Connect with us

ಅಪರಾಧ

ದರ್ಶನ್ ಎ1 ಮಾಡುವುದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು; ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ’ – Renukaswamy Murder Case

Published

on

ಬೆಂಗಳೂರು: ದರ್ಶನ್​​​​​ರನ್ನು ಎ1 ಮಾಡ್ತಾರೋ ಎ2 ಮಾಡ್ತಾರೋ ತನಿಖಾಧಿಕಾರಿಗಳಿಗೆ ಬಿಟ್ಟಿದ್ದು. ಆದರೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾತನಾಡಿದ ಅವರು, ದರ್ಶನ್ ಮತ್ತು ಆರೋಪಿಗಳ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸ್ತಾರೆ. 90 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕು, ಮಾಡ್ತಾರೆ. ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಕುಟುಂಬದವರು ನ್ಯಾಯದ ನಿರೀಕ್ಷೆ ಮಾಡಬಹುದು. ಅವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಕೋರ್ಟ್​ನಲ್ಲಿ ಹೋರಾಟ ನಡೆಯುತ್ತದೆ ಎಂದರು.

ರಾಜ್ಯಪಾಲರಿಂದ ಕೆಐಎಡಿಬಿ ಸಿ.ಎ ಸೈಟು ಪ್ರಕರಣ ಸಂಬಂಧ ವಿವರಣೆ ಕೋರಿ ಪತ್ರ ವಿಚಾರವಾಗಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಾನೂನುಬಾಹಿರ ಕೆಲಸ ಮಾಡಿಲ್ಲ, ನ್ಯಾಯಯುತವಾಗಿ ಅವರು ಅರ್ಹರಿದ್ರು, ಅದಕ್ಕೆ ಸೈಟ್ ಕೊಟ್ಟಿರೋದಾಗಿ ಹೇಳಿದ್ದಾರೆ. ಅಲ್ಲಿಗೆ ಅದು ಮುಗೀತು, ಮತ್ತೆ ಅದನ್ನು ಪದೇ ಪದೇ ಹೇಳೋದು ಬೇಡ. ಇದನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿ. ಎಂ‌.ಬಿ‌.ಪಾಟೀಲರು ಕಾನೂನು ಪ್ರಕಾರ ಮಾಡಿದ್ದಾರೋ‌ ಇಲ್ಲವೋ ಅಂತ ಪರಿಶೀಲನೆ ಮಾಡಲಿ. ಅದರ ಬದಲು ಅನಾವಶ್ಯಕವಾಗಿ ಆಪಾದನೆ ಮಾಡೋದು ಸರಿಯಲ್ಲ. ರಾಜ್ಯಪಾಲರು ವಿವರಣೆ ಕೇಳಿದ್ದಾರೆ, ಅವರೇ ಪರಿಶೀಲನೆ ಮಾಡಲಿ. ಸಾವಿರಾರು ಜನ ದೂರು ಕೊಡ್ತಾರೆ, ಎಲ್ಲವೂ ಪರಿಶೀಲನೆ ಮಾಡಿದಾಗಲೇ ಸತ್ಯ ಗೊತ್ತಾಗೋದು.‌ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ ಅಂತ ನಾವು ಮೊದಲಿಂದಲೂ ಹೇಳ್ತಿದ್ದೀವಿ. ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನೆಲ್ಲ ಮಾಡ್ತಿದ್ದಾರೆ ಎಂದು ಹೇಳಿದರು.

ಕೋವಿಡ್ ಹಗರಣದ ಮಧ್ಯಂತರ ವರದಿ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನ್ಯಾ.ಕುನ್ಹಾ ಅವರ ಆಯೋಗಕ್ಕೆ ಇನ್ನೊಂದು ಆರು ತಿಂಗಳು ಕಾಲಾವಕಾಶ ಕೊಡಲಾಗಿದೆ. ಬಿಟ್‌ಕಾಯಿನ್ ಪ್ರಕರಣ, ಕೋವಿಡ್ ಪ್ರಕರಣ, ವಾಲ್ಮೀಕಿ ಪ್ರಕರಣ ಸೇರಿ ಎಲ್ಲ ಪ್ರಕರಣಗಳನ್ನೂ ರಿವೀವ್ ಮಾಡುತ್ತಿದ್ದೇವೆ. ಯಾವೆಲ್ಲ ತನಿಖೆ ಹಂತದಲ್ಲಿ ಇವೆಯೋ ಎಲ್ಲ ಪ್ರಕರಣಗಳ ರಿವ್ಯೂ ಮಾಡ್ತೇವೆ. ಇದಕ್ಕೆ ಮುಂದಿನ ದಿನಗಳಲ್ಲಿ ಒಂದು ಸಮಿತಿ ರಚನೆ ಮಾಡ್ತೇವೆ ಎಂದರು.

