ರಾಜಕೀಯ
ಫಲಿಸದ ಚಲುವರಾಯ ಸ್ವಾಮಿ ತಂತ್ರ: HDK ರಿವರ್ಸ್ ಆಪರೇಷನ್; ಜೆಡಿಎಸ್ ತೆಕ್ಕೆಗೆ ಮಂಡ್ಯ ನಗರಸಭೆ!

ಮಂಡ್ಯ: ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಕಾರಣವಾಗಿದ್ದ ಮಂಡ್ಯ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಆಗಸ್ಟ್ 28ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿದೆ.
ಕಾಂಗ್ರೆಸ್ಸಿನ ಚಲುವರಾಯ ಸ್ವಾಮಿ ಹಾಗೂ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿಯವರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ನಾಗೇಶ್ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ, ಚುನಾವಣೆಗೆ ಇನ್ನು ಕೆಲವು ದಿನ ಇರುವಾಗಲೇ ಆಪರೇಷನ್ ಹಸ್ತ ಮಾಡಿ ಜೆಡಿಎಸ್ ಎರಡು ಗಟ್ಟಿ ಕುಳಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್ಸಿನ ಒಬ್ಬ ಪ್ರಭಾವಿ ನಾಯಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಮಂಡ್ಯ ನಗರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಮಂಡ್ಯ ನಗರಸಭೆಯ ನೂತನ ಅಧ್ಯಕ್ಷರಾಗಿ ಶ್ರೀ ನಾಗೇಶ್ ಮತ್ತು ಉಪಾಧ್ಯಕ್ಷರಾಗಿ ಶ್ರೀ ಅರುಣ್ ಕುಮಾರ್ ಅವರುಗಳು ಆಯ್ಕೆಯಾಗಿದ್ದು, ಇಬ್ಬರಿಗೂ ಹೃದಯಪೂರ್ವಕ ಅಭಿನಂದನೆಗಳು. ಆಡಳಿತಾರೂಢ ಕಾಂಗ್ರೆಸ್ ಹೂಡಿದ ಷಡ್ಯಂತ್ರ್ಯ, ಕುತಂತ್ರಗಳನ್ನು ಮೆಟ್ಟಿನಿಂತು ಮಂಡ್ಯ ಜನರ ಆಶಯದ ಪ್ರತೀಕವಾಗಿ ನಗರಸಭೆಯ ಅಧಿಕಾರವು ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ ಸಿಕ್ಕಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಈ ಗೆಲುವಿಗೆ ಕಾರಣರಾದ ಎರಡೂ ಪಕ್ಷಗಳ ನಗರಸಭೆ ಸದಸ್ಯರು, ಮೈತ್ರಿಕೂಟದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.