Connect with us

ಕ್ರೀಡೆ

ಪಾಕಿಸ್ತಾನ ಕ್ರಿಕೆಟ್​ ಆಯ್ಕೆ ಸಮಿತಿ ವಜಾ: ಟಿ20 ವಿಶ್ವಕಪ್​ನಲ್ಲಿ ಕೋಚ್​ಗಳ ಜೊತೆ ಕಿತ್ತಾಡಿದ್ದ ವೇಗಿ ಶಾಹೀನ್​ ಆಫ್ರಿದಿ – shaheen shah afridi

ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ನಲ್ಲಿ ಎಲ್ಲವೂ ಸರಿಯಿಲ್ಲ. ಬುಧವಾರವಷ್ಟೆ ಆಯ್ಕೆ ಸಮಿತಿಯನ್ನು ಬರ್ಖಾಸ್ತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಒಬ್ಬರ ಮೇಲೆ ಇನ್ನೊಬ್ಬರು ಆಪಾದನೆ ಮಾಡುತ್ತಿದ್ದಾರೆ. ಏಕದಿನ ಮತ್ತು ಟಿ-20 ತಂಡದ ನಾಯಕತ್ವದಿಂದ ದಿಢೀರ್​ ತೆಗೆದು ಹಾಕಲ್ಪಟ್ಟಿರುವ ವೇಗಿ ಶಾಹೀನ್​ ಶಾ ಆಫ್ರಿದಿ ಟಿ-20 ವಿಶ್ವಕಪ್​ ವೇಳೆ ಕೋಚ್​​ಗಳ ಜೊತೆ ಕಿತ್ತಾಡಿಕೊಂಡಿದ್ದರು ಎಂಬ ಅಂಶ- ಬೆಳಕಿಗೆ ಬಂದಿದೆ.

ಟಿ-20 ವಿಶ್ವಕಪ್​ ವೇಳೆ ಪಾಕ್​​ನ ಪ್ರಮುಖ ವೇಗಿಯಾಗಿರುವ ಶಾಹೀನ್ ತರಬೇತುದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತಂಡದ ಕೋಚ್‌ಗಳು ಮತ್ತು ಮ್ಯಾನೇಜ್‌ಮೆಂಟ್ ಸಿಬ್ಬಂದಿ ಜೊತೆ ಅಫ್ರಿದಿ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಆದರೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೆ ಕಾರಣ ಏನೆಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ ವರದಿಯಲ್ಲಿ ಹೇಳಲಾಗಿದೆ.

ಭಾರತ ಮತ್ತು ಅಮೆರಿಕದ ವಿರುದ್ಧ ಸೋತು ಲೀಗ್​ ಹಂತದಲ್ಲೇ ತಂಡ ಹೊರಬಿದ್ದಿದ್ದಕ್ಕೆ ಶಾಹೀನ್​​ ತೀವ್ರ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರ ತಂಡದ ಸಿಬ್ಬಂದಿ ಜೊತೆ ಬೈದಾಡಿಕೊಂಡಿದ್ದಾರೆ. ಶಾಹೀನ್​ ಅಲ್ಲದೇ, ಹ್ಯಾರೀಸ್​ ರೌಫ್​​ ಪಂದ್ಯಗಳ ಸೋಲಿನ ಬಳಿಕ ಅಭಿಮಾನಿಯೊಬ್ಬರ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿದ್ದರು. ರಕ್ಷಣಾ ಸಿಬ್ಬಂದಿ ಅವರನ್ನು ತಡೆದಿದ್ದರು. ಆಟಗಾರರು ತಂಗಿದ್ದ ಹೋಟೆಲ್​ ಹೊರಗೆ ಈ ಘಟನೆ ನಡೆದಿತ್ತು.

ಪಾಕ್​ ಆಯ್ಕೆ ಸಮಿತಿ ವಜಾ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ತನ್ನ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬುಧವಾರ ವಜಾ ಮಾಡಿದೆ. ಸಮಿತಿಯಲ್ಲಿದ್ದ ವಹಾಬ್ ರಿಯಾಜ್ ಮತ್ತು ಅಬ್ದುಲ್​ ರಜಾಕ್​ರನ್ನು ಮಂಡಳಿಯು ಹುದ್ದೆಯಿಂದ ಕಿತ್ತೆಸೆದಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಇನ್ನು ಮುಂದೆ ನಿಮ್ಮ ಸೇವೆ ಅಗತ್ಯವಿಲ್ಲ ಎಂದು ರಜಾಕ್ ಮತ್ತು ರಿಯಾಜ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂಚಿಸಿದೆ. ಅಬ್ದುಲ್ ರಜಾಕ್ ಪುರುಷ ಮತ್ತು ಮಹಿಳಾ ಆಯ್ಕೆ ಸಮಿತಿಯ ಭಾಗವಾಗಿದ್ದರೆ, ವಹಾಬ್ ಪುರುಷರ ತಂಡದ ಆಯ್ಕೆಗಾರರಾಗಿದ್ದರು.

ಈ ಬಗ್ಗೆ ವಹಾಬ್​ ರಿಯಾಜ್​ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ತಂಡದ, ಮತ್ತಿತರರ ಬಗ್ಗೆ ಹೇಳಲು ಬಹಳಷ್ಟಿದೆ. ಆದರೆ, ಆಪಾದನೆಗಳಲ್ಲೇ ಕಾಲ ಕಳೆಯಲು ಇಷ್ಟವಿಲ್ಲ. ನಾನು ಆಯ್ಕೆ ಸಮಿತಿಯ ಸದಸ್ಯನಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿರುವೆ. ನಾನು ಇಷ್ಟಪಡುವ ಆಟದಲ್ಲಿ ಜನರು ನನ್ನನ್ನು ಸೇವಕ ಎಂದು ಅರಿತರೆ ಸಾಕು. ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಪಾಕಿಸ್ತಾನ ಕ್ರಿಕೆಟ್‌ನ ಉನ್ನತಿಗಾಗಿ ನನ್ನೆಲ್ಲ ಶ್ರಮ ಹಾಕಿ ಕೆಲಸ ಮಾಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಇತರ ಕೋಚ್​ಗಳಿಗೆ ಪ್ರತಿ ಆಟಗಾರರು ಬೆಂಬಲ, ಗೌರವ ನೀಡಬೇಕು ಎಂದು ಶಾಹೀನ್​ ಆಫ್ರಿದಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕ್ರೀಡೆ

JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ

ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.

ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.

ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.

ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.

ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.

ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.

ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.

ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

ಕ್ರೀಡೆ

T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.

ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.

ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.

Continue Reading

ಕ್ರೀಡೆ

“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್

ಇಸ್ಲಾಮಾಬಾದ್:

ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.

ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.

ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.

“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.

ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.

ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Continue Reading

Trending