Connect with us

ಸುತ್ತ ಮುತ್ತ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ವಿಜುಗೌಡ ಪಾಟೀಲ್ ಪುತ್ರ, ಆರ್ಯವರ್ಧನ್ ಗುರೂಜಿಗೂ ಹುಲಿ ಉಗುರು ಸಂಕಷ್ಟ!

Published

on

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ವಿಜುಗೌಡ ಪಾಟೀಲ್ ಪುತ್ರ, ಆರ್ಯವರ್ಧನ್ ಗುರೂಜಿಗೂ ಹುಲಿ ಉಗುರು ಸಂಕಷ್ಟ

ಹುಲಿ ಉಗುರಿನ ಪೆಂಡೆಂಟ್ ಧರಿಸಿ ಬಿಲ್ಡಪ್ ಕೊಡುತ್ತಿದ್ದವರಿಗೆ ಅರಣ್ಯ ಇಲಾಖೆ ಶಾಕ್ ಕೊಟ್ಟಿದೆ. ಇದೀಗ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಪುತ್ರ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್​ಗೂ ಸಂಕಷ್ಟ ಶುರುವಾಗಿದೆ.ಮೃಣಾಲ್ ಹುಲಿ ಉಗುರು ಇರುವ ಲಾಕೆಟ್ ಧರಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆ, ಮತ್ತಿತರೆ ಸಮಾರಂಭಗಳಲ್ಲಿ ಲಾಕೆಟ್ ಧರಿಸಿದ್ದ ಫೋಟೋ ವೈರಲ್​ ಆಗಿದೆ. ಹುಲಿಯ 1 ಉಗುರು ಇರುವ ಲಾಕೆಟ್ ಧರಿಸುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದ್ದರೂ ಬೆಳಗಾವಿ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ. ಈ ಕುರಿತಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪುತ್ರ ಮೃಣಾಲ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಧರಿಸಿರುವ ಫೋಟೋ ಕೂಡ ವೈರಲ್ ಆಗುತ್ತಿದೆ.

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮನೆ ಮೇಲೆ ಅರಣ್ಯಾಧಿಕಾರಿಗಳು ಭೇಟಿ ಮಾಡಿ, ಹುಲಿ ಉಗುರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಸದ್ಯ ಅದನ್ನು ಪರೀಕ್ಷೆಗೆ ಕಳಿಸಿದ್ದಾರೆ.ಈ ಕುರಿತ ಮಾತನಾಡಿರುವ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್, ನಾನು ನಿನ್ನೆಯೇ ನಮ್ಮ ಬಳಿಯ ಉಗುರು ನಕಲಿ ಎಂದು ಹೇಳಿದ್ದೇನೆ. ನನ್ನ ಪುತ್ರ ಹಾಕಿಕೊಂಡಿದ್ದು ನಕಲು ಹುಲಿ ಉಗುರು. ಈ ಕುರಿತು ನಾನೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ತನಿಖೆಗೆ ನಾವು ಸಹಕಾರ ನೀಡುತ್ತೇವೆ. ವಾಸ್ತು ಕಾರಣದಿಂದ ಕೆಲ ವರ್ಷಗಳ ಹಿಂದೆ ನಕಲಿ ಹುಲಿ ಉಗುರು ಖರೀದಿ ಮಾಡಿದ್ದೆ. ನಾವೇ ಹುಲಿ ಇದ್ದೇವೆ ನಮಗೆ ಯಾಕೆ ಹುಲಿ ಎಂದಿದ್ದಾರೆ.

ಮತ್ತೊಂದೆಡೆ ಆರ್ಯವರ್ಧನ್ ಗುರೂಜಿ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಆರೋಪ ಕೇಳಿಬಂದಿದೆ. ಹೀಗಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಯವರ್ಧನ್ ಗುರೂಜಿ ನಿವಾಸದಲ್ಲೂ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದು, ಚಿನ್ನದಿಂದ ಮಾಡಿದ್ದ ಲಾಕೆಟ್​ನ್ನು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗಿರುವ ಅರಣ್ಯಾಧಿಕಾರಿಗಳು, ಚಿನ್ನದ ಲಾಕೆಟ್ ಒಳಗೆ ಇರುವ ಹುಲಿ ಉಗುರನ್ನು ಪರಿಶೀಲನೆ ಮಾಡಿದ್ದಾರೆ.

