Connect with us

Blog

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್​ವರೆಗೆ ಸುರಂಗ ಮಾರ್ಗ, ಆಕಾಶ ಗೋಪುರ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು – Bengaluru Tunnel Road

Published

on

ಬೆಂಗಳೂರು: “ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ಮಾರ್ಗ ನಿರ್ಮಾಣ, ನಗರದಲ್ಲಿ 250 ಅಡಿ ಎತ್ತರದ ಆಕಾಶ ಗೋಪುರ (sky deck) ನಿರ್ಮಾಣ, ಹೊಸದಾಗಿ 52 ಇಂದಿರಾ ಕ್ಯಾಂಟೀನ್​ಗಳ ಸ್ಥಾಪನೆ ಸೇರಿದಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

“ನಗರದ ಹೆಬ್ಬಾಳ ಮೇಲ್ಸೇತುವೆ (ಎಸ್ಟೀಮ್ ಮಾಲ್) ಪ್ರದೇಶದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್​ನ ಮೇಲ್ಸೇತುವೆವರೆಗೆ ಸುರಂಗ ಮಾರ್ಗವನ್ನು 12,690 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿ 250 ಅಡಿ ಎತ್ತರದ ಆಕಾಶ ಗೋಪುರವನ್ನು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಆದರೆ, ಜಾಗದ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ” ಎಂದು ಹೇಳಿದರು.

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನವಾಗಿ 52 ಇಂದಿರಾ ಕ್ಯಾಂಟೀನ್​ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದೇ ರೀತಿ ಸಾಂಪ್ರದಾಯಿಕ ಬೀದಿದೀಪಗಳ ನಿರ್ವಹಣೆಯನ್ನು ‘ಇಂಧನ ಉಳಿತಾಯ -ಇಎಂಐ/ ವಾರ್ಷಿಕ ಪಾವತಿ ಮಾದರಿ ‘ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಯೋಜನೆ ಅಡಿಯಲ್ಲಿ ಎಲ್​ಇಡಿ ಬೀದಿದೀಪಗಳನ್ನು ಅಳವಡಿಸುವ ಹಾಗೂ 7 ವರ್ಷಗಳ ನಿರ್ವಹಣಾ ವೆಚ್ಚ 684.34 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಹೊಂಬೆಳಕು ಯೋಜನೆಯಡಿ 50 ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಿದ್ದು, ಪ್ರಸ್ತುತ ವರ್ಷದಲ್ಲಿ 10 ಕೋಟಿ ರೂ.ಗಳಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ” ಎಂದು ಸಚಿವರು ವಿವರಿಸಿದರು.

ಕ್ಯಾಬಿನೆಟ್​ನಲ್ಲಿ ಅನುಮೋದನೆಗೊಂಡ ಇತರ ವಿಷಯಗಳು: ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024 ಕ್ಕೆ ಅನುಮೋದನೆ. ಬಾಲ ಗರ್ಭಿಣಿಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಿವಿಧ ಇಲಾಖೆಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸುವುದು. 592 ಅಂಗನವಾಡಿ ಕೇಂದ್ರಗಳನ್ನು 85 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸುವ ಬಗ್ಗೆ ಒಪ್ಪಿಗೆ. ಮೆ.ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿ. (ಮೆ.ಮೈಸೂರು ಮಿನರಲ್ಸ್ ಲಿ.) ಸಂಸ್ಥೆಯ ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಸಾರ 1998, ಏ.1 ರಿಂದ 2005 ರ ಸೆ.30 ರವರೆಗಿನ ಅವಧಿಗೆ ವೇತನ ಬಾಕಿ, ಬಡ್ಡಿ ಇತ್ಯಾದಿಗಳನ್ನು ಪಾವತಿಸುವುದು. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ತಿದ್ದುಪಡಿ) ನಿಯಮಗಳು, 2024 ಕ್ಕೆ ಅನುಮೋದನೆ ನೀಡಲಾಗಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಕೇಂದ್ರ ಸರ್ಕಾರದ (ಆರ್ ಎಎಂಪಿ) ಕಾರ್ಯಕ್ರಮವನ್ನು (ಕೇಂದ್ರದ ಪಾಲು 118.72 ಕೋಟಿ ರೂ., ರಾಜ್ಯದ ಪಾಲು 29.25 ಕೋಟಿ ರೂ.) ರಾಜ್ಯದಲ್ಲಿ 147.87 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆಯಾದ ಮಳಿಗೆ ಮತ್ತು ನಿವೇಶನಗಳ ಕ್ರಯಪತ್ರ ನೀಡುವ ಕನಿಷ್ಠ ಕಾಲಾವಧಿಗೆ 10 ವರ್ಷಗಳಿಂದ 2 ವರ್ಷಗಳಿಗೆ ಇಳಿಸಲು ಒಪ್ಪಿಗೆ ನೀಡಲಾಗಿದೆ.

ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸೇವೆ (ನೇಮಕಾತಿ) (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲುಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2000.58 ಎಕರೆ ಹಾಗೂ ತೋರಣಗಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಭೂಮಿಯನ್ನು ಮೆ. Jsw ಸ್ಟೀಲ್ ಲಿ. ಸಂಸ್ಥೆಯ ಪರವಾಗಿ ಶುದ್ಧ ಕ್ರಯಪತ್ರಗಳನ್ನು ನೀಡಲು ಅನುಮೋದನೆ. ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಬೆಂಗಳೂರು ನಬಾರ್ಡ್ ಮೂಲಕ ಪನರ್ಧನ ಪಡೆಯಲು 1600 ಕೋಟಿ ರೂ.ಗಳಿಗೆ ರಾಜ್ಯ ಸರ್ಕಾರದ ಖಾತರಿಯನ್ನು ವಿಸ್ತರಿಸಿ 29.07.2024 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಕೆಎಎಸ್ ಅಧಿಕಾರಿ ರಾಜಮ್ಮ ಎ.ಚೌಡರೆಡ್ಡಿ ವಿರುದ್ಧ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರ ಶಿಫಾರಸ್ಸಿನಂತೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಸಂಪುಟ ಒಪ್ಪಿಗೆ ನೀಡಲಾಗಿದೆ. ಕೆಎಎಸ್ ಅಧಿಕಾರಿಗಳಾದ ಹೆಚ್.ಎಸ್. ಅರುಣ ಪ್ರಭ, ಡಾ.ಎನ್.ಸಿ. ವೆಂಕಟರಾಜು ಹಾಗೂ ಹರೀಶ್ ನಾಯಕ್ ಅವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ರ ಪ್ರಕರಣ 12(3) ರಡಿ ಉಪಲೋಕಾಯುಕ್ತರು ಇಲಾಖಾ ವಿಚಾರಣೆ ಕೋರಿ ಸಲ್ಲಿಸಿರುವ ವರದಿಯ ಬಗ್ಗೆ ಒಪ್ಪಿಗೆ ನೀಡಲಾಗಿದೆ.

ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಹಾಗೂ ಆರೋಗ್ಯ ಇಲಾಖೆಯ ಇತರೆ ಎಲ್ಲಾ ಆರೋಗ್ಯ ಸಂಬಂಧಿತ ಡಿಜಿಟಲ್ ಉಪಕ್ರಮಗಳ ಅನುಷ್ಠಾನನದ ಉದ್ದೇಶಕ್ಕಾಗಿ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ, 1960ರ ಅಡಿಯಲ್ಲಿ ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿ ಅನ್ನು ಸ್ಥಾಪಿಸಿ ನೋಂದಣಿ ಮಾಡುವ ಬಗ್ಗೆ ಅನುಮೋದನೆ. ಕರ್ನಾಟಕ ಸಿವಿಲ್ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) (2ನೇ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು, 2024ಕ್ಕೆ ಅನುಮೋದನೆ ನೀಡಲಾಗಿದೆ.

ಕರ್ನಾಟಕ ಪ್ರದೇಶ ಕುರುಬರ ಸಂಘ, ಕಲಬುರಗಿ ಶಾಖೆ ಇವರು ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಈ ಕಾಲೇಜಿಗೆ ಸೇರಿದ 3-07 ಎಕರೆ/ಗುಂಟೆ ಜಮೀನನ್ನು ಮಂಜೂರು ಮಾಡಲು ಒಪ್ಪಿಗೆ. ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕಿಸುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ-61ರ ಸರಪಳಿ 58.00 ಮತ್ತು 58.10 ಕಿ.ಮೀ ನಲ್ಲಿ ಸೇತುವೆ ಪುನ‌ರ್ ನಿರ್ಮಾಣ ಕಾಮಗಾರಿಯನ್ನು ರೂ.28.00 ಕೋಟಿಗಳ ಅಂದಾಜು ಮೊತ್ತದಲ್ಲಿ KRDCL ವತಿಯಿಂದ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Blog

11ನೇ ಮೈಲಿ ಬಳಿ ಬೆಂಕಿಯ ಕೆನ್ನಾಲಿಗೆ; ಚಾಲಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

