Connect with us

ದೇಶ

ಪ್ರತಿವರ್ಷ ಜೂನ್‌ 25ರಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ – ಅಮಿತ್‌ ಶಾ ಘೋಷಣೆ

ನವದೆಹಲಿ: ಪ್ರತಿವರ್ಷ ಜೂನ್‌ 25ರ ದಿನವನ್ನು ʻಸಂವಿಧಾನ ಹತ್ಯಾ ದಿವಸ್‌ʼ (Samvidhaan Hatya Diwas) ಆಗಿ ಆಚರಿಸಲಾಗುವುದು ಎಂದು ಸಚಿವ ಅಮಿತ್‌ ಶಾ (Amit Shah) ಘೋಷಣೆ ಮಾಡಿದ್ದಾರೆ.

ತುರ್ತು ಪರಿಸ್ಥಿತಿಯ (Emergency Day) ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮಿತ್‌ ಶಾ ಅವರಿಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಕೇಂದ್ರ ಸಚಿವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದು, ಸುತ್ತೋಲೆ ಪ್ರತಿಯನ್ನೂ ಹಂಚಿಕೊಂಡಿದ್ದಾರೆ.

ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಸುಕಿದರು:
ಪ್ರತಿ ವರ್ಷ ʻಸಂವಿಧಾನ ಹತ್ಯಾ ದಿವಸ್ʼ ಆಚರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 1975ರ ಜೂನ್ 25 ರಂದು, ಅಂದಿನ ಪ್ರಧಾನಿ ಇಂದಿರಾಗಾಂಧಿ  (Indira Gandhi) ಸರ್ವಾಧಿಕಾರಿ ಮನಸ್ಥಿತಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಸುಕಿದರು. ಯಾವುದೇ ತಪ್ಪಿಲ್ಲದೇ ಲಕ್ಷಾಂತರ ಜನರನ್ನ ಕಂಬಿಯ ಹಿಂದೆ ಎಸೆಯಲಾಯಿತು. ಮಾಧ್ಯಮಗಳ ಧ್ವನಿಯನ್ನು ಮೌನಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರತಿ ವರ್ಷ ಜೂನ್ 25ರ ದಿನವನ್ನು ʻಸಂವಿಧಾನ ಹತ್ಯಾ ದಿವಸ್ʼ ಎಂದು ಆಚರಿಸಲು ನಿರ್ಧರಿಸಿದೆ ಎಂದು ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ದಿನವು 1975ರ ತುರ್ತು ಪರಿಸ್ಥಿತಿಯ ಅಮಾನವೀಯ ನೋವುಗಳನ್ನು ಸಹಿಸಿಕೊಂಡ ಎಲ್ಲರ ಬೃಹತ್ ಕೊಡುಗೆಗಳನ್ನು ಸ್ಮರಿಸುತ್ತದೆ ಎಂದು ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೋದಿಯಿಂದಲೂ ವಾಗ್ದಾಳಿ:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತುಪರಿಸ್ಥಿತಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ತುರ್ತು ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷವು (Congress Party) ಮೂಲಭೂತ ಸ್ವಾತಂತ್ರ್ಯವನ್ನು ಹೇಗೆ ಬುಡಮೇಲು ಮಾಡಿತ್ತು? ಹಾಗೂ ಪ್ರತಿಯೊಬ್ಬ ಭಾರತೀಯರು ಗೌರವಿಸುವ ಸಂವಿಧಾನವನ್ನು (Constitution Of India) ಹೇಗೆ ತುಳಿಯಿತು? ಎಂಬುದನ್ನು ನಮಗೆ ನೆನಪಿಸುತ್ತದೆ. ಅಸಂಖ್ಯಾತ ಸಂದರ್ಭಗಳಲ್ಲಿ 356ನೇ ವಿಧಿ ಹೇರಿದವರು, ಪತ್ರಿಕಾ ಸ್ವಾತಂತ್ರ್ಯ ನಾಶಮಾಡುವ ಮಸೂದೆಯನ್ನು ಪಡೆದವರು, ಫೆಡರಲಿಸಂ ಅನ್ನು ನಾಶಪಡಿಸಿದರು ಮತ್ತು ಸಂವಿಧಾನದ ಪ್ರತಿಯೊಂದು ಅಂಶವನ್ನು ಉಲ್ಲಂಘಿಸಿದವರು ಇದೇ ಜನರು.

ತುರ್ತುಪರಿಸ್ಥಿತಿ ಕರಾಳ ನೆನಪು:
ʻತುರ್ತು ಪರಿಸ್ಥಿತಿʼಯು (Emergency 1975) ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ. 1975ರ ಜೂನ್‌ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಅವರ ಸಲಹೆ ಮೇರೆಗೆ ಈ ಕ್ರಮ ತೆಗೆದುಕೊಂಡಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಕಳೆದ ಜೂನ್‌ 25ಕ್ಕೆ 49 ವರ್ಷ ತುಂಬಿದ್ದು, 50ನೇ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನೆದು ಅಮಿತ್‌ ಶಾ ಅವರು, ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ ಮಾಡುವಂತೆ ಘೋಷಣೆ ಮಾಡಿದ್ದಾರೆ.

ದೇಶ

ಪಿಎಂ ಮೋದಿ ಆಗಸ್ಟ್ 10ರಂದು ಬೆಂಗಳೂರಿಗೆ: ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ (Yellow Line) ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Modi) ಆಗಸ್ಟ್ 10ರಂದು ಬೆಂಗಳೂರಿಗೆ ಬರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿಯವರು ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟನೆ ಮಾಡುವ ಉದ್ದೇಶದಿಂದ ಬರುತ್ತಿದ್ದಾರೆ. ಅವರ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ. ಟೈಮ್ ಟು ಟೈಮ್ ಕಾರ್ಯಕ್ರಮಗಳ ಬಗ್ಗೆ ಇನ್ನೂ ವಿವರ ಬಾಕಿಯಿದೆ,” ಎಂದು ಹೇಳಿದರು.

ವೈಭವದಿಂದ ಕಾರ್ಯಕ್ರಮ?
ಆದರೆ, ಮೂಲ ಯೋಜನೆಗೆ ಬದಲಾವಣೆ ಆಗಿದೆ. ಈಗ ಪ್ರಧಾನಿಯವರು ಕೇವಲ ಹಳದಿ ಮಾರ್ಗದ ಮೆಟ್ರೋ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಗೆ ಮಾತ್ರ ಭಾಗಿಯಾಗಲಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ರೋಡ್ ಶೋ ಕಾರ್ಯಾಚರಣೆಗಳು ರದ್ದುಪಡಿಸಲಾಗಿದೆ.

ಇದರ ಪರಿಣಾಮವಾಗಿ, ಒಂದು ವರ್ಷದಿಂದ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ನಿರಾಸೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ.

Continue Reading

ದೇಶ

ಭಾರತ vs ಅಮೆರಿಕ: ರಷ್ಯಾದ ತೈಲದ ಬಗ್ಗೆ ಉದ್ವಿಗ್ನತೆ, ಸೇನೆಯಿಂದ ತಿರುಗೇಟು

ಬೆಂಗಳೂರು: ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಕುರಿತು ಭಾರತ-ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತಾಗಿದೆ. ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿರುವುದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಭಾರತೀಯ ಸೇನೆ ಅಮೆರಿಕದ ದ್ವೇಧಾಚರಣೆ ವಿರುದ್ಧ ತಿರುಗೇಟು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ “ಈ ದಿನ ಆ ವರ್ಷ – ಯುದ್ಧದ ನಿರ್ಮಾಣ – 05 ಆಗಸ್ಟ್ 1971” ಎಂಬ ಶೀರ್ಷಿಕೆಯಡಿ ಸೇನೆಯು 1971ರ ಯುದ್ಧದ ಕಾಲದ ಪತ್ರಿಕಾ ಕಟಿಂಗ್‌ ಹಂಚಿಕೊಂಡಿದೆ. 1954ರಿಂದ 1971ರವರೆಗೆ ಅಮೆರಿಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸಿದ ಬಗ್ಗೆ ಪೇಪರ್ ಕಟಿಂಗ್‌ ಉಲ್ಲೇಖಿಸುತ್ತಾ, “ಅಮೆರಿಕ ಪಾಕ್ ಪರ ಕೆಲಸ ಮಾಡಿತ್ತಲ್ಲವೆ?” ಎಂದು ಪ್ರಶ್ನಿಸಿದೆ.

ಇದು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಹಣ ಒದಗಿಸುತ್ತಿದೆ ಎಂಬ ಅಮೆರಿಕದ ಆರೋಪಕ್ಕೆ ಪ್ರತಿಕ್ರಿಯೆಯಾಗಿದೆ. ಭಾರತವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳನ್ನು ‘ಅಸಮರ್ಥನೀಯ ಹಾಗೂ ಅಸಮಂಜಸ’ವೆಂದು ತಿರಸ್ಕರಿಸಿದೆ. ಭಾರತ ತನ್ನ ತೈಲ ನೀತಿಯನ್ನು ಆರ್ಥಿಕ ಶಕ್ತಿಯ ದೃಷ್ಟಿಯಿಂದ ಮುಂದುವರಿಸುತ್ತಿದೆ.

Continue Reading

ದೇಶ

ಸೇನೆ ಕುರಿತ ಹೇಳಿಕೆ: ಸುಪ್ರೀಂ ಕೋರ್ಟ್ ಟೀಕೆಗೆ ಪ್ರಿಯಾಂಕಾ ಗಾಂಧಿಯಿಂದ ಕಠಿಣ ಪ್ರತಿಕ್ರಿಯೆ

ನವದೆಹಲಿ: ಭಾರತೀಯ ಸೇನೆ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಅವರ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿಯ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ಟೀಕೆಗೆ ಪ್ರತಿಕ್ರಿಯಿಸಿ ಪ್ರಿಯಾಂಕಾ ಗಾಂಧಿ,

“ಯಾರು ನಿಜವಾದ ಭಾರತೀಯರು ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ಯೋಗ್ಯರಲ್ಲ. ರಾಹುಲ್ ಗಾಂಧಿಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವವಿದೆ. ಅವರು ಎಂದಿಗೂ ಸೇನೆಯ ವಿರುದ್ಧ ಕೆಟ್ಟ ಮಾತುಗಳನ್ನು ಮಾತನಾಡಲ್ಲ,” ಎಂದು ತಿಳಿಸಿದ್ದಾರೆ.

ಗಲ್ವಾನ್ ಕಣಿವೆ ಸಂಘರ್ಷ ಕುರಿತು ಮಾತನಾಡಿದ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ‘ಅನುಚಿತ’ ಎಂದು ಖಂಡಿಸಿದ್ದು, “ನಿಜವಾದ ಭಾರತೀಯರು ಈ ರೀತಿ ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ. ಇದನ್ನು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದು, “ವಿರೋಧ ಪಕ್ಷದ ನಾಯಕರಾಗಿ ಸರ್ಕಾರವನ್ನು ಪ್ರಶ್ನಿಸುವುದು ರಾಹುಲ್ ಅವರ ಕರ್ತವ್ಯ. ನ್ಯಾಯಮೂರ್ತಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ,” ಎಂದಿದ್ದಾರೆ.

ಅದೇ ರೀತಿ, ಪ್ರಿಯಾಂಕಾ ಗಾಂಧಿ ಸರ್ಕಾರದ ನಡೆಗೆ ಶಂಕೆ ವ್ಯಕ್ತಪಡಿಸಿ,

“ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರಗಳಿಲ್ಲ. ಅವರು ಚರ್ಚೆಗೆ ತಯಾರಿಲ್ಲ. ಸಂಸತ್ತನ್ನು ಸರಿಯಾಗಿ ನಡೆಸಲಾಗುತ್ತಿಲ್ಲ. ಇದನ್ನೆಲ್ಲಾ ಮರೆಮಾಚಲು ಈ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

Continue Reading

Trending