Connect with us

ಬೆಂಗಳೂರು

ರಾಜಕೀಯ ಗುದ್ದಾಟಕ್ಕೆ ಕಾರಣವಾದ ಜೆಎಸ್​​ಡಬ್ಲ್ಯೂಗೆ ಭೂಮಿ ಮಾರಾಟ ತೀರ್ಮಾನ: ಏನಿದು ದಶಕದ ಭೂ ವಿವಾದ? – Land Allotment to Jindal

ಬೆಂಗಳೂರು: ಸದ್ಯ ಜಿಂದಾಲ್​ಗೆ ಭೂಮಿ ನೀಡುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಜಿಂದಾಲ್​ಗೆ ಭೂಮಿ ಮಾರಾಟ ಮಾಡುವ ವಿಚಾರವು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಿದು ಜಿಂದಾಲ್ ಭೂಮಿ ಸುತ್ತದ ವಿವಾದ ಎಂಬ ವರದಿ ಇಲ್ಲಿದೆ.

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಜೆಎಸ್​​ಡಬ್ಲ್ಯೂ ಸಂಸ್ಥೆಗೆ ಬಳ್ಳಾರಿಯಲ್ಲಿ ಭೂಮಿ ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. ಬಳ್ಳಾರಿ ಸಂಡೂರು ತಾಲೂಕಿನ ತೋರಣಗಲ್ ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2 ಸಾವಿರ ಎಕರೆ ಜಮೀನನ್ನು ಪ್ರತಿ ಎಕರೆಗೆ 1.22 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಹಾಗೂ ಸಂಡೂರು ತಾಲೂಕಿನ ತೋರಣಗಲ್​, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಜಮೀನನ್ನು ಪ್ರತಿ ಎಕರೆಗೆ 1.50 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಜೆಎಸ್​​ಡಬ್ಲ್ಯೂ ಸ್ಟೀಲ್‌ ಪರವಾಗಿ ನೀಡಲು ನಿರ್ಧರಿಸಲಾಗಿದೆ.

ಹಿಂದೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಈ ನಿಟ್ಟಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಕೈಗೊಂಡ ಸಂಪುಟ ತೀರ್ಮಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಂದು ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಈಗ ತನ್ನ ಆಡಳಿತದಲ್ಲಿ ಜೆಎಸ್​​ಡಬ್ಲ್ಯೂಗೆ ಭೂಮಿ ನೀಡಲು ತೀರ್ಮಾನಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಸರ್ಕಾರದ ಈ ತೀರ್ಮಾನದ ಹಿಂದೆ ಕಿಕ್ ಬ್ಯಾಕ್​​​ನ ಗಂಭೀರ ಆರೋಪ ಮಾಡುತ್ತಿದೆ.‌

ಏನಿದು ಜಿಂದಾಲ್ ಭೂಮಿ ವಿವಾದ?: ಬಳ್ಳಾರಿಯಲ್ಲಿ ಜೆಎಸ್​​ಡಬ್ಲ್ಯೂ ಸ್ಟೀಲ್ ಸಂಸ್ಥೆ‌ ಜೊತೆ 2006-2007ರಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ ಒಡಂಬಡಿಕೆ ಮಾಡಿತ್ತು.‌ ಉಕ್ಕಿನ ಸ್ಥಾವರ ಸ್ಥಾಪಿಸಲು ಸಂಸ್ಥೆಗೆ ಬಳ್ಳಾರಿಯಲ್ಲಿ 3,666 ಎಕರೆ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. 10 ವರ್ಷಗಳ ಬಳಿಕ ಲೀಸ್ ಮತ್ತು ಪರಾಭಾರೆ ಒಪ್ಪಂದದಡಿ ಸಂಸ್ಥೆಗೆ ಈ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು. ತೋರಣಗಲ್​ನಲ್ಲಿ 12 ದಶಲಕ್ಷ ಟನ್ ಸಾಮರ್ಥ್ಯದ ಸ್ಟೀಲ್ ಘಟಕ ನಿರ್ಮಾಣ ಇದಾಗಿದೆ.