Continue Reading

ದೇಶ

ಮಳೆ ಆರ್ಭಟಕ್ಕೆ ಶಿರಾಡಿ ಘಾಟ್ ಅಲರ್ಟ್: ಮತ್ತಷ್ಟು ಭೂಕುಸಿತ ಭೀತಿ, ವಾಹನ ಸವಾರರಿಗೆ ಎಚ್ಚರಿಕೆ

Published

on

ಹಾಸನ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಶಿರಾಡಿ ಘಾಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-75 (ಬೆಂಗಳೂರು–ಮಂಗಳೂರು ರಸ್ತೆ)ಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿ ಸಮೀಪ ಮಣ್ಣು ಹಾಗೂ ಗಿಡಗಳು ರಸ್ತೆಯತ್ತ ಜಾರಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗುಡ್ಡದ ಮಣ್ಣು ಸಡಿಲಗೊಂಡು ರಸ್ತೆಯತ್ತ ಜಾರಿದೆ. ಘಟನೆ ಸಂಭವಿಸಿದ ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿ ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಂಡಿದ್ದಾರೆ. ಸದ್ಯ ವಾಹನ ಸಂಚಾರ ಎಂದಿನಂತೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.

ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಗುಡ್ಡಗಳನ್ನು ಆಳವಾಗಿ ಕತ್ತರಿಸಿರುವುದರಿಂದ ಮಳೆಗಾಲದಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿರಂತರ ಮಳೆಯಿಂದ ಮಣ್ಣು ಸಡಿಲಗೊಳ್ಳುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.

ಜಿಲ್ಲಾಡಳಿತ ಈಗಾಗಲೇ ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಸಂಭವಿಸಬಹುದಾದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಸೂಚಿಸಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಹಾಗೂ ಭಾರೀ ಮಳೆಯ ಸಂದರ್ಭಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಇದೇ ವೇಳೆ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿರುವುದು ಹಾಗೂ ಕಳಪೆ ಕಾಮಗಾರಿ ಕಾರಣದಿಂದ ಕಳೆದ ಹಲವು ವರ್ಷಗಳಿಂದ ಮಳೆಗಾಲ ಬಂದಾಗಲೆಲ್ಲಾ ಇದೇ ರೀತಿಯ ಭೂಕುಸಿತ ಮರುಕಳಿಸುತ್ತಿದೆ ಎಂದು ಆರೋಪಿಸಿ, ಶಾಶ್ವತ ಪರಿಹಾರ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Continue Reading

ದೇಶ

ರಸ್ತೆ ಮಧ್ಯೆ ಹೆಡೆ ಎತ್ತಿ ನಿಂತ ನಾಗರಹಾವು: ಪ್ಯಾಲೇಸ್ ರಸ್ತೆಯಲ್ಲಿ ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತ

Published

on

ಬೆಂಗಳೂರು: ನಗರದ ಪ್ಯಾಲೇಸ್ ರಸ್ತೆಯಲ್ಲಿ ನಾಗರಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ರಸ್ತೆಯ ಮಧ್ಯಭಾಗಕ್ಕೆ ಬಂದ ನಾಗರಹಾವು ಇದ್ದಕ್ಕಿದ್ದಂತೆ ಹೆಡೆ ಬಿಚ್ಚಿ ನಿಂತಿದ್ದು, ಇದನ್ನು ಕಂಡ ವಾಹನ ಸವಾರರು ಹಾಗೂ ಸ್ಥಳೀಯರು ಬೆಚ್ಚಿಬಿದ್ದರು.

ರಸ್ತೆಯ ನಡುಭಾಗದಲ್ಲೇ ಹಾವು ಕೆಲಕಾಲ ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಕಾರು, ಬೈಕ್ ಹಾಗೂ ಇತರೆ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ, ಪ್ಯಾಲೇಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹಾವು ಅಲ್ಲೇ ಇದ್ದ ಕಾರಣ ಸ್ಥಳದಲ್ಲಿ ಜನರು ಜಮಾಯಿಸಿ ಕುತೂಹಲದಿಂದ ವೀಕ್ಷಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಹಾವು ರಕ್ಷಣೆಯಲ್ಲಿ ಪರಿಣತಿ ಹೊಂದಿದ ಸಿಬ್ಬಂದಿಯ ಸಹಾಯದಿಂದ ನಾಗರಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಲಾಯಿತು. ಈ ವೇಳೆ ಸಾರ್ವಜನಿಕರು ಹಾವಿನ ಸಮೀಪ ಹೋಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು.