ಸತೀಶ್ ಜಾರಕಿಹೊಳಿ-ಪರಮೇಶ್ವರ್ ದೆಹಲಿ ವರಿಷ್ಠರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ರೇಸ್ ಏನೂ ಇಲ್ಲ. ನಾನೇ‌ನಕ್ಕೋ ಭೇಟಿ ಮಾಡ್ತೇ‌ನೆ, ಅವರೇನಕ್ಕೋ ಭೇಟಿ ಮಾಡ್ತಾರೆ. ದೆಹಲಿಗೆ ಹೋದ್ರೆ ಹೈಕಮಾಂಡ್ ಭೇಟಿ ಮಾಡೋದು ಸಂಪ್ರದಾಯ. ಹಾಗಾಗಿ ಅವರು ಹೋಗಿ ಭೇಟಿ ಮಾಡಿರ್ತಾರೆ.‌ ಎಲ್ಲದಕ್ಕೂ ರಾಜಕೀಯ ಬಣ್ಣ ಹಾಕೋದು ಬೇಡ. ಕೆಲವೊಂದು ವಿಚಾರಗಳನ್ನು ಹೈಕಮಾಂಡ್ ಹೇಳಿರ್ತಾರೆ ನಮಗೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಎಐಸಿಸಿ ಮೇಲೆ, ರಾಷ್ಟ್ರೀಯ ನಾಯಕರ ಮೇಲೆ ಏನೇನೋ ನೆಗೆಟಿವ್ ಪೋಸ್ಟಿಂಗ್ ಹಾಕ್ತಾರೆ. ಅದನ್ನೆಲ್ಲ ನಿಯಂತ್ರಣ ಮಾಡಿ ಅಂತ ನನಗೆ ಹೇಳಿದ್ದಾರೆ. ಇದನ್ನೇ ಬೇರೆ ಥರ ಹೇಳೋದು ಬೇಡ ಎಂದು ಇದೇ ವೇಳೆ ಹೇಳಿದರು.

ಎತ್ತಿನ ಹೊಳೆ ಯೋಜನೆಯ ಮೊದಲ ಹಂತಕ್ಕೆ ಚಾಲನೆ ವಿಚಾರವಾಗಿ ಮಾತನಾಡಿ, ಇದು ನಮ್ಮ‌ ಮಹತ್ವಾಕಾಂಕ್ಷೆಯ ಯೋಜನೆ. ಗೌರಿ-ಹಬ್ಬದ ಒಳ್ಳೆಯದ ದಿನ ಅಂತ ಚಾಲನೆ ಕೊಡಲಾಗ್ತಿದೆ. 1500 ಕ್ಯೂಸೆಕ್​​ ನೀರು ವಾಣಿ ವಿಲಾಸ ಸಾಗರಕ್ಕೆ ಹರಿಯಲಿದೆ. ಮುಂದಿನ‌ ಮಳೆ ಬರುವ ಹೊತ್ತಿಗೆ ತುಮಕೂರಿಗೂ ನೀರು ತರುತ್ತೇವೆ. ನಂತರ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ತರುತ್ತೇವೆ. ನಮಗೆ 69 ಕೆರೆ ತುಂಬಿಸಲು ಹಣ ಮಂಜೂರು ಮಾಡಲಾಗಿದೆ. ಇದರ ಕೆಲಸಗಳು ನಡೀತಿವೆ ಎಂದು ತಿಳಿಸಿದರು.

