Connect with us

ಬೆಂಗಳೂರು

ಕೋವಿಡ್ ಅಕ್ರಮದ ಮಧ್ಯಂತರ ವರದಿ ಅಧ್ಯಯನಕ್ಕಾಗಿ ಸಿಎಸ್ ನೇತೃತ್ವದ ಅಧಿಕಾರಿಗಳ ತಂಡ ರಚನೆಗೆ ಸಂಪುಟ ಸಭೆ ತೀರ್ಮಾನ – A team of officers headed by CS

Published

on

ಬೆಂಗಳೂರು: ಕೋವಿಡ್ ಅಕ್ರಮ ಬಗ್ಗೆ ನ್ಯಾ. ಡಿ ಕುನ್ಹಾ ನೀಡಿರುವ ವರದಿಯನ್ನು ಅಧ್ಯಯನ ಮಾಡಿ, ಆದಷ್ಟು ಬೇಗ ಸಚಿವ ಸಂಪುಟಕ್ಕೆ ವರದಿ ಮಂಡಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕೋವಿಡ್ ಅಕ್ರಮ ಸಂಬಂಧ ನ್ಯಾ. ಡಿ ಕುನ್ಹಾ ವರದಿ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು. ಕುನ್ಹಾ ವರದಿಯಲ್ಲಿ ಕೋವಿಡ್ ನಲ್ಲಿ ನೂರಾರು ಕೋಟಿ ಅಕ್ರಮ ಆಗಿರುವ ಬಗ್ಗೆ ಕೆಲ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರದಿಯಲ್ಲಿ ಕಡತ ಮಿಸ್ಸಿಂಗ್ ಆಗಿರುವ ಬಗ್ಗೆನೂ ಪ್ರಸ್ತಾಪಿಸಲಾಗಿದೆ. ಮುಖ್ಯ ಕಾರ್ಯದರ್ಶಿ, ಹಣಕಾಸು ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡಕ್ಕೆ ಪರಿಶೀಲಿಸಿ ಒಂದು ತಿಂಗಳ ಒಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ಮಹದಾಯಿ ಬಗ್ಗೆ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಲು ತೀರ್ಮಾನ: ಮಹದಾಯಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಬರುವ ನಿರೀಕ್ಷೆ ಇತ್ತು. ಆದರೆ ವನ್ಯಜೀವಿ ಮಂಡಳಿ ತನ್ನ 79ನೇ ಸಭೆಯಲ್ಲಿ ವಿಷಯವನ್ನು ಮುಂದೂಡಿದೆ. ಆ ಮೂಲಕ ನಮಗೆ ನಿರಾಶೆಯಾಗಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಆದರೆ ಗೋವಾ-ತಮ್ನೂರು 400 ಕೆ.ವಿ. ವಿದ್ಯುತ್ ಮಾರ್ಗ ಯೋಜನೆಗೆ ಮಂಡಳಿ ಒಪ್ಪಿಗೆ ನೀಡಿದೆ. ಆದರೆ ಮಹದಾಯಿ ಪ್ರಸ್ತಾವನೆಯನ್ನು ಮುಂದೂಡಿದೆ. 400 ಕೆ.ವಿ. ವಿದ್ಯುತ್ ಮಾರ್ಗಕ್ಕಾಗಿ 435 ಎಕರೆ ಅರಣ್ಯ ಭೂಮಿ ಬಳಕೆಯಾಗುತ್ತದೆ. ಆದರೂ ಸಮ್ಮತಿ ನೀಡಲಾಗಿದೆ. ಸಂಪುಟ ಸಭೆ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಸರ್ವ ಪಕ್ಷ ಸಭೆ ನಡೆಸಿ, ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ಯಲು ತೀರ್ಮಾನಿಸಲಾಗಿದೆ ಹಾಗು ಕಾನೂನು ತಜ್ಞರ ಬಳಿ ಚರ್ಚಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಪರಿಶೀಲನೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದರು.
ಮಸೂದೆ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನ: “ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ ಸಂಖ್ಯೆ 26, 2024″ನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಹಿಂಪಡೆಯಲು ಮತ್ತು ವಿಧಾನಸಭೆಯ ವಿಧೇಯಕ 27ಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರನ್ನು ಕೋರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ಬಿಲ್ ನ್ನು ರಾಜ್ಯಪಾಲರು ವಾಪಸು ಕಳಹಿಸಿದ್ದರು. ಅವರು ತಮ್ಮ ಆಕ್ಷೇಪಣೆಯಲ್ಲಿ ಈ ಸಂಬಂಧ ಈಗಾಗಲೇ ಮಸೂದೆ ಇದ್ದರೂ, ಮತ್ತೊಂದು ಮಸೂದೆ ಅಗತ್ಯತೆಯ ಬಗ್ಗೆ ಸ್ಪಷ್ಟೀಕರಣ ಕೇಳಿದ್ದರು. ಅದರ ಆಧಾರದಲ್ಲಿ ಹಿಂದಿನ ಮಸೂದೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ, 2024ವನ್ನು ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದರು.

