ಕ್ರೀಡೆ
ICC ಡಬಲ್ ಸ್ಟ್ಯಾಂಡರ್ಡ್: ನಾಸರ್ ಹುಸೇನ್ ವಾಗ್ದಾಳಿ
ನವದೆಹಲಿ: ಬಹುನಿರೀಕ್ಷಿತ 2026ರ ICC ಟಿ20 ವಿಶ್ವಕಪ್ ಟೂರ್ನಿಯ ಅಸ್ತವ್ಯಸ್ತ ಸಿದ್ಧತೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಕೈ ಸ್ಪೋರ್ಟ್ಸ್ ಪಾಡ್‌ಕಾಸ್ಟ್‌ನಲ್ಲಿ ಮೈಕೆಲ್ ಅಥರ್ಟನ್ ಅವರೊಂದಿಗೆ ಮಾತನಾಡಿದ ಹುಸೇನ್, ಪ್ರಭಾವಿ ಕ್ರಿಕೆಟ್ ಮಂಡಳಿಗಳಿಗೆ ವಿಶೇಷವಾಗಿ ಭಾರತಕ್ಕೆ ICC ನೀಡುತ್ತಿರುವ ಆದ್ಯತೆ ವಿಶ್ವ ಕ್ರಿಕೆಟ್‌ನ ಅಸಮತೋಲನವನ್ನು ಇನ್ನಷ್ಟು ಗಾಢಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಮುಸ್ತಾಫಿಝುರ್ IPL ಒಪ್ಪಂದ ರದ್ದು ವಿವಾದ
BCCI ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರ IPL ಫ್ರಾಂಚೈಸಿ ಒಪ್ಪಂದವನ್ನು ರದ್ದುಗೊಳಿಸಿದ ನಂತರ ನಾಸರ್ ಹುಸೇನ್ ಈ ತೀವ್ರ ಹೇಳಿಕೆಯನ್ನು ನೀಡಿದ್ದಾರೆ. ಈ ನಿರ್ಧಾರದಿಂದ ಕ್ಷೋಭಗೊಂಡ ಬಾಂಗ್ಲಾದೇಶ ತಂಡ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತು. ಅಂತಿಮವಾಗಿ ಅವರು ಸಂಪೂರ್ಣ ಟೂರ್ನಿಯನ್ನು ಬಹಿಷ್ಕರಿಸಿದ್ದಾರೆ.
ಪಾಕಿಸ್ತಾನದ ಬೆಂಬಲ, ಬಿಕ್ಕಟ್ಟು ತೀವ್ರತೆ
ಮತ್ತೊಂದೆಡೆ ಬಾಂಗ್ಲಾದೇಶ ಪರವಾಗಿ ನಿಂತಿರುವ ಪಾಕಿಸ್ತಾನ ತಂಡವೂ ಗುಂಪು ಹಂತದಲ್ಲಿ ಭಾರತದ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಘೋಷಿಸಿದ ನಂತರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದೆ. ಟೂರ್ನಿ ಆರಂಭಕ್ಕೆ ಕೇವಲ ಒಂದು ವಾರ ಬಾಕಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ಟೂರ್ನಿಯನ್ನು ಮತ್ತಷ್ಟು ಅನಿಶ್ಚಿತತೆಗೆ ತಳ್ಳಿವೆ.
“ICC ಸ್ಥಿರತೆ ಇಲ್ಲ” – ನಾಸರ್ ಆರೋಪ
ICC ತನ್ನ ನಿಲುವಿನಲ್ಲಿ ಎಲ್ಲಾ ಸಮಯದಲ್ಲಿಯೂ ಸ್ಥಿರವಾಗಿದೆಯೇ ಎಂಬ ಪ್ರಶ್ನೆಯನ್ನು ಎತ್ತಿದ ನಾಸರ್ ಹುಸೇನ್, ಭಾರತ ತಂಡವೇ ಸರ್ಕಾರದ ನಿರ್ಬಂಧಗಳು ಅಥವಾ ಭದ್ರತಾ ಆತಂಕಗಳನ್ನು ಉಲ್ಲೇಖಿಸಿ ಪ್ರಯಾಣಿಸಲು ನಿರಾಕರಿಸಿದ್ದರೆ, ICC ಇದೇ ರೀತಿಯ ಕಠಿಣ ನಿಲುವು ತೆಗೆದುಕೊಳ್ಳುತ್ತಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
“ಟೂರ್ನಿಗೆ ಒಂದು ತಿಂಗಳು ಬಾಕಿ ಇರುವಾಗ ಭಾರತ ತಂಡವೇ ‘ನಮ್ಮ ಸರ್ಕಾರವು ವಿಶ್ವಕಪ್ ಟೂರ್ನಿಗಾಗಿ ನಿರ್ದಿಷ್ಟ ದೇಶದಲ್ಲಿ ಆಡಲು ನಮಗೆ ಅನುಮತಿ ನೀಡಿಲ್ಲ’ ಎಂದು ಹೇಳಿದ್ದರೆ, ICC ಇಷ್ಟು ಕಠಿಣವಾಗಿ ನಡೆದುಕೊಂಡು ‘ನಿಯಮಗಳು ಸ್ಪಷ್ಟವಾಗಿವೆ, ದುರಾದೃಷ್ಟ, ನಾವು ನಿಮ್ಮನ್ನು ಹೊರಗಿಡುತ್ತಿದ್ದೇವೆ’ ಎಂದು ಹೇಳುತ್ತಿತ್ತೇ?” ಎಂದು ನಾಸರ್ ಹುಸೇನ್ ಪ್ರಶ್ನಿಸಿದ್ದಾರೆ.