ಗೃಹ ಸಚಿವ ನಿವಾಸದ ಮುಂದೆ ಪೊಲೀಸರ ದಬ್ಬಾಳಿಕೆ: ಗೃಹ ಸಚಿವರಿಗೆ ಮನವಿ ಕೊಡಲು ಬಂದಿದ್ದ ಪಿಎಸ್ಐ ಅಭ್ಯರ್ಥಿ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಆಕಾಂಕ್ಷಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಕೋರಿ ಬಂದಿದ್ದ ಹತ್ತಾರು ಆಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಶಾಂತಿಯುತವಾಗಿ ಗೃಹ ಸಚಿವರ ಮನೆ ಮುಂದೆ ಮನವಿ ಸಲ್ಲಿಸಲು ಪೊಲೀಸ್ ಕಾನ್ಸ್‌ಟೇಬಲ್ ಆಕಾಂಕ್ಷಿಗಳು ನಿಂತಿದ್ದರು. ಈ ವೇಳೆ ಏಕಾಏಕಿ ಪೊಲೀಸರು ಆಕಾಂಕ್ಷಿಗಳನ್ನು ಗೃಹ ಸಚಿವರ ನಿವಾಸದಿಂದ ಬಲವಂತವಾಗಿ ಕರೆದೊಯ್ದು ಪೊಲೀಸ್ ವಾಹನಕ್ಕೆ ತುಂಬಿಸಲಾಯಿತು. ಇದೇ ವೇಳೆ ಪಿಎಸ್‌ಐ ಪರೀಕ್ಷೆ ಮುಂದಕ್ಕೆ ಹಾಕುವಂತೆ ಮನವಿ ಮಾಡಲು ಬಂದ ಅಭ್ಯರ್ಥಿಯೊಬ್ಬರನ್ನು ಬಲವಂತವಾಗಿ ವಶಕ್ಕೆ ಪಡೆದರು. ಅಭ್ಯರ್ಥಿ ಕಾಂತಕುಮಾರ್ ಗೃಹ ಸಚಿವರಿಗೆ ಮನವಿ ಕೊಡಲು ಬಂದಾಗ, ಇನ್ಸ್​ಪೆಕ್ಟರ್​ ಒಬ್ಬರು ಪಿಎಸ್ಐ ಅಭ್ಯರ್ಥಿಯ ಕೊರಳಪಟ್ಟಿ ಹಿಡಿದು ಜೀಪಿನೊಳಗೆ ತಳ್ಳಿ ಕರೆದೊಯ್ದರು.

ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸುತ್ತಾ, ಯಾರೇ ಅರ್ಜಿ ಕೊಟ್ಟರೂ ನಾನೇ ಖುದ್ದಾಗಿ ತಗೋತೀನಿ. ಅದಕ್ಕೆ ಸಂಬಂಧಪಟ್ಟವರಿಗೆ ಅರ್ಜಿಗಳನ್ನು ಕಳಿಸ್ತೇವೆ. ಸಮಯ ಇದ್ರೆ ಇಲ್ಲೇ ಬರೆದು ಕಳಿಸ್ತೇನೆ. ದೌರ್ಜನ್ಯ ಸರಿ ಅಲ್ಲ. ಆ ರೀತಿ ದೌರ್ಜನ್ಯ ಮಾಡಬಾರದು ಅಂತ ಸೂಚನೆ ಕೊಡ್ತೇನೆ. ಮನವಿ ಕೊಡೋಕ್ಕೆ ಬಂದವರ ಜತೆ ಹಾಗೆ ನಡೆದುಕೊಳ್ಳಬಾರದು. ಅಹವಾಲು ಕೊಡಲು ಜನ ನಮ್ಮ ಬಳಿ ಬರ್ತಾರೆ, ಅದಕ್ಕೆ ಅವಕಾಶ ಕೊಡ್ತೇವೆ. ವಶಕ್ಕೆ ಪಡೆದವರನ್ನ ಬಿಡಲು ಹೇಳ್ತೇನೆ ಎಂದರು.

ಬಳಿಕ ಅಹವಾಲು ಕೊಡಲು ಬಂದ ಆಕಾಂಕ್ಷಿಗಳ ಮೇಲೆ ದಬ್ಬಾಳಿಕೆ ಮೆರೆದ ಇನ್ಸ್​ಪೆಕ್ಟರ್ ಅವರನ್ನು​ ಕರೆದು ಬುದ್ಧಿ ಹೇಳಿದ ಪರಮೇಶ್ವರ್, ಹಾಗೆಲ್ಲ ಮಾಡಬೇಡಿ. ಅರ್ಜಿ ಕೊಡಲು ಬಂದವರಿಗೆ ತಡೆಯಬೇಡಿ, ಸುಮ್ನಿರಿ, ಬಿಟ್ಬಿಡಿ ಅವರನ್ನು ಎಂದು ಸೂಚಿಸಿದರು.

