Connect with us

ಕ್ರೀಡೆ

ಪ್ಯಾರಿಸ್​ ಒಲಿಂಪಿಕ್​​ಗೆ ವರ್ಣರಂಜಿತ ತೆರೆ: ಪರೇಡ್​ನಲ್ಲಿ ಮನು ಭಾಕರ್​, ಶ್ರೀಜೇಶ್ ಇತರರು ಭಾಗಿ – Paris Olympics 2024

Published

on

ಪ್ಯಾರಿಸ್: ಒಲಿಂಪಿಕ್​ 2024ಕ್ಕೆ ಪ್ಯಾರಿಸ್‌ನ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿದ್ದಿದೆ. ಕ್ರೀಡಾಲೋಕದ ಹಬ್ಬದ ವಿದಾಯದ ಕಾರ್ಯಕ್ರಮವು ಮುಂದಿನ 2028ರ ಒಲಿಂಪಿಕ್ ಕ್ರೀಡಾಕೂಟದ ತಾಣವಾದ ಲಾಸ್ ಏಂಜಲೀಸ್‌ಗೆ ಜವಾಬ್ದಾರಿ ರವಾನೆಗೆ ಸಾಕ್ಷಿಯಾಯಿತು. LA28 (ಲಾಸ್​ ಎಂಜಲಿಸ್​ 2028) ಹಸ್ತಾಂತರಿಸುವಾಗ ಕ್ಯಾಲಿಫೋರ್ನಿಯಾದ ಗಾಯಕ ಹೆಚ್ಇಆರ್ ಅಮೆರಿಕದ ರಾಷ್ಟ್ರಗೀತೆಯನ್ನು ಹಾಡಿದರೆ, ​ಟಾಮ್ ಕ್ರೂಸ್ ರಾಪ್ಪಲ್ಲಿಂಗ್ ಸಾಹಸ ಪ್ರದರ್ಶಿಸಿದರು.

ಭಾರತದ ಪದಕ ವಿಜೇತರಾದ ಮನು ಭಾಕರ್ ಹಾಗೂ ಹಾಕಿ ಆಟಗಾರ ಶ್ರೀಜೇಶ್ ತ್ರಿವರ್ಣ ಧ್ವಜಧಾರಿಗಳಾಗಿ ಸಮಾರೋಪ ಸಮಾರಂಭದ ಪರೇಡ್​ನಲ್ಲಿ ಪಾಲ್ಗೊಂಡರು. ಲಕ್ಷಾಂತರ ಕ್ರೀಡಾಭಿಮಾನಿಗಳು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಪರೇಡ್​ ನಡೆಯಿತು.

ಫ್ರೆಂಚ್ ಗಾಯಕ, ಗೀತರಚನಾಕಾರ ಜಹೋ ಡಿ ಸಗಾಜನ್, ಫ್ರೆಂಚ್ ಸಂಗೀತ ದಿಗ್ಗಜ ಎಡಿತ್ ಪಿಯಾಫ್ ಅವರ “ಸೌಸ್ ಲೆ ಸಿಯೆಲ್ ಡಿ ಪ್ಯಾರಿಸ್” ನಿರೂಪಣೆಯೊಂದಿಗೆ ಸಮಾರೋಪ ಸಮಾರಂಭಕ್ಕೆ ಚಾಲನೆ ಸಿಕ್ಕಿತು. ಸಮಾರೋಪ ಸಮಾರಂಭದಲ್ಲಿ ಪ್ರೋಟೋಕಾಲ್‌ ಪ್ರಕಾರ ಗ್ರೀಕ್ ಧ್ವಜವನ್ನು ಹಾರಿಸಲಾಯಿತು. 1995ರಲ್ಲೇ ಆರಂಭಗೊಂಡಿರುವ ವರ್ಸೈಲ್ಸ್‌ನ ಫ್ರೆಂಚ್ ಇಂಡೀ ರಾಕ್ ಬ್ಯಾಂಡ್ ಪ್ರದರ್ಶನವು ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಬೆರಗುಗೊಳಿಸಿತು. ಫ್ರೆಂಚ್ ಕಲಾವಿದ ಕವಿನ್ಸ್ಕಿ ಸುಪ್ರಸಿದ್ದ ನೈಟ್‌ಕಾಲ್ ಪ್ರದರ್ಶಿಸಿ ಜನರು ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ತಂದರು. ಪಿಯಾನೋ ವಾದಕ ಅಲೈನ್ ರೋಚೆ ‘ದಿ ಹಿಮ್ ಟು ಅಪೊಲೊ’ ಪ್ರದರ್ಶನ ಮಾಡಿದರು. ಒಪೆರಾ ಗಾಯಕ ಬೆಂಜಮಿನ್ ಬರ್ನ್‌ಹೈಮ್ ಸಾಥ್​ ನೀಡಿದರು.

