Connect with us

ದೇಶ

ಬೆಂಗಳೂರು ಮೆಟ್ರೋ ಅವಾಂತರ: ತಾಂತ್ರಿಕ ದೋಷ ಇಲ್ಲ, ಪ್ರಾಥಮಿಕ ತನಿಖಾ ವರದಿ ಬಹಿರಂಗ

Published

on

ಬೆಂಗಳೂರು: ನೇರಳೆ (Purple) ಮಾರ್ಗದಲ್ಲಿ ಗುರುವಾರ ಸಂಜೆ ಮತ್ತೆ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದ ಬೆನ್ನಲ್ಲೇ, ಘಟನೆಗೆ ಸಂಬಂಧಿಸಿದ ಪ್ರಾಥಮಿಕ ತನಿಖಾ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬಿಡುಗಡೆ ಮಾಡಿದೆ. ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಬದಲಿಗೆ, ಪ್ರಯಾಣಿಕರೊಬ್ಬರ ಮೆಟಲ್ ಚೈನ್ ರೈಲಿನ ಬಾಗಿಲಿನ ಡೋರ್ ಗೈಡ್‌ವೇನಲ್ಲಿ ಸಿಲುಕಿದ್ದೇ ಸಂಚಾರ ವ್ಯತ್ಯಯಕ್ಕೆ ಕಾರಣ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಬಿಎಂಆರ್‌ಸಿಎಲ್ ಪ್ರಕಟಣೆಯ ಪ್ರಕಾರ, ಗುರುವಾರ ಸಂಜೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆಯ ಬಳಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿವೆ. ತನಿಖೆಯಲ್ಲಿ ಪ್ರಯಾಣಿಕರೊಬ್ಬರ ಮೆಟಲ್ ಚೈನ್ ಬಾಗಿಲಿನ ಮಾರ್ಗದಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಳ್ಳಲಿಲ್ಲ. ಸುರಕ್ಷತಾ ವ್ಯವಸ್ಥೆಯ ಭಾಗವಾಗಿ ರೈಲು ಮುಂದಕ್ಕೆ ಚಲಿಸಲು ಸಾಧ್ಯವಾಗದೇ, ಸಂಜೆ 7.36ರಿಂದ 7.54ರವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಬಳಿಕ ರೈಲು ಮತ್ತು ಅದರ ಡೋರ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಯಾವುದೇ ತಾಂತ್ರಿಕ ದೋಷ ಪತ್ತೆಯಾಗಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ ಬಳಿಕವೇ ರೈಲನ್ನು ಮತ್ತೆ ಸೇವೆಗೆ ಬಿಡಲಾಗಿದೆ ಎಂದು ನಿಗಮ ಸ್ಪಷ್ಟಪಡಿಸಿದೆ. ಪ್ರಯಾಣಿಕರ ಸುರಕ್ಷತೆ ಸಂಸ್ಥೆಯ ಅತ್ಯುನ್ನತ ಆದ್ಯತೆಯಾಗಿದ್ದು, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಮೆಟ್ರೋ ಸೇವೆ ಒದಗಿಸುವ ಬದ್ಧತೆ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೀಗ ಇತ್ತೀಚಿನ ಮೆಟ್ರೋ ಸೇವಾ ವ್ಯತ್ಯಯಗಳ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ಬೆಂಗಳೂರು ಮೆಟ್ರೋ ವ್ಯವಸ್ಥೆಯ ಸಮಗ್ರ ಸುರಕ್ಷತಾ ಮತ್ತು ನಿರ್ವಹಣಾ ಆಡಿಟ್ ನಡೆಸುವಂತೆ ಆಗ್ರಹಿಸಿದ್ದಾರೆ.

