

ವಿಭಜಿತ ವಾರ್ಡ್‌ಗಳ ವಿಶೇಷ ಪರಿಶೀಲನೆ

ವಿಭಜಿತ ವಾರ್ಡ್‌ಗಳ ಮಾಹಿತಿಯನ್ನು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಪಾಲಿಕೆ ಆಯುಕ್ತರು ಸ್ವತಂತ್ರವಾಗಿ ಮಾಹಿತಿ ದೃಢೀಕರಿಸಬೇಕು ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ನೇಮಕ

ಡೇಟಾ ಸಮಸ್ಯೆಗಳ ಪರಿಹಾರ ಹಾಗೂ ಜಿಬಿಎ ಚುನಾವಣಾ ವಿಭಾಗದೊಂದಿಗೆ ಸಮನ್ವಯಕ್ಕಾಗಿ ಕಂದಾಯ ವಿಭಾಗದ ಅಪರ ಆಯುಕ್ತರನ್ನು ಐದು ಪಾಲಿಕೆಗಳಲ್ಲೂ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲು ಸೂಚಿಸಲಾಗಿದೆ.

“ಕರಡು ಮತದಾರರ ಪಟ್ಟಿಯ ಪರಿಶೀಲನೆಯಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ವಿಶ್ವಾಸಾರ್ಹತೆ ಖಚಿತಪಡಿಸಲು SOP ಕಟ್ಟುನಿಟ್ಟಾಗಿ ಅನುಸರಿಸಬೇಕು” ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಸಭೆಯಲ್ಲಿ ವಿವಿಧ ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಕ್ರೀಡೆ

ಭಾರತ–ಪಾಕಿಸ್ತಾನ ಟಿ20 ವಿಶ್ವಕಪ್ ಮುಖಾಮುಖಿ: ‘ನಾವು ಸಿದ್ಧ’ ಎಂದ ತಿಲಕ್ ವರ್ಮಾ

ನವದೆಹಲಿ, ಫೆ.11: ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ತಿಲಕ್ ವರ್ಮಾ (Tilak Varma) ತಿಳಿಸಿದ್ದಾರೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ನಾವು ಈಗಾಗಲೇ ಸಿದ್ಧರಾಗಿದ್ದೇವೆ. ಆ ಪಂದ್ಯಕ್ಕಾಗಿ ತಂಡ ಉತ್ಸುಕವಾಗಿದೆ” ಎಂದು ಹೇಳಿದರು.

ಅನಿಶ್ಚಿತತೆಗೆ ತೆರೆ

ಸರ್ಕಾರದ ನಿರ್ದೇಶನಗಳ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಆರಂಭದಲ್ಲಿ ಪಂದ್ಯದಿಂದ ಹಿಂದೆ ಸರಿಯುವುದಾಗಿ ಸೂಚಿಸಿತ್ತು. ಆದರೆ ನಂತರ ಎಲ್ಲಾ ನಿಗದಿತ ಪಂದ್ಯಗಳಲ್ಲಿ ಭಾಗವಹಿಸುವುದಾಗಿ ಐಸಿಸಿಗೆ ತಿಳಿಸಿದ್ದರಿಂದ ಹೈ-ವೋಲ್ಟೇಜ್ ಪಂದ್ಯ ಸುತ್ತಲಿನ ಗೊಂದಲ ಅಂತ್ಯಗೊಂಡಿದೆ.

ಗಾಯದಿಂದ ಮರಳಿದ ತಿಲಕ್

ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ತಿಲಕ್ ವರ್ಮಾ ವಿಶ್ವಕಪ್ ತಂಡಕ್ಕೆ ಮರಳಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. “ವಿಶ್ವಕಪ್ ಗೆಲ್ಲುವುದೇ ನಮ್ಮ ಗುರಿ. ತಂಡಕ್ಕಾಗಿ ಯಾವಾಗಲೂ ಕೊಡುಗೆ ನೀಡಲು ಸಿದ್ಧನಿದ್ದೇನೆ” ಎಂದರು.

ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ ನಮೀಬಿಯಾವನ್ನು 100 ರನ್‌ಗಳೊಳಗೆ ಆಲೌಟ್ ಮಾಡಿರುವುದರಿಂದ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಫೇವರಿಟ್ ಎನ್ನಲಾಗುತ್ತಿದೆ.

ಅಭಿಷೇಕ್ ಶರ್ಮಾ ಸ್ಥಿತಿ

ಹೊಟ್ಟೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್ ಶರ್ಮಾ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಮುಂದಿನ ಪಂದ್ಯದಲ್ಲಿ ಅವರು ಹಾಗೂ ಜಸ್ಪ್ರೀತ್ ಬುಮ್ರಾ ಆಡಲಿರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಲಕ್ ತಿಳಿಸಿದರು.

ಟಿ20 ಸ್ವರೂಪದಲ್ಲಿ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

Continue Reading

Trending