ಅಮೆರಿಕಕ್ಕೆ ಅಗ್ರಸ್ಥಾನ: 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ ಒಟ್ಟು 126 ಪದಕಗಳೊಂದಿಗೆ ಪ್ಯಾರಿಸ್ ಒಲಿಂಪಿಕ್​ ಪದಕ ಪಟ್ಟಿಯಲ್ಲಿ ಯುಎಸ್ಎ ಅಗ್ರಸ್ಥಾನ ಪಡೆಯಿತು. ಎರಡನೇ ಸ್ಥಾನದಲ್ಲಿರುವ ಚೀನಾ 40 ಚಿನ್ನ, 27 ಬೆಳ್ಳಿ ಹಾಗೂ 24 ಕಂಚಿನ ಪದಕಗಳೊಂದಿಗೆ ಒಟ್ಟು 91 ಪದಕಗಳನ್ನು ಗೆದ್ದಿದೆ. 20 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಒಟ್ಟು 45 ಪದಕಗಳನ್ನು ಜಯಿಸಿದ ಜಪಾನ್ ಮೂರನೇ ಸ್ಥಾನ ಗಳಿಸಿತು. ಒಂದು ಬೆಳ್ಳಿ ಪದಕ ಮತ್ತು ಐದು ಕಂಚಿನ ಪದಕಗಳೊಂದಿಗೆ ಒಟ್ಟು 6 ಪದಕಗಳನ್ನು ಜಯಿಸಿದ ಭಾರತವು 71ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

117 ಭಾರತೀಯ ಅಥ್ಲೀಟ್‌ಗಳ ತಂಡವು ಜಾಗತಿಕ ಕ್ರೀಡಾಕೂಟಕ್ಕೆ ಪದಕಗಳಿಗಾಗಿ ಸೆಣಸಾಡಿತು. ಶೂಟರ್​ ಮನು ಭಾಕರ್ ಈ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಅಲ್ಲದೆ, ಕಂಚಿನ ಪದಕದೊಂದಿಗೆ, ಒಲಿಂಪಿಕ್ ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜೊತೆಗೆ, ಸರಬ್ಜೋತ್ ಸಿಂಗ್ ಜೊತೆ ಮಿಶ್ರ ತಂಡದಲ್ಲಿಯೂ 10 ಮೀಟರ್ ಏರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಕಂಚಿಗೆ ಕೊರಳೊಡ್ಡಿದ ಮನು ಭಾಕರ್​, ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಸರಬ್ಜೋತ್‌ರೊಂದಿಗೆ ಮನು ಗೆದ್ದ ಪದಕವು ಶೂಟಿಂಗ್‌ನಲ್ಲಿ ನಮ್ಮ ದೇಶದ ತಂಡವೊಂದರ ಚೊಚ್ಚಲ ಪದಕವಾಗಿದೆ.

ಸ್ವಪ್ನಿಲ್ ಕುಸಾಲೆ ಶೂಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ ತಂದರು. ಇದು ಒಂದೇ ಒಲಿಂಪಿಕ್​ನಲ್ಲಿ ಈ ಕ್ರೀಡೆಯಲ್ಲಿ ಮೂಡಿಬಂದ ಭಾರತದ ಶ್ರೇಷ್ಠ ಸಾಧನೆಯಾಗಿದೆ. 50 ಮೀಟರ್ ರೈಫಲ್ ತ್ರಿ ಪೊಸಿಷನ್‌ನಲ್ಲಿ ಭಾರತಕ್ಕೆ ಬಂದ ಮೊದಲ ಪದಕ ಇದಾಗಿದೆ.

ಭಾರತೀಯ ಪುರುಷರ ಹಾಕಿ ತಂಡವು ಪ್ಯಾರಿಸ್‌ನಲ್ಲಿ ಕಂಚಿನ ಗೆದ್ದು ಟೋಕಿಯೊ-2020ರ ಯಶಸ್ಸನ್ನು ಪುನರಾವರ್ತಿಸಿತು. 1972ರ ಮ್ಯೂನಿಚ್ ಒಲಿಂಪಿಕ್ಸ್​ ಬಳಿಕ ಹಾಕಿ ತಂಡವು ಸತತ ಎರಡು ಕಂಚಿನ ಪದಕಗಳನ್ನು ಜಯಿಸಿತು. ಜಾವೆಲಿನ್ ಎಸೆತದಲ್ಲಿ ಬೆಳ್ಳಿಗೆ ಕೊರಳೊಡ್ಡಿದ ನೀರಜ್ ಚೋಪ್ರಾ ತಮ್ಮ ಒಲಿಂಪಿಕ್ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಇದರೊಂದಿಗೆ ಭಾರತದ ಅತ್ಯಂತ ಯಶಸ್ವಿ ವೈಯಕ್ತಿಕ ಒಲಿಂಪಿಯನ್ ಆಗಿ ಹೊರಹೊಮ್ಮಿದರು. ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಕಂಚು ಜಯಿಸಿ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತರಾದರು.