ನ್ಯಾಯಾಂಗ ನಿಂದನೆ ಆಗಿಲ್ಲ: ಸಿಎಂ ನೇತೃತ್ಬದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ ಮಾಡಲಾಗಿತ್ತು. ಅದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ. ಕೋರ್ಟ್ ನಲ್ಲಿ ಈ ಬಗ್ಗೆ ತಡೆಯಾಜ್ಞೆ ಇದ್ದರೂ ಸಿಎಂ ಅವರು ಸಭೆ ಮಾಡಿರುವುದು ನ್ಯಾಯಂಗ ನಿಂದನೆ ಎಂದು ಅವರು ಆರೋಪಿಸಿದ್ದರು. ಆದರೆ ಪ್ರಮೋದಾ ದೇವಿ ಅವರಿಗೆ ತಪ್ಪು ಗ್ರಹಿಕೆ ಆಗಿದೆ. ಯಾವುದೇ ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಡಿಬಿಟಿಯನ್ನೇ ಮುಂದುವರಿಸಲು ತೀರ್ಮಾನ: ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ನೀಡುತ್ತಿರುವ ನೇರ ನಗದು ವರ್ಗಾವಣೆ (DBT) ಬದಲಾಗಿ ಆಹಾರ ಕಿಟ್ ವಿತರಿಸುವ ಪ್ರಸ್ತಾವನೆಯನ್ನು ಮುಂದೂಡಲಾಗಿದ್ದು, ಸದ್ಯ ಡಿಬಿಟಿ ಪದ್ದತಿಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಆಹಾರ ಇಲಾಖೆ ಮೂರು ಪ್ರಸ್ತಾವನೆಯನ್ನು ಸಲ್ಲಿಸಿತ್ತು‌. ಈ ಪೈಕಿ ಐದು ಕೆಜಿ ಅಕ್ಕಿ ಕೊಡುವುದು, ನೇರ ನಗದು ವರ್ಗಾವಣೆ ಮುಂದುವರಿಕೆ ಮಾಡುವುದು ಮತ್ತು ಆಹಾರ ಕಿಟ್ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸಂಪುಟ ಸಭೆಯಲ್ಲಿ ಕೊನೆಗೆ ಈಗಿರುವ ಡಿಬಿಟಿ ಮುಂದುವರಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಐದು ಬಿಲ್ ಗಳ ಬಗ್ಗೆ ಉತ್ತರ ನೀಡಲಾಗಿದೆ: 11 ಬಿಲ್ ಗಳನ್ನು ರಾಜ್ಯಪಾಲರು ವಾಪಾಸು ಮಾಡಿದ್ದರು. ಆ ಪೈಕಿ ಐದು ಬಿಲ್ ಗಳಿಗೆ ಉತ್ತರ ನೀಡಿದ್ದೇವೆ. ಆರು ಬಿಲ್ ಗಳ ಪೈಕಿ ಒಂದು ಬಿಲ್ ನ್ನು ಇಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಉಳಿದ ಬಿಲ್ ಗಳ ಬಗ್ಗೆ ಮುಂದಿನ ದಿನ ವಿವರಣೆ ನೀಡಿ ರಾಜ್ಯಪಾಲರಿಗೆ ಕಳುಹಿಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಸಂಪುಟ ಸಭೆಯ ಇತರ ತೀರ್ಮಾನಗಳು:

  • ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿ, ನವೀಕರಣ, ತಿದ್ದುಪಡಿ ಮತ್ತಿತರ ಸೇವೆಗಳಿಗಾಗಿ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕ, ದಂಡ ಮುಂತಾದ ದರಗಳ ಪರಿಷ್ಕರಣೆಗೆ ಅನುಮೋದನೆ. ಶುಲ್ಕ,ದಂಡ, ಮುಂತಾದ ದರಗಳನ್ನು ಶೇ.35 ಹೆಚ್ಚಿಸಲು ತೀರ್ಮಾನ.
  • ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) (ತಿದ್ದುಪಡಿ) ನಿಯಮಗಳಿಗೆ ಅನುಮೋದನೆ.
  • ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ (KIMS) ರೇಡಿಯೋಥೆರಪಿ ಚಿಕಿತ್ಸಾ ಮತ್ತು ರೋಗನಿರ್ಧಾರಕ ಉಪಕರಣಗಳನ್ನು ರೂ. 70 ಕೋಟಿಗಳ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
  • ಮೈಸೂರಿನ 40 ಹಾಸಿಗೆ ಸಾಮರ್ಥ್ಯದ ನೆಪ್ರೋ-ಯುರಾಲಜಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ 117.11 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಕೋಟಿಗಳ ಅನುಮೋದನೆ ನೀಡಲು ಆಡಳಿತಾತ್ಮಕ ಅನುಮೋದನೆ
  • ಕಲಬುರಗಿಯಲ್ಲಿ 150 ಹಾಸಿಗೆ ಮಕ್ಕಳ ಆರೋಗ್ಯ ಇಂದಿತಾಗಾಂಧಿ ಮಕ್ಕಳ ಸಾಮರ್ಥ್ಯದ ಘಟಕವನ್ನು ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ರೂ. 221.51 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
  • ಬೆಂಗಳೂರಿನ ನೆಫ್ರೊ-ಯುರಾಲಜಿ ಸಂಸ್ಥೆಯ ಹೊರರೋಗಿ ವಿಭಾಗಕ್ಕೆ ನೂತನ ಕಟ್ಟಡವನ್ನು ರೂ. 16.15 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ-4 (2024-29) ಕ್ಕೆ ಅನುಮೋದನೆ.
  • ರಾಜ್ಯದ ವಿವಿಧ ಕಾರಾಗೃಹಗ ಳಲ್ಲಿರುವ ಕೇಂದ್ರ 59 ಜೀವಾವಧಿ ಶಿಕ್ಷಾಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ
  • ಗದಗ ಜಿಲ್ಲೆಯ ಗದಗ ಬೆಟಗೇರಿಯಲ್ಲಿ ಕರ್ನಾಟಕ ಗೃಹ ಮಂಡಳಿಯ ವಸತಿ ಬಡಾವಣೆಯಲ್ಲಿನ 1 ಎಕರೆ 27 ಗುಂಟೆ ಜಮೀನಿನಲ್ಲಿ 2 ಬಿ.ಹೆಚ್‌.ಕೆ (2+3) ಮಾದರಿಯ ಬಹುಮಹಡಿ ಗುಂಪು ವಸತಿ ಯೋಜನೆಯ 239.55 ಕೋಟಿಗಳ ಪರಿಷ್ಕೃತ ಯೋಜನಾ ಅನುಮೋದನೆ
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗೆ ಸೇರಿದ ಕೇಂದ್ರಸ್ಥಾನ ಸಹಾಯಕರು/ ಹಿರಿಯ ಉಪ ನೋಂದಣಾಧಿಕಾರಿ/ ಉಪ ನೋಂದಣಾಧಿಕಾರಿಗಳನ್ನು Guided Counselling based compulsory transfers/ counselling transfers ಮೂಲಕ ವರ್ಗಾವಣೆ ಮಾಡಲು ನಿಗದಿಪಡಿಸಿದ ಅವಧಿಯನ್ನು 10.08.2024 ರಿಂದ 30.10.2024 ರವರೆಗೆ ವಿಸ್ತರಿಸಲು ಅನುಮೋದನೆ.
  • ಸ್ವ-ಸಹಾಯ ಗುಂಪುಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡುವುದರ ಜೊತೆಯಲ್ಲಿ 2500 ಕಾಫಿ ಕಿಯೋಸ್ಕ್ ಗಳನ್ನು 25 ಕೋಟಿಗಳ ವೆಚ್ಚದಲ್ಲಿ ಪ್ರಾರಂಭಿಸಲು ಹಾಗೂ ಸ್ವ-ಸಹಾಯ ಗುಂಪುಗಳ ಮಹಿಳೆಯರ ಮೂಲಕ ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆ.
  • ಅರ್ಹತಾ ಪತ್ರ ನವೀಕರಣಕ್ಕೆ ಬರುವ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು ರಾಜ್ಯದ 32 ಸ್ಥಳಗಳಲ್ಲಿ ಸ್ವಯಂಚಾಲಿತ ವಾಹನಗಳ ಪರೀಕ್ಷಾ ಕೇಂದ್ರಗಳನ್ನು (ATS) ರೂ. 341 ಕೋಟಿಗಳ ಒಟ್ಟು ಅಂದಾಜು ಮೊತ್ತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿ, 5.3.2024ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
  • ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022 ಅನುಷ್ಠಾನಗೊಳಿಸಲು 15 ವರ್ಷಗಳನ್ನು ಪೊರೈಸಿರುವ ವಾಹನಗಳನ್ನು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಾಶಗೊಳಿಸಲು ಉದ್ದೇಶಿಸಿರುವ ವಾಹನಗಳ ಮೇಲೆ ಕೊನೆಯ 01 ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿನ ಬಾಕಿ ದಂಡಗಳ ವಸೂಲಿಯಿಂದ ವಿನಾಯಿತಿ ನೀಡಿರುವ ಅವಧಿಯನ್ನು 31.03.2026 ರವರೆಗೆ ವಿಸ್ತರಿಸಲು ಅನುನೋದನೆ.
  • ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವಳಿ ಪಾರ್ಕ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP)ದಲ್ಲಿ ರೂ.27.97 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ.
  • ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಾಗತಿಕ ಸ್ಪರ್ಧಾತ್ಮಕತೆಗಾಗಿ ಸ್ಥಳೀಯ ಉದ್ಯೋಗಿಗಳನ್ನು ಕೌಶಲ್ಯಗೊಳಿಸಲು “ನಿಪುಣ್ ಕರ್ನಾಟಕ” ಉಪಕ್ರಮವನ್ನು ರೂ. 100 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹಾಗೂ ಪ್ರಸ್ತುತ 2024-25ನೇ ಸಾಲಿನಲ್ಲಿ ರೂ. 10 ಕೋಟಿಗಳ ಮೊತ್ತದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ.
  • ಬೆಳಗಾವಿ ಜಿಲ್ಲೆ, ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 08 ಏತ ನೀರಾವರಿ ಯೋಜನೆಗಳ ಪುನ:ಶ್ವೇತನ ಕಾಮಗಾರಿಗಳ ರೂ. 149.70 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಅನುಮೋದನೆ.
  • ಕಲಬುರಗಿ ಜಂಟಿ ಸಾರಿಗೆ ಆಯುಕ್ತರು ಹಾಗೂ ಉಪ ಸಾರಿಗೆ ಆಯುಕರು ಮತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಸ್ವಂತ ಕಟ್ಟಡ ನಿರ್ಮಾಣದ ಮತ್ತು ಒಳಾಂಗಣ ಕಾಮಗಾರಿಗಳ ರೂ. 10.50 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
  • ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರವು ಹೊಸಪೇಟೆ ತಾಲ್ಲೂಕು ಇಂಗಳಗಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 24.24 ಎಕರೆ ಜಮೀನಿನಲ್ಲಿ ಶೇಕಡಾ ಅನುಪಾತದಲ್ಲಿ ಉದ್ದೇಶಿಸಿರುವ 50:50 ವಸತಿ ಯೋಜನೆಯ ರೂ. 11.76 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
  • ಕೇಂದ್ರ ಪುರಸ್ಕೃತ National Urban Digital Mission (NUDM) ಯೋಜನೆಯನ್ನು ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯ ಮುಖಾಂತರ ಕರ್ನಾಟಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರೂ. 37.50 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ
  • ಮಹದಾಯಿ ಪ್ರವಾಹ ಪ್ರಾಧಿಕಾರದ ನಿಧಿಗೆ (Progressive River Authority for Welfare and Harmony)ಗೆ ಮೊದಲ ಹಂತದಲ್ಲಿ ರಾಜ್ಯದ ಪಾಲಿನ ರೂ. 1.67 ಕೋಟಿಗಳನ್ನು KNNL ನಿಂದ ಪಾವತಿಸಲು ತೀರ್ಮಾನ.
  • ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಮತ್ತು ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 198.27 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
  • ಶ್ರೀ ಜಯದೇವ ಹೃದ್ರೋಗ ವಿಜ್ಞಾನ 2 ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖೆಯ ಕಟ್ಟಡ ಕಾಮಗಾರಿಯ ರೂ. 262.20 ಕೋಟೆಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
  • ಬೆಂಗಳೂರು ನವೀಕರಿಸಬಹುದಾದ ಇಂಧನ ನಿಗಮ ನಿಯಮಿತ” ಎಂಬ ನವೀಕರಿಸಬಹುದಾದ ಇಂಧನ ಪಾರ್ಕ್ ಅನ್ನು ನಗರಾಭಿವೃದ್ಧಿ ಇಲಾಖೆಯ ವಿವಿಧ ಅಂಗಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಅನುಮೋದನೆ
  • ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ” ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು 3 ವರ್ಷಗಳಿಗೆ ಹೆಚ್ಚಿಸಲು ಒಂದು ಬಾರಿಯ ಕ್ರಮವಾಗಿ ಒಂದು ವರ್ಷದ ಅವಧಿಗೆ ಸಡಿಲಿಕೆಗೆ ಒಪ್ಪಿಗೆ