ಹಾವು ರಕ್ಷಣೆಯಾದ ನಂತರ ಪ್ಯಾಲೇಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಪುನಃ ಆರಂಭಿಸಲಾಯಿತು. ಕೆಲಕಾಲ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿವಾರಣೆಯಾಗಿದ್ದು, ಸಂಚಾರ ಎಂದಿನಂತೆ ಸುಗಮವಾಯಿತು.

ಮಳೆಗಾಲದ ಸಮಯದಲ್ಲಿ ಹಾವುಗಳು ತಮ್ಮ ವಾಸಸ್ಥಳಗಳಿಂದ ಹೊರಬಂದು ನಗರ ಪ್ರದೇಶಗಳಿಗೆ ಪ್ರವೇಶಿಸುವ ಘಟನೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾವು ಕಂಡುಬಂದರೆ ಅದನ್ನು ಹಿಡಿಯಲು ಅಥವಾ ಹತ್ತಿರ ಹೋಗಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆ, ಹಾವು ರಕ್ಷಣಾ ಸಿಬ್ಬಂದಿ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

Continue Reading

ದೇಶ

ತುಂಗಾ ಜಲಾಶಯ ಭರ್ತಿ: ಉಕ್ಕಡಗಾತ್ರಿ ಸ್ನಾನಘಟ್ಟ ಜಲಾವೃತ, ಭಕ್ತರಿಗೆ ಎಚ್ಚರಿಕೆ

Published

on

ಮಲೇಬೆನ್ನೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಸುರಕ್ಷತಾ ಕ್ರಮವಾಗಿ 30 ಸಾವಿರ ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮ ದಾವಣಗೆರೆ ಜಿಲ್ಲೆಯ ಸಮೀಪದ ಉಕ್ಕಡಗಾತ್ರಿ ಸ್ನಾನಘಟ್ಟ ಜಲಾವೃತಗೊಂಡಿದ್ದು, ನದಿ ತಟದ ಹಲವೆಡೆ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ.

ಜಲಾಶಯಕ್ಕೆ ಪ್ರಸ್ತುತ ಸುಮಾರು 32 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ಹೊರಹರಿವಿನ ಪ್ರಮಾಣವೂ ಹೆಚ್ಚಿಸಲಾಗಿದೆ. ಪರಿಣಾಮವಾಗಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ನದಿ ತಟದಲ್ಲಿರುವ ಹಲವು ಅಂಗಡಿ-ಮುಂಗಟ್ಟುಗಳು ಹಾಗೂ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿವೆ.

ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆಗೆ ಆಗಮಿಸುವ ಭಕ್ತರು ಸಂಪ್ರದಾಯದಂತೆ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿರುವುದರಿಂದ ಈ ಧಾರ್ಮಿಕ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಭಕ್ತರು ಹಾಗೂ ಸಾರ್ವಜನಿಕರು ನದಿಗೆ ಇಳಿಯದಂತೆ ಗ್ರಾಮಾಡಳಿತ ಮತ್ತು ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆ ಟ್ರಸ್ಟ್ ಜಂಟಿಯಾಗಿ ಎಚ್ಚರಿಕೆ ನೀಡಿವೆ. ಜನರು ಹಾಗೂ ಜಾನುವಾರುಗಳು ನದಿ ತೀರಕ್ಕೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಪ್ರವಾಹದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹವಾಮಾನ ಇಲಾಖೆ ಇನ್ನೂ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆ, ತುಂಗಾ ಜಲಾಶಯದಿಂದ ಮತ್ತಷ್ಟು ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹೀಗಾದರೆ ತುಂಗಭದ್ರಾ ನದಿ ತಟದ ಗ್ರಾಮಗಳು, ಕೃಷಿ ಜಮೀನುಗಳು, ತೋಟಗಳು ಹಾಗೂ ಬೆಳೆಗಳಿಗೆ ಹಾನಿಯಾಗುವ ಆತಂಕ ರೈತರಲ್ಲಿ ಹೆಚ್ಚಾಗಿದೆ. ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ಪಾಲಿಸುವಂತೆ ಮನವಿ ಮಾಡಿದೆ.

Continue Reading

Trending