2013-2018ರ ಅವಧಿಯಲ್ಲಿ ಜೆಎಸ್​​ಡಬ್ಲ್ಯೂ ಸಂಸ್ಥೆ ಒಪ್ಪಂದದಂತೆ ಭೂಮಿಯನ್ನು ಮಾರಾಟ ಮಾಡಲು ಪ್ರಸ್ತಾಪ ಸಲ್ಲಿಸಿತ್ತು. 27.05.2019ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಸಂಪುಟ ಸಭೆಯಲ್ಲಿ ಭೂಮಿ ಮಾರಾಟ ಮಾಡಲು ತೀರ್ಮಾನಿಸಿತ್ತು. ಆದರೆ, ಪ್ರತಿಪಕ್ಷ ಬಿಜೆಪಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸ್ವಪಕ್ಷದವರೇ ಆದ ಹೆಚ್.ಕೆ.ಪಾಟೀಲ್ ಕೂಡ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಎಂಎಂಎಲ್ ಸಂಸ್ಥೆಗೆ ಹಣ ಪಾವತಿಸದ ಆರೋಪ: ಹೆಚ್.ಕೆ.ಪಾಟೀಲ್ ಅಂದು ಕೈಗಾರಿಕಾ ಸಚಿವರಾಗಿದ್ದ ಕೆ.ಜೆ.ಜಾರ್ಜ್​ಗೆ ಪತ್ರ ಬರೆದು, ಜೆಎಸ್​​ಡಬ್ಲ್ಯೂ ಸಂಸ್ಥೆ ಮೈಸೂರು ಮಿನರಲ್ಸ್ ಸಂಸ್ಥೆಗೆ (ಎಂಎಂಎಲ್) 1,200 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದ್ದು, ಕಡಿಮೆ ಬೆಲೆಗೆ ಸಂಸ್ಥೆಗೆ ಭೂಮಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಜೆಎಸ್​​ಡಬ್ಲ್ಯೂ ಸಂಸ್ಥೆ ಎಂಎಂಎಲ್​ಗೆ ಕಡಿಮೆ‌ ಪ್ರೀಮಿಯಂಗೆ ಕಬ್ಬಿಣದ ಅದಿರು ಪೂರೈಕೆ ಮಾಡಿತ್ತು ಎಂದು ಆರೋಪಿಸಲಾಗಿತ್ತು.

2000-2010ರ ವರೆಗೆ 1,059.89 ಕೋಟಿ ರೂ. ಮೊತ್ತದ 9.25 ದಶಲಕ್ಷ ಟನ್ ಅದಿರು ಗಣಿಗಾರಿಕೆ ಮಾಡಿತ್ತು. ಇದಕ್ಕಾಗಿ ಎಂಎಂಎಲ್ ಸಂಸ್ಥೆಗೆ ಕೇವಲ 63.17 ಕೋಟಿ ರೂ. ಪ್ರೀಮಿಯಂ ಮೊತ್ತ ಲಭಿಸಿದ್ದರೆ, ಜೆಎಸ್ ಡಬ್ಲ್ಯೂ ಸಂಸ್ಥೆಗೆ 876.9 ಕೋಟಿ ರೂ. ಲಾಭವಾಗಿತ್ತು ಎಂದು 2013ರ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹೆಚ್.ಕೆ.ಪಾಟೀಲ್ ಆಕ್ಷೇಪದ ಜೊತೆಗೆ ಆಗಿನ ವಿಪಕ್ಷ ನಾಯಕರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಸದನದಲ್ಲಿ ಆಹೋರಾತ್ರಿ ಧರಣಿ ನಡೆಸಿದ್ದರು.‌ ಹೀಗಾಗಿ, ಈ ಪ್ರಸ್ತಾಪ ಹಾಗೆಯೇ ಬಾಕಿ ಉಳಿದುಕೊಂಡಿತ್ತು. ಸಂಪುಟ ತೀರ್ಮಾನ ವಿರೋಧಿಸಿ ಮೈತ್ರಿ ಸರ್ಕಾರದ ಸಚಿವರಾಗಿದ್ದ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2020ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮತ್ತೆ ಸರ್ಕಾರದ ಮುಂದೆ ಭೂಮಿ ಮಾರಾಟದ ಪ್ರಸ್ತಾವನೆ ಬಂತು.‌ ಈ ಬಗ್ಗೆ ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲಾಯಿತು. ಸಂಪುಟ ಉಪ ಸಮಿತಿ ಕಾನೂನು ಅಭಿಪ್ರಾಯ ಪಡೆದು ಜೆಎಸ್​​ಡಬ್ಲ್ಯೂಗೆ ಭೂಮಿ ಮಾರಾಟ ಮಾಡಲು ಅನುಮತಿ ನೀಡಿತು. 2021ರಲ್ಲಿ ಬಿಜೆಪಿ ಸರ್ಕಾರ ಸಂಪುಟ ಸಭೆಯಲ್ಲಿ 3,666 ಎಕರೆ ಭೂಮಿ ನೀಡಲು ತೀರ್ಮಾನಿಸಿತು.