ದೇಶ

K. Govindraj ಸೇರಿ ಗಣ್ಯರಿಗೆ ಗೌರವ ಡಾಕ್ಟರೇಟ್ – ಬಿಸಿಯು ಘಟಿಕೋತ್ಸವ ಸಂಭ್ರಮ

Published

on

By

ಬೆಂಗಳೂರು: Bengaluru City University (ಬಿಸಿಯು) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಕುಲಾಧಿಪತಿಗಳಾದ Thawar Chand Gehlot ಚಾಲನೆ ನೀಡಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ Dr. Binay Kumar Das, Defence Research and Development Organisation (ಡಿಆರ್‌ಡಿಒ) ಮಹಾ ನಿರ್ದೇಶಕರು (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್) ಭಾಗವಹಿಸಿದ್ದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ Arjun Janya, ಕ್ರಿಕೆಟರ್ Venkatesh Prasad, ಶಿಕ್ಷಣ ತಜ್ಞ T. K. Narayanappa, ಎಂಎಲ್ಸಿ K. Govindaraj, ಶಿಕ್ಷಣ ಕ್ಷೇತ್ರದ Mohan Alva ಹಾಗೂ ಕೈಗಾರಿಕೋದ್ಯಮಿ Bava Mohammed Farooq ಅವರಿಗೆ ರಾಜ್ಯಪಾಲರು ಗೌರವಿಸಿದರು.