ಜೂನ್ 25ರಂದು ಬರೆದ ಪತ್ರದಲ್ಲಿ, ಜೂನ್ 23ರಂದು ಕರೆಂಟ್ ಕಲೆಕ್ಟರ್ ಡಿವೈಸ್ (CCD) ದೋಷದಿಂದ ಮೆಟ್ರೋ ಸೇವೆ ಸ್ಥಗಿತಗೊಂಡ ಪ್ರಕರಣ ಸೇರಿದಂತೆ ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು 20 ತಾಂತ್ರಿಕ ದೋಷಗಳು ಮತ್ತು ಸೇವಾ ವ್ಯತ್ಯಯಗಳು ಸಂಭವಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ವಿಶೇಷವಾಗಿ ನೇರಳೆ ಮಾರ್ಗದಲ್ಲಿ ಹೆಚ್ಚಾಗಿ ಸಮಸ್ಯೆಗಳು ಕಂಡುಬರುತ್ತಿದ್ದು, ಟಿಕೆಟ್ ವ್ಯವಸ್ಥೆ, ಸಿಗ್ನಲ್ ದೋಷ ಹಾಗೂ ಹಳಿ ಸಂಬಂಧಿತ ಸಮಸ್ಯೆಗಳು ವ್ಯವಸ್ಥೆಯಲ್ಲಿನ ಲೋಪಗಳನ್ನು ತೋರಿಸುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕುರಿತು ಸಮಗ್ರ ಸುರಕ್ಷತಾ ಆಡಿಟ್ ನಡೆಸುವಂತೆ ನಿರ್ದೇಶನ ನೀಡಬೇಕು. ಜೊತೆಗೆ, ಕೈಗೊಂಡ ಕ್ರಮಗಳ ಕುರಿತು ಆಕ್ಷನ್ ಟೇಕನ್ ರಿಪೋರ್ಟ್ (ATR) ಪಡೆದು ಅದರ ಮೇಲ್ವಿಚಾರಣೆ ನಡೆಸುವಂತೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ದೇಶ

ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ: ವೈಜ್ಞಾನಿಕ ವರದಿ ಆಧರಿಸಿ ಜಂಗಲ್ ಸಫಾರಿ ಪುನರಾರಂಭ

Published

on

ಬೆಂಗಳೂರು: ಪ್ರಕೃತಿ, ಅರಣ್ಯ ಮತ್ತು ವನ್ಯಜೀವಿ ಪ್ರಿಯರಿಗೆ ಕರ್ನಾಟಕ ಸರ್ಕಾರ ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿಶ್ವಪ್ರಸಿದ್ಧ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ತಜ್ಞರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯ ವರದಿ ಮತ್ತು ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಸರ್ಕಾರದ ಪ್ರಕಟಣೆಯ ಪ್ರಕಾರ, ಕಾಡಿನ ಪರಿಸರ ವ್ಯವಸ್ಥೆ, ವನ್ಯಜೀವಿಗಳ ಸುರಕ್ಷತೆ ಹಾಗೂ ಪರಿಸರ ಸಮತೋಲನಕ್ಕೆ ಯಾವುದೇ ಹಾನಿಯಾಗದಂತೆ ವೈಜ್ಞಾನಿಕ ಮೌಲ್ಯಮಾಪನ ನಡೆಸಲಾಗಿದೆ. ಅದರ ಆಧಾರದ ಮೇಲೆ ಪ್ರತಿದಿನ ಎಷ್ಟು ವಾಹನಗಳಿಗೆ ಅವಕಾಶ ನೀಡಬಹುದು ಎಂಬ ‘ಪರಿಣಾಮಕಾರಿ ಸಾಗಣೆ ಸಾಮರ್ಥ್ಯ’ (Carrying Capacity) ನಿಗದಿಪಡಿಸಿ ಜಂಗಲ್ ಸಫಾರಿಗೆ ಹಸಿರು ನಿಶಾನೆ ತೋರಿಸಲಾಗಿದೆ.

ತಜ್ಞರ ಸಮಿತಿಯ ಶಿಫಾರಸಿನಂತೆ ಕಾಡಿನ ಶಾಂತಿ ಮತ್ತು ವನ್ಯಜೀವಿಗಳ ಸಹಜ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಸಫಾರಿಯನ್ನು ಸಂಪೂರ್ಣ ನಿಯಂತ್ರಿತ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ನಡೆಸಲು ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಿದೆ. ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.

ಈ ನಿರ್ಧಾರದಿಂದ ಕರ್ನಾಟಕದ ಪರಿಸರ ಪ್ರವಾಸೋದ್ಯಮ (ಇಕೋ ಟೂರಿಸಂ) ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಈಗಾಗಲೇ ಪರಿಸರ ಸ್ನೇಹಿ ಪ್ರವಾಸೋದ್ಯಮದಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಈ ಕ್ರಮ ಸಹಕಾರಿಯಾಗಲಿದೆ.

ಜಂಗಲ್ ಸಫಾರಿ ಸಂಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದರಿಂದ ಪ್ರವಾಸಿ ಮಾರ್ಗದರ್ಶಕರು, ಸಫಾರಿ ವಾಹನ ಚಾಲಕರು ಹಾಗೂ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳ ಜನರ ಜೀವನೋಪಾಯಕ್ಕೂ ಇದು ನೇರವಾಗಿ ನೆರವಾಗಲಿದೆ.

ಇದರ ಜೊತೆಗೆ ಹೋಂಸ್ಟೇಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಸ್ಥಳೀಯ ಪ್ರವಾಸೋದ್ಯಮ ಸೇವೆಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೊಸ ಚೈತನ್ಯ ಸಿಗಲಿದ್ದು, ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಇದು ಮಹತ್ವದ ಉತ್ತೇಜನ ನೀಡಲಿದೆ.

ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ಹೊರಡಿಸಿದ್ದು, “ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವುದರ ಜೊತೆಗೆ ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ಒದಗಿಸುವ ಸುಸ್ಥಿರ ಪರಿಸರ ಪ್ರವಾಸೋದ್ಯಮ ಮಾದರಿಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದೆ.

Continue Reading

ಅಪರಾಧ

ಕರ್ತವ್ಯದ ವೇಳೆ ಪೊಲೀಸ್ ಠಾಣೆಯಲ್ಲಿ ರೋಮ್ಯಾನ್ಸ್: ತನಿಖೆಗೆ ಆದೇಶ

Published

on

ಲಕ್ನೋ: ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಉರೈ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪೊಲೀಸ್ ಠಾಣೆಯ ಕಂಟ್ರೋಲ್ ರೂಂನಲ್ಲೇ ಮಹಿಳಾ ತರಬೇತಿ ಪೇದೆಯೊಬ್ಬರು ತಮ್ಮ ಸಹೋದ್ಯೋಗಿಯನ್ನು ತಬ್ಬಿಕೊಂಡು ಮುತ್ತಿಡಲು ಯತ್ನಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪುರುಷ ಪೇದೆ ಅರವಿಂದ್ ಪಟೇಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 2018ರ ಬ್ಯಾಚ್‌ಗೆ ಸೇರಿದ ಅರವಿಂದ್ ಪಟೇಲ್ ಅವರು ಸದ್ಯ ಉರೈ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ಅರವಿಂದ್ ಪಟೇಲ್ ಕಂಟ್ರೋಲ್ ರೂಂನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದರು. ಅವರು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಮಹಿಳಾ ತರಬೇತಿ ಪೇದೆಯೊಬ್ಬರು ಹಿಂದಿನಿಂದ ಬಂದು ಅವರ ಹೆಗಲ ಮೇಲೆ ಕೈಹಾಕಿ ಮುತ್ತಿಡಲು ಯತ್ನಿಸಿದ್ದಾರೆ. ಈ ವೇಳೆ ಅರವಿಂದ್ ಕುರ್ಚಿಯಿಂದ ಎದ್ದು ದೂರ ಸರಿಯಲು ಪ್ರಯತ್ನಿಸಿದರೂ, ಮಹಿಳಾ ಪೇದೆ ಅವರನ್ನು ಹಿಂಬಾಲಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಘಟನೆಯ ಸಮಯದಲ್ಲಿ ಇಬ್ಬರೂ ನಾಗರಿಕ ಉಡುಪಿನಲ್ಲಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಯಂತಹ ಸೂಕ್ಷ್ಮ ಭದ್ರತಾ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಇಲಾಖಾ ಕ್ರಮ ಕೈಗೊಂಡಿದ್ದಾರೆ.

ಜಾಲೌನ್ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದು, ವೈರಲ್ ವಿಡಿಯೊವನ್ನು ಪರಿಶೀಲಿಸಿದ ಬಳಿಕ ಪೇದೆ ಅರವಿಂದ್ ಪಟೇಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಲಾಗಿದೆ.

ತನಿಖಾ ವರದಿ ಬಂದ ಬಳಿಕ ಪ್ರಕರಣದಲ್ಲಿ ಯಾರ ಹೊಣೆಗಾರಿಕೆ ಎಷ್ಟಿದೆ ಎಂಬುದನ್ನು ಪರಿಶೀಲಿಸಿ, ಪೊಲೀಸ್ ಇಲಾಖೆಯ ನಿಯಮಾವಳಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿಯ ನಡೆ-ನುಡಿಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ಬೈರಮಂಗಲದಲ್ಲಿ ಸಿಎಂಗೆ ಕಾಯುತ್ತೇನೆ: ರೈತರ ಭೂಮಿ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದ ಎಚ್‌ಡಿಕೆ

Published

on

ಬೆಂಗಳೂರು: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ವಾಗ್ವಾದ ತೀವ್ರಗೊಂಡಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರನ್ನು ಬೆದರಿಸಿ ಅಥವಾ ಬಲವಂತವಾಗಿ ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ನಾಳೆ (ಶನಿವಾರ) ಮಧ್ಯಾಹ್ನದವರೆಗೂ ನಾನು ಬೈರಮಂಗಲ ಸರ್ಕಲ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಕಾಯುತ್ತೇನೆ. ಅವರು ಬಂದರೆ ಸಂತೋಷ. ರೈತರ ಎದುರಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ” ಎಂದು ಆಹ್ವಾನ ನೀಡಿದರು.

