ಬೆಂಗಳೂರು
ಮತ್ತೆ ಪಾದಯಾತ್ರೆ ರಾಜಕೀಯದ ಸದ್ದು: ಪ್ರಮುಖ ಪಾದಯಾತ್ರೆಗಳ ಹಿಂದಿರುವ ರಾಜಕೀಯ ಲಾಭ – ನಷ್ಟದ ಲೆಕ್ಕಾಚಾರವೇನು? – BJP JDS padayatra

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆ ರಾಜಕೀಯ ಆರಂಭವಾಗಿದೆ. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರವಾಗಿ ಬಿಜೆಪಿ – ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು- ಮೈಸೂರು ವರೆಗೆ ಪಾದಯಾತ್ರೆಗೆ ಉದ್ದೇಶಿಸಿದೆ. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಪಾದಯಾತ್ರೆ ನಡೆಯಲಿದೆ.
ಅಷ್ಟಕ್ಕೂ ಕರ್ನಾಟಕ ರಾಜಕೀಯದಲ್ಲಿ ಪಾದಯಾತ್ರೆ ಪೊಲಿಟಿಕ್ಸ್ ಇದೇ ಮೊದಲಲ್ಲ. ಈವರೆಗೆ ಕರುನಾಡು ಕಂಡಿರುವ ಪ್ರಮುಖ ಪಾದಯಾತ್ರೆ ಪೊಲಿಟಿಕ್ಸ್ ಮತ್ತು ಅದರಿಂದ ಪಕ್ಷಗಳು ರಾಜಕೀಯ ಲಾಭ ನಷ್ಟಕ್ಕೆ ಸಾಕ್ಷಿಯಾಗಿದೆ. ದೋಸ್ತಿಗಳು ಆ.3 ರಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಏಳು ದಿನಗಳ ಪಾದಯಾತ್ರೆಗೆ ನಿರ್ಧರಿಸಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹಗರಣಗಳ ಆರೋಪವನ್ನು ಜನರ ಮುಂದೆ ಕೊಂಡೊಯ್ಯಲು ದೋಸ್ತಿಗಳು ಮುಂದಾಗಿದ್ದಾರೆ.
ರಾಜ್ಯ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆ ಪೊಲಿಟಿಕ್ಸ್ ಇದೇ ಮೊದಲಲ್ಲ. ಈ ಮುಂಚೆನೂ ಕೆಲ ಪ್ರಮುಖ ಪಾದಯಾತ್ರೆಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಆ ಮೂಲಕ ಪಾದಯಾತ್ರೆ ನಡೆಸಿದ ಪಕ್ಷಗಳಿಗೆ ಚುನಾವಣೆಗಳಲ್ಲಿ ರಾಜಕೀಯ ಲಾಭವನ್ನೂ ಒದಗಿಸಿಕೊಟ್ಟಿದೆ. ರಾಜ್ಯದಲ್ಲಿ ನಡೆದ ನಿರ್ಣಾಯಕ ಪಾದಯಾತ್ರೆ ಮತ್ತ ಅದರ ಲಾಭ ನಷ್ಟ ಲೆಕ್ಕಾಚಾರದ ಹಿನ್ನೋಟ ಇಲ್ಲಿದೆ.
ದೇವೇಗೌಡರ ಪಾದಯಾತ್ರೆ ಪೊಲಿಟಿಕ್ಸ್: ಹೆಚ್.ಡಿ. ದೇವೇಗೌಡರ 2001ರಲ್ಲಿ ಅಂದಿನ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಡೆತಟ್ಟಿ ಪಾದಯಾತ್ರೆಯ ಹೋರಾಟಕ್ಕೆ ಇಳಿದಿದ್ದರು. ನೀರಾ ತೆಗೆವ ವಿವಾದಲ್ಲಿ ಇಬ್ಬರು ರೈತರು ಪೊಲೀಸರು ಹಾರಿಸಿದ್ದ ಗುಂಡಿಗೆ ಬಲಿಯಾಗಿದ್ದರು. ಆ ವೇಳೆ ತೆಂಗಿಗೆ ನುಸಿರೋಗ ಹೆಚ್ಚಿದ್ದರಿಂದ ನೀರಾ ತೆಗೆಯುವ ವಿಚಾರ ಮುನ್ನೆಲೆಗೆ ಬಂದಿತ್ತು. ಇದೇ ವಿಚಾರವಾಗಿ ನಡೆದ ರೈತರ ಹೋರಾಟದ ಮೇಲೆ ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಗೋಲಿಬಾರ್ ನಡೆದು, ಇಬ್ಬರು ರೈತರು ಮೃತಪಟ್ಟಿದ್ದರು.
