Connect with us

ದೇಶ

ಅಡ್ಡಮತದಾನಕ್ಕೂ ಮುನ್ನವೇ ಎಚ್ಚರಿಸಿದ್ದೆ: ಸ್ವಪಕ್ಷದ ವಿರುದ್ಧ ಸದಾನಂದ ಗೌಡ ಗರಂ

Published

on

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬಿಸಿ ರಾಜ್ಯ ಬಿಜೆಪಿಯಲ್ಲಿ ಇನ್ನೂ ತಣ್ಣಗಾಗಿಲ್ಲ. ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯ ಗೆಲುವಿನ ಹಿಂದೆ ನಡೆದಿದ್ದ ರಹಸ್ಯ ರಾಜಕೀಯ ಚಟುವಟಿಕೆಗಳ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಅವರು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಪಕ್ಷದ ಆಂತರಿಕ ವೈಫಲ್ಯಗಳತ್ತ ಬೆರಳು ತೋರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ಬಿಜೆಪಿ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಜೂನ್ 13ರಂದು ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಿಂದ ಕರೆ ಬಂದಿದ್ದು, ಕಾಂಗ್ರೆಸ್‌ನ ನಾಲ್ವರು ಪ್ರಮುಖ ನಾಯಕರು ಹಾಗೂ ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.

“ತಕ್ಷಣವೇ ನಾನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಕರೆ ಮಾಡಿದ್ದೆ. ಆದರೆ ಇಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಮಾಹಿತಿ ನೀಡಿದೆ. ಅವರು ನೋಡುತ್ತೇನೆ ಎಂದರು. ಆದರೆ ಮರುದಿನವೂ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೊಂದು ಸಭೆ ನಡೆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ,” ಎಂದು ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದರು.

ಅಡ್ಡಮತದಾನ ನಡೆದ ಬಳಿಕ ಪಕ್ಷದ ಮುಖಭಂಗವಾದಾಗ ಅದೇ ನಾಯಕ ಕರೆ ಮಾಡಿ “ಅಣ್ಣ, ನೀವು ಹೇಳಿದ ಹಾಗೆಯೇ ಆಯ್ತು” ಎಂದಿದ್ದರು. ಅದಕ್ಕೆ “ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ?” ಎಂದು ಉತ್ತರಿಸಿದ್ದಾಗಿ ಅವರು ತಿಳಿಸಿದರು.

ಇದೇ ವೇಳೆ ಧರ್ಮಸ್ಥಳದ ಹೆಸರನ್ನು ರಾಜಕೀಯಕ್ಕೆ ಎಳೆದು ತರುವ ಪ್ರವೃತ್ತಿಯ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು. “ಧರ್ಮದ ಕ್ಷೇತ್ರಕ್ಕೆ ರಾಜಕೀಯವನ್ನು ತೆಗೆದುಕೊಂಡು ಹೋಗಬೇಡಿ. ರಾಜಕೀಯ ಮಾಡಲು ಆಗದಿದ್ದರೆ ದೇವರಿಗೇ ಬಿಟ್ಟುಬಿಡಿ,” ಎಂದು ಕಿಡಿಕಾರಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯತಂತ್ರವನ್ನು ಉಲ್ಲೇಖಿಸಿದ ಅವರು, “ಇದು ಡಿಕೆ ಶಿವಕುಮಾರ್ ಅವರ ಗೆಲುವೋ ಅಥವಾ ಬಿಜೆಪಿಯ ವೈಫಲ್ಯವೋ ಎಂಬುದನ್ನು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಲೋಚನೆ ಕೊರತೆ ಹಾಗೂ ಆಂತರಿಕ ಗೊಂದಲವೇ ಸೋಲಿಗೆ ಕಾರಣ,” ಎಂದು ಒಪ್ಪಿಕೊಂಡರು.

ಕ್ರೀಡೆ

‘ಟೆಸ್ಟ್ ಕಥೆ ಮುಗಿದ ಅಧ್ಯಾಯ’ – ಪುನರಾಗಮನ ವದಂತಿಗಳಿಗೆ ಕೊಹ್ಲಿ ಫುಲ್ ಸ್ಟಾಪ್

Published

on

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸುತ್ತಿರುವ ಬೆನ್ನಲ್ಲೇ, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಮತ್ತೆ ತಂಡಕ್ಕೆ ಮರಳಬೇಕು ಎಂಬ ಅಭಿಮಾನಿಗಳ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಆದರೆ ಈ ಎಲ್ಲ ಊಹಾಪೋಹಗಳಿಗೆ ಸ್ವತಃ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದು, ತಮ್ಮ ಟೆಸ್ಟ್ ಕ್ರಿಕೆಟ್ ಅಧ್ಯಾಯ ಮುಗಿದಿದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ದೆಹಲಿಯಲ್ಲಿ ತಮ್ಮ ಸಹ-ಮಾಲೀಕತ್ವದ ಕ್ರೀಡಾ ಉಡುಪುಗಳ ಬ್ರ್ಯಾಂಡ್ ‘ಒನ್8’ (One8) ನೂತನ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ಮರಳುವ ಯಾವುದೇ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.

ಕಾರ್ಯಕ್ರಮದ ನಿರೂಪಕ ಹಾಗೂ ಹಾಸ್ಯನಟ ಡ್ಯಾನಿಶ್ ಸೇಠ್, ಪ್ರದರ್ಶನದಲ್ಲಿದ್ದ ಶೂ ಜೋಡಿಯ ಬೆಲೆ ₹9,230 ಇರುವುದನ್ನು ಉಲ್ಲೇಖಿಸಿ, “ಇನ್ನಷ್ಟು ರನ್ ಗಳಿಸಿ ಈ ಬೆಲೆಯನ್ನು ಹೆಚ್ಚಿಸಲು ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತೀರಾ?” ಎಂದು ತಮಾಷೆಯಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, “ನಾನು ಕಡಿಮೆ ವ್ಯಾಪಾರ ಮಾಡಲೂ ಸಿದ್ಧ, ಆದರೆ ಟೆಸ್ಟ್ ಕ್ರಿಕೆಟ್ ಕಥೆ ಮುಗಿದ ಅಧ್ಯಾಯ” ಎಂದು ನಗುತ್ತಲೇ ಸ್ಪಷ್ಟ ಉತ್ತರ ನೀಡಿದರು.

ಇದೇ ವೇಳೆ ಆ ಶೂನ ಬೆಲೆಯ ಹಿಂದಿನ ವಿಶೇಷತೆಯನ್ನೂ ಅವರು ಬಹಿರಂಗಪಡಿಸಿದರು. ₹9,230 ಬೆಲೆಯನ್ನು ಯಾದೃಚ್ಛಿಕವಾಗಿ ನಿಗದಿಪಡಿಸಿಲ್ಲ. ಅದು ಟೆಸ್ಟ್ ಕ್ರಿಕೆಟ್‌ನಲ್ಲಿ ತಾವು ಗಳಿಸಿರುವ ಒಟ್ಟು 9,230 ರನ್‌ಗಳನ್ನು ಸಂಕೇತಿಸುತ್ತದೆ ಎಂದು ವಿವರಿಸಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ, 14 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 123 ಟೆಸ್ಟ್ ಪಂದ್ಯಗಳ 210 ಇನ್ನಿಂಗ್ಸ್‌ಗಳಲ್ಲಿ 30 ಶತಕ ಮತ್ತು 31 ಅರ್ಧಶತಕಗಳೊಂದಿಗೆ 9,230 ರನ್ ಗಳಿಸಿರುವ ಅವರು, ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿಯ ಈ ಹೇಳಿಕೆಯಿಂದ ಟೆಸ್ಟ್ ಕ್ರಿಕೆಟ್‌ಗೆ ಅವರ ಪುನರಾಗಮನದ ಕುರಿತಾದ ಎಲ್ಲ ವದಂತಿಗಳಿಗೆ ಅಧಿಕೃತ ತೆರೆ ಬಿದ್ದಂತಾಗಿದೆ.