6 ಪದಕಗಳ ಸಾಧನೆ ಹೊರತುಪಡಿಸಿದರೆ, ಭಾರತವು ಪ್ಯಾರಿಸ್ ಒಲಿಂಪಿಕ್ ಹೆಚ್ಚಿನ ಸ್ಪರ್ಧೆಗಳಲ್ಲಿ ನಿರಾಶೆ ಅನುಭವಿಸಿತು. ಕೆಲ ಬಹುನಿರೀಕ್ಷಿತ ಅಥ್ಲೀಟ್‌ಗಳು ತಮ್ಮ ವಿಭಾಗಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರಿಂದ ದೇಶವು 6 ಸಂಭಾವ್ಯ ಪದಕಗಳನ್ನು ಕಳೆದುಕೊಂಡಿತು. ಇದರಲ್ಲಿ ಲಕ್ಷ್ಯ ಸೇನ್, ಮೀರಾಬಾಯಿ ಚಾನು ಮತ್ತು ಮೂರನೇ ಒಲಿಂಪಿಕ್​ ಪದಕ ಜಯಿಸುವ ಸಮೀಪದಲ್ಲಿದ್ದ ಮನು ಭಾಕರ್ ಕೂಡ ಸೇರಿದ್ದಾರೆ. ಅಲ್ಲದೆ, ಮಿಶ್ರ ತಂಡದ ಆರ್ಚರಿ ಜೋಡಿಯಾದ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಕಂಚಿನ ಪದಕದ ಪಂದ್ಯದಲ್ಲಿ ಸೋತರು. ಆದರೆ ಒಲಿಂಪಿಕ್ ಪದಕದ ಸುತ್ತಿಗೆ ತಲುಪಿದ ಭಾರತದ ಮೊದಲ ಬಿಲ್ಲುಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನ ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಉತ್ತಮ ಫಾರ್ಮ್‌ನಲ್ಲಿದ್ದರೂ ಪದಕ ಜಯಿಸುವಲ್ಲಿ ವಿಫಲರಾದರು. ಅಲ್ಲದೆ, ಪಿ.ವಿ. ಸಿಂಧು ಸತತ ಮೂರು ಒಲಿಂಪಿಕ್ಸ್‌ ಪದಕಗಳ ಹ್ಯಾಟ್ರಿಕ್ ಸಾಧಿಸುವಲ್ಲಿ ವಿಫಲರಾದರು. ಅನುಭವಿ ಬಿಲ್ಲುಗಾರ್ತಿ ಮತ್ತು ಬಹುಸಮಯದ ಒಲಿಂಪಿಯನ್ ದೀಪಿಕಾ ಕುಮಾರಿ ಅಪಾರ ಅನುಭವ ಮತ್ತು ಯಶಸ್ಸಿನ ಹೊರತಾಗಿಯೂ ಪದಕವಿಲ್ಲದೆ ಮರಳಿದರು. ಟೋಕಿಯೊ 2020ರ ಕಂಚಿನ ಪದಕ ವಿಜೇತರಾದ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ಲೊವ್ಲಿನಾ ಬೊರ್ಗೊಹೈನ್ ದೇಶಕ್ಕೆ ನಿರೀಕ್ಷಿತ ಪದಕ ಗೆಲ್ಲಲಾಗಲಿಲ್ಲ. ಇನ್ನೊಂದೆಡೆ, ಮಹಿಳೆಯರ 50 ಕೆಜಿ ಕುಸ್ತಿಯ ಐತಿಹಾಸಿಕ ಫೈನಲ್‌ ಹಣಾಹಣಿಗೂ ಮುನ್ನ ತೂಕದ ಹೆಚ್ಚಳದಿಂದ ವಿನೇಶ್ ಫೋಗಟ್ ಅನರ್ಹಗೊಂಡಿರುವುದು ದೇಶದ ಜನತೆಗೆ ಭಾರೀ ನಿರಾಸೆ ತರಿಸಿತು.

