ದೇಶ
ಶಾಂತಿ ಮಾತುಕತೆ ವಿಫಲ? ಇರಾನ್ ಗುರಿಯಾಗಿಸಿ ಅಮೆರಿಕ ಕ್ಷಿಪಣಿ ದಾಳಿ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹೊಸ ಹಂತ ತಲುಪಿದೆ. ಶಾಂತಿ ಮಾತುಕತೆಗಳಲ್ಲಿ ಪ್ರಗತಿ ಕಾಣದ ಹಿನ್ನೆಲೆ ಅಮೆರಿಕ ಪಡೆಗಳು ಇರಾನ್‌ನ ಹಲವು ಗುರಿಗಳ ಮೇಲೆ ಹೊಸ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ.
ಅಮೆರಿಕದ ಅಧ್ಯಕ್ಷ Donald Trump ಅವರು ಇರಾನ್ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್‌ನ ರಾಡಾರ್ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಹಲವು ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸಾಗರ ಸಂಚಾರದ ಭದ್ರತೆ ಪ್ರಮುಖ ವಿವಾದವಾಗಿ ಪರಿಣಮಿಸಿದೆ. ಅಮೆರಿಕವು ಜಾಗತಿಕ ವ್ಯಾಪಾರ ಮತ್ತು ತೈಲ ಸಾಗಣೆ ನಿರಂತರವಾಗಿರಬೇಕು ಎಂದು ಹೇಳಿದ್ದರೆ, ಇರಾನ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಪ್ರತಿಪಾದಿಸಿದೆ. ಇತ್ತೀಚಿನ ಬೆಳವಣಿಗೆಗಳ ನಡುವೆ ಹಾರ್ಮುಜ್ ಮೂಲಕ ಸಾಗುವ ಹಡಗುಗಳ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ.
ಇದೇ ವೇಳೆ, ಇರಾನ್ ದಾಳಿಗಳನ್ನು ಖಂಡಿಸಿದ್ದು, ಅಮೆರಿಕದ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಆರೋಪಿಸಿದೆ. ಎರಡೂ ದೇಶಗಳ ನಡುವಿನ ಪ್ರತಿದಾಳಿ ಕ್ರಮಗಳು ಪ್ರದೇಶದ ಸ್ಥಿರತೆಗೆ ಸವಾಲು ಎಸೆದಿವೆ.
ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಈ ಸಂಘರ್ಷ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದ ಬೆಳವಣಿಗೆಗಳತ್ತ ಇದೀಗ ಇಡೀ ಜಗತ್ತಿನ ಗಮನ ನೆಟ್ಟಿದೆ
ದೇಶ
ಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್ ಬಳಕೆಗೆ ಕೇಂದ್ರದ ಪ್ರೋತ್ಸಾಹ: ಹೊಸ ನಿಯಮ ಜಾರಿ
ನವದೆಹಲಿ: ದೇಶದಲ್ಲಿ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್‌ನಲ್ಲಿ 20 ಶೇಕಡಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಹೊಂದಿರುವ ಇಂಧನಗಳಿಗೆ ಕೇಂದ್ರ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಈ ಕ್ರಮದಿಂದ ಎಥೆನಾಲ್ ಆಧಾರಿತ ಇಂಧನ ಬಳಕೆ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.
ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ, 22ರಿಂದ 30 ಶೇಕಡದವರೆಗೆ ಎಥೆನಾಲ್ ಹೊಂದಿರುವ E22, E25, E27 ಹಾಗೂ E30 ಇಂಧನ ಮಿಶ್ರಣಗಳಿಗೆ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ. ಭಾರತ ಈಗಾಗಲೇ E20 ಗುರಿಯತ್ತ ಮಹತ್ವದ ಪ್ರಗತಿ ಸಾಧಿಸಿದ್ದು, ಮುಂದಿನ ಹಂತವಾಗಿ ಹೆಚ್ಚಿನ ಎಥೆನಾಲ್ ಮಿಶ್ರಣದ ಇಂಧನಗಳ ಬಳಕೆಗೆ ದಾರಿ ಮಾಡಿಕೊಡುತ್ತಿದೆ.
ಎಥೆನಾಲ್ ಅನ್ನು ಸಕ್ಕರೆಕಬ್ಬು, ಜೋಳ ಹಾಗೂ ಇತರ ಕೃಷಿ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಇದನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡುವುದರಿಂದ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ ವಿದೇಶಿ ವಿನಿಮಯ ಉಳಿತಾಯ, ಮಾಲಿನ್ಯ ನಿಯಂತ್ರಣ ಹಾಗೂ ರೈತರಿಗೆ ಹೆಚ್ಚುವರಿ ಆದಾಯದಂತಹ ಪ್ರಯೋಜನಗಳೂ ದೊರೆಯಲಿವೆ.
2018ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಜೈವಿಕ ಇಂಧನ ನೀತಿಯ ಪರಿಣಾಮವಾಗಿ ಭಾರತದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ನಿರಂತರವಾಗಿ ಏರಿಕೆಯಾಗಿದೆ. 2022-23ರಲ್ಲಿ 12.06 ಶೇಕಡ ಇದ್ದ ಪ್ರಮಾಣ 2024-25ರಲ್ಲಿ 17.98 ಶೇಕಡಕ್ಕೆ ಏರಿಕೆಯಾಗಿದೆ.