ಉಪ ಚುನಾವಣೆ ಪ್ರಚಾರದ ಹಿನ್ನೆಲೆ, ಉನ್ನತ ಶಿಕ್ಷಣ ಸಚಿವ Dr. C. N. Ashwath Narayan ಗೈರಾಗಿದ್ದರು.

ಘಟಿಕೋತ್ಸವದಲ್ಲಿ 73 ಪ್ರಥಮ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನವಾಗಿದ್ದು, 23 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಲಾಯಿತು.

ವಿಶೇಷವಾಗಿ, ಸ್ನೇಹಾ ಟಿ (ಎಂಎಸ್‌ಸಿ ರಸಾಯನಶಾಸ್ತ್ರ) 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಭಿಷೇಕ್ ಶ್ರೀರಾಮ್ (ಬಿಕಾಂ) 3 ಚಿನ್ನದ ಪದಕ, ದಿವ್ಯಶ್ರೀ ಎಸ್ (ಬಿಬಿಎ) 3 ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.

ಗೌರವ ಡಾಕ್ಟರೇಟ್ ಪಡೆದ ಬಳಿಕ Arjun Janya ಅವರು ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.

Continue Reading

ದೇಶ

ಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?

Published

on

ಬೆಂಗಳೂರು: ಹಳೆಯ ವಾಹನಗಳಿಗೆ ಹೈ ಸಿಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ, ಇದಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಇಂತಹ ಸುದ್ದಿಗಳು ಸುಳ್ಳು ಎಂದು ಹೇಳಿ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 50ರಡಿ, ಕೇಂದ್ರ ಸರ್ಕಾರವು 2018 ಡಿಸೆಂಬರ್ 4ರಂದು ಅಧಿಸೂಚನೆ ಹೊರಡಿಸಿದ್ದು, 2019 ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಅನುಸರಿಸಿ, ಕರ್ನಾಟಕ ಸರ್ಕಾರವು 2023 ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿ ರಾಜ್ಯದಲ್ಲಿಯೂ ಇದೇ ನಿಯಮವನ್ನು ಜಾರಿಗೆ ತಂದಿದೆ.

ಇದಕ್ಕೂ ನಡುವೆ, HSRP ಅಳವಡಿಕೆ ಸಂಬಂಧ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸರ್ಕಾರವು ಯಾವುದೇ ತರಾತುರಿ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ. ಆದರೆ, ಈ ಆದೇಶವು HSRP ಕಡ್ಡಾಯ ಆದೇಶವನ್ನು ರದ್ದುಪಡಿಸುವುದಿಲ್ಲ ಎಂಬುದು ಮುಖ್ಯ.

ಸಾರಿಗೆ ಇಲಾಖೆಯ ಪ್ರಕಾರ, ಹೈಕೋರ್ಟ್ ಆದೇಶದಿಂದ ಹೊಸ ಕ್ರಮಗಳನ್ನು ಕೈಗೊಳ್ಳಲು ಅಡ್ಡಿಯಿದ್ದರೂ, HSRP ಅಳವಡಿಕೆ ಕುರಿತ ಅಧಿಸೂಚನೆ ಇನ್ನೂ ಜಾರಿಯಲ್ಲಿಯೇ ಇದೆ. ಆದ್ದರಿಂದ, ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ವದಂತಿಗಳಿಂದ ಗೊಂದಲಕ್ಕೀಡಾಗಬಾರದು ಎಂದು ಸಾರಿಗೆ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Continue Reading

ಕ್ರೀಡೆ

ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!

Published

on

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.

ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.

ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Continue Reading

Trending