Continue Reading

ದೇಶ

‘ನೀರೂ ರಾಷ್ಟ್ರೀಯ ಭದ್ರತೆಯ ಭಾಗ’ – ಭಾರತದ ವಿರುದ್ಧ ಖ್ವಾಜಾ ಆಸಿಫ್ ಕಿಡಿ

Published

on

ಇಸ್ಲಾಮಾಬಾದ್: ಸಿಂಧೂ ನದಿ ಜಲ ಒಪ್ಪಂದ ಅಮಾನತುಗೊಂಡು ಒಂದು ವರ್ಷ ಕಳೆದಿರುವ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಜಲ ವಿವಾದ ಮತ್ತೆ ತೀವ್ರಗೊಂಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಭಾರತವು ಪಾಕಿಸ್ತಾನಕ್ಕೆ ಹರಿಯುವ ನೀರಿನ ಪೂರೈಕೆಗೆ ಅಡ್ಡಿಪಡಿಸಲು ಯತ್ನಿಸಿದರೆ, ಅದನ್ನು ರಾಷ್ಟ್ರೀಯ ಭದ್ರತೆಗೆ ಸವಾಲು ಎಂದು ಪರಿಗಣಿಸಿ ಯುದ್ಧಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಮಾಧ್ಯಮಗಳೊಂದಿಗೆ ಮಾತನಾಡಿದ ಖ್ವಾಜಾ ಆಸಿಫ್, “ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಪ್ರಮುಖ ಭಾಗವಾಗಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಯಲು ಭಾರತ ಪ್ರಯತ್ನಿಸುತ್ತಿದೆ ಎಂಬುದಕ್ಕೆ ಸಾಕ್ಷ್ಯ ದೊರೆತರೆ, ಅಗತ್ಯವಿದ್ದರೆ ಮಿಲಿಟರಿ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಭಾರತವು ಚೆನಾಬ್ ನದಿಯ ಹರಿವನ್ನು ನಿಯಂತ್ರಿಸುವ ಮೂಲಕ ನೀರನ್ನು ರಾಜಕೀಯ ಹಾಗೂ ತಂತ್ರಜ್ಞಾನದ ಶಸ್ತ್ರಾಸ್ತ್ರವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ, ನದಿಯ ಹರಿವು ಮತ್ತು ಸಂಬಂಧಿತ ಮಾಹಿತಿಯ ವಿನಿಮಯದಲ್ಲೂ ಭಾರತ ಪಾರದರ್ಶಕತೆ ತೋರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಇದೀಗ ಪಾಕಿಸ್ತಾನ ತೀವ್ರ ಜಲ ಸಂಕಷ್ಟವನ್ನು ಎದುರಿಸುತ್ತಿದೆ. ವಿಶೇಷವಾಗಿ ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ನೀರಿನ ಕೊರತೆ ಗಂಭೀರವಾಗಿದೆ. ಸಿಂಧ್ ನೀರಾವರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರದೇಶದಲ್ಲಿ ಶೇ.64.1ರಷ್ಟು ನೀರಿನ ಕೊರತೆ ದಾಖಲಾಗಿದೆ.

2025ರ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತವು 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ ಈ ನಿರ್ಧಾರ ಮುಂದುವರಿಯಲಿದೆ ಎಂದು ಭಾರತ ಸ್ಪಷ್ಟಪಡಿಸಿತ್ತು.

ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು 2028ರ ವೇಳೆಗೆ ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿಯ ನೀರಿನ ಹರಿವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಧ್ಯತೆ ಕುರಿತು ನೀಡಿದ ಹೇಳಿಕೆಯ ಬಳಿಕ, ಇಸ್ಲಾಮಾಬಾದ್‌ನಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಬೆಳವಣಿಗೆಗಳು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.

Continue Reading

ಆರೋಗ್ಯ

Bengaluru ಹೆಚ್‌ಸಿಜಿ ಆಸ್ಪತ್ರೆಗೆ ಕೇಂದ್ರದ ಕಠಿಣ ಶಾಕ್: 2 ವರ್ಷ ಹೊಸ ಕ್ಲಿನಿಕಲ್ ಟ್ರಯಲ್‌ಗೆ ಬ್ರೇಕ್!

