ಅಪರಾಧ
ಪ್ರೇಮ ಕಲಹಕ್ಕೆ ಭೀಕರ ಅಂತ್ಯ! ತುಮಕೂರು ಹೆದ್ದಾರಿಯಲ್ಲಿ ಕಾರಿನೊಳಗೆ ಬೆಂಕಿ ದುರಂತ
ತುಮಕೂರು: ಪ್ರೇಮಿಗಳ ನಡುವಿನ ವೈಯಕ್ತಿಕ ಮನಸ್ತಾಪ ಭೀಕರ ದುರಂತಕ್ಕೆ ತಿರುಗಿದ ಘಟನೆ ತುಮಕೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಸಿರಾ ಸಮೀಪದ ಜೋಗಿಹಳ್ಳಿ ಬಳಿ ನಡೆದಿದೆ. ಯುವಕನೊಬ್ಬ ತನ್ನ ಪ್ರೇಯಸಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಕಾರಿನೊಳಗೆ ಸ್ಫೋಟಕ ದ್ರವ ಬಳಸಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತನನ್ನು ಬೆಂಗಳೂರಿನ ನಾಗೇಂದ್ರ ಎಂದು ಗುರುತಿಸಲಾಗಿದ್ದು, ಗಾಯಾಳು ರಮ್ಯಾ ಬೆಂಗಳೂರಿನ ಜಯನಗರದಲ್ಲಿ ವಾಸವಿದ್ದು, ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಓಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ಸುಮಾರು ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಂಟಾದ ಮನಸ್ತಾಪದಿಂದ ರಮ್ಯಾ ನಾಗೇಂದ್ರನ ಸಂಪರ್ಕವನ್ನು ಕಡಿತಗೊಳಿಸಿದ್ದಳು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ನಾಗೇಂದ್ರ ಶನಿವಾರ ಬೆಳಗ್ಗೆ ರಮ್ಯಾಳ ನಿವಾಸಕ್ಕೆ ತೆರಳಿ ಗಲಾಟೆ ನಡೆಸಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ಬಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಪ್ರಯಾಣದ ವೇಳೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಕಾರಿನಲ್ಲಿ ಸ್ಫೋಟಕ ದ್ರವವನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಸಿರಾ ಸಮೀಪದ ಜೋಗಿಹಳ್ಳಿ ಬಳಿ ಕಾರು ತಲುಪುತ್ತಿದ್ದಂತೆ ನಾಗೇಂದ್ರ, ರಮ್ಯಾಳ ತಲೆ ಮತ್ತು ಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಮಯಪ್ರಜ್ಞೆ ಮೆರೆದ ರಮ್ಯಾ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಳಿಕ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡು ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ
ಕರ್ತವ್ಯದ ವೇಳೆ ಪೊಲೀಸ್ ಠಾಣೆಯಲ್ಲಿ ರೋಮ್ಯಾನ್ಸ್: ತನಿಖೆಗೆ ಆದೇಶ
ಲಕ್ನೋ: ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಉರೈ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪೊಲೀಸ್ ಠಾಣೆಯ ಕಂಟ್ರೋಲ್ ರೂಂನಲ್ಲೇ ಮಹಿಳಾ ತರಬೇತಿ ಪೇದೆಯೊಬ್ಬರು ತಮ್ಮ ಸಹೋದ್ಯೋಗಿಯನ್ನು ತಬ್ಬಿಕೊಂಡು ಮುತ್ತಿಡಲು ಯತ್ನಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪುರುಷ ಪೇದೆ ಅರವಿಂದ್ ಪಟೇಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 2018ರ ಬ್ಯಾಚ್‌ಗೆ ಸೇರಿದ ಅರವಿಂದ್ ಪಟೇಲ್ ಅವರು ಸದ್ಯ ಉರೈ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ಅರವಿಂದ್ ಪಟೇಲ್ ಕಂಟ್ರೋಲ್ ರೂಂನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದರು. ಅವರು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಮಹಿಳಾ ತರಬೇತಿ ಪೇದೆಯೊಬ್ಬರು ಹಿಂದಿನಿಂದ ಬಂದು ಅವರ ಹೆಗಲ ಮೇಲೆ ಕೈಹಾಕಿ ಮುತ್ತಿಡಲು ಯತ್ನಿಸಿದ್ದಾರೆ. ಈ ವೇಳೆ ಅರವಿಂದ್ ಕುರ್ಚಿಯಿಂದ ಎದ್ದು ದೂರ ಸರಿಯಲು ಪ್ರಯತ್ನಿಸಿದರೂ, ಮಹಿಳಾ ಪೇದೆ ಅವರನ್ನು ಹಿಂಬಾಲಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಘಟನೆಯ ಸಮಯದಲ್ಲಿ ಇಬ್ಬರೂ ನಾಗರಿಕ ಉಡುಪಿನಲ್ಲಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಠಾಣೆಯಂತಹ ಸೂಕ್ಷ್ಮ ಭದ್ರತಾ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಇಲಾಖಾ ಕ್ರಮ ಕೈಗೊಂಡಿದ್ದಾರೆ.