ಬೈರಮಂಗಲಕ್ಕೆ ಯಾವುದೇ ಗಲಾಟೆ ಅಥವಾ ಸಂಘರ್ಷ ಸೃಷ್ಟಿಸಲು ಹೋಗುತ್ತಿಲ್ಲ. ರೈತರ ಶಾಂತಿಯುತ ಪ್ರತಿಭಟನೆಗೆ ಬೆಂಬಲ ಸೂಚಿಸಲು ತೆರಳುತ್ತಿದ್ದೇವೆ ಎಂದು ಅವರು ಹೇಳಿದರು. ಅಲ್ಲದೆ, ಸರ್ಕಾರ ಸೆಕ್ಷನ್ 144 ಜಾರಿಗೊಳಿಸಲು ಮುಂದಾಗಿರುವುದನ್ನು ಪ್ರಶ್ನಿಸಿದ ಅವರು, ಕೆಲ ರೈತರು ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಸಿದ್ಧರಿದ್ದರೆ ಅದಕ್ಕೆ ವಿರೋಧವಿಲ್ಲ. ಆದರೆ ಇಡೀ ರೈತ ಸಮುದಾಯದ ಮೇಲೆ ಒತ್ತಡ ಹೇರಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ತಮ್ಮ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾಡಿರುವ ದುಬಾರಿ ವಾಚ್ ಆರೋಪಕ್ಕೂ ಕುಮಾರಸ್ವಾಮಿ ತಿರುಗೇಟು ನೀಡಿದರು. ಸುದ್ದಿಗೋಷ್ಠಿಯಲ್ಲೇ ತಮ್ಮ ಕೈಗಡಿಯಾರವನ್ನು ತೋರಿಸಿದ ಅವರು, “ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಸಾಮಾನ್ಯ ವಾಚ್. ನನ್ನ ಬಳಿ ದುಬಾರಿ ವಾಚ್‌ಗಳಿವೆ ಎಂದು ಭಾವಿಸಿದರೆ, ಅವರದ್ದೇ ಸರ್ಕಾರವಿದೆ. ಎಸ್‌ಐಟಿ ತನಿಖೆ ನಡೆಸಲಿ” ಎಂದು ಸವಾಲು ಹಾಕಿದರು.

ಇನ್ನೊಂದೆಡೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನ ನೀಡಿದ್ದರೂ, ರೈತರ ಸಮಸ್ಯೆ ರೈತರ ಸಮ್ಮುಖದಲ್ಲೇ ಚರ್ಚೆಯಾಗಬೇಕು ಎಂಬ ಕಾರಣಕ್ಕೆ ಕುಮಾರಸ್ವಾಮಿ ಮರುಪತ್ರ ಬರೆದಿದ್ದಾರೆ ಎಂದು ತಿಳಿಸಿದರು. ಆದರೆ, ಆ ಪತ್ರಕ್ಕೆ ಮುಖ್ಯಮಂತ್ರಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಡೆಸುತ್ತಿರುವ ಪೋಸ್ಟರ್ ಅಭಿಯಾನವನ್ನೂ ನಿಖಿಲ್ ಟೀಕಿಸಿದರು. ಪೋಸ್ಟರ್ ರಾಜಕೀಯ ಕಾಂಗ್ರೆಸ್‌ಗೆ ಹೊಸದೇನಲ್ಲ. ಹಿಂದೆ ಬಿಜೆಪಿ ಸರ್ಕಾರದ ವಿರುದ್ಧವೂ ಇದೇ ರೀತಿಯ ಅಭಿಯಾನ ನಡೆಸಿತ್ತು. ಆದರೆ ನಾವು ಅಂತಹ ಸಣ್ಣತನದ ರಾಜಕೀಯ ಮಾಡುವುದಿಲ್ಲ. ಇದು ದೇವೇಗೌಡರ ಕುಟುಂಬದ ವಿಚಾರವಲ್ಲ, ರೈತರ ಬದುಕಿನ ಪ್ರಶ್ನೆ ಎಂದು ಅವರು ಹೇಳಿದರು.

ವಾಚ್ ವಿವಾದದ ಕುರಿತು ಪ್ರತಿಕ್ರಿಯಿಸಿದ ನಿಖಿಲ್, “ಪ್ರದೀಪ್ ಈಶ್ವರ್ ಪ್ರಚಾರ ಪ್ರಿಯರು. ಅಂತಹ ಹೇಳಿಕೆಗಳಿಗೆ ಉತ್ತರ ನೀಡಿ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ” ಎಂದು ವ್ಯಂಗ್ಯವಾಡಿದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ವಿಚಾರ ಇದೀಗ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Continue Reading

Trending