Published

on

ಬೆಂಗಳೂರು: ನಗರದ ಪ್ರತಿಷ್ಠಿತ ಹೆಚ್‌ಸಿಜಿ (HCG) ಕ್ಯಾನ್ಸರ್ ಆಸ್ಪತ್ರೆಯ ನೈತಿಕ ಸಮಿತಿಗೆ (Ethics Committee) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಭಾರೀ ಆಘಾತ ನೀಡಿದೆ. ಮಾನವ ಪ್ರಯೋಗಗಳ (Clinical Trials) ವೇಳೆ ಗಂಭೀರ ನಿಯಮ ಉಲ್ಲಂಘನೆಗಳು ಹಾಗೂ ಸುರಕ್ಷತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಮುಂದಿನ 24 ತಿಂಗಳುಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳು ಜಂಟಿ ತನಿಖೆ ನಡೆಸಿದ್ದವು. ತನಿಖೆಯಲ್ಲಿ ಹಲವು ಗಂಭೀರ ಅಕ್ರಮಗಳು ಬೆಳಕಿಗೆ ಬಂದಿದ್ದು, ನೈತಿಕ ಸಮಿತಿಯು ನಿಯಮಾವಳಿಗಳನ್ನು ಪಾಲಿಸದಿರುವುದು ದೃಢಪಟ್ಟಿದೆ.

ವರದಿಗಳ ಪ್ರಕಾರ, ಔಷಧ ಸಂಶೋಧನಾ ಪ್ರಯೋಗಗಳ ಸಂದರ್ಭದಲ್ಲಿ ಕೆಲವು ರೋಗಿಗಳು ಮೃತಪಟ್ಟಿದ್ದರೂ, ಆ ಮಾಹಿತಿಯನ್ನು ನಿಯಂತ್ರಣ ಸಂಸ್ಥೆಗೆ ನಿಗದಿತ ಅವಧಿಯಲ್ಲಿ ಸಲ್ಲಿಸಲಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಸಾವಿನ ವರದಿಗಳನ್ನೇ ದಾಖಲಿಸದೇ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಪ್ರಯೋಗಗಳಿಂದ ಹಾನಿಗೊಳಗಾದ ಅಥವಾ ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಧನ ವಿತರಣೆ ಕುರಿತು ಅಗತ್ಯ ದಾಖಲೆಗಳ ಕೊರತೆಯೂ ಕಂಡುಬಂದಿದೆ.

ಹೊಸ ಔಷಧ ಪ್ರಯೋಗಗಳಿಗೆ ಒಳಗಾಗುವ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ಆರೈಕೆಯನ್ನು ಖಚಿತಪಡಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ ಎಂದು ತನಿಖಾ ವರದಿ ಉಲ್ಲೇಖಿಸಿದೆ. ಇದರ ಹಿನ್ನೆಲೆಯಲ್ಲಿ ಸಿಡಿಎಸ್‌ಸಿಒ ಕಠಿಣ ಕ್ರಮ ಕೈಗೊಂಡಿದೆ.

ಆದರೆ, ಈ ನಿಷೇಧವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆಸ್ಪತ್ರೆಯ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆ, ತಪಾಸಣೆ ಹಾಗೂ ಈಗಾಗಲೇ ನಡೆಯುತ್ತಿರುವ ಪ್ರಯೋಗಗಳು ಮುಂದುವರಿಯಲಿವೆ. ಆದರೆ ಚಾಲ್ತಿಯಲ್ಲಿರುವ ಎಲ್ಲಾ ಪ್ರಯೋಗಗಳ ಕುರಿತು ಪ್ರತಿ ತಿಂಗಳು ರೋಗಿಗಳ ಸುರಕ್ಷತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.

ಸಿಡಿಎಸ್‌ಸಿಒ ಆದೇಶವನ್ನು ಪರಿಶೀಲಿಸುತ್ತಿರುವ ಹೆಚ್‌ಸಿಜಿ ಆಡಳಿತ ಮಂಡಳಿ, ಮುಂದಿನ ಕಾನೂನು ಕ್ರಮಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Continue Reading

Trending