ಜಾಲೌನ್ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದು, ವೈರಲ್ ವಿಡಿಯೊವನ್ನು ಪರಿಶೀಲಿಸಿದ ಬಳಿಕ ಪೇದೆ ಅರವಿಂದ್ ಪಟೇಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಲಾಗಿದೆ.
ತನಿಖಾ ವರದಿ ಬಂದ ಬಳಿಕ ಪ್ರಕರಣದಲ್ಲಿ ಯಾರ ಹೊಣೆಗಾರಿಕೆ ಎಷ್ಟಿದೆ ಎಂಬುದನ್ನು ಪರಿಶೀಲಿಸಿ, ಪೊಲೀಸ್ ಇಲಾಖೆಯ ನಿಯಮಾವಳಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿಯ ನಡೆ-ನುಡಿಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಅಪರಾಧ
ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಯುವತಿ ರಂಪಾಟ: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ
ದಾವಣಗೆರೆ: ಮದ್ಯದ ಅಮಲಿನಲ್ಲಿ ಥಾರ್ ಕಾರು ಚಲಾಯಿಸುತ್ತಿದ್ದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವತಿಯೊಬ್ಬಳು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಯುವತಿ ಕಂಠಪೂರ್ತಿ ಮದ್ಯ ಸೇವಿಸಿ ಥಾರ್ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದಳು. ಈ ವೇಳೆ ಶಾಮನೂರು ರಸ್ತೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯಲ್ಲಿ ನಿರತರಾಗಿದ್ದ ಪೊಲೀಸರು ಅನುಮಾನಗೊಂಡು ಕಾರನ್ನು ತಡೆದು ಪರಿಶೀಲನೆಗೆ ಮುಂದಾದರು.
ಪೊಲೀಸರು ವಾಹನ ನಿಲ್ಲಿಸಿದ ತಕ್ಷಣವೇ ಯುವತಿ ಆಕ್ರೋಶಗೊಂಡು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪಿಎಸ್‌ಐ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿಯ ವರ್ತನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಯುವತಿ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದು ಮತ್ತು ಸ್ಥಳದಲ್ಲಿ ಗದ್ದಲ ಉಂಟಾಗಿರುವುದು ಕಂಡುಬರುತ್ತಿದೆ.
ಘಟನೆಯ ಬಳಿಕ ಪೊಲೀಸರು ಯುವತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸೇರಿದಂತೆ ವಿವಿಧ ಆರೋಪಗಳಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳ ವಿರುದ್ಧ ರಾಜ್ಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆದಿರುವ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ.
ಅಪರಾಧ
Yeshwanthtpura : ಅಕ್ರಮ ಲೇಔಟ್‌ಗೆ ‘ಎ’ ಖಾತಾ ನೀಡಿದ ಆರೋಪ: ಹೇರೋಹಳ್ಳಿ ಎಆರ್‌ಒ ಅಮಾನತು
ಬೆಂಗಳೂರು: ಅಕ್ರಮ ಲೇಔಟ್‌ನಲ್ಲಿರುವ ಜಾಗಗಳಿಗೆ ‘ಎ’ ಖಾತಾ (A Khata) ನೀಡಲು ಅಧಿಕೃತ ದಾಖಲೆಗಳಲ್ಲಿ ತಿದ್ದುಪಡಿ ನಡೆಸಿದ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೇರೋಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ (ARO) ಕೆ.ಎಸ್. ಮಂಜುಳಾ ಅವರನ್ನು ಅಮಾನತುಗೊಳಿಸಿದೆ.
ಬೆಂಗಳೂರು ಪಶ್ಚಿಮ ನಗರ ನಿಗಮ ವ್ಯಾಪ್ತಿಯ ಹೇರೋಹಳ್ಳಿ ವಾರ್ಡ್‌ನಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಅನಧಿಕೃತ ಲೇಔಟ್‌ನ 50ಕ್ಕೂ ಹೆಚ್ಚು ನಿವೇಶನಗಳಿಗೆ ಖಾತಾ ಮಂಜೂರು ಮಾಡಲು ಅಧಿಕೃತ ದಾಖಲೆಗಳನ್ನು ತಿರುಚಿ, ಕೈಬರಹದ ನೋಂದಣಿಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ನಾಯಕ N. R. Ramesh ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿತ್ತು.
ಜಂಟಿ ಆಯುಕ್ತರು ಸಲ್ಲಿಸಿದ ವರದಿಯ ಆಧಾರದಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ವರದಿಯ ಪ್ರಕಾರ, ಸಂಬಂಧಿತ ಲೇಔಟ್‌ಗೆ ಯೋಜನಾ ಪ್ರಾಧಿಕಾರಗಳಿಂದ ಯಾವುದೇ ಅನುಮೋದನೆ ದೊರೆತಿರಲಿಲ್ಲ. ಆದರೂ ಕಂದಾಯ ವಿಭಾಗದಲ್ಲಿ ನಿರ್ವಹಿಸಲಾಗುತ್ತಿದ್ದ ಕೈಬರಹದ ದಾಖಲೆಗಳನ್ನು ತಿರುಚಿ ಖಾಸಗಿ ವ್ಯಕ್ತಿಗಳ ಹೆಸರಿಗೆ 50ಕ್ಕೂ ಹೆಚ್ಚು ಖಾತಾಗಳನ್ನು ಸೃಷ್ಟಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಕಂದಾಯ) Munish Moudgil ತಮ್ಮ ವರದಿಯಲ್ಲಿ, ಇದು ಅಧಿಕೃತ ದಾಖಲೆಗಳ ತಿರುಚುವಿಕೆಯ ಅತ್ಯಂತ ಗಂಭೀರ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ. ಮೂಲ ದಾಖಲೆಗಳಲ್ಲಿ ಒಂದು ಹೆಸರಿನಲ್ಲಿದ್ದ ಆಸ್ತಿಗಳನ್ನು ಮತ್ತೊಬ್ಬರ ಹೆಸರಿಗೆ ವರ್ಗಾಯಿಸಿ, ಅಗತ್ಯ ದಾಖಲೆಗಳು ಹಾಗೂ ಸಮರ್ಥ ಪ್ರಾಧಿಕಾರದ ಅನುಮೋದನೆ ಇಲ್ಲದೇ ‘ಎ’ ಖಾತಾ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅಕ್ರಮಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ನಷ್ಟ ಉಂಟಾಗಿರುವ ಸಾಧ್ಯತೆಯಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಜಿಬಿಎ ಕೈಗೊಂಡಿರುವ ಈ ಕ್ರಮವು ಕಂದಾಯ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
-
ದೇಶ50 minutes ago‘ಖಬರ್ದಾರ್ ಕುಮಾರಣ್ಣ, ನಿಮ್ಮ ಚೇಲಾಗಳಿಗೆ ಹೆದರಲ್ಲ’ : ಪ್ರದೀಪ್ ಈಶ್ವರ್ ಆಕ್ರೋಶ!
-
ದೇಶ2 hours agoತೊಡೆ ತಟ್ಟಿ ಸವಾಲು ಹಾಕಿದ ಪ್ರದೀಪ್ ಈಶ್ವರ್; ಲಾಠಿ ಪ್ರಹಾರ ನಡೆಸಿದ ಪೊಲೀಸರು
-
ದೇಶ2 hours agoಶೋಯೆಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್ ಉಗ್ರರ ಹಾಜರಿ? ವೈರಲ್ ವಿಡಿಯೋ ಹೊಸ ವಿವಾದಕ್ಕೆ ಕಾರಣ
-
ದೇಶ6 hours agoವಿಕಸಿತ ಭಾರತ 2047 ಗುರಿಗೆ ಕಾರ್ಮಿಕ ಸುಧಾರಣೆ, ಕೌಶಲ್ಯಾಭಿವೃದ್ಧಿ ಒತ್ತು: ಸಂಸದರು-ಶಾಸಕರಿಗೆ NFPRC ಕಾರ್ಯಾಗಾರ
-
ದೇಶ1 hour agoಬಿಡದಿ ಟೌನ್ಶಿಪ್ ಹೋರಾಟದಲ್ಲಿ ಹೈಡ್ರಾಮಾ! ಡಿಕೆಶಿಗೆ ಖಾಲಿ ಕುರ್ಚಿ ಇಟ್ಟ ಕುಮಾರಸ್ವಾಮಿ
-
ದೇಶ58 minutes agoಬಿಜೆಪಿಯಲ್ಲಿ ಅಡ್ಡ ಮತದಾನಕ್ಕೆ ತನಿಖೆ ಅಂತ್ಯ! ಯಾರ ವಿರುದ್ಧ ಶಿಸ್ತು ಕ್ರಮ?
-
ಕ್ರೀಡೆ39 minutes agoFIFA WORLD CUP 2026ರಲ್ಲಿ ಹೊಸ ದಾಖಲೆಗಳ ಸುರಿಮಳೆ! ಆಟಗಾರರ ಧರ್ಮಕ್ಕೆ ಗೌರವ ನೀಡಿ ಪ್ರಶಸ್ತಿಯಲ್ಲಿ ಮಹತ್ವದ ಬದಲಾವಣೆ
-
ದೇಶ33 minutes agoಆರ್ಎಸ್ಎಸ್ ನೋಂದಣಿಗೆ ಪೇಜಾವರ ಶ್ರೀ ಬೆಂಬಲ! ರಾಮಮಂದಿರ ಹಗರಣದ ಎಸ್ಐಟಿ ತನಿಖೆಗೆ ಸ್ವಾಗತ