Continue Reading
Click to comment

Leave a Reply

Your email address will not be published. Required fields are marked *

ಅಪರಾಧ

ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ! ಸ್ಟೀರಿಂಗ್ ಮೇಲೆ ಮೊಣಕೈ, ಕೈಯಲ್ಲಿ ಮೊಬೈಲ್; ವೈರಲ್ ವಿಡಿಯೊ

Published

on

ನವದೆಹಲಿ, ಜು.8: ರಸ್ತೆ ಸುರಕ್ಷತೆ ಕುರಿತು ಸರ್ಕಾರ ಮತ್ತು ಸಾರಿಗೆ ಇಲಾಖೆ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಕೆಲವರ ನಿರ್ಲಕ್ಷ್ಯದಿಂದ ಅಪಘಾತಗಳ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದೆಹಲಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ನ ಚಾಲಕ ಸುಮಾರು 100 ಕಿ.ಮೀ ವೇಗದಲ್ಲಿ ಬಸ್ ಚಲಾಯಿಸುತ್ತಿದ್ದರೂ, ರಸ್ತೆಯತ್ತ ಸಂಪೂರ್ಣ ಗಮನ ಹರಿಸುವ ಬದಲು ತನ್ನ ಮೊಬೈಲ್‌ನಲ್ಲಿ ರೀಲ್ಸ್ ವೀಕ್ಷಿಸುತ್ತಿರುವುದು ವೈರಲ್ ವಿಡಿಯೊದಲ್ಲಿ ಕಾಣಿಸಿದೆ. ಚಾಲಕ ಸ್ಟೀರಿಂಗ್ ಮೇಲೆ ಮೊಣಕೈ ಇಟ್ಟುಕೊಂಡೇ ಮೊಬೈಲ್ ನೋಡುತ್ತಿರುವ ದೃಶ್ಯ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.

ವೈರಲ್ ವಿಡಿಯೊದಲ್ಲಿ ಚಾಲಕ ಕೆಲ ಕ್ಷಣಗಳಿಗೊಮ್ಮೆ ಮಾತ್ರ ರಸ್ತೆಯತ್ತ ಕಣ್ಣಾಡಿಸಿ ಮತ್ತೆ ಮೊಬೈಲ್‌ಗೆ ಗಮನ ಹರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನೂ ಆತನ ಪಕ್ಕದಲ್ಲಿದ್ದ ಕಂಡಕ್ಟರ್ ಕೂಡ ಚಾಲಕನಿಗೆ ಎಚ್ಚರಿಕೆ ನೀಡುವ ಬದಲು ತನ್ನ ಮೊಬೈಲ್‌ನಲ್ಲೇ ತೊಡಗಿಸಿಕೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಘಟನೆ ನಡೆದ ನಿಖರ ದಿನಾಂಕ ಹಾಗೂ ಚಾಲಕನ ಗುರುತು ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೂ ಈ ವಿಡಿಯೊ ರಸ್ತೆ ಸುರಕ್ಷತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಚಾಲಕನ ಚಾಲನಾ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಬೇಕು” ಎಂದು ಹಲವರು ಆಗ್ರಹಿಸಿದ್ದಾರೆ. ಮತ್ತೊಬ್ಬರು “ನೂರಾರು ಪ್ರಯಾಣಿಕರ ಜೀವದೊಂದಿಗೆ ಆಟವಾಡುವುದು ಕ್ಷಮಿಸಲಾಗದ ಅಪರಾಧ. ಚಾಲಕ ಹಾಗೂ ಕರ್ತವ್ಯ ನಿರ್ಲಕ್ಷ್ಯ ತೋರಿದ ಕಂಡಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ನೆನಪಿಸಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿಹೇಳಿದೆ.

Continue Reading

ಅಪರಾಧ

ವೈರಲ್ ವಿಡಿಯೋ: ಲಾರಿ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ

Published

on

ತುಮಕೂರು: ಜಿಲ್ಲೆಯ ತಿಪಟೂರು ನಗರದ ಐಬಿ ಸರ್ಕಲ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಿಯಂತ್ರಣ ತಪ್ಪಿದ ಲಾರಿಯೊಂದು ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಗುದ್ದಿದೆ. ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ವೇಗವಾಗಿ ಬಂದ ಲಾರಿಯು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ವಿದ್ಯಾರ್ಥಿನಿಯತ್ತ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ವಿದ್ಯಾರ್ಥಿನಿ ಲಾರಿಯ ಕೆಳಗೆ ಸಿಲುಕಿದ್ದರೂ, ಅದೃಷ್ಟವಶಾತ್ ವಾಹನದ ಚಕ್ರ ಆಕೆಯ ಮೇಲೆ ಹರಿಯದೆ ಮಧ್ಯಭಾಗದಲ್ಲಿ ಸಿಲುಕಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಅಪಘಾತ ಕಂಡ ಸ್ಥಳೀಯರು ಕೂಡಲೇ ಲಾರಿಯನ್ನು ನಿಲ್ಲಿಸಿ ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಗಾಯಗೊಂಡ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಆಕೆಯ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿಯನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಲಾರಿ ಕೆಳಗೆ ಸಿಲುಕಿದ್ದರೂ ವಿದ್ಯಾರ್ಥಿನಿ ಅದೃಷ್ಟವಶಾತ್ ಜೀವಂತವಾಗಿ ಪಾರಾಗಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ವಾಹನ ಚಾಲಕರು ವೇಗ ಮಿತಿಯನ್ನು ಪಾಲಿಸಬೇಕು ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂಬ ಒತ್ತಾಯವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Continue Reading

ಅಪರಾಧ

ಆಸ್ಪತ್ರೆ ದೌರ್ಜನ್ಯ ಪ್ರಕರಣ: ವೈರಲ್ ದೃಶ್ಯಗಳ ನಡುವೆ ಕಾರ್ಪೊರೇಟರ್ ಸ್ಪಷ್ಟನೆ ಏನು?

Published

on

ನವದೆಹಲಿ: ಮುಂಬೈ ಸಮೀಪದ ಆಸ್ಪತ್ರೆಯೊಂದರಲ್ಲಿ ಮಹಿಳಾ ವೈದ್ಯೆ ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಹಾಗೂ ಅವರ ಬೆಂಬಲಿಗರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU)ದಲ್ಲಿ ಹಾಸಿಗೆಗಳ ಕೊರತೆಯ ವಿಚಾರದಿಂದ ಆರಂಭವಾದ ಮಾತಿನ ಚಕಮಕಿ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ವೈದ್ಯರು ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ಸದ್ಯ ಯಾವುದೇ NICU ಹಾಸಿಗೆ ಲಭ್ಯವಿಲ್ಲ ಎಂದು ತಿಳಿಸಿದ್ದಾಗಿ ವರದಿಯಾಗಿದೆ. ಬಳಿಕ ಈ ವಿಚಾರಕ್ಕೆ ಸಂಬಂಧಿಸಿ ಕಾರ್ಪೊರೇಟರ್ ಆಸ್ಪತ್ರೆಗೆ ಆಗಮಿಸಿದ್ದು, ಗಲಾಟೆ ನಡೆದಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ವೈದ್ಯೆಯೊಬ್ಬರು ತಮ್ಮ ಮೊಬೈಲ್ ಬಳಸಲು ಪ್ರಯತ್ನಿಸುವ ವೇಳೆ ಅವರತ್ತ ಧಾವಿಸುವ ವ್ಯಕ್ತಿ ಕಾಣಿಸಿಕೊಂಡಿದ್ದು, ಬಳಿಕ ಆಸ್ಪತ್ರೆಯ ಸಿಬ್ಬಂದಿ ಮತ್ತು ನರ್ಸ್‌ಗಳೊಂದಿಗೆ ತಳ್ಳಾಟ-ನೂಕಾಟ ನಡೆದಿರುವ ದೃಶ್ಯಗಳು ಗೋಚರಿಸುತ್ತವೆ. ಈ ವಿಡಿಯೋ ಆಧರಿಸಿ ವೈದ್ಯರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಮೇಶ್ ಮ್ಹಾತ್ರೆ, ಮಹಿಳಾ ವೈದ್ಯೆಯ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ. ವೈದ್ಯರು ತಮ್ಮ ದೂರುಗಳಿಗೆ ಸ್ಪಂದಿಸದ ಕಾರಣ ಅವರ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬೀಳುವಂತೆ ಮಾಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕ್ರಮದಿಂದ ರೋಗಿಯ ಜೀವ ಉಳಿದಿದೆ ಎಂಬ ವಾದವನ್ನೂ ಮುಂದಿಟ್ಟಿದ್ದಾರೆ.

ಈ ಘಟನೆ ವೈದ್ಯರ ಸುರಕ್ಷತೆ, ಆಸ್ಪತ್ರೆಗಳಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಸಾರ್ವಜನಿಕ ಪ್ರತಿನಿಧಿಗಳ ವರ್ತನೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ವೈರಲ್ ವಿಡಿಯೋ ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Continue Reading

Trending