Connect with us

ದೇಶ

ಜಕಾರ್ತಾ ರೈಲು ದುರಂತ: ಎರಡು ರೈಲುಗಳ ಡಿಕ್ಕಿ, 14 ಸಾವು – 80ಕ್ಕೂ ಹೆಚ್ಚು ಜನರಿಗೆ ಗಾಯ

Published

on

Jakarta: ಇಂಡೋನೇಷ್ಯಾದ ರಾಜಧಾನಿ ಹೊರವಲಯದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಕನಿಷ್ಠ 14 ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೋಮವಾರ (ಏ.27) ತಡರಾತ್ರಿ ಈ ದುರ್ಘಟನೆ ನಡೆದಿದೆ.

ಜಕಾರ್ತಾ ಹೊರವಲಯದ ಬೆಕಾಸಿ ಪ್ರದೇಶದಲ್ಲಿ ಪ್ರಯಾಣಿಕ ರೈಲು ಮತ್ತು ಎಕ್ಸ್‌ಪ್ರೆಸ್ ರೈಲು ಮುಖಾಮುಖಿ ಡಿಕ್ಕಿ ಹೊಡೆದಿವೆ ಎಂದು PT Kereta Api Indonesia (KAI) ತಿಳಿಸಿದೆ. ಪಶ್ಚಿಮ ಜಾವಾದ ಪೂರ್ವ ಬೆಕಾಸಿ ನಿಲ್ದಾಣದ ಬಳಿ ಸ್ಥಳೀಯ ಸಮಯ ರಾತ್ರಿ ಸುಮಾರು 8 ಗಂಟೆಗೆ ಈ ಅಪಘಾತ ಸಂಭವಿಸಿದೆ.

ಘಟನೆ ಬಳಿಕ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಭಾರೀ ಯಂತ್ರೋಪಕರಣಗಳು ಮತ್ತು ಆಂಗಲ್ ಗ್ರೈಂಡರ್‌ಗಳ ಸಹಾಯದಿಂದ ನಜ್ಜುಗುಜ್ಜಾದ ರೈಲಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ನಡೆಸುತ್ತಿದ್ದಾರೆ.

ಅಪಘಾತಕ್ಕೆ ಕಾರಣವೇನು?
ಪ್ರಾಥಮಿಕ ಮಾಹಿತಿ ಪ್ರಕಾರ, ಲೆವೆಲ್ ಕ್ರಾಸಿಂಗ್‌ನಲ್ಲಿ ಒಂದು ವಾಹನ ಸ್ಥಗಿತಗೊಂಡಿದ್ದರಿಂದ ಕಮ್ಯೂಟರ್ ರೈಲು ತುರ್ತು ನಿಲುಗಡೆಗೆ ಒಳಗಾಯಿತು. ಈ ವೇಳೆ ಅದೇ ಹಳಿಯಲ್ಲಿ ಬರುತ್ತಿದ್ದ ಅರ್ಗೋ ಬ್ರೋಮೋ ಅಂಗ್ರೆಕ್ ಎಕ್ಸ್‌ಪ್ರೆಸ್ ರೈಲು, ಸ್ಟಾಪ್ ಸಿಗ್ನಲ್ ಇದ್ದರೂ ಗಮನಿಸದೆ ನಿಂತಿದ್ದ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಪ್ರಯಾಣಿಕರ ರೈಲಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿ ಇದ್ದ ಹಲವರು ಸಿಲುಕಿಕೊಂಡರು. ಈ ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಕ್ಷಣಾ ಕಾರ್ಯ ಮುಂದುವರಿಕೆ
ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ Mohammad Syafi’i ಮಾತನಾಡಿ, “ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವುದು ಸೂಕ್ಷ್ಮ ಕಾರ್ಯವಾಗಿದ್ದು, ಪರಿಣಿತ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಭೀಕರ ಅಪಘಾತದಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.

