Connect with us

ಚುನಾವಣೆ

ಶ್ರೀರಾಮನ ನೆಲೆವೀಡು ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಇಲ್ಲಿವೆ ಕಾರಣಗಳು!

Published

on

ಉತ್ತರ ಪ್ರದೇಶ : 2024ರ ಲೋಕಸಭಾ ಚುನಾವಣೆಯಲ್ಲಿ ಹಲವೆಡೆ ಅಚ್ಚರಿಯ ಫಲಿತಾಂಶಗಳು ಬಂದಿವೆ. ಈ ಪೈಕಿ ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿ ಗೆಲ್ಲಲೇಬೇಕಿದ್ದ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಈ ಮೂಲಕ ಬಿಜೆಪಿಗೆ ಹಿನ್ನಡೆಯಾಗಿದೆ.

ರಾಮನಗರಿ ಅಯೋಧ್ಯೆಯಿಂದ ಬಿಜೆಪಿ ಸೋಲು ಕಂಡಿದ್ದೇಕೆ ಎಂಬುದು ಈಗ ಎಲ್ಲೆಡೆ ಚರ್ಚೆಯ ವಿಷಯ. ಬಿಜೆಪಿಯ ಈ ಸೋಲಿಗೆ ಹಲವು ವಿಚಾರಗಳನ್ನು ಪಟ್ಟಿ ಮಾಡಲಾಗುತ್ತಿದೆ. ಈ ಪೈಕಿ ಒಬಿಸಿ, ದಲಿತರು, ಮುಸ್ಲಿಮರ ಒಳಏಟು ಪ್ರಮುಖವು.

ಲೋಕಸಭೆಯ ಒಟ್ಟು 543 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಅಂದರೆ 80 ಕ್ಷೇತ್ರಗಳನ್ನು ಹೊಂದಿರುವ ರಾಜ್ಯ. ಈ ರಾಜ್ಯದಿಂದ ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಸುಲಭ. ಹಾಗಾಗಿ ರಾಜಕೀಯ ಪಕ್ಷಗಳು ಉತ್ತರ ಪ್ರದೇಶದಿಂದ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಪ್ರಯತ್ನ ನಡೆಸುತ್ತಿರುತ್ತವೆ. ಅದರ ಭಾಗವಾಗಿ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 80 ಕ್ಷೇತ್ರಗಳ ಪೈಕಿ ಕ್ರಮವಾಗಿ 71 ಮತ್ತು 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದರ ಪರಿಣಾಮ, ಅಂದುಕೊಂಡಂತೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೇರಿತ್ತು.

ಆದರೆ, ಪ್ರಸ್ತುತ ಚುನಾವಣೆಯಲ್ಲಿ ಶ್ರೀರಾಮನ ನೆಲೆವೀಡು ಅಯೋಧ್ಯೆ ಇರುವ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಘಾತಕಾರಿ ಸೋಲಾಗಿದೆ. ರಾಮ ಮಂದಿರ ನಿರ್ಮಾಣವಾದ ಕೇವಲ ನಾಲ್ಕು ತಿಂಗಳಲ್ಲೇ ಈ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಲ್ಲು ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ 54,567 ಮತಗಳಿಂದ ಸೋಲಿಸಿದ್ದಾರೆ. ಅವಧೇಶ್ 554,289 ಮತಗಳನ್ನು ಪಡೆದರೆ ಲಲ್ಲು 4,99,722 ಮತಗಳನ್ನು ಪಡೆದರು. ಲಲ್ಲು ಸಿಂಗ್ 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಈ ಕ್ಷೇತ್ರ ಗೆದ್ದಿದ್ದರು.

ಆದರೆ, ಈ ಬಾರಿ ಬಿಜೆಪಿ ಅತಿಯಾದ ಆತ್ಮವಿಶ್ವಾಸ, ಬೇಡದ ಹೇಳಿಕೆಗಳು ಹಾಗು ಅಭಿವೃದ್ಧಿ ಹೆಸರಲ್ಲಿ ಮಾಡಿದ ಯಡವಟ್ಟುಗಳು ಸೋಲಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದಷ್ಟೇ ಅಲ್ಲದೇ, ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಯೋಧ್ಯೆ ಅತೀ ಹೆಚ್ಚು ಒಬಿಸಿ ಮತದಾರರನ್ನು ಹೊಂದಿದೆ. ಯಾದವರು, ದಲಿತ ಮತ್ತು ಮುಸ್ಲಿಂ ಸಮುದಾಯ ಇಲ್ಲಿ ನಿರ್ಣಾಯಕ. ದಲಿತರ ಪೈಕಿ ಪಾಸಿ ಸಮುದಾಯ ಗರಿಷ್ಠ ಮತದಾರರನ್ನು ಹೊಂದಿದೆ. ಗೆದ್ದ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯದಿಂದ ಬಂದವರು. ಈ ಸಮುದಾಯಗಳು ತಮ್ಮನ್ನು ಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರದಿಂದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಆಪ್ತ ಅವಧೇಶ್ ಪ್ರಸಾದ್ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಫೈಜಾಬಾದ್ ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಒಂಭತ್ತು ಕ್ಷೇತ್ರಗಳಲ್ಲೂ ಅಖಿಲೇಶ್ ಯಾದವ್ ಆಪ್ತರೇ ಸ್ಪರ್ಧಿಸಿದ್ದು ಅವರಿಗೆ ಇನ್ನೂ ವರದಾನವಾಗಿದೆ. ಈ ಪೈಕಿ ನಾಲ್ವರು ಮುಸ್ಲಿಮ್ ಮತ್ತು ಐದು ಯಾದವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಯಾದವೇತರ ಮತದಾರರನ್ನು ಗೆಲ್ಲಲು ಅಮಿತ್ ಶಾ ಹಾಕಿಕೊಂಡ ಯೋಜನೆ ಕೈ ಹಿಡಿಯದೇ ಇರುವುದು ಮತ್ತು ಅತಿಯಾದ ಆತ್ಮವಿಶ್ವಾಸ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೀಸಲಾತಿರಹಿತ ಸ್ಥಾನದಲ್ಲಿ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಸಮಾಜವಾದಿ ಪಕ್ಷದ ನಿರ್ಧಾರ ಕೆಲಸ ಮಾಡಿದೆ ಎನ್ನುತ್ತಾರೆ ಗಿರಿ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಅಸೋಸಿಯೇಟ್ ಪ್ರೊಫೆಸರ್ ಪ್ರಶಾಂತ್ ತ್ರಿವೇದಿ.

ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಹೇಳಿದ್ದರು. ಈ ವಿಚಾರವನ್ನು ಅವಧೇಶ್ ಪ್ರಸಾದ್ ತಮ್ಮ ಚುನಾವಣಾ ಪ್ರಚಾರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು.

ಇದಲ್ಲದೇ, ಅಯೋಧ್ಯೆಯ ಅಭಿವೃದ್ಧಿಗಾಗಿ ಜಮೀನು ಒತ್ತುವರಿ, ಮನೆಗಳನ್ನು ಕೆಡವಿದ್ದು, ನಾಗರಿಕರು ಮತ್ತು ವ್ಯಾಪಾರಿಗಳ ಸ್ಥಳಾಂತರ, ಪ್ರಶ್ನೆ ಪತ್ರಿಕೆಗಳ ಸೋರಿಕೆ, ನಿರುದ್ಯೋಗ, ಅಯೋಧ್ಯೆಗೆ ಭೇಟಿ ನೀಡಿದವರಿಗೆ ವಿಶೇಷ ಸವಲತ್ತುಗಳನ್ನು ನೀಡದಿರುವುದು, ಹೊರಗಿನಿಂದ ಬರುವ ಉದ್ಯಮಿಗಳು ಲಾಭ ಪಡೆಯುತ್ತಿದ್ದಾರೆಂಬ ಚರ್ಚೆಗಳು ಸ್ಥಳೀಯರನ್ನು ಚಿಂತೆಗೀಡು ಮಾಡಿದ್ದವು. ಬಹುಪಾಲು ಯುವ ಮತದಾರರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋರಿಕೆಯಾದ ಪ್ರಶ್ನೆಪತ್ರಿಕೆಯಿಂದ ಬೇಸತ್ತು ಹೋಗಿದ್ದರು. ದೇವಸ್ಥಾನ ಮತ್ತು ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇವೆಲ್ಲವೂ ಬಿಜೆಪಿ ಸೋಲಿಗೆ ಕಾರಣಗಳೆಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆ

ಐದು ನಗರ ಪಾಲಿಕೆ ಚುನಾವಣೆ ಕಾವು: ಕಾಂಗ್ರೆಸ್ ಸೇರಿದಂತೆ ಪಕ್ಷಗಳಲ್ಲಿ ಚಟುವಟಿಕೆ ಜೋರು

Published

on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಆಗಸ್ಟ್ 31ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಯುವ ನಿರೀಕ್ಷೆ ಮೂಡಿದೆ.

ಸುಪ್ರೀಂ ಕೋರ್ಟ್ ಮೊದಲು ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಸಿಬ್ಬಂದಿ ಕೊರತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಪರಿಗಣಿಸಿ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ಆದರೆ ಇದೇ ಅಂತಿಮ ಅವಕಾಶವಾಗಿದ್ದು, ಮತ್ತೊಮ್ಮೆ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರವು ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಚುನಾವಣಾ ಪ್ರಕ್ರಿಯೆ ವೇಗ ಪಡೆಯಲು ಕಾರಣವಾಗಿದೆ. ಈ ಬೆಳವಣಿಗೆಯ ನಂತರ ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.

ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಗುರುತಿಸುವಿಕೆ, ಚುನಾವಣಾ ಸಿಬ್ಬಂದಿ ನಿಯೋಜನೆ ಹಾಗೂ ಇತರೆ ಆಡಳಿತಾತ್ಮಕ ಕಾರ್ಯಗಳು ಈಗಾಗಲೇ ನಡೆಯುತ್ತಿವೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಜುಲೈ 10ರೊಳಗೆ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವೇಳಾಪಟ್ಟಿ ಘೋಷಣೆಯಾದ ತಕ್ಷಣ ಜಿಬಿಎ ವ್ಯಾಪ್ತಿಯಲ್ಲಿ ಮಾದರಿ ನೀತಿಸಂಹಿತೆ ಜಾರಿಗೆ ಬರಲಿದೆ.

ಇತ್ತ ರಾಜಕೀಯ ಪಕ್ಷಗಳೂ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಐದು ನಗರ ಪಾಲಿಕೆಗಳ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಂಘಟನಾ ಚಟುವಟಿಕೆಗಳನ್ನು ತೀವ್ರಗೊಳಿಸುವಂತೆ ಸೂಚಿಸಿದೆ. ಮನೆಮನೆಗೆ ಭೇಟಿ, ಸರ್ಕಾರದ ಸಾಧನೆಗಳ ಪ್ರಚಾರ, ಗ್ಯಾರಂಟಿ ಯೋಜನೆಗಳ ಮಾಹಿತಿ ಹಾಗೂ ವಾರ್ಡ್‌ವಾರು ಮತದಾರರ ಸಂಪರ್ಕ ಅಭಿಯಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಜಿಬಿಎ ಚುನಾವಣೆಗಳು ಬೆಂಗಳೂರು ನಗರ ಆಡಳಿತದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಚುನಾವಣೆಗಳಾಗಿದ್ದು, ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

Continue Reading

ಚುನಾವಣೆ

GBA ELECTION : ಜುಲೈ ಮೊದಲ ವಾರದಲ್ಲೇ ವೇಳಾಪಟ್ಟಿ? ಬೆಂಗಳೂರು ರಾಜಕೀಯ ಕಣ ರಂಗೇರಲು ಸಜ್ಜು

Published

on

ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆ ಆಗಸ್ಟ್ 31ರೊಳಗೆ ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗವು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.

ಮೂಲಗಳ ಪ್ರಕಾರ, ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಜುಲೈ 10ರೊಳಗೆ ದಿನಾಂಕ ಘೋಷಣೆಯಾಗಬಹುದು ಎಂದು ಹೇಳಲಾಗುತ್ತಿದ್ದು, ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಬೆಂಗಳೂರು ನಗರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ.

ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಸಿಬ್ಬಂದಿ ಕೊರತೆಯನ್ನು ಪರಿಗಣಿಸಿ ನ್ಯಾಯಾಲಯವು ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಜೊತೆಗೆ, ಯಾವುದೇ ಕಾರಣಕ್ಕೂ ಮತ್ತೆ ಚುನಾವಣೆ ಮುಂದೂಡುವ ಪ್ರಸ್ತಾಪವನ್ನು ತನ್ನ ಮುಂದೆ ತರಬಾರದು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಸಿದ್ಧತೆ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದೆ. ರಾಜಕೀಯ ಪಕ್ಷಗಳೂ ಚುನಾವಣೆಗೆ ಸಜ್ಜಾಗಿವೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಬಿಜೆಪಿ, ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸುತ್ತಿದೆ. ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಯೂ ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದು, ಪಂಚ ಪಾಲಿಕೆ ಚುನಾವಣೆ ಭಾರೀ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆ ಮೂಡಿದೆ.

Continue Reading

ಚುನಾವಣೆ

Bhabanipur Shock: 700 ಮತದಾರರ ಬೂತ್‌ನಲ್ಲಿ ಮಮತಾ ಬ್ಯಾನರ್ಜಿ ಪಡೆದದ್ದು ಕೇವಲ 28 ಮತ!

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಮುಖ್ಯಮಂತ್ರಿ Mamata Banerjee ಅವರಿಗೆ ಭಾರೀ ಹಿನ್ನಡೆಯಾಗಿದೆ. ಟಿಎಂಸಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ Suvendu Adhikari ಐತಿಹಾಸಿಕ ಜಯ ಸಾಧಿಸಿದ್ದು, ಮಮತಾ ಬ್ಯಾನರ್ಜಿ ಅವರ ಸ್ವಂತ ವಾರ್ಡ್‌ನಲ್ಲಿಯೇ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬೂತ್‌ವಾರು ಅಂಕಿ-ಅಂಶಗಳ ಪ್ರಕಾರ, ಭವಾನಿಪುರ ಕ್ಷೇತ್ರದ 267 ಬೂತ್‌ಗಳ ಪೈಕಿ 207 ಬೂತ್‌ಗಳಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸವಿರುವ ವಾರ್ಡ್ ನಂಬರ್ 73ರಲ್ಲಿ ಸುವೇಂದು ಅಧಿಕಾರಿ 8,932 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ ಕೇವಲ 4,284 ಮತಗಳಿಗೆ ಸೀಮಿತರಾಗಿದ್ದಾರೆ.

ಚುನಾವಣೆಗೆ ಮುನ್ನ Amit Shah ಬಿಜೆಪಿ ಕಾರ್ಯಕರ್ತರಿಗೆ “ಮಮತಾ ಬ್ಯಾನರ್ಜಿಯನ್ನು ಅವರದೇ ಕೋಟೆಯಲ್ಲಿ ಸೋಲಿಸಿ” ಎಂದು ಕರೆ ನೀಡಿದ್ದರು. ಇದೀಗ ಸುವೇಂದು ಅಧಿಕಾರಿ ಆ ಸವಾಲನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ ಎಂದು ಬಿಜೆಪಿ ಪಾಳಯದಲ್ಲಿ ಸಂಭ್ರಮ ವ್ಯಕ್ತವಾಗಿದೆ.

ಸುವೇಂದು ಅಧಿಕಾರಿಗೆ ದಕ್ಷಿಣ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಮೊದಲಿನಿಂದ ರಾಜಕೀಯ ನೆಲೆ ಕಡಿಮೆ ಇತ್ತು. ಆದರೂ ಕ್ಷೇತ್ರದಲ್ಲಿ ಶೇಕಡಾ 63 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮಮತಾ ಬ್ಯಾನರ್ಜಿ ಕೇವಲ ಶೇಕಡಾ 30 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.

ಇನ್ನು ಹಲವು ಬೂತ್‌ಗಳಲ್ಲಿ ಮಮತಾ ಬ್ಯಾನರ್ಜಿ 50 ಮತಗಳ ಗಡಿ ದಾಟಲೂ ವಿಫಲರಾಗಿರುವುದು ಟಿಎಂಸಿ ಪಾಳಯಕ್ಕೆ ದೊಡ್ಡ ಆಘಾತವಾಗಿದೆ. 2021ರ ಉಪಚುನಾವಣೆಯಲ್ಲಿ ಏಳು ವಾರ್ಡ್‌ಗಳಲ್ಲೂ ಗೆದ್ದಿದ್ದ ದೀದಿ, ಈ ಬಾರಿ ತಮ್ಮ ಹಿಡಿತವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅಂತಿಮವಾಗಿ ಮಮತಾ ಬ್ಯಾನರ್ಜಿ 58,812 ಮತಗಳನ್ನು ಪಡೆದರೆ, ಸುವೇಂದು ಅಧಿಕಾರಿ 73,917 ಮತಗಳನ್ನು ಪಡೆದು ಟಿಎಂಸಿ ಕೋಟೆಯನ್ನು ಧೂಳೀಪಟ ಮಾಡಿದ್ದಾರೆ.

Continue Reading

Trending