ಭಾರತೀಯ ಕ್ರೀಡಾಪಟುಗಳು ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೈಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಸ್ ಸೇರಿದಂತೆ 16 ಕ್ರೀಡೆಗಳ 69 ಪದಕಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಕ್ರೀಡೆ

ಕೃಣಾಲ್ ಪಾಂಡ್ಯ ಬೌಲಿಂಗ್‌ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್‌

Published

on

ಹೈದರಾಬಾದ್: Indian Premier League 2026ನಲ್ಲಿ ಶುಕ್ರವಾರ ನಡೆದ Sunrisers Hyderabad ಹಾಗೂ Royal Challengers Bengaluru ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಸ್ಪಿನ್ನರ್ Krunal Pandya ಎಸೆದ ಬೌನ್ಸರ್‌ಗಳಿಗೆ ಸನ್‌ರೈಸರ್ಸ್‌ ತಂಡದ ಸಿಇಒ ಹಾಗೂ ಮಾಲಕಿ Kavya Maran ಆಕ್ಷೇಪ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಸತತವಾಗಿ ವೇಗದ ಬೌನ್ಸರ್‌ಗಳನ್ನು ಎಸೆದರು. ಸ್ಪಿನ್ನರ್ ಆಗಿದ್ದರೂ ಗಂಟೆಗೆ 120-130 ಕಿ.ಮೀ ವೇಗದಲ್ಲಿ ಚೆಂಡು ಎಸೆಯುತ್ತಿರುವುದರ ಬಗ್ಗೆ ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದರು. Ravichandran Ashwin ಸೇರಿ ಕೆಲ ದಿಗ್ಗಜರು ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು.

ಪಂದ್ಯದ ವೇಳೆ ಕೃಣಾಲ್‌ ಎಸೆದ ಬೌನ್ಸರ್ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದ ಕಾವ್ಯ ಮಾರನ್ ಅಸಮಾಧಾನ ವ್ಯಕ್ತಪಡಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. “ಅವರು ಸರಿಯಾಗಿ ಬೌಲಿಂಗ್ ಮಾಡುತ್ತಿಲ್ಲ, ಚೆಂಡನ್ನು ಎಸೆಯುತ್ತಿದ್ದಾರೆ” ಎಂಬ ಅರ್ಥ ಬರುವ ರೀತಿಯಲ್ಲಿ ಸಹ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೊ ಈಗ ಭಾರೀ ವೈರಲ್ ಆಗಿದೆ. ಕೆಲ ಅಭಿಮಾನಿಗಳು ಕಾವ್ಯ ಅವರಿಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ಇದು ಕ್ರಿಕೆಟ್‌ನ ಭಾಗವೇ ಎಂದು ಪ್ರತಿಕ್ರಿಯಿಸಿದ್ದಾರೆ.

ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. Abhishek Sharma (56), Ishan Kishan (79) ಮತ್ತು Heinrich Klaasen (51) ಅರ್ಧಶತಕದ ನೆರವಿನಿಂದ ಎಸ್‌ಆರ್‌ಎಚ್ 255 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ Venkatesh Iyer ವೇಗದ ಆರಂಭ ನೀಡಿದರೂ, Virat Kohli ಮತ್ತು Devdutt Padikkal ಬೇಗ ಔಟಾದರು. ನಾಯಕ Rajat Patidar ಹಾಗೂ ಕೃಣಾಲ್ ಪಾಂಡ್ಯ ಹೋರಾಟ ನಡೆಸಿದರೂ ತಂಡ 200 ರನ್‌ಗಳಿಗೆ ಸೀಮಿತವಾಯಿತು.

Continue Reading

ಕ್ರೀಡೆ

ಮೈದಾನದಲ್ಲಿ ಕೋಪ ಸಿಡಿಸಿದ ವಿರಾಟ್ ಕೊಹ್ಲಿ: ವಿಡಿಯೊಗೆ ಭಾರೀ ಚರ್ಚೆ

Published

on

ಹೈದರಾಬಾದ್: Virat Kohli ಅವರ ಕ್ರೀಡಾಸ್ಫೂರ್ತಿಗೆ ಸಂಬಂಧಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. Indian Premier League 2026ನಲ್ಲಿ ಶುಕ್ರವಾರ ನಡೆದ Sunrisers Hyderabad ಮತ್ತು Royal Challengers Bengaluru ನಡುವಿನ ಪಂದ್ಯದಲ್ಲಿ ಕೊಹ್ಲಿ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ Travis Head ಅವರಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದ ಘಟನೆ ವೈರಲ್ ಆಗಿದೆ.