ದೇಶ

ಇತಿಹಾಸ, ಸಂಸ್ಕೃತಿ ಮತ್ತು ಆರೋಗ್ಯದ ಸಂಗಮ: ಬೆಂಗಳೂರಿನಲ್ಲಿ ಹೆರಿಟೇಜ್ ಹಬ್ಬ

Published

on

ಬೆಂಗಳೂರು: ನಗರದ ಸಾಂಸ್ಕೃತಿಕ ವೈಭವ, ಪರಂಪರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಇದೇ ಜೂನ್ 14ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಬೆಂಗಳೂರು ಹೆರಿಟೇಜ್ ಹಬ್ಬ’ ಅದ್ದೂರಿಯಾಗಿ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಗರದ ಐತಿಹಾಸಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 5 ಗಂಟೆಗೆ ಶಂಖನಾದ, ಗಂಗಾ ಆರತಿ, ಮ್ಯಾರಥಾನ್, ಜುಂಬಾ ಹಾಗೂ ಯೋಗ ಪ್ರದರ್ಶನಗಳೊಂದಿಗೆ ಆರಂಭವಾಗಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಈ ವಿಶೇಷ ಹಬ್ಬದಲ್ಲಿ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಯದುವೀರ್, ಹಿರಿಯ ಚಲನಚಿತ್ರ ನಟ ಸಿಹಿಕಹಿ ಚಂದ್ರು, ಬೆಂಗಳೂರು ನಗರ ಗಣ್ಯರ ರಕ್ಷಣಾ ವಿಭಾಗದ ಉಪ ಪೊಲೀಸ್ ಆಯುಕ್ತ ಮಂಜುನಾಥ್ ಬಾಬು, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಗರುಡ ಪ್ರತಿಷ್ಠಾನದ ಮೇದಿನಿ ಗರುಡಾಚಾರ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಡಾ. ಸಿ.ಎ. ಕಿಶೋರ್ ಹಾಗೂ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪ್ರತಿಷ್ಠಿತ ಬಿ.ಎನ್.ಎಂ.ಐ.ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ರಾವ್ ಮಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎನ್.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ವಿಕಸನ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಬೆಂಗಳೂರು ನಗರದ ಪರಂಪರೆ, ಸಂಸ್ಕೃತಿ ಹಾಗೂ ಆರೋಗ್ಯ ಜಾಗೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ‘ಬೆಂಗಳೂರು ಹೆರಿಟೇಜ್ ಹಬ್ಬ’ ಸಾರ್ವಜನಿಕರ ಗಮನ ಸೆಳೆದಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.

Continue Reading

ಕ್ರೀಡೆ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಇಂದು ಚಾಲನೆ: ಟ್ರೋಫಿಗಾಗಿ 12 ತಂಡಗಳ ಮಹಾಸಂಗ್ರಾಮ

Published

on

ಬರ್ಮಿಂಗ್‌ಹ್ಯಾಮ್: ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಇಂದು ಭವ್ಯ ಚಾಲನೆ ದೊರೆಯಲಿದೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 12 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದ್ದು, ಟೂರ್ನಿಯು ಹೊಸ ದಾಖಲೆಗೆ ಸಾಕ್ಷಿಯಾಗುತ್ತಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಟೂರ್ನಿಯು ಎರಡು ವರ್ಷಗಳಿಗೊಮ್ಮೆ ಆಯೋಜನೆಯಾಗುತ್ತದೆ. ಈ ಬಾರಿ ಒಟ್ಟು 33 ಪಂದ್ಯಗಳು ನಡೆಯಲಿದ್ದು, ಎರಡು ದೇಶಗಳ ಏಳು ಪ್ರಮುಖ ಕ್ರೀಡಾಂಗಣಗಳು ಪಂದ್ಯಗಳಿಗೆ ವೇದಿಕೆಯಾಗಲಿವೆ.

ಉದ್ಘಾಟನಾ ಪಂದ್ಯವು ಇಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್ ಮಹಿಳಾ ತಂಡ ಮತ್ತು ಶ್ರೀಲಂಕಾ ಮಹಿಳಾ ತಂಡ ಮುಖಾಮುಖಿಯಾಗಲಿವೆ. ಟೂರ್ನಿಯ ಆರಂಭಿಕ ಪಂದ್ಯವೇ ರೋಚಕ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ವಿಶ್ವಕಪ್‌ನಲ್ಲಿ ಭಾಗವಹಿಸಿರುವ 12 ತಂಡಗಳು ಪ್ರಶಸ್ತಿಗಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗಿವೆ. ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಸೇರಿದಂತೆ ಹಲವು ಬಲಿಷ್ಠ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ.