ಈ ಸನ್ನಿವೇಶವನ್ನು ಬುದ್ದಿವಂತಿಕೆಯಿಂದ ಬಳಸಿಕೊಂಡ ದೊಡ್ಡಗೌಡರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಸ್.ಎಂ. ಕೃಷ್ಣ ಸರಕಾರದ ವಿರುದ್ಧ ಪಾದಯಾತ್ರೆ ಸಂಘಟಿಸಿ ಅದರ ಅಲೆಯಲ್ಲಿ ಚುನಾವಣೆ ಗೆದ್ದು ಬಂದಿದ್ದರು. ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ವರೆಗೆ ದೇವೇಗೌಡರು 2001ರ ಅ.28ರಿಂದ ನ.1ರ ವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಒಟ್ಟು ಐದು ದಿನಗಳ ಕಾಲ ಸುಮಾರು 80 ಕಿ.ಮೀ. ಕ್ರಮಿಸಿ ಪಾದಯಾತ್ರೆ ನಡೆಸಿ, ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.
ಇನ್ನು 2013ರಲ್ಲಿ ಫೆ.12ರಂದು ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ದೇವೇಗೌಡರು ಬೆಂಗಳೂರು ನಗರದಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಬನ್ನಪ್ಪ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡಗೌಡರು ನಗರದಲ್ಲಿ ಪಾದಯಾತ್ರೆ ನಡೆಸಿದ್ದರು.
ಜೆಡಿಎಸ್ಗೆ ಲಾಭ ತಂದು ಕೊಟ್ಟ ಪಾದಯಾತ್ರೆ: ದೇವೇಗೌಡರು ಕಾಂಗ್ರೆಸ್ ಸರ್ಕಾರದ ಗೋಲಿಬಾರ್ ವಿರುದ್ಧ ನಡೆಸಿದ ಪಾದಯಾತ್ರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಭರ್ಜರಿ ರಾಜಕೀಯ ಲಾಭವನ್ನು ಕೊಟ್ಟಿತು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸಿತ್ತು. ಎಸ್.ಎಂ. ಕೃಷ್ಣ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಜೊತೆಗೆ ದೊಡ್ಡಗೌಡರು ನಡೆಸಿದ ಪಾದಯಾತ್ರೆ ಹೋರಾಟವೂ ಜೆಡಿಎಸ್ಗೆ ಭಾರೀ ಲಾಭ ತಂದು ಕೊಟ್ಟಿತು. 2004 ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 58 ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ 37 ಸ್ಥಾನಗಳನ್ನು ಗೆದ್ದು ಪಾದಯಾತ್ರೆ ಪೊಲಿಟಿಕ್ಸ್ ಶಕ್ತಿಯನ್ನು ತೋರಿಸಿಕೊಟ್ಟಿತು.
1999ರಲ್ಲಿ ಹಳೆ ಮೈಸೂರು ಭಾಗದಲ್ಲಿ 3 ಸ್ಥಾನ ಗೆದ್ದಿದ್ದ ಜೆಡಿಎಸ್ 2004ರಲ್ಲಿ 37 ಸ್ಥಾನ ಗೆದ್ದು ಬೀಗಿತು. 1999 ಚುನಾವಣೆಯಲ್ಲಿ 11.45% ರಷ್ಟು ಇದ್ದ ಜೆಡಿಎಸ್ನ ಮತ ಪ್ರಮಾಣ 2004 ಚುನಾವಣೆಯಲ್ಲಿ 21.10%ಗೆ ಏರಿಕೆ ಕಂಡಿತ್ತು. ಇದರಿಂದ ಪಕ್ಷಕ್ಕೆ ಮೈತ್ರಿ ಸರ್ಕಾರ ನಡೆಸಲು ಸಾಧ್ಯವಾಯಿತು. ಅದೇ ರೀತಿ 2013ರಲ್ಲಿ ಕುಡಿಯುವ ನೀರು ಸಂಬಂಧ ಬೆಂಗಳೂರಲ್ಲಿ ಮಾಡಿದ ಪಾದಯಾತ್ರೆಯಿಂದಲೂ ಜೆಡಿಎಸ್ಗೆ ಪರೋಕ್ಷವಾಗಿ ಪಕ್ಷ ಸಂಘಟನೆಗೆ ಬಲ ನೀಡಿತು. 2013 ಚುನಾವಣೆಯಲ್ಲಿ ಜೆಡಿಎಸ್ ಬೆಂಗಳೂರು ನಗದರಲ್ಲಿ ಮೊದಲ ಬಾರಿಗೆ 3 ಸ್ಥಾನವನ್ನು ಗೆಲ್ಲುವಂತಾಯಿತು.
