Connect with us

ರಾಜಕೀಯ

ಕೋವಿಡ್ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬೊಮ್ಮಾಯಿ: ಸಿಎಂ ಸಿದ್ದರಾಮಯ್ಯ

Published

on

ಹುಬ್ಬಳ್ಳಿ: ಕೊರೋನಾ ಸಾವಿನಲ್ಲೂ ಮಾನವೀಯತೆ ಮರೆತು ಲೂಟಿ ಮಾಡಿದ ಬಸವರಾಜ ಬೊಮ್ಮಾಯಿ ಅವರ ಮಗ ಗೆಲ್ಲಬೇಕಾ? ಎಂದು ಮತದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಶ್ನಿಸಿದರು.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಹಾವನೂರು ಗ್ರಾಮದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಂದರೆ ಭ್ರಷ್ಟಾಚಾರ ಜನತಾ ಪಾರ್ಟಿ. ಕೋವಿಡ್ ವೇಳೆ ಹೆಣಗಳಿಂದಲೂ ಹಣ ಲೂಟಿ ಮಾಡಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಇದೆ ಮೊದಲು. ಹೆಣಗಳ ಮೇಲೆ ಹಣ ಮಾಡಿರುವ ಸಿಎಂ ಇದ್ದರೆ ಅದು ಬಸವರಾಜ ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು.

ಹೆಣಗಳ ಮೇಲೂ ಹಣ ಮಾಡಿದವರ ಮಗ ಗೆಲ್ಲಬೇಕಾ? ಕೊರೋನಾ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬೊಮ್ಮಾಯಿ. ಸತ್ತ ಹೆಣಗಳ‌ ಲೆಕ್ಕದಲ್ಲೂ ಲಂಚ ಪಡೆದ ಏಕೈಕ ಸರ್ಕಾರ ಬೊಮ್ಮಾಯಿ ಅವರದ್ದಾಗಿತ್ತು. ಕೋವಿಡ್ ಸಂದರ್ಭದಲ್ಲೂ, ಸಂಕಷ್ಟದಲ್ಲಿ ನರಳುವಾಗಲೂ ಲಂಚ ಪಡೆದವರ ಪುತ್ರನನ್ನು ಸೋಲಿಸಿ ಎಂದು ಹೇಳಿದರು.

ಬೊಮ್ಮಾಯಿ ಪುತ್ರ ಗೆಲ್ಲಬೇಕಾ? ಯಾಸಿರ್ ಪಠಾಣ್ ಗೆಲ್ಲಬೇಕಾ? ನೀವೇ ನಿರ್ಧಾರ ಮಾಡಿ. 160 ಭರವಸೆಗಳ ಪೈಕಿ 158 ಭರವಸೆ ಈಡೇರಿಸಿದ್ದೇವೆ. 5 ಗ್ಯಾರಂಟಿ ಯೋಜನೆಗಳನ್ನು ಸಹ ಜಾರಿ ಮಾಡಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಗ್ಯಾರಂಟಿ ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ಅಧಿಕಾರ ವಹಿಸಿಕೊಂಡ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ.

ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಅವರನ್ನು ಗೆಲ್ಲಿಸಿ ಎಂದರು. ಅಜ್ಜಂಪೀರ್ ಖಾದ್ರಿ ನನಗೆ ತುಂಬಾ ಬೇಕಾದವರು. ನನಗಾಗಿ ಖಾದ್ರಿ ಶಾಸಕ ಸ್ಥಾನ ತ್ಯಜಿಸಲು ಸಿದ್ದರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ ಬಂದು ಅವರು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ದರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆ. ಹೀಗಾಗಿ ನಮ್ಮ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಾಸ್ ಪಡೆದು ಪಠಾಣ್ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ, ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದರು‌. ಹೋಗಲಿ ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ರೈತರ ಮತ ಕೇಳುತ್ತಿದ್ದಾರೆಂದು ಹೇಳಿದರು.

ವಕ್ಫ್ ಆಸ್ತಿ ಈಗ ಆಗಿರೋದಾ? ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನೋಟಿಸ್ ಕೊಟ್ಟಿದಾರೆ. ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿ ಇದ್ದಾಗಲೂ ನೋಟಿಸ್ ಕೊಟ್ಟಿದ್ದಾರೆ. ಉಪ ಚುನಾವಣೆಗೋಸ್ಕರ ರಾಜಕೀಯ ಮಾಡುತ್ತಿದ್ದಾರೆ. ಯಾವ‌ ಕಾರಣಕ್ಕೂ ಕೂಡಾ ರೈತರನ್ನು ಒಕ್ಕಲೆಬ್ಬಿಸಲ್ಲ. ವಕ್ಫ್ ಬೋರ್ಡ್​ನವರು ಯಾವ ಕಾರಣಕ್ಕೂ ಖಾಲಿ ಮಾಡಿಸಂಗಿಲ್ಲ. ಕಂದಾಯ ದಾಖಲೆಗಳಲ್ಲಿ ವಕ್ಫ್ ಅಂತ ಇದ್ದರೂ ರದ್ದು ಮಾಡಲು ಹೇಳಿದಿನಿ. ಆದರೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ದೂರಿದರು.

ನನ್ನ ಮೇಲೆ ಸುಳ್ಳು ಆರೋಪ ಮಾಡಿ ಕಳಂಕ‌ ತರುವ ಕೆಲಸ ಮಾಡ್ತಿದ್ದಾರಲ್ವಾ? ಈ‌ ಬಿಜೆಪಿಯವರನ್ನು ನಂಬುತ್ತೀರಾ? ಸಿದ್ದರಾಮಯ್ಯನನ್ನು ಕಂಡರೆ ಅವರಿಗೆ ಹೊಟ್ಟೆ ಉರಿ, ನನ್ನ ಜೀವನ ತೆರೆದಿಟ್ಟ ಪುಸ್ತಕ. ಪಠಾಣ್ ಅವರನ್ನು ಗೆಲ್ಲಿಸಿದರೆ ಬಿಜೆಪಿಯವರಿಗೆ ಉತ್ತರ ಕೊಟ್ಟ ಹಾಗೆ ಆಗುತ್ತೆ. ಪಠಾಣ್​ ಗೆದ್ದರೆ ನಾನು ಗೆದ್ದಂತೆ. ಶಿಗ್ಗಾಂವಿ, ಸವಣೂರು ಏತ ನೀರಾವರಿ ಯೋಜನೆಗಳಿಗೆ ಮತ್ತು ಬಾಡ ಕನಕ‌ ಅರಮನೆಗೆ ಅನುದಾನ ಬಿಡುಗಡೆ ಮಾಡಿದ್ದೇ ನಾನು ಎಂದು ