Connect with us

ದೇಶ

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ, ಪರಿಹಾರಕ್ಕೆ ಮನವಿ

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ, ಪರಿಹಾರಕ್ಕೆ ಮನವಿ
ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ, ಪರಿಹಾರಕ್ಕೆ ಮನವಿ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್‌.ಡಿ.ಆರ್‌.ಎಫ್. ನಿಂದ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದ್ದಾರೆ.   ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ  ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು.

ಆದ್ದರಿಂದ ಅಕ್ಟೋಬರ್‌ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್‌.ಡಿ.ಆರ್.ಎಫ್. ಅಡಿ 17,901 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ12,577 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್‌ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಬರದಿಂದ ಸಂಕಷ್ಟದಲ್ಲಿರು ಕರ್ನಾಟಕದ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವಂತೆ ಕೋರಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬರ ಪರಿಸ್ಥಿತಿಯಲ್ಲಿ ನರೇಗಾ ಕೆಲಸವನ್ನು 100 ರಿಂದ 150 ದಿನಗಳಿಗೆ ಕಡ್ಡಾಯವಾಗಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಹೆಚ್ಚಿಸಲು 3 ತಿಂಗಳ ಹಿಂದೆಯೇ ನಾವು ಕೇಂದ್ರಕ್ಕೆ ಮನವಿಯನ್ನು  ಮಾಡಿದ್ದೇವೆ. ಈ ವರೆಗೆ ಮನವಿ ಈಡೇರಿಲ್ಲ. ಈ ಬಗ್ಗೆಯೂ ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ. ಮಹದಾಯಿ ವಿಚಾರದಲ್ಲಿ ಈಗಾಗಲೇ ಗೆಜೆಟ್ ಕೂಡ ಆಗಿದೆ. ಬೇರೆ ಅಡೆ ತಡೆ ಏನೂ ಇಲ್ಲ. ಪರಿಸರ ತೀರುವಳಿ ಮಾತ್ರ ಬಾಕಿ ಇದೆ. ಇದನ್ನು ಕೇಂದ್ರವೇ ಕೊಡಬೇಕು. ಇದುವರೆಗೂ ಕೊಟ್ಟಿಲ್ಲ. ಟೆಂಡರ್ ಕರೆದು ಎಸ್ಟಿಮೇಟ್ ಕೂಡ ಆಗಿದೆ. ಕೇಂದ್ರ ಕ್ಲಿಯರೆನ್ಸ್ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು. ಆದ್ದರಿಂದ ಬೇಗ ಕ್ಲಿಯರೆನ್ ಕೊಡಿಸುವಂತೆ ಒತ್ತಾಯಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ರೂ.5,300 ಕೋಟಿ ಘೋಷಿಸಿದ್ದರು‌. ಕೇಂದ್ರ ಸರ್ಕಾರದ ಘೋಷಣೆ ಆಧಾರದಲ್ಲಿ ಹಿಂದಿನ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ರೂ.5,300 ಕೋಟಿ ಘೋಷಿಸಿದ್ದರು. ಇವತ್ತಿನವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಕಮಿಟ್‌ಮೆಂಟ್. ನೀವೇ ಕೊಟ್ಟಿರುವ ಮಾತಿನಂತೆ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದೇವೆ.

ಮೇಕೆದಾಟು, ಕುಡಿಯುವ ನೀರಿನ ಯೋಜನೆ. ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವ ಯೋಜನೆ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಇದರಿಂದ ತಮಿಳುನಾಡಿಗೇ ಹೆಚ್ಚು ಅನುಕೂಲ. ನಮಗೆ ಕುಡಿಯುವ ನೀರಿನ ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ವಿದ್ಯುತ್ ಉತ್ಪಾದನೆ ಬಳಿಕ ಈ ನೀರು ಕೂಡ ತಮಿಳುನಾಡಿಗೇ ಹೋಗುತ್ತದೆ. ಇದರಿಂದಲೂ ಅವರಿಗೇ ಅನುಕೂಲ.  ಮೇಕೆದಾಟು ಆದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ ಆಗುತ್ತದೆ. ಆದ್ದರಿಂದ ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ ಪ್ರಧಾನಿಗಳ ಗಮನಕ್ಕೆ ತಂದು, ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.

ದೇಶ

ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ: “ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ”

ಮುಂಬೈ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಹಾಜರಾಗದ ಹಿನ್ನೆಲೆ, ಮುಂದಿನ ವಿಚಾರಣೆಯಲ್ಲಿಯೂ ಇದೇ ರೀತಿಯ ವರ್ತನೆ ತೋರಿದರೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರ ಪೀಠ, ಮಲ್ಯ ಭಾರತಕ್ಕೆ ಮರಳುವ ಉದ್ದೇಶ ಹೊಂದಿದ್ದಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲು “ಕೊನೆಯ ಅವಕಾಶ” ನೀಡಿದೆ.

“ನೀವು ಭಾರತಕ್ಕೆ ಹಿಂತಿರುಗಲೇಬೇಕು. ಹಿಂತಿರುಗದಿದ್ದರೆ ನಿಮ್ಮ ಅರ್ಜಿಯನ್ನು ನಾವು ವಿಚಾರಣೆ ನಡೆಸಲು ಸಾಧ್ಯವಿಲ್ಲ,” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


FEOA ಕಾಯ್ದೆ ಪ್ರಶ್ನೆ

ವಿಜಯ್ ಮಲ್ಯ ಅವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಹಾಗೂ ಅವರನ್ನು ‘Fugitive Economic Offender’ ಎಂದು ಘೋಷಿಸುವ ಪ್ರಕ್ರಿಯೆಗಳ ವಿರುದ್ಧದ ಅರ್ಜಿಯನ್ನು ನ್ಯಾಯಾಲಯ ವಿಚಾರಿಸುತ್ತಿದೆ.

ಡಿಸೆಂಬರ್‌ನಲ್ಲಿ ನ್ಯಾಯಪೀಠ, ಮಲ್ಯ ಭಾರತಕ್ಕೆ ಮರಳಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟರೆ ಮಾತ್ರ ಅವರ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿತ್ತು.

ನ್ಯಾಯಾಧೀಶರು, “ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ದೂರ ಓಡುತ್ತಿದ್ದೀರಿ. ಆದ್ದರಿಂದ ಸಮಾನ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.


ಇಡಿ ಪರ ವಾದ

ಜಾರಿ ನಿರ್ದೇಶನಾಲಯ (ED) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಲ್ಯ ಬ್ಯಾಂಕುಗಳ ಹಕ್ಕುಗಳನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿರುವುದನ್ನು ಉಲ್ಲೇಖಿಸಿ, ಅವರು ವಸೂಲಾತಿ ಪ್ರಕ್ರಿಯೆಗಳನ್ನು ಬೇರೆ ದಿಕ್ಕಿಗೆ ತಳ್ಳಲು ಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.

ಮಲ್ಯ ಅವರನ್ನು ಪರಾರಿಯಾಗಿದ್ದಾನೆಂದು ಘೋಷಿಸಿದ ನಂತರ ಹಾಗೂ ಲಂಡನ್‌ನಲ್ಲಿ ಹಸ್ತಾಂತರ ಪ್ರಕ್ರಿಯೆ ಮುಂದುವರಿದ ಹಂತದಲ್ಲಿದ್ದಾಗ ಮಾತ್ರ FEOAಗೆ ಸವಾಲು ಹಾಕಿದ್ದಾರೆ ಎಂದು ಮೆಹ್ತಾ ಹೇಳಿದರು.

“ಭಾರತೀಯ ನ್ಯಾಯಾಲಯಗಳಿಂದ ಪರಿಹಾರ ಕೇಳುವವರು ಭಾರತೀಯ ಕಾನೂನಿನ ಮೇಲೆ ನಂಬಿಕೆ ಇಡಬೇಕು,” ಎಂದು ಇಡಿ ಪರ ವಾದ ಮಂಡಿಸಲಾಯಿತು.


ಮಲ್ಯ ಪರ ವಾದ

ವಿಜಯ್ ಮಲ್ಯ ಪರ ವಕೀಲ ಅಮಿತ್ ದೇಸಾಯಿ, ಮಲ್ಯ ಭೌತಿಕವಾಗಿ ಭಾರತಕ್ಕೆ ಮರಳದಿದ್ದರೂ ಅವರ ಅರ್ಜಿಯನ್ನು ವಿಚಾರಣೆ ಮಾಡಬಹುದು ಎಂದು ವಾದಿಸಿದರು.

ಆದರೆ, ಮಲ್ಯ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರು ನಡೆದುಕೊಳ್ಳುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದು:

  • ಮಲ್ಯ ಭಾರತಕ್ಕೆ ಹಿಂದಿರುಗುವುದಿಲ್ಲವೆಂದು ಅಫಿಡವಿಟ್ ಸಲ್ಲಿಸಬಹುದು.
  • ಆದರೆ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
  • ದೇಶಕ್ಕೆ ಮರಳಲು ಇದು ಅಂತಿಮ ಅವಕಾಶ.

ಮುಂದಿನ ವಾರ ವಿಚಾರಣೆ ಮುಂದುವರಿಯಲಿದೆ.

Continue Reading

ಕ್ರೀಡೆ

IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ!”

ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಶಿವರಾತ್ರಿ ಹಬ್ಬದಂದೇ ನಡೆಯಲಿರುವ ಈ ನಿರ್ಣಾಯಕ ಸಮರಕ್ಕಾಗಿ ಎರಡೂ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಫೆ.12ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿದು ಗೆಲುವಿನ ಆತ್ಮವಿಶ್ವಾಸದೊಂದಿಗೆ ಪಾಕಿಸ್ತಾನ ಎದುರಿಸಲು ಸಜ್ಜಾಗಿದೆ.

ಈ ಮಧ್ಯೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಭಾರತಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ. ಅದಕ್ಕಾಗಿ ನನ್ನ ಬೌಲಿಂಗ್ ಶೈಲಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.


ಮಾತಿನ ಸಮರ ಜೋರಾಗಿದೆ

ಟಿ20 ವಿಶ್ವಕಪ್ ಈಗ ರೋಚಕ ಹಂತ ತಲುಪಿದ್ದು, ಈಗಾಗಲೇ 15ಕ್ಕೂ ಹೆಚ್ಚು ಪಂದ್ಯಗಳು ಪೂರ್ಣಗೊಂಡಿವೆ. ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ? ಎಂಬ ಅನುಮಾನಕ್ಕೆ ತೆರೆಬಿದ್ದಿದ್ದು, ಪಾಕಿಸ್ತಾನ ಪಂದ್ಯಕ್ಕೆ ಒಪ್ಪಿಗೆ ನೀಡಿದೆ.

ಪಂದ್ಯ ಖಚಿತವಾದ ಬೆನ್ನಲ್ಲೇ ಎರಡೂ ತಂಡಗಳ ನಡುವೆ ಮಾತಿನ ಸಮರ ಜೋರಾಗಿದೆ. ಪಾಕಿಸ್ತಾನಿ ಆಟಗಾರರು ಭಾರತವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದರೆ, ಭಾರತೀಯರು ಪಾಕಿಸ್ತಾನವನ್ನು ಮಣಿಸುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ.


ತಾರಿಕ್ ಸಮರ್ಥನೆ

ಭಾರತೀಯರು ನನ್ನ ಬೌಲಿಂಗ್ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಐಸಿಸಿ ನಿಯಮಗಳ ಪ್ರಕಾರ ನನ್ನ ಬೌಲಿಂಗ್ ಶೈಲಿ ಮಾನ್ಯವಾಗಿದೆ ಎಂದು ಉಸ್ಮಾನ್ ತಾರಿಕ್ ಸಮರ್ಥಿಸಿಕೊಂಡಿದ್ದಾರೆ.

“ಭಾರತೀಯ ಆಟಗಾರರಿಗೆ ನನ್ನ ಬೌಲಿಂಗ್‌ನಿಂದ ಹೆಚ್ಚುವರಿ ಒತ್ತಡ ಇದೆ. ಅದಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ. ಫೆಬ್ರವರಿ 15ರಂದು ಭಾರತದ ಅಗ್ರ ಕ್ರಮಾಂಕವನ್ನು ಕೆಡವುತ್ತೇನೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನನ್ನ ಬಗ್ಗೆ ಏನು ಚರ್ಚೆ ನಡೆಯುತ್ತಿದೆ ಎಂಬುದನ್ನು ನಾನು ಪರಿಗಣಿಸುವುದಿಲ್ಲ. ನನ್ನ ಗಮನ ಪಂದ್ಯದಲ್ಲೇ ಇದೆ” ಎಂದು ತಾರಿಕ್ ಹೇಳಿದ್ದಾರೆ.

Continue Reading

ದೇಶ

ಜೈರಾಮ್ ರಮೇಶ್‌ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”

ಹೊಸದಿಲ್ಲಿ: ಪರಿಸರ ಪರವಾನಿಗೆಗೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ಇದೆಲ್ಲವನ್ನೂ ನೀವು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾಡುತ್ತಿದ್ದೀರಾ?” ಎಂದು ತ್ರಿಸದಸ್ಯ ಪೀಠ ಕಿಡಿಕಾರಿತು.

ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ನ್ಯಾ. ಸೂರ್ಯಕಾಂತ್, ನ್ಯಾ. ಜಾಯ್‌ಮಾಲ್ಯ ಬಾಗ್ಚಿ ಹಾಗೂ ನ್ಯಾ. ಉಜ್ಜಲ್ ಭುಯಾನ್ ಇದ್ದರು. ಪರಿಸರ ಪರವಾನಿಗೆಯನ್ನು ಪೂರ್ವ ಅನ್ವಯವಾಗುವಂತೆ (Retrospective Environmental Clearance) ನೀಡುವ ಕ್ರಮವನ್ನು ಪ್ರಶ್ನಿಸಿ ಜೈರಾಮ್ ರಮೇಶ್ ರಿಟ್ ಅರ್ಜಿ ಸಲ್ಲಿಸಿದ್ದರು.

ರಿಟ್ ಅರ್ಜಿ ಸ್ವೀಕರಿಸಲು ನಿರಾಕರಣೆ

ವಿಚಾರಣೆ ವೇಳೆ ಪೀಠ, ಈ ಅರ್ಜಿ ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಹೈಲೆಟ್ ಮಾಡುವ ಬದಲು ಸಾರ್ವಜನಿಕ ಗಮನ ಸೆಳೆಯಲು ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟಿತು. ನವೆಂಬರ್ 2025ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಫೆ.12) ಸ್ವೀಕರಿಸಲು ನಿರಾಕರಿಸಿತು.

“ದಂಡ ಎದುರಿಸಲು ಸಿದ್ದರಾಗಿ” ಎಚ್ಚರಿಕೆ

“ತೀರ್ಪಿನ ವಿರುದ್ಧ ರಿಟ್ ಅರ್ಜಿ ಯಾಕೆ? ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸಬಹುದು ಅಲ್ಲವೇ? ರಿಟ್ ಮೂಲಕ ಮರುಪರಿಶೀಲನೆ ಸಾಧ್ಯವಿಲ್ಲ ಎಂಬುದು ತಿಳಿದಿಲ್ಲವೇ? ದಂಡ ಎದುರಿಸಲು ಸಿದ್ದರಾಗಿ” ಎಂದು ನ್ಯಾ. ಸೂರ್ಯಕಾಂತ್ ಎಚ್ಚರಿಸಿದರು.

ನ್ಯಾಯಾಲಯದ ಎಚ್ಚರಿಕೆಯ ಬಳಿಕ ಜೈರಾಮ್ ರಮೇಶ್ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ವಿನಂತಿಸಿಕೊಂಡರು. ನ್ಯಾಯಪೀಠ ಅದಕ್ಕೆ ಅನುಮತಿ ನೀಡಿ, ಕಾನೂನಿನ ಪ್ರಕಾರ ಲಭ್ಯವಿರುವ ಪರಿಹಾರವನ್ನು ಪಡೆಯುವಂತೆ ಸೂಚಿಸಿತು.


ಪ್ರಕರಣದ ಹಿನ್ನೆಲೆ

ಜೈರಾಮ್ ರಮೇಶ್ ಯಾವುದೇ ಯೋಜನೆ ಆರಂಭವಾದ ನಂತರ ಪರಿಸರ ಪರವಾನಿಗೆ ನೀಡುವ ಕ್ರಮವನ್ನು ಪ್ರಶ್ನಿಸಿದ್ದರು. ಈ ರೀತಿಯ ಅನುಮತಿ ಕಾನೂನುಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ವಾದಿಸಿದ್ದರು.

ಕೇಂದ್ರ ಸರ್ಕಾರದ ನಿಯಮ ಏನು?

  • 2006ರಲ್ಲಿ ಯೋಜನೆ ಆರಂಭಿಸುವ ಮೊದಲು ಪರಿಸರ ಪರವಾನಿಗೆ ಕಡ್ಡಾಯಗೊಳಿಸಲಾಗಿತ್ತು.
  • 2017 ಮತ್ತು 2021ರ ಅಧಿಸೂಚನೆಗಳ ಮೂಲಕ ಕೆಲವು ಯೋಜನೆಗಳಿಗೆ ಷರತ್ತುಬದ್ದ ಪೂರ್ವಾನ್ವಯ ಅನುಮತಿ ಅವಕಾಶ ನೀಡಲಾಗಿತ್ತು.
  • ಮೇ 2025ರಲ್ಲಿ ಈ ಕ್ರಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
  • ಆದರೆ ನವೆಂಬರ್ 2025ರಲ್ಲಿ CREDAI ಅರ್ಜಿಯ ವಿಚಾರಣೆ ವೇಳೆ ಹಿಂದಿನ ತೀರ್ಪಿನಲ್ಲಿ ಸಡಿಲಿಕೆ ನೀಡಲಾಗಿತ್ತು.

ಈ ಮರುಪರಿಶೀಲಿತ ತೀರ್ಪನ್ನೇ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.

Continue Reading

Trending