ಎಸ್.ಎಂ. ಕೃಷ್ಣರಿಂದ ಕಾವೇರಿ ಪಾದಯಾತ್ರೆ: 2002ರಲ್ಲಿ ಸಿಎಂ ಆಗಿದ್ದ ಎಸ್.ಎಂ. ಕೃಷ್ಣ ಪಾದಯಾತ್ರೆಯ ಮೊರೆ ಹೋಗಿದ್ದರು. ತಮಿಳುನಾಡಿಗೆ ನೀರು ಹಂಚಿಕೆ ವಿಚಾರವಾಗಿ ಎಸ್.ಎಂ. ಕೃಷ್ಣ ಪಾದಯಾತ್ರೆ ಕೈಗೊಂಡು ಕಾವೇರಿ ಪ್ರಾಂತ್ಯದ ಜನರ ಮನಗೆಲ್ಲುವ ಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ನೀರು ಹಂಚಿಕೆ ವಿಚಾರ ಸುಪ್ರೀಂ ಕೋರ್ಟ್ ಮುಂದೆ ಇದ್ದಿದ್ದರಿಂದ ಈ ಪಾದಯಾತ್ರೆಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಎಸ್.ಎಂ. ಕೃಷ್ಣ ಅವರು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ 2002 ಅ.7ರಿಂದ ಅ.11 ರವರೆಗೆ ಆರು ದಿನಗಳ ಪಾದಯಾತ್ರೆ ಕೈಗೊಂಡಿದ್ದರು. ಬೆಂಗಳೂರಿನ ರಾಜರಾ ಜೇಶ್ವರಿ ನಗರದಿಂದ ಮಂಡ್ಯದ ವರೆಗೆ 100 ಕಿ.ಮೀ. ದೂರ ಪಾದಯಾತ್ರೆ ನಡೆಸಿದ್ದರು. ಆ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಹಾಕಿದ್ದರು. ಆದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದರಿಂದ ಹೆಚ್ಚಿನ ರಾಜಕೀಯ ಲಾಭ ಲಭಿಸಲಿಲ್ಲ. ಬಲವಾದ ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್ ಆ ಚುನಾವಣೆಯಲ್ಲಿ ಸೋಲು ಕಂಡಿತ್ತು.
ಸಿದ್ದರಾಮಯ್ಯರ ಬಳ್ಳಾರಿ ಪಾದಯಾತ್ರೆ: ಬಳ್ಳಾರಿಯಲ್ಲಿ ಬಿಜೆಪಿಯ ರೆಡ್ಡಿ ಹಾಗೂ ಶ್ರೀರಾಮುಲು ಪ್ರಾಬಲ್ಯದ ವಿರುದ್ದ ತೊಡೆತಟ್ಟಿ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು. ಈ ಐತಿಹಾಸಿಕ ಪಾದಯಾತ್ರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಇದು 2013ರಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡಿತು.
2010ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿಯಾಗಿದ್ದವರು ಬಿ.ಎಸ್. ಯಡಿಯೂರಪ್ಪ. ಆಗ ಅಧಿಕಾರದಲ್ಲಿ ಪ್ರಾಬಲ್ಯ ಹೊಂದಿದ್ದು ಗಣಿಧಣಿಗಳಾದ ಜನಾರ್ದನ್ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು. ರಾಜ್ಯ ವಿಧಾನಸಭೆಯಲ್ಲಿ ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ದರು. ವಿಧಾನಸಭೆಯಲ್ಲೇ ಬಳ್ಳಾರಿ ಗಣಿಧಣಿಗಳ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ ಭುಜತಟ್ಟಿ, ನಾವು ಬಳ್ಳಾರಿಗೆ ಬಂದೇ ಬರುತ್ತೇವೆ. ನಡೆದುಕೊಂಡೇ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಪ್ರತಿ ಸವಾಲು ಹಾಕಿದ್ದರು. ಆಗ ಹುಟ್ಟಿದ್ದೇ ಬಳ್ಳಾರಿ ಪಾದಯಾತ್ರೆ. 2010ರ ಜುಲೈ 25 ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭವಾಯಿತು. ಬೆಂಗಳೂರಿನಿಂದ ಬಳ್ಳಾರಿಗೆ ಹೊರಟ ಪಾದಯಾತ್ರೆ ಸಮಾರೋಪ ಆಗಿದ್ದು ಆಗಸ್ಟ್ 8 ರಂದು. ಅಂದು ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಗಣಿಧಣಿಗಳು ಹಾಗೂ ಬಿಜೆಪಿ ಸರಕಾರದ ವಿರುದ್ಧ ಅಬ್ಬರಿಸಿದ್ದರು.
ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ: 2013ರಲ್ಲಿ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆ ನಡೆಸಿದ್ದರು. ಕೃಷ್ಣಾದ ಎ ಮತ್ತು ಬಿ ಸ್ಕೀಮ್‌ನಡಿ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳಲು ಸರಕಾರ ವೈಫಲ್ಯ ಹಾಗೂ ನೀರಾವರಿ ಯೋಜನೆಗೆ ಅನುಷ್ಠಾನದಲ್ಲಿನ ವೈಫಲ್ಯ ವಿರೋಧಿಸಿ ಚುನಾವಣಾ ಪೂರ್ವ ಜ.7 ರಿಂದ 14 ರವರೆಗೆ ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಎಂಬ ಯಾತ್ರೆ ಕೈಗೊಂಡಿತ್ತು. ಕೃಷ್ಣ ಯೋಜನೆಯಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳದೇ ಇರುವುದರಿಂದ 259 ಟಿಎಂಸಿ ನೀರು ಆಂಧ್ರಕ್ಕೆ ಹೋಗುತ್ತಿದೆ. ಅಲ್ಲಿನ ನೀರಾವರಿ ಯೋಜನೆಗೆ 17 ಸಾವಿರ ಕೋಟಿ ರೂ. ಖರ್ಚು ಮಾಡುವ ಭರವಸೆ ನೀಡಿದ್ದ ಬಿಜೆಪಿ, ಕೇವಲ 500 ಕೋಟಿ ರೂ. ನೀಡಿದೆ ಎಂಬ ಪ್ರಮುಖ ಅಜೆಂಡಾದೊಂದಿಗೆ ಪಾದಯಾತ್ರೆ ನಡೆಸಲಾಗಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಜೆಟ್‌ನಲ್ಲಿ ಇದಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡಲಾಗುವುದೆಂಬ ಭರವಸೆಯೊಂದಿಗೆ ಪಾದಯಾತ್ರೆ ನಡೆಸಿತ್ತು. ಹೊಸಪೇಟೆಯಿಂದ ಆರಂಭಗೊಂಡು ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳದ ಮಾರ್ಗವಾಗಿ ಕೂಡಲಸಂಗಮದಲ್ಲಿ ಸಮಾರೋಪಗೊಂಡು ಸುಮಾರು 140 ಕಿ.ಮೀ ಪಾದಯಾತ್ರೆ ನಡೆಸಲಾಯಿತು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಮೇಕೆದಾಟು ಪಾದಯಾತ್ರೆ. 2022ರಂದು ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಜಾರಿಗಾಗಿ ಆಗ್ರಹಿಸಿ ಮಾಡಿದ ಪಾದಯಾತ್ರೆ. ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡಿತ್ತು. ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 9, 2022 ರಿಂದ ಆರಂಭವಾದ ಪಾದಯಾತ್ರೆ ಎರಡು ಹಂತಗಳಲ್ಲಿ ನಡೆಸಲಾಗಿತ್ತು. ಐದು ದಿನಗಳ ಕಾಲ ಪಾದಯಾತ್ರೆ ನಡೆಸಿ ಕೋವಿಡ್ ನಿಯಮಾವಳಿ ಹಿನ್ನೆಲೆ ನಿಲ್ಲಿಸಿದ್ದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ಫೆ.27 ರಿಂದ ಮರು ಆರಂಭಿಸಿ ಮಾ.2, 2022ಕ್ಕೆ ಮುಕ್ತಾಯವಾಗಿತ್ತು. 165 ಕಿ.ಮೀ. ಕ್ರಮಿಸಿ 9 ದಿನಗಳ ಪಾದಯಾತ್ರೆ ನಡೆಸಲಾಗಿತ್ತು.