ಆದರೆ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನದಿಂದ ಪೆಟ್ರೋಲ್ ದರ ತಕ್ಷಣ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಬೇಡ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎಥೆನಾಲ್ ಖರೀದಿ ವೆಚ್ಚವು ಕೆಲ ಸಂದರ್ಭಗಳಲ್ಲಿ ಪೆಟ್ರೋಲ್‌ಗಿಂತ ಹೆಚ್ಚಾಗಿದೆ. ಇದೇ ವೇಳೆ E85 ಇಂಧನವನ್ನೂ ದೇಶದ ಆಯ್ದ ಸರ್ಕಾರಿ ಪೆಟ್ರೋಲ್ ಬಂಕ್‌ಗಳಲ್ಲಿ ಪರಿಚಯಿಸಲಾಗಿದ್ದು, ಇದು ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಸೂಕ್ತವಾಗಿದೆ.
ಕೇಂದ್ರದ ಈ ಹೊಸ ನಿರ್ಧಾರವು ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡುವ ಸಾಧ್ಯತೆ ಇದೆ.
ದೇಶ
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್: 17 ಜಿಲ್ಲೆಗಳಲ್ಲಿ 1.1 ಲಕ್ಷ ಮಹಿಳೆಯರ ಹೆಸರು ಡಿಲೀಟ್!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಅರ್ಹತೆ ಮತ್ತು ದಾಖಲೆಗಳ ಮರುಪರಿಶೀಲನೆ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ಒಟ್ಟು 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ಪ್ರತಿ ತಿಂಗಳು ₹2,000 ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ಸಾವಿರಾರು ಕುಟುಂಬಗಳಿಗೆ ನಿರಾಸೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು 18 ಸಾವಿರ ಮಹಿಳೆಯರ ಹೆಸರು ಪಟ್ಟಿಯಿಂದ ಕೈಬಿಡಲಾಗಿದ್ದು, ಬೆಂಗಳೂರು ದಕ್ಷಿಣದಲ್ಲಿ 12,719, ಚಿತ್ರದುರ್ಗದಲ್ಲಿ 12,637, ದಕ್ಷಿಣ ಕನ್ನಡದಲ್ಲಿ 9 ಸಾವಿರ, ಶಿವಮೊಗ್ಗದಲ್ಲಿ 8,114, ಕಲಬುರಗಿಯಲ್ಲಿ 7,978 ಹಾಗೂ ಕೊಪ್ಪಳದಲ್ಲಿ 7,200 ಮಹಿಳೆಯರು ಯೋಜನೆಯಿಂದ ಹೊರಗುಳಿದಿದ್ದಾರೆ. ಇತರ ಜಿಲ್ಲೆಗಳಲ್ಲಿಯೂ ಸಾವಿರಾರು ಫಲಾನುಭವಿಗಳ ಹೆಸರನ್ನು ತೆಗೆದುಹಾಕಲಾಗಿದೆ.
ಯೋಜನೆ ಆರಂಭದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಬಹುತೇಕ ಮಹಿಳೆಯರಿಗೆ ನೆರವು ದೊರೆಯುತ್ತಿತ್ತು. ಆದರೆ ಇದೀಗ ಸರ್ಕಾರವು ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ ಮಾಹಿತಿ ಸೇರಿದಂತೆ ವಿವಿಧ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಮರುಪರಿಶೀಲನೆ ನಡೆಸುತ್ತಿದೆ. ಈ ವೇಳೆ ಒಂದೇ ಕುಟುಂಬದ ಇಬ್ಬರು ಸದಸ್ಯರು ಅರ್ಜಿ ಸಲ್ಲಿಸಿರುವುದು, ತಪ್ಪು ಬ್ಯಾಂಕ್ ಖಾತೆ ವಿವರಗಳು, ಆದಾಯ ತೆರಿಗೆ ಪಾವತಿದಾರರು ಹಾಗೂ ಜಿಎಸ್‌ಟಿ ನೋಂದಣಿ ಹೊಂದಿರುವ ಕುಟುಂಬಗಳ ಅರ್ಜಿಗಳು ಪತ್ತೆಯಾಗಿದ್ದು, ಅಂತಹ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಇದರ ಜೊತೆಗೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳ ಮಾಹಿತಿಯಲ್ಲಿನ ವ್ಯತ್ಯಾಸಗಳು ಕೂಡ ಅನರ್ಹತೆಗೆ ಕಾರಣವಾಗಿವೆ ಎನ್ನಲಾಗಿದೆ. ಸರ್ಕಾರದ ಪ್ರಕಾರ ಅನರ್ಹರು ಸೌಲಭ್ಯ ಪಡೆಯುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಆದರೆ ಹಲವು ಮಹಿಳೆಯರು ಸಣ್ಣಪುಟ್ಟ ತಾಂತ್ರಿಕ ದೋಷಗಳ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೇ ಫಲಾನುಭವಿಗಳ ಪಟ್ಟಿಯಿಂದ ಹೆಸರು ತೆಗೆದುಹಾಕಿರುವುದು ಸರಿಯಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ಮರುಪರಿಶೀಲನೆ ನಡೆಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ದೇಶ
ದೆಹಲಿ ದರ್ಬಾರ್‌ನಲ್ಲಿ ಕಾಂಗ್ರೆಸ್ ನಾಯಕರ ದಂಡು: ಸಂಪುಟ ವಿಸ್ತರಣೆ ಚರ್ಚೆಗೆ ವೇಗ?
ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಒಂದೇ ದಿನ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಹಲವು ಶಾಸಕರು ಕೂಡ ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿರುವುದು ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಮತ್ತು ಡಾ. ಪರಮೇಶ್ವರ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಕೂಡ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸುವ ಜೊತೆಗೆ ಜೂನ್ 21ರಂದು ನಡೆಯಲಿರುವ ತಮ್ಮ ಪದಗ್ರಹಣ ಸಮಾರಂಭಕ್ಕೆ ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.
ಈ ಪ್ರವಾಸವನ್ನು ಕಾಂಗ್ರೆಸ್ ನಾಯಕರು ಔಪಚಾರಿಕ ಭೇಟಿ ಎಂದು ಹೇಳುತ್ತಿದ್ದರೂ, ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಂಪುಟ ವಿಸ್ತರಣೆ ಚರ್ಚೆಗೂ ವೇದಿಕೆ ಸಿದ್ಧವಾಗಿರುವ ಸುಳಿವು ನೀಡುತ್ತಿವೆ. ವಿಶೇಷವಾಗಿ ಸಿದ್ಧರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಯಾವುದೇ ಅಂತಿಮ ನಿರ್ಧಾರ ಸಾಧ್ಯವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.
ಇನ್ನೊಂದೆಡೆ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ತಮ್ಮ ಪರ ಲಾಬಿ ನಡೆಸಲು ಮುಂದಾಗಿದ್ದಾರೆ. ಯುವ ಶಾಸಕರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಒತ್ತಡವೂ ಹೈಕಮಾಂಡ್ ಮಟ್ಟದಲ್ಲಿ ಕೇಳಿಬರುತ್ತಿದೆ. ರಿಜ್ವಾನ್ ಅರ್ಷದ್, ಶ್ರೀನಿವಾಸ್ ಮಾನೆ, ಅಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು, ಮುಂದಿನ ಕೆಲ ದಿನಗಳಲ್ಲಿ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.
-
ದೇಶ19 hours agoರಾಜ್ಯಸಭೆ ಸ್ಥಾನದಿಂದ ಮೋದಿ ಜೊತೆಗಿನ ಸಂಬಂಧ ಮುಗಿಯಲ್ಲ: ದೇವೇಗೌಡ ಸ್ಪಷ್ಟನೆ
-
ದೇಶ20 hours agoನೆಹರೂ 64 ವರ್ಷದ ದಾಖಲೆ ಹಿಂದಿಕ್ಕಿದ ಮೋದಿ; ಸಂಪುಟ ಸಭೆಯಲ್ಲಿ ಸಂಭ್ರಮ
-
ದೇಶ20 hours agoಪಿಒಕೆ ಪ್ರತಿಭಟನೆಗಳಿಂದ ಗಮನ ಬೇರೆಡೆ ಸೆಳೆಯಲು ಪಾಕ್ ತಂತ್ರ?
-
ಆರೋಗ್ಯ1 hour agoಕಾಜೋಲ್ ಬ್ಯಾಗ್ನಲ್ಲಿ ಯಾವಾಗಲೂ ಇರುವುದು ಇದೇ ವಸ್ತು! ಆರೋಗ್ಯ ರಹಸ್ಯ ಬಯಲು
-
ದೇಶ1 hour agoದೆಹಲಿ ದರ್ಬಾರ್‌ನಲ್ಲಿ ಕಾಂಗ್ರೆಸ್ ನಾಯಕರ ದಂಡು: ಸಂಪುಟ ವಿಸ್ತರಣೆ ಚರ್ಚೆಗೆ ವೇಗ?
-
ದೇಶ6 minutes agoಪೆಟ್ರೋಲ್‌ನಲ್ಲಿ ಹೆಚ್ಚು ಎಥೆನಾಲ್ ಬಳಕೆಗೆ ಕೇಂದ್ರದ ಪ್ರೋತ್ಸಾಹ: ಹೊಸ ನಿಯಮ ಜಾರಿ
-
ಕ್ರೀಡೆ1 hour agoಇಂದಿನಿಂದ ಫಿಫಾ ವಿಶ್ವಕಪ್ ಮಹಾಸಮರ: 48 ತಂಡಗಳ ನಡುವೆ ಕಪ್ಗಾಗಿ ಕಾದಾಟ!
-
ದೇಶ13 minutes agoಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್: 17 ಜಿಲ್ಲೆಗಳಲ್ಲಿ 1.1 ಲಕ್ಷ ಮಹಿಳೆಯರ ಹೆಸರು ಡಿಲೀಟ್!