ಈ ಸಂಬಂಧ ಯಡಿಯೂರಪ್ಪ ಸರ್ಕಾರ ಭೂಮಿ ಮಾರಾಟಕ್ಕೆ ಆದೇಶ ಹೊರಡಿಸಿತ್ತು. ಆದರೆ ಈ ತೀರ್ಮಾನದ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೆಚ್.ಕೆ.ಪಾಟೀಲ್ ಜೆಎಸ್​​ಡಬ್ಲ್ಯೂ ಗೆ ಭೂಮಿ ನೀಡುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಿಜೆಪಿಯಲ್ಲೂ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಮತ್ತೆ ಜೆಎಸ್​ಡಬ್ಲ್ಯೂಗೆ ಭೂಮಿ ನೀಡುವ ಸಂಪುಟ ಸಭೆಯ ತೀರ್ಮಾನಕ್ಕೆ ತಡೆ ಬಿತ್ತು.

ಕೋರ್ಟ್ ಮೊರೆ ಹೋದ ಜೆಎಸ್​​ಡಬ್ಲ್ಯೂ: ಭೂಮಿ ಮಾರಾಟ ವಿಳಂಬವಾದ ಹಿನ್ನೆಲೆಯಲ್ಲಿ ಜೆಎಸ್ ಡಬ್ಲ್ಯೂ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಾರ್ಚ್ 12, 2024ರಂದು ಹೈಕೋರ್ಟ್ ಆಜ್ಞೆ ಹೊರಡಿಸಿ 6.05.2021ರಲ್ಲಿನ ಸರ್ಕಾರದ ಆದೇಶವನ್ನು ಜಾರಿಗೊಳಿಸಿ, ಜೆಎಸ್​​ಡಬ್ಲ್ಯೂಗೆ ಭೂಮಿ ಪರಾಭಾರೆ ಮಾಡುವಂತೆ ಸೂಚಿಸಿತ್ತು.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಜೆಎಸ್​​ಡಬ್ಲ್ಯೂ ಸಂಸ್ಥೆಗೆ 3,666 ಕೋಟಿ ರೂ. ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಪ್ರತಿಪಕ್ಷ ಬಿಜೆಪಿಯು ಸರ್ಕಾರದ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡುತ್ತಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿ, ಅದರಂತೆ ಸರ್ಕಾರಿ ಆದೇಶವನ್ನೂ 2021ರ ಮೇ 6ಕ್ಕೆ ಹೊರಡಿಸಿತ್ತು. ಅದೇ ಆದೇಶವನ್ನು ಈಗ ಹೈಕೋರ್ಟ್ ಸೂಚನೆಯಂತೆ ಜಾರಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ದೇಶ

HAL ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?