ಟೂರ್ನಿಯ ಫೈನಲ್ ಪಂದ್ಯವು ಜುಲೈ 5ರಂದು ವಿಶ್ವದ ಐತಿಹಾಸಿಕ ಕ್ರಿಕೆಟ್ ಮೈದಾನಗಳಲ್ಲಿ ಒಂದಾದ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಹಿಳಾ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿಶ್ವಕಪ್‌ಗೆ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ವ್ಯಕ್ತವಾಗಿದೆ.

ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ಕೆಲವು ವಾರಗಳು ರೋಚಕ ಪಂದ್ಯಗಳ ಹಬ್ಬವಾಗಲಿದ್ದು, ಹೊಸ ಚಾಂಪಿಯನ್ ಪಟ್ಟಕ್ಕಾಗಿ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ.

Continue Reading

ದೇಶ

ಇರಾನ್ ಮೇಲೆ ದಾಳಿ ರದ್ದು: ಟ್ರಂಪ್ ಘೋಷಣೆ

Published

on

ವಾಷಿಂಗ್ಟನ್: ಹಲವು ತಿಂಗಳುಗಳಿಂದ ಜಾಗತಿಕ ಆತಂಕಕ್ಕೆ ಕಾರಣವಾಗಿದ್ದ ಅಮೆರಿಕ–ಇರಾನ್ ಸಂಘರ್ಷ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇರಾನ್ ಜೊತೆಗಿನ ಯುದ್ಧ ಕೊನೆಗೊಳಿಸುವ ಮಹತ್ವದ ಒಪ್ಪಂದ ಬಹುತೇಕ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ನಿಗದಿಯಾಗಿದ್ದ ದಾಳಿಗಳನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಶ್ವೇತ ಭವನದಲ್ಲಿ ಗುರುವಾರ ಮಾತನಾಡಿದ ಟ್ರಂಪ್, ಯುರೋಪ್‌ನಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಸಭೆಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹೇಳಿದರು. ಈ ಸಭೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

“ಇರಾನ್‌ನೊಂದಿಗಿನ ಯುದ್ಧವನ್ನು ಇತ್ಯರ್ಥಗೊಳಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಒಪ್ಪಂದದ ದಾಖಲೆಗಳು ಅಂತಿಮ ಹಂತದಲ್ಲಿವೆ. ಶೀಘ್ರದಲ್ಲೇ ಎಲ್ಲವೂ ಪೂರ್ಣಗೊಳ್ಳಲಿದೆ” ಎಂದು ಟ್ರಂಪ್ ಹೇಳಿದ್ದಾರೆ.

ಒಪ್ಪಂದದ ಪ್ರಮುಖ ಅಂಶವೆಂದರೆ ಇರಾನ್ ಯಾವುದೇ ಸಂದರ್ಭದಲ್ಲೂ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಬಾರದು ಅಥವಾ ಪಡೆದುಕೊಳ್ಳಬಾರದು ಎಂಬ ಭರವಸೆ. ಈ ಷರತ್ತಿಗೆ ಇರಾನ್ ಒಪ್ಪಿಗೆ ಸೂಚಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದೇ ಕಾರಣದಿಂದ ಯೋಜಿಸಲಾಗಿದ್ದ ವೈಮಾನಿಕ ದಾಳಿ ಹಾಗೂ ಬಾಂಬ್ ದಾಳಿಗಳನ್ನು ರದ್ದುಗೊಳಿಸಿರುವುದಾಗಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಸೈನಿಕ ಕಾರ್ಯಾಚರಣೆ ಆರಂಭಿಸಿದ್ದವು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿಗಳನ್ನು ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿತ್ತು. ಹಾರ್ಮುಜ್ ಜಲಸಂಧಿ ಸುತ್ತಲಿನ ಬೆಳವಣಿಗೆಗಳಿಂದ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಉಂಟಾಗಿತ್ತು.

ಇದೀಗ ಶಾಂತಿ ಒಪ್ಪಂದದ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆಶಾಭಾವನೆ ಮೂಡಿಸಿದ್ದು, ಒಪ್ಪಂದಕ್ಕೆ ಸಹಿ ಹಾಕುವ ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ ಈ ಬೆಳವಣಿಗೆ ಕುರಿತು ಇರಾನ್‌ನಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.

Continue Reading

Trending