ಬೆಂಗಳೂರು ನಗರಕ್ಕೆ ನೀರು ಒದಗಿಸಬಹುದಾದ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ವಿಳಂಬ ಮಾಡುತ್ತಿವೆ ಎನ್ನುವುದು ಕಾಂಗ್ರೆಸ್‌ನ ಪ್ರಧಾನ ಆರೋಪವಾಗಿತ್ತು. ಮೇಕೆದಾಟು ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಸೇರಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಂಗಳೂರಿನ ಬಸವನಗುಡಿಯಲ್ಲಿ ಸಮಾರೋಪಗೊಂಡಿದ್ದ ಮೇಕೆದಾಟು ಪಾದಯಾತ್ರೆ ರಾಜಕೀಯ ಲೆಕ್ಕಾಚಾರ ಹೊಂದಿತ್ತು.
ಪಾದಯಾತ್ರೆಯಿಂದ ಗದ್ದುಗೆ ಹಿಡಿದ ಕಾಂಗ್ರೆಸ್: ಬಳ್ಳಾರಿ ಪಾದಯಾತ್ರೆ ಹಾಗೂ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಮೂಲಕ ಕಾಂಗ್ರೆಸ್ 2013ರ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಪರಿಣಾಮ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಳ್ಳಾರಿ ಜಿಲ್ಲೆಯಲ್ಲಿ 8 ಕ್ಷೇತ್ರಗಳ ಪೈಕಿ 4ರಲ್ಲಿ ಚಿಗುರೊಡೆದಿತ್ತು. ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 4 ರಿಂದ 6 ಸ್ಥಾನಗಳಿಗೆ ಏರಿಕೆ ಕಂಡಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಬಹುಮತದ ಗೆಲುವು ಸಾಧಿಸಿತ್ತು.
ತನ್ನ ಮತ ಪ್ರಮಾಣವನ್ನು ಶೇ 36.76ಗೆ ಏರಿಕೆ ಮಾಡಿತ್ತು. ತಮ್ಮ ಪಾದಯಾತ್ರೆಗಳ ಮೂಲಕ ಕಾಂಗ್ರೆಸ್ 2013ರಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿನ 56 ಸ್ಥಾನಗಳ ಪೈಕಿ 34 ಸ್ಥಾನ ಗೆದ್ದಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ 19 ಸ್ಥಾನದಲ್ಲಿ ಗೆದ್ದು ಬೀಗಿತ್ತು. ಅದೇ ರೀತಿ ಮಧ್ಯ ಕರ್ನಾಟಕ ಭಾಗದಲ್ಲಿ 32 ಸ್ಥಾನಗಳ ಪೈಕಿ 18 ಸೀಟು ಗೆದ್ದಿತ್ತು. ಆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 40 ಸ್ಥಾನಕ್ಕೆ ಕುಸಿತ ಕಂಡಿತು.
ಮೇಕೆದಾಟು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಡಿಕೆಶಿಗೆ ಬೆಂಗಳೂರು ಸೇರಿದಂತೆ ರಾಮನಗರದ ಮಟ್ಟಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡಿತ್ತು. ಮೇಕೆದಾಟು ಪಾದಯಾತ್ರೆ ಬಂದ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲು ಸಫಲವಾಗಿತ್ತು.
ಬೆಂಗಳೂರು
ಅಗಸ್ಟ್ 10 ರಂದು ಬೆಂಗಳೂರು ಮೆಟ್ರೋ ಫೇಸ್-3 ಶಂಕುಸ್ಥಾಪನೆ: ಪ್ರಧಾನಿ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಮತ್ತೊಂದು ಸಿಹಿ ಸುದ್ದಿ. ಬೆಂಗಳೂರು ಮೆಟ್ರೋ ಫೇಸ್-3 ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 10ರಂದು ಪ್ರಧಾನಿ ಮೋದಿ ಮೆಟ್ರೋ ಯೆಲ್ಲೋ ಲೈನ್ ಅನ್ನು ಉದ್ಘಾಟಿಸುವುದರ ಜೊತೆಗೆ ಜೆಪಿ ನಗರ ವೆಗಾಸಿಟಿ ಮಾಲ್‌ನಿಂದ ಕಡಬಗೆರೆವರೆಗೆ ವಿಸ್ತರಿಸಲಾಗಿರುವ ಮೆಟ್ರೋ ಮಾರ್ಗದ ಶಂಕುಸ್ಥಾಪನೆ ಕಾರ್ಯವನ್ನು ಸಹ ನೆರವೇರಿಸಲಿದ್ದಾರೆ,” ಎಂದು ಹೇಳಿದರು.
ಈ ಯೋಜನೆಯು ಸುಮಾರು ₹17,000 ಕೋಟಿ ವೆಚ್ಚದ ಫೇಸ್-3 ಯೋಜನೆಯ ಭಾಗವಾಗಿದೆ. ಮೊದಲೇ ಯೆಲ್ಲೋ ಲೈನ್ ಶಂಕುಸ್ಥಾಪನೆಗೆ ಮೋದಿ ಅವರೇ ಆಗಿದ್ದರೆ, ಈಗ ಉದ್ಘಾಟನೆಯ ಗೌರವವೂ ಅವರಿಗೇ ಸಲ್ಲಲಿದೆ.
ಡಿಸಿಎಂ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾತ್ರವಿದೆ ಎಂದು ಹೇಳಿರುವುದರ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸುತ್ತಾ, “ಇದುವರೆಗೆ ಈ ಯೋಜನೆಯ ಬಗ್ಗೆ ಯಾವ ರಾಜ್ಯ ಸಚಿವರೂ ಚಿಂತೆ ಮಾಡಿಲ್ಲ. ಪ್ರಧಾನಿ ಬರುವ ಸುದ್ದಿ ತಿಳಿಯುತ್ತಿದ್ದಂತೆ ಕ್ರೆಡಿಟ್ ಕಳಿಸಲು ಮುಂದಾಗಿದ್ದಾರೆ,” ಎಂದು ಟೀಕಿಸಿದರು.
ಫ್ಲೈಓವರ್ ಪ್ರಗತಿಯ ಮೇಲೂ ಟೀಕೆ:
“ಈಜಿಪುರದ 2.5 ಕಿ.ಮೀ ಫ್ಲೈಓವರ್‌ನ್ನು ಎಂಟು ವರ್ಷಗಳಿಂದ ಪೂರ್ಣಗೊಳಿಸಲಾಗಿಲ್ಲ. ಅದರೆ ಇದೀಗ 100 ಕಿ.ಮೀ ರಸ್ತೆಗಳ ಯೋಜನೆ ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.
ಮೆಟ್ರೋ ಯೋಜನೆಗೆ ಹಿಂದೆ ಸರ್ಕಾರದ ಕೊಡುಗೆ:
ಕೊರೋನಾ ಸಮಯದಲ್ಲೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಅನುದಾನ ಒದಗಿಸಿ ಕೆಲಸ ಮುಂದುವರೆದಿದ್ದವು. ಆದರೆ ಇದೀಗ ಎಂಡಿ ನೇಮಕ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಅಪರಾಧ
Breaking News ಚಾಲಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸಂಸದ ಡಾ. ಸುಧಾಕರ್ ಹೆಸರು ಉಲ್ಲೇಖ!

ಚಿಕ್ಕಬಳ್ಳಾಪುರ, ಆಗಸ್ಟ್ 7 – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೈನಂದಿನ ಶಾಂತಿಯನ್ನು ಬೆಚ್ಚಿಬೀಳಿಸುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಜಿಲ್ಲಾ ಪಂಚಾಯತ್ ಕಚೇರಿಯ ಆವರಣದಲ್ಲಿ 33 ವರ್ಷದ ಗುತ್ತಿಗೆ ಚಾಲಕ ಬಾಬು ಎಂ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೋಕಾಂತರವಾಗಿದೆ.
ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಹೆಸರು:
8 ವರ್ಷಗಳಿಂದ ಲೆಕ್ಕಪರಿಶೋಧನೆ ವಿಭಾಗದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಬಾಬು, ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಅವರ ಬೆಂಬಲಿಗರಾದ ನಾಗೇಶ್ ಮತ್ತು ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವೆನಿಸಿದ ಹಣಕಾಸು ವಂಚನೆ:
ಬಾಬು ಅವರು ಡೆತ್ ನೋಟ್‌ನಲ್ಲಿ, ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಬಾಬು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಚೇರಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು:
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ FIR ದಾಖಲಾತಿ ನಡೆಯುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು
ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಅವ್ಯವಸ್ಥೆ: ಹೊಸ ಯೋಜನೆಗಳ ಬಗ್ಗೆ ಶಾಸಕ ಎಸ್.ಟಿ. ಸೋಮಶೇಖರ್ ಅಸಮಾಧಾನ

ಬೆಂಗಳೂರು, ಆಗಸ್ಟ್ 7 – ನಗರದಲ್ಲಿ ಈಗಿನ ವಸತಿ ಯೋಜನೆಗಳು ಪೂರ್ಣವಾಗಿಲ್ಲದಿರುವಾಗ ಹೊಸ ಭೂಸ್ವಾಧೀನ ಅಧಿಸೂಚನೆಗಳನ್ನು ನೀಡುವುದು ಅರ್ಥವಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಕಿಡಿಕಾರಿದರು.
ಯಶವಂತಪುರ ಕ್ಷೇತ್ರದ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ಬರಾಯನಪಾಳ್ಯ ಎ ಹಾಗೂ ಬಿ ಗ್ರಾಮಗಳಲ್ಲಿ ಹೊಸ ಅಂಗನವಾಡಿ ಕಟ್ಟಡ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಲೋಕಾರ್ಪಣೆ ವೇಳೆ ಅವರು ಮಾತನಾಡಿದರು.
ಅವರು ಅಭಿಪ್ರಾಯಪಟ್ಟ ಪ್ರಮುಖ ವಿಷಯಗಳು:
- ಬೆಂಗಳೂರಿನ ಜನಸಂಖ್ಯೆ ಈಗಾಗಲೇ 1.5 ಕೋಟಿಗೂ ಮೀರುತ್ತಿದೆ.
- ವಸತಿ ಸಮುಚ್ಛಯಗಳಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಬಾಕಿಯಿವೆ.
- ಕುಡಿಯುವ ನೀರಿನ ಕೊರತೆ, ಒಳಚರಂಡಿ ಸಮಸ್ಯೆ, ರಾಜಕಾಲುವೆಗಳ ಉಕ್ಕಿಹರಿವು ನಗರದ ಮುಖ್ಯ ಸಮಸ್ಯೆಗಳಾಗಿವೆ.
- ಕೆಲ ಕಟ್ಟಡಗಳು ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿದ್ದು, ಸೋರಿಕೆ ಸಮಸ್ಯೆ ಜನರನ್ನು ಕಾಡುತ್ತಿದೆ.
- “ಕಟ್ಟಡ ಕುಸಿದು ಅನಾಹುತವಾದರೆ ಹೊಣೆ ಯಾರು?” ಎಂದು ಅವರು ಪ್ರಶ್ನಿಸಿದರು.
ಬೇರೆ ಪ್ರಮುಖ ಅಂಶಗಳು:
ನಗರದ ವಾಹನ ಸಂಚಾರ ದಟ್ಟಣೆ, ನಿಯಂತ್ರಣ ತಪ್ಪಿದ ನಗರ ವಿಸ್ತರಣೆ, ಮೂಲಸೌಕರ್ಯದ ಕೊರತೆ ಇವುಗಳಿಂದ ನಾಗರಿಕರು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಹೊರಗೆ ಹೊಸ ವಸತಿ ಯೋಜನೆಗಳನ್ನು ರೂಪಿಸಿ ಮೂಲಸೌಕರ್ಯ ಒದಗಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯವೆಂದು ಶಾಸಕ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಜರಿದ್ದವರು:
ಪಂಚಾಯತ್ ಅಧ್ಯಕ್ಷೆ ಹೇಮಾ ನಾರಾಯಣ್, ಸದಸ್ಯರು ಸದಾನಂದ.ಡಿ, ಎನ್.ಕುಮಾರ್, ರೇವಣಸಿದ್ದಯ್ಯ, ಅಶ್ವತ್, ವೆಂಕಟಾಚಲ, ಸುನಿಲ್, ಪುಟ್ಟಮಲ್ಲು, ತಾತಪ್ಪ, ಶಿವಣ್ಣ, ಹನುಮಂತ ಹಾಗೂ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು9 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