“ಶಕ್ತಿಯೊಂದಿಗೆ ಹೊಣೆಗಾರಿಕೆ”
“ಎಲ್ಲರೂ ಕೇಳುತ್ತಿರುವ ಏಕೈಕ ಪ್ರಶ್ನೆಯೆಂದರೆ ಸ್ಥಿರವಾಗಿ ನಡೆದುಕೊಳ್ಳುವುದು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ಸೇರಿದಂತೆ ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳಬೇಕು. ಹೌದು, ಭಾರತ ಅಭಿಮಾನಿಗಳು ‘ಇನ್ನಷ್ಟು ಕಣ್ಣೀರು ಹಾಕಿ, ನಮ್ಮ ಬಳಿ ಹಣವಿದೆ!’ ಎಂದು ಹೇಳಬಹುದು. ಆದರೆ ಶಕ್ತಿಯೊಂದಿಗೆ ಹೊಣೆಗಾರಿಕೆಯೂ ಬರುತ್ತದೆ” ಎಂದು ನಾಸರ್ ಹುಸೇನ್ ಹೇಳಿದ್ದಾರೆ.
“ಬಾಂಗ್ಲಾದೇಶ ಅಥವಾ ಪಾಕಿಸ್ತಾನವನ್ನು ನಿರಂತರವಾಗಿ ಕುಗ್ಗಿಸುವುದು ಅವರ ಕ್ರಿಕೆಟ್‌ಗೆ ಧಕ್ಕೆ ತರುತ್ತದೆ. ಅದಕ್ಕಾಗಿಯೇ ಭಾರತ–ಪಾಕಿಸ್ತಾನ ಅಥವಾ ಭಾರತ–ಬಾಂಗ್ಲಾದೇಶ ನಡುವಿನ ಒಮ್ಮೆ ಬಲಿಷ್ಠವಾಗಿದ್ದ ಪಂದ್ಯಗಳು ಕಾಲಕ್ರಮೇಣ ಏಕಪಕ್ಷೀಯವಾಗಿವೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್‌ಗೆ ಕೇವಲ ವಾರದ ಅವಧಿ ಬಾಕಿ ಇರುವಾಗ ಈ ವಿವಾದವು ವಿಶ್ವ ಕ್ರಿಕೆಟ್‌ನಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಕ್ರೀಡೆ
T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.
ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.
ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.
ಕ್ರೀಡೆ
“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
ಇಸ್ಲಾಮಾಬಾದ್:
ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.
ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.
“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.
ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕ್ರೀಡೆ
T20 WORLD CUP : ಪಾಕ್‌ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
ನವದೆಹಲಿ:
ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳಿಗಿಂತ ಇದೀಗ ನಡೆಯುತ್ತಿರುವ ಗೊಂದಲ, ವಿವಾದಗಳೇ ಭಾರೀ ಸದ್ದು ಮಾಡುತ್ತಿವೆ. ಫೆಬ್ರವರಿ 15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಅಹಂಕಾರದ ಮಾತುಗಳು ಇದೀಗ ಸಂಪೂರ್ಣವಾಗಿ ಹಿನ್ನಡೆ ಕಂಡಿವೆ. ಐಸಿಸಿ ತಿರಸ್ಕಾರ ಹಾಗೂ ಬಿಸಿಸಿಐ ಮನವಿಯ ಬಳಿಕ, ಟೀಮ್ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಆಡಲು ಪಾಕಿಸ್ತಾನ ಒಪ್ಪಿಗೆ ನೀಡಿದೆ.