ಬೆಂಗಳೂರು: ತನಗೆ ಹಾಗೂ ಸ್ನೇಹಿತೆಯಾಗಿರುವ ನಟಿಗೆ ಉದ್ಯಮಿ ಅರವಿಂದ್ ರೆಡ್ಡಿಯ ಕಾಲು ಹಿಡಿಯುವಂತೆ ಎಚ್‌ಎಎಲ್ ಠಾಣೆಯ ಇನ್ಸ್‌ಪೆಕ್ಟರ್ ಬೆದರಿಸಿದ್ದಾರೆ ಎಂದು ಆರೋಪಿಸಿ ಬಿ.ಕೆ. ವೈಶಾಕ್ ಕರ್ನಾಟಕ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿದ ಪ್ರಕರಣದಲ್ಲಿ ಎಚ್‌ಎಎಲ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಹಾಗೂ ಇನ್ಸ್‌ಪೆಕ್ಟರ್ ಅಜರುದ್ದೀನ್ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವೈಶಾಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಇನ್ಸ್‌ಪೆಕ್ಟರ್ ಅಜರುದ್ದೀನ್ ಹಾಗೂ ಅರವಿಂದ್ ರೆಡ್ಡಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಕಾಲಿಗೆ ಬೀಳುವಂತೆ ಸೂಚನೆ?

ಗುರುವಾರ ಅರ್ಜಿ ವಿಚಾರಣೆಗೆ ಬಂದಾಗ, ವೈಶಾಕ್ ಪರ ವಕೀಲರು ಹಾಜರಾಗಿ ಮಹತ್ವದ ಆರೋಪ ಮಂಡಿಸಿದರು. ಫೆಬ್ರವರಿ 6ರಂದು ಅರ್ಜಿದಾರರನ್ನು ಬಿಡುಗಡೆ ಮಾಡಲು ಹೈಕೋರ್ಟ್ ಸೂಚಿಸಿದ್ದರೂ, ಠಾಣೆಗೆ ಪ್ರಕರಣದಲ್ಲಿ ಹೆಸರು ಕೇಳಿಬಂದ ನಟಿಯನ್ನೂ ಕರೆಸಲಾಗಿತ್ತು. ಅಲ್ಲದೆ, ಅರವಿಂದ್ ರೆಡ್ಡಿಯ ಕಾಲಿಗೆ ಬೀಳುವಂತೆ ವೈಶಾಕ್‌ಗೆ ಸೂಚನೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಪ್ರಕರಣದ ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

ಜನವರಿಯಲ್ಲಿ ವೈಶಾಕ್ ಕೊರಿಯರ್ ಮೂಲಕ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ, ನಟಿಯೊಂದಿಗೆ ಇರುವ ಜಗಳ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ 6ರಿಂದ 7 ಕೋಟಿ ರೂ. ಹಣವನ್ನು ಕಳುಹಿಸಬೇಕು ಎಂದು ಒತ್ತಾಯಿಸಿದ್ದರು ಎಂಬ ಆರೋಪ ಇದೆ. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಅರವಿಂದ್ ರೆಡ್ಡಿ ದೂರು ನೀಡಿದ್ದು, ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಫೆಬ್ರವರಿ 2ರಂದು ನಟಿಯ ಮನೆಯಲ್ಲಿ ವೈಶಾಕ್ ಅವರನ್ನು ಬಂಧಿಸಲಾಗಿತ್ತು.

ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದೆ.

Continue Reading

ದೇಶ

ಸಿಎಂ ಕುರ್ಚಿ ಉಳಿಸಿಕೊಳ್ಳಲು ಶಾಸಕರ ವಿದೇಶ ಪ್ರವಾಸ? ವಿಜಯೇಂದ್ರ ಗಂಭೀರ ಆರೋಪ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಸರ್ಕಾರ ಬಂದ ಬಳಿಕ ಅನುದಾನ ಬೇಡಿಕೆ ಇಟ್ಟಿದ್ದರೂ ಗಂಗಕಲ್ಯಾಣ ಯೋಜನೆ, ಮನೆ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳು ನಡೆಯದೆ ಜನರಲ್ಲಿ ಅಸಮಾಧಾನ ಮೂಡಿದೆ ಎಂದು ಆರೋಪಿಸಿದರು. ಶಾಸಕರು ತಮ್ಮ ಖರ್ಚಿನಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬ ಸಿಎಂ ಹೇಳಿಕೆಯನ್ನು ಪ್ರಶ್ನಿಸಿ, “ತಮ್ಮ ಕುರ್ಚಿ ಉಳಿಸಿಕೊಳ್ಳಲು ತಾವೇ ಅವರನ್ನು ಕಳಿಸುತ್ತಿದ್ದಾರೆ” ಎಂದು ಟೀಕಿಸಿದರು.

ರೆಸಾರ್ಟ್ ರಾಜಕೀಯದ ಮೇಲೆ ಲೇವಡಿ

ಕಾಂಗ್ರೆಸ್ ಶಾಸಕರು ರೆಸಾರ್ಟ್ ಬುಕ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ಅವರಿಗೆ ಅನುಕೂಲವಾಗಲಿ ಎಂದು ಬಿಜೆಪಿಯಿಂದ ಬಡಿಗೆ ರೆಡಿ ಮಾಡಿಸಿದ್ದೇವೆ” ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಂತರದ ರಾಜಕೀಯ ನಡೆಯುತ್ತಿದೆ ಎಂದು ಹೇಳಿದರು.

₹5,000 ಕೋಟಿ ಎಲ್ಲಿಗೆ ಹೋಯ್ತು?

ಗೃಹ ಲಕ್ಷ್ಮೀ ಯೋಜನೆಯ ₹5,000 ಕೋಟಿ ಹಣದ ಬಗ್ಗೆ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಆರೋಪಿಸಿದ ಅವರು, “ಹಣ ಉಪಯೋಗ ಆಯ್ತಾ? ದುರಪಯೋಗ ಆಯ್ತಾ? ಸಿಎಂ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರಕ್ಕೆ ನಕಲಿ ದಾಖಲೆ ನೀಡಿರುವ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ವಿವರವಾದ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದರು.

ಪ್ರಾದೇಶಿಕ ಅಸಮಾನತೆ ಹೆಚ್ಚಳ

ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿ ವರದಿ ಉಲ್ಲೇಖಿಸಿ, ರಾಜ್ಯದಲ್ಲಿ ಅಸಮಾನತೆ ಶೇಕಡಾ 60ರಿಂದ 72.08ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಹಿಂದುಳಿದಿದೆ ಎಂದು ಆರೋಪಿಸಿದರು.

ಕುರಿಗಾರರಿಗೆ ಪರಿಹಾರ ಬಾಕಿ

ಅನುಗ್ರಹ ಯೋಜನೆಯಡಿ 45 ಕೋಟಿ ರೂ. ಬಾಕಿ ಇಟ್ಟಿದ್ದು, 90 ಸಾವಿರ ಸಾವಿನ ಪೈಕಿ ಕೇವಲ 30 ಸಾವಿರ ಕುರಿಮರಿಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕಾರಿಣಿ ಸಭೆ

ಫೆಬ್ರವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸರ್ಕಾರದ ವೈಫಲ್ಯಗಳು ಮತ್ತು ಮುಂದಿನ ಚುನಾವಣಾ ತಂತ್ರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.

Continue Reading

ದೇಶ

BESCOMಗೆ C-ರೇಟಿಂಗ್ ಶಾಕ್: ದೇಶದ 54 ಎಸ್ಕಾಂಗಳಲ್ಲಿ 51ನೇ ಸ್ಥಾನ

ಬೆಂಗಳೂರು: ದೇಶದ 54 ವಿದ್ಯುತ್ ವಿತರಣಾ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ವಿದ್ಯುತ್ ಸಚಿವಾಲಯ ಮೌಲ್ಯಮಾಪನ ಮಾಡಿದ್ದು, ಕರ್ನಾಟಕದ ಬೆಸ್ಕಾಂ (BESCOM) 51ನೇ ಸ್ಥಾನಕ್ಕೆ ಕುಸಿದಿದೆ. 14ನೇ ವಾರ್ಷಿಕ ಸಂಯೋಜಿತ ರೇಟಿಂಗ್ ಮತ್ತು ಶ್ರೇಯಾಂಕ ವರದಿಯಲ್ಲಿ ಬೆಸ್ಕಾಂ ಕಳಪೆ ಪ್ರದರ್ಶನ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿದೆ.

ವಿದ್ಯುತ್ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಸಂಗ್ರಹಣಾ ದಕ್ಷತೆ, ಬಿಲ್ಲಿಂಗ್ ದಕ್ಷತೆ, ಪ್ರಸರಣ ನಷ್ಟ, ಆಡಿಟ್ ಖಾತೆಗಳ ಲಭ್ಯತೆ ಸೇರಿದಂತೆ 15 ಪ್ರಮುಖ ಮಾನದಂಡಗಳ ಆಧಾರದಲ್ಲಿ ಶ್ರೇಯಾಂಕ ನೀಡಲಾಗಿದೆ. ಈ ಸಾಲಿನ ವರದಿಯಲ್ಲಿ ಬೆಸ್ಕಾಂ 100ರಲ್ಲಿ ಕೇವಲ 12.44 ಅಂಕಗಳನ್ನು ಪಡೆದು C-ರೇಟಿಂಗ್ ಮತ್ತು ‘ಕೆಂಪು ಕಾರ್ಡ್’ ಪಡೆದಿದೆ.

ವರದಿ ಪ್ರಕಾರ, ಬೆಸ್ಕಾಂ 13,819 ಕೋಟಿ ರೂ. ಸಂಚಿತ ನಷ್ಟ ಹಾಗೂ 22,611 ಕೋಟಿ ರೂ. ಸ್ಥಾಯಿ ಸಾಲವನ್ನು ಹೊಂದಿದೆ. 2025ನೇ ಹಣಕಾಸು ವರ್ಷದಲ್ಲಿ ಮಾತ್ರ 5,476 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷಕ್ಕಿಂತ ಕುಸಿತ

ಹಿಂದಿನ 13ನೇ ವಾರ್ಷಿಕ ರೇಟಿಂಗ್‌ನಲ್ಲಿ ಬೆಸ್ಕಾಂ 100ರಲ್ಲಿ 40.43 ಅಂಕಗಳನ್ನು ಪಡೆದು B-ದರ್ಜೆಯೊಂದಿಗೆ 34ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 51ನೇ ಸ್ಥಾನಕ್ಕೆ ಜಾರಿದ್ದು ಕಾರ್ಯಕ್ಷಮತೆಯಲ್ಲಿ ಕುಸಿತ ಸ್ಪಷ್ಟವಾಗಿದೆ.

ಆಶ್ಚರ್ಯಕರವಾಗಿ, ಕರ್ನಾಟಕದ ಯಾವುದೇ ಎಸ್ಕಾಂಗಳು ಟಾಪ್ 10 ಅಥವಾ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಮೆಸ್ಕಾಂ (MESCOM) 26ನೇ ಸ್ಥಾನ ಪಡೆದು ರಾಜ್ಯದ ಇತರ ಸಂಸ್ಥೆಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ.

ಸುಧಾರಣೆ ಅಗತ್ಯ

ತಜ್ಞರು ರಾಜ್ಯ ಸರ್ಕಾರವು ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರದ ಹೊರತು ಎಸ್ಕಾಂಗಳ ಪರಿಸ್ಥಿತಿ ಸುಧಾರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. KERC ಸಲಹಾ ಸಮಿತಿಯ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್, “ಗುರುಚರಣ್ ಸಮಿತಿ ವರದಿ ಎಸ್ಕಾಂಗಳನ್ನು ಪುನರುಜ್ಜೀವನಗೊಳಿಸಲು ರಚನಾತ್ಮಕ ಮತ್ತು ಕ್ರಿಯಾತ್ಮಕ ಸುಧಾರಣೆಗಳನ್ನು ಸೂಚಿಸಿತ್ತು. ಇಂತಹ ಸುಧಾರಣೆಗಳನ್ನು ತ್ವರಿತವಾಗಿ ಜಾರಿಗೆ ತರುವ ಅವಶ್ಯಕತೆ ಇದೆ” ಎಂದು ಹೇಳಿದ್ದಾರೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, “ಕೆಲವು ಲೆಕ್ಕಪತ್ರ ಸಮಸ್ಯೆಗಳಿವೆ. ಅವನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇತರ ಅಂಶಗಳಲ್ಲಿ ಕಾರ್ಯಕ್ಷಮತೆ ತೃಪ್ತಿಕರವಾಗಿದೆ. ಆದಾಯದ ಬೆಳವಣಿಗೆ ಆರೋಗ್ಯಕರವಾಗಿದೆ” ಎಂದು ತಿಳಿಸಿದ್ದಾರೆ.

Continue Reading

Trending