Published

on

ಚಿಕ್ಕಬಳ್ಳಾಪುರ, ಜು.10: ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪೆಟ್ರೋಲ್ ಟ್ಯಾಂಕರ್ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆ ಪಕ್ಕದಲ್ಲಿದ್ದ ಹಾಲಿನ ಟ್ಯಾಂಕರ್ಗೂ ವ್ಯಾಪಿಸಿ ಎರಡೂ ವಾಹನಗಳು ಬಹುತೇಕ ಸುಟ್ಟು ಕರಕಲಾಗಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪೆಟ್ರೋಲ್ ಟ್ಯಾಂಕರ್ ಅತಿವೇಗದಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟ್ಯಾಂಕರ್‌ನಲ್ಲಿ ಕ್ಷಣಾರ್ಧದಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ವಾಹನ ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದೆ.

ಈ ವೇಳೆ ಸಮೀಪದಲ್ಲಿದ್ದ ಹಾಲಿನ ಟ್ಯಾಂಕರ್ ರಿವರ್ಸ್ ಪಡೆಯುತ್ತಿದ್ದಾಗ ಬೆಂಕಿಯ ಜ್ವಾಲೆ ಅದಕ್ಕೂ ವ್ಯಾಪಿಸಿದೆ. ಎರಡೂ ವಾಹನಗಳಲ್ಲಿ ಬೆಂಕಿ ವ್ಯಾಪಿಸುತ್ತಿದ್ದರೂ, ಚಾಲಕರು ಸಮಯಪ್ರಜ್ಞೆ ತೋರಿಸಿ ತಕ್ಷಣ ವಾಹನಗಳಿಂದ ಹೊರಗೆ ಜಿಗಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿಯ ತೀವ್ರತೆಯಿಂದ ಕೆಲಕಾಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಈ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕವಾಗಿ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಧಿಕಾರಿಗಳು ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

Continue Reading

Blog

ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ: ಸತ್ಯ ಹೊರಬರಲಿದೆ, ನಾನು ತಪ್ಪು ಮಾಡಿಲ್ಲ

Published

on

ಬೆಳ್ತಂಗಡಿ, ದಕ್ಷಿಣ ಕನ್ನಡ: ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡಮತದಾನದ ಹಿಂದೆ ತಾವಿಲ್ಲ ಎಂದು ಪುನರುಚ್ಚರಿಸಿದಷ್ಟೇ ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅಲ್ಲಿಂದ ಮಂಗಳೂರಿಗೆ ಬಂದು ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದಿದ್ದೇನೆ ಎಂದು ತಿಳಿಸಿದ ವಿಜಯೇಂದ್ರ, ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಅಡ್ಡಮತದಾನದಿಂದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಈ ಬೆಳವಣಿಗೆಯಿಂದ ತಮಗೂ ಮಾನಸಿಕವಾಗಿ ಬೇಸರವಾಗಿದೆ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಸತ್ಯಾಸತ್ಯತೆ ಬಹಿರಂಗಪಡಿಸುವ ಉದ್ದೇಶದಿಂದ ಶಾಸಕರಿಂದ ಆಣೆ-ಪ್ರಮಾಣ ಮಾಡಿಸಬೇಕೆಂದು ಭಾವನಾತ್ಮಕವಾಗಿ ಹೇಳಿದ್ದೆ. ಆದರೆ ಪಕ್ಷದ ಹಿರಿಯ ನಾಯಕರು ಆ ಹಂತಕ್ಕೆ ಹೋಗುವುದು ಬೇಡ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಕೈಬಿಟ್ಟಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಶೀರ್ವಾದದಿಂದ ಪಕ್ಷದ ರಾಜ್ಯಾಧ್ಯಕ್ಷನ ಜವಾಬ್ದಾರಿ ಸಿಕ್ಕಿದೆ. ಅಂತಹ ಸಂದರ್ಭದಲ್ಲಿ ಪಕ್ಷಕ್ಕೆ ದ್ರೋಹ ಮಾಡುವ ಅಥವಾ ಕೀಳುಮಟ್ಟದ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ವಿಜಯೇಂದ್ರ ಹೇಳಿದರು.

ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ವಿವಿಧ ಹೆಸರುಗಳನ್ನು ತೇಲಿಬಿಟ್ಟು ಬಿಜೆಪಿ ಶಾಸಕರ ಬಗ್ಗೆ ಅನುಮಾನ ಮೂಡಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೊಳಗೂ ಅನುಮಾನದ ವಾತಾವರಣ ನಿರ್ಮಾಣವಾಗಿರುವುದು ನಿಜ. ಆದರೆ ಸತ್ಯ ಇಂದು ಅಲ್ಲದಿದ್ದರೂ ನಾಳೆ ಹೊರಬರುತ್ತದೆ. ಕೇಂದ್ರ ನಾಯಕತ್ವಕ್ಕೂ ಎಲ್ಲ ಮಾಹಿತಿಯಿದ್ದು, ನನಗೆ ಯಾವುದೇ ತನಿಖಾ ವರದಿ ಬಂದಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಚುನಾವಣೆಗೆ ಮೊದಲೇ ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಅವರ ಅಭಿಪ್ರಾಯವನ್ನು ಉತ್ತಮ ಉದ್ದೇಶದಿಂದ ನೀಡಲಾಗಿದೆ ಎಂದು ಸ್ವಾಗತಿಸುತ್ತೇನೆ ಎಂದ ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬಲಾಗುವುದು. ಬಿಡದಿ ಭೂಸ್ವಾಧೀನ ಪ್ರಕರಣದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರ್ಪಡೆ ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

“ನಾನು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ಭಕ್ತನಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಸಮಯ ಬಂದಾಗ ಎಲ್ಲ ಸತ್ಯವೂ ಹೊರಬರುತ್ತದೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ” ಎಂದು ವಿಜಯೇಂದ್ರ ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ಸೇರಿದಂತೆ ಕರಾವಳಿ ಭಾಗದ ಹಲವು ಬಿಜೆಪಿ ಶಾಸಕರು ಹಾಗೂ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Continue Reading

Blog

ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ: ರಂಬುಟಾನ್ ಹಣ್ಣಿನತ್ತ ಜನರ ಒಲವು

Published

on

By

ರಂಬುಟಾನ್ ಹಣ್ಣಿನತ್ತ ಜನರ ಒಲವು

ಆರೋಗ್ಯಕರ ಆಹಾರಗಳತ್ತ ಜನರ ಆಸಕ್ತಿ ಹೆಚ್ಚುತ್ತಿರುವ ಹಿನ್ನೆಲೆ, ಉಷ್ಣವಲಯದ ಹಣ್ಣಾದ ರಂಬುಟಾನ್ ತನ್ನ ಪೌಷ್ಟಿಕಾಂಶದ ಗುಣಗಳಿಂದ ಗಮನ ಸೆಳೆಯುತ್ತಿದೆ. ಕಡಿಮೆ ಕ್ಯಾಲೋರಿ, ಹೆಚ್ಚಿನ ನೀರಿನ ಅಂಶ ಮತ್ತು ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವವರಿಗೆ ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ.
ತಜ್ಞರ ಪ್ರಕಾರ, ರಂಬುಟಾನ್‌ನಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಿ, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳು – ಮುಖ್ಯಾಂಶಗಳುಆರೋಗ್ಯಕರ ಆಹಾರ ಪದ್ಧತಿಯಲ್ಲಿ ರಂಬುಟಾನ್ ಸೇರಿಸಿಕೊಳ್ಳುವುದರಿಂದ ಹಲವು ಪೌಷ್ಟಿಕ ಲಾಭಗಳನ್ನು ಪಡೆಯಬಹುದು.ರಂಬುಟಾನ್ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶ ಹೊಂದಿರುವ ಪೌಷ್ಟಿಕ ಹಣ್ಣು.ವಿಟಮಿನ್ ಸಿ ಸಮೃದ್ಧವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸಿ ಜೀವಕೋಶಗಳನ್ನು ರಕ್ಷಿಸುತ್ತದೆ.ಫೈಬರ್‌ ಅಂಶ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ನೆರವಾಗುತ್ತದೆ.ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ತೂಕ ನಿಯಂತ್ರಣಕ್ಕೆ ಸಹಕಾರಿ.ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಿ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ತಾಮ್ರ ಮತ್ತು ಪೊಟ್ಯಾಸಿಯಮ್ ಖನಿಜಗಳು ಮೂಳೆ, ಸ್ನಾಯು ಮತ್ತು ಹೃದಯದ ಆರೋಗ್ಯಕ್ಕೆ ನೆರವಾಗುತ್ತವೆ.ಹಣ್ಣಿನ ಬಿಳಿ ತಿರುಳು ಮಾತ್ರ ಸೇವನೆಗೆ ಯೋಗ್ಯ.ಸಿಪ್ಪೆ ಮತ್ತು ಬೀಜಗಳನ್ನು ಹಸಿಯಾಗಿ ತಿನ್ನಬಾರದು; ಅವು ವಿಷಕಾರಿ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.

Continue Reading

Trending