ಈ ಮಧ್ಯೆ, ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ (ಫೆ.10) ಕೊಲಂಬೊದಲ್ಲಿ ಪಾಕಿಸ್ತಾನ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಯುಎಸ್ಎ ತಂಡದ ಆಟಗಾರ ಮೊಹಮ್ಮದ್ ಮೊಹ್ಸಿನ್ ನೀಡಿರುವ ಖಡಕ್ ಎಚ್ಚರಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಖಡಕ್ ಎಚ್ಚರಿಕೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಮೊಹ್ಸಿನ್,
“ನಮ್ಮ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ಎಲ್ಲಾ ಒತ್ತಡ ಇರುವುದು ಪಾಕಿಸ್ತಾನ ತಂಡದ ಮೇಲೇ. ಕಳೆದ ಕೆಲ ವರ್ಷಗಳಲ್ಲಿ ಯುಎಸ್ಎ ಆಟಗಾರರ ಕೌಶಲ್ಯಗಳು ಸಾಕಷ್ಟು ಸುಧಾರಿಸಿಕೊಂಡಿವೆ. ಈ ಕಾರಣಕ್ಕೆ ಮತ್ತೊಮ್ಮೆ ಪಾಕಿಸ್ತಾನ ವಿರುದ್ಧ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ.
“2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಆಗ ಮತ್ತು ಈಗಿನ ನಡುವಿನ ವ್ಯತ್ಯಾಸವೆಂದರೆ – ನಮ್ಮ ಶಕ್ತಿ ಈಗ ದ್ವಿಗುಣವಾಗಿದೆ. ಈ ಪಂದ್ಯದಲ್ಲೂ ನಾವು ಗೆಲುವು ಸಾಧಿಸುತ್ತೇವೆ” ಎಂದು ಮೊಹ್ಸಿನ್ ಸ್ಪಷ್ಟಪಡಿಸಿದರು.
2024ರ ವಿಶ್ವಕಪ್: ಸೂಪರ್ ಓವರ್‌ನಲ್ಲಿ ಯುಎಸ್ಎ ರೋಚಕ ಗೆಲುವು
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಯುಎಸ್ಎ, ಆ ಪಂದ್ಯವನ್ನು ಟೈಗೆ ತಲುಪಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಯುಎಸ್ಎ ಕೂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ 18 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 13 ರನ್ ಗಳಿಸುವ ಮೂಲಕ ಸೋಲು ಕಂಡಿತು. ಈ ಐತಿಹಾಸಿಕ ಗೆಲುವನ್ನೇ ಮುಂದಿಟ್ಟುಕೊಂಡು ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸವನ್ನು ಮೊಹಮ್ಮದ್ ಮೊಹ್ಸಿನ್ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
-
ದೇಶ8 hours agoಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
-
ದೇಶ2 hours agoರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯ
-
ಚುನಾವಣೆ8 hours agoBENGALURU : ವಾರ್ಡ್ ಮರುವಿಂಗಡಣೆ ವಿರೋಧಿಸಿ ಶಾಸಕ ಎಂ. ಕೃಷ್ಣಪ್ಪ ಹೈಕೋರ್ಟ್ ಅರ್ಜಿ
-
ದೇಶ8 hours agoಚರ್ಚೆ ಮುಗಿಯುವವರೆಗೆ ಸದನಕ್ಕೆ ಹಾಜರಾಗಲ್ಲ ಎಂದ ಲೋಕಸಭಾ ಸ್ಪೀಕರ್
-
ದೇಶ9 hours agoDigital Services Tax: ಡಿಜಿಟಲ್ ತೆರಿಗೆಗೆ ಅಮೆರಿಕದ ವಿರೋಧ ಏಕೆ?
-
ಕ್ರೀಡೆ1 hour agoT20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
-
ದೇಶ8 hours agoಹಿರಿಯ ಪತ್ರಕರ್ತ ಹಾಗೂ ಮಾಜಿ ಎಂಎಲ್ಸಿ ಪಿ. ರಾಮಯ್ಯ ನಿಧನ: ಪತ್ರಿಕೋದ್ಯಮದ ‘ತಪಸ್ವಿ’ಗೆ ಅಂತಿಮ ವಿದಾಯ
-
ದೇಶ1 hour agoPOK-ಅಕ್ಸಾಯ್ ಚಿನ್ ಭಾರತದ ಭಾಗ ಎಂದ US… ನಂತರ ಡಿಲೀಟ್!