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ಕೊಹ್ಲಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ವರದಿಗಳ ಪ್ರಕಾರ, ವಿಕೆಟ್ ಪತನದ ಬಳಿಕ ಹೆಡ್ ಕೂಡ ಕೊಹ್ಲಿಯನ್ನು ಕೆಣಕಿದರೆಂದು ಹೇಳಲಾಗಿದ್ದು, ಇದರಿಂದ ಕೊಹ್ಲಿ ಅಸಮಾಧಾನಗೊಂಡಿದ್ದರು.

ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ಕೊಹ್ಲಿ, Pat Cummins, Abhishek Sharma ಹಾಗೂ Ishan Kishan ಜೊತೆ ಹೃತ್ಪೂರ್ವಕವಾಗಿ ಮಾತನಾಡಿದರೂ, ಟ್ರಾವಿಸ್ ಹೆಡ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಇದಕ್ಕೆ ಕೆಲ ಅಭಿಮಾನಿಗಳು ಕೊಹ್ಲಿ ವಿರುದ್ಧ ಟೀಕೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಪಂದ್ಯದಲ್ಲಿನ ತೀವ್ರ ಸ್ಪರ್ಧಾತ್ಮಕ ಮನೋಭಾವದ ಪರಿಣಾಮ ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ ಪಂದ್ಯದಲ್ಲಿ 55 ರನ್‌ಗಳಿಂದ ಸೋತಿದ್ದರೂ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಕ್ವಾಲಿಫೈಯರ್-1ಕ್ಕೆ ಪ್ರವೇಶಿಸಿದೆ. ಮೇ 26ರಂದು ಧರ್ಮಶಾಲಾದಲ್ಲಿ Gujarat Titans ವಿರುದ್ಧ ಆರ್‌ಸಿಬಿ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.

Continue Reading

ಕ್ರೀಡೆ

ಹಾಂಗ್ ಕಾಂಗ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಇಬ್ಬರು ಆಯ್ಕೆ

Published

on

ಬೆಂಗಳೂರು: ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್‌ಗೆ ಹೆಮ್ಮೆಯ ಕ್ಷಣ ಒದಗಿದ್ದು, ರಾಜ್ಯದ ಇಬ್ಬರು ಜಿಮ್ನಾಸ್ಟ್‌ಗಳು ಮತ್ತು ಇಬ್ಬರು ಕೋಚ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ 2ನೇ ಏಷ್ಯನ್ ಏಜ್ ಗ್ರೂಪ್ ಸ್ಪರ್ಧೆ ಹಾಗೂ 7ನೇ ಸೀನಿಯರ್ ಏಷ್ಯನ್ ಟ್ರಾಂಪೋಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತ ಪರ ಕಣಕ್ಕಿಳಿಯಲಿದ್ದಾರೆ.

Aavni Amit ಮಹಿಳಾ AG1 ವಿಭಾಗದಲ್ಲಿ ಮತ್ತು Satvik Gupta ಪುರುಷರ AG3 ವಿಭಾಗದಲ್ಲಿ ಭಾರತ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಕರ್ನಾಟಕದ ಕೋಚ್‌ಗಳಾದ Jitesh Chandran ಹಾಗೂ Basavaraj S. Tambur ಕೂಡ ಭಾರತೀಯ ತಂಡದೊಂದಿಗೆ ಹಾಂಗ್ ಕಾಂಗ್‌ಗೆ ತೆರಳಲಿದ್ದಾರೆ.

ಭಾರತೀಯ ತಂಡ ಮೇ 21ರಂದು ಹಾಂಗ್ ಕಾಂಗ್‌ಗೆ ಪ್ರಯಾಣ ಬೆಳೆಸಲಿದ್ದು, ಚಾಂಪಿಯನ್‌ಶಿಪ್ ಮುಗಿದ ಬಳಿಕ ಭಾರತಕ್ಕೆ ಮರಳಲಿದೆ. ಕರ್ನಾಟಕದ ಆಟಗಾರರು ಮತ್ತು ಕೋಚ್‌ಗಳ ಆಯ್ಕೆಗೆ ರಾಜ್ಯದ ಕ್ರೀಡಾ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ Dr. C. Prabhakar ಆಯ್ಕೆಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕದ ಪ್ರತಿಭೆಗಳು ಏಷ್ಯನ್ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ಶುಭ ಹಾರೈಸಿದರು.

ಈ ಆಯ್ಕೆ ಕರ್ನಾಟಕದ ಜಿಮ್ನಾಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.

Continue Reading

Trending