Connect with us

ದೇಶ

ಗ್ಯಾರಂಟಿ ಯೋಜನೆ ನಿಲ್ಲಲ್ಲ, 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ: ಡಿಕೆ ಶಿವಕುಮಾರ್

Published

on

ಬೆಳಗಾವಿ, ಜು.10: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.

ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪಕ್ಷದ ನಾಯಕತ್ವದೊಂದಿಗೆ 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯ ಕುರಿತು ಸಿಎಜಿ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಯುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದ ಅವರು, ಮೊದಲ ಬಾರಿಗೆ ಮತದಾನ ಮಾಡುವ ಯುವಕರ ನೋಂದಣಿಗೂ ಒತ್ತು ನೀಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರ ಹೆಸರೂ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಕಾರ್ಯಕರ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಸ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದ ಸಿಎಂ, ಕಾರ್ಯಕರ್ತರು ಯಾವುದೇ ಬೇಸರವಿಲ್ಲದೆ ಪಕ್ಷ ಸಂಘಟನೆಗೆ ಒತ್ತು ನೀಡಿ ಚುನಾವಣೆಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು, ಅಭಿವೃದ್ಧಿ ಮತ್ತು ಜನಕಲ್ಯಾಣವೇ ಸರ್ಕಾರದ ಪ್ರಮುಖ ಆದ್ಯತೆ ಎಂದು ಹೇಳಿದರು.

ಆರೋಗ್ಯ

ಮೆಡಿಕಲ್ ಶಾಪ್‌ಗಳಿಗೆ ಹೊಸ ಮಾರ್ಗಸೂಚಿ: ಔಷಧ ಮಾರಾಟದ ದಾಖಲೆ 3 ವರ್ಷ ಕಡ್ಡಾಯ

Published

on

ನವದೆಹಲಿ: ಕೆಮ್ಮಿನ ಸಿರಪ್ (Cough Syrup) ಹಾಗೂ ಟಾನಿಕ್‌ಗಳಂತಹ ದ್ರವರೂಪದ ಔಷಧಿಗಳ ದುರುಪಯೋಗವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೇಕಡಾ 12ಕ್ಕಿಂತ ಹೆಚ್ಚು ಈಥೈಲ್ ಆಲ್ಕೋಹಾಲ್ (Ethyl Alcohol) ಹೊಂದಿರುವ ಹಾಗೂ 30 ಮಿಲಿಗಿಂತ ದೊಡ್ಡ ಬಾಟಲಿಗಳಲ್ಲಿ ಮಾರಾಟವಾಗುವ ಎಲ್ಲಾ ಕುಡಿಯುವ ಔಷಧಿಗಳನ್ನು ಇನ್ನು ಮುಂದೆ ಷೆಡ್ಯೂಲ್ H1 (Schedule H1) ನಿಯಮಾವಳಿಯ ಅಡಿಯಲ್ಲಿ ತರಲಾಗಿದೆ. ಇದರಿಂದ ಇಂತಹ ಔಷಧಿಗಳನ್ನು ಖರೀದಿಸಲು ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಕಡ್ಡಾಯವಾಗಲಿದೆ.

ಡ್ರಗ್ಸ್ ರೂಲ್ಸ್, 1945ಕ್ಕೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವ ಕೆಲವು ಕೆಮ್ಮಿನ ಸಿರಪ್ ಹಾಗೂ ಟಾನಿಕ್‌ಗಳನ್ನು ನಶೆಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ ಹಾಗೂ ಸಂಬಂಧಿತ ನಿಯಂತ್ರಣ ಸಮಿತಿಗಳ ಶಿಫಾರಸಿನ ಮೇರೆಗೆ ಈ ಕ್ರಮ ಜಾರಿಗೊಳಿಸಲಾಗಿದೆ.

ಹೊಸ ನಿಯಮದಂತೆ ಮೆಡಿಕಲ್ ಶಾಪ್‌ಗಳು ವೈದ್ಯರ ಚೀಟಿ ಇಲ್ಲದೆ ಈ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ. ಜೊತೆಗೆ, ಇಂತಹ ಔಷಧಿಗಳನ್ನು ಖರೀದಿಸಿದ ಗ್ರಾಹಕರ ವಿವರಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಹಾಗೂ ಮಾರಾಟದ ದಾಖಲೆಗಳನ್ನು ಕನಿಷ್ಠ ಮೂರು ವರ್ಷಗಳ ಕಾಲ ಸುರಕ್ಷಿತವಾಗಿ ಸಂಗ್ರಹಿಸಿ, ಔಷಧ ನಿಯಂತ್ರಣ ಅಧಿಕಾರಿಗಳ ಪರಿಶೀಲನೆ ವೇಳೆ ಸಲ್ಲಿಸಬೇಕು.

ತಜ್ಞರ ಪ್ರಕಾರ, ಈ ನಿಯಮದಿಂದ ಸಾಮಾನ್ಯ ರೋಗಿಗಳು ಆತಂಕಪಡುವ ಅಗತ್ಯವಿಲ್ಲ. ವೈದ್ಯರ ಸಲಹೆಯಂತೆ ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಈ ಔಷಧಿಗಳು ಸುರಕ್ಷಿತವಾಗಿರುತ್ತವೆ. ಆದರೆ ವೈದ್ಯರ ಮೇಲ್ವಿಚಾರಣೆ ಇಲ್ಲದೆ ಅತಿಯಾಗಿ ಸೇವಿಸುವುದು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಯಕೃತ್ತಿನ ಸಮಸ್ಯೆಯಿರುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಔಷಧಿಗಳ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ.

Continue Reading

ದೇಶ

Love him or Hate him : ಆಸ್ಟ್ರೇಲಿಯಾದಲ್ಲಿ ಮೋದಿ ಕಾರ್ಯಕ್ರಮಕ್ಕೆ ಜನಸಾಗರ: ಭಾವುಕರಾದ ಪ್ರಧಾನಿ ಅಲ್ಬನೀಸ್

Published

on

ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮೆಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂ (Marvel Stadium) ನಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಅದ್ಧೂರಿ ಸ್ವಾಗತ ಕೋರಿತು. ಸಾವಿರಾರು ಭಾರತೀಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾಡಿದ ವಿಶೇಷ ಮನವಿಗೆ ಸ್ಪಂದಿಸಿದ ಜನರು ಮೊಬೈಲ್ ಫೋನ್‌ಗಳ ಫ್ಲ್ಯಾಶ್‌ಲೈಟ್ ಆನ್ ಮಾಡಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರಿಗೆ ಗೌರವ ಸಲ್ಲಿಸಿದ ಕ್ಷಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಸುಮಾರು 30 ಸಾವಿರಕ್ಕೂ ಹೆಚ್ಚು ಭಾರತೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿಯವರ ಭಾಷಣವನ್ನು ಆಲಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ವಿಕ್ಟೋರಿಯಾ ರಾಜ್ಯದ ಪ್ರೀಮಿಯರ್ ಜಸಿಂತಾ ಆಲನ್ ಕೂಡ ಉಪಸ್ಥಿತರಿದ್ದರು. ಭಾಷಣ ಆರಂಭಿಸುವ ಮೊದಲು ಮಾತನಾಡಿದ ಪ್ರಧಾನಿ ಮೋದಿ, “ನನ್ನ ಮಿತ್ರ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ವಿಕ್ಟೋರಿಯಾ ಸರ್ಕಾರಕ್ಕೆ ಗೌರವ ಸೂಚಿಸುವ ಸಲುವಾಗಿ ಎಲ್ಲರೂ ನಿಮ್ಮ ಮೊಬೈಲ್ ಫೋನ್‌ಗಳ ಫ್ಲ್ಯಾಶ್‌ಲೈಟ್ ಆನ್ ಮಾಡಿ” ಎಂದು ಮನವಿ ಮಾಡಿದರು.

ಮೋದಿ ಅವರ ಮನವಿಗೆ ಕ್ಷಣಾರ್ಧದಲ್ಲೇ ಸಾವಿರಾರು ಜನರು ಸ್ಪಂದಿಸಿದರು. ಬೆಳಕಿನಿಂದ ಕಂಗೊಳಿಸಿದ ಕ್ರೀಡಾಂಗಣವನ್ನು ಕಂಡ ಪ್ರಧಾನಿ ಅಲ್ಬನೀಸ್ ಎದ್ದು ನಿಂತು ಕೈಮುಗಿದು ಧನ್ಯವಾದ ಅರ್ಪಿಸಿದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಈ ವೇಳೆ ಪ್ರಧಾನಿ ಮೋದಿ ಭಾರತ-ಆಸ್ಟ್ರೇಲಿಯಾ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮಾತನಾಡಿದರು. ತಮ್ಮ ಭಾಷಣದಲ್ಲಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಕುರಿತು ಉಲ್ಲೇಖಿಸಿ, ದೇಶದ ಭದ್ರತೆ ಹಾಗೂ ಸಶಸ್ತ್ರ ಪಡೆಗಳ ಸಾಹಸವನ್ನು ಶ್ಲಾಘಿಸಿದರು. ಮೆಲ್ಬೋರ್ನ್ ಕಾರ್ಯಕ್ರಮವು ಭಾರತೀಯ ಸಮುದಾಯದ ಉತ್ಸಾಹ ಹಾಗೂ ಉಭಯ ದೇಶಗಳ ಬಲವಾದ ಬಾಂಧವ್ಯವನ್ನು ಮತ್ತೊಮ್ಮೆ ಜಗತ್ತಿನ ಗಮನಕ್ಕೆ ತಂದಿದೆ.

Continue Reading

ದೇಶ

ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಗುಡ್ ನ್ಯೂಸ್! ಫುಟ್‌ಪಾತ್‌ಗಳು ಮತ್ತೆ ಸಾರ್ವಜನಿಕರಿಗಾಗಿ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ಫುಟ್‌ಪಾತ್‌ಗಳ (Footpath) ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿ ಬಿಡಾಡಿ ವಾಹನಗಳಿಗೆ ನೋಟಿಸ್ ಅಂಟಿಸುವ ಮೂಲಕ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಪಾದಚಾರಿ ಮಾರ್ಗ ತೆರವು ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗಗಳಲ್ಲಿ ಸುರಕ್ಷಿತವಾಗಿ ಸಂಚರಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸಚಿವರು ತಿಳಿಸಿದರು. ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 931 ಪಾದಚಾರಿಗಳು ಮೃತಪಟ್ಟಿದ್ದು, 3,800ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಅಂಕಿಅಂಶಗಳು ಆತಂಕ ಮೂಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಫುಟ್‌ಪಾತ್‌ಗಳ ಮೇಲಿನ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ ಫುಟ್‌ಪಾತ್ ಆಕ್ರಮಿಸಿಕೊಂಡಿದ್ದ 1,581 ರಾಂಪ್ ಮತ್ತು ಮೆಟ್ಟಿಲುಗಳು, 1,790 ಅಂಗಡಿಗಳ ಮುಂಭಾಗದ ಅನಧಿಕೃತ ಶೆಡ್‌ಗಳು ಹಾಗೂ ಶಾಶ್ವತ ನಿರ್ಮಾಣಗಳು, ಜೊತೆಗೆ 2,200ಕ್ಕೂ ಹೆಚ್ಚು ಸೈನ್‌ಬೋರ್ಡ್ ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಪಾದಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಈ ಕಾರ್ಯಾಚರಣೆ ಬೀದಿಬದಿ ವ್ಯಾಪಾರಿಗಳ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಅವರ ಜೀವನೋಪಾಯಕ್ಕೂ ಸರ್ಕಾರ ಬೆಂಬಲ ನೀಡಲಿದೆ ಎಂದರು. ಪ್ರೊವಿಷನಲ್ ಟೌನ್ ವೆಂಡಿಂಗ್ ಕಮಿಟಿ ರಚಿಸಿ, ಅರ್ಹ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪರ್ಯಾಯ ವ್ಯಾಪಾರ ಸ್ಥಳ ಕಲ್ಪಿಸಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ.

ಬೆಂಗಳೂರಿನ 15 ರಿಂದ 18 ಸಾವಿರ ಕಿಲೋಮೀಟರ್ ರಸ್ತೆ ಜಾಲದಲ್ಲಿ ಮೊದಲ ಹಂತದಲ್ಲಿ ಸುಮಾರು 1,000 ಕಿಲೋಮೀಟರ್ ಪ್ರಮುಖ ರಸ್ತೆಗಳನ್ನು ಗುರಿಯಾಗಿಸಿಕೊಂಡು ಈ ಅಭಿಯಾನ ನಡೆಯಲಿದೆ. ನಗರದ ಸುಂದರೀಕರಣ, ಪಾದಚಾರಿಗಳ ಸುರಕ್ಷತೆ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನುಷ್ಠಾನಕ್ಕಾಗಿ ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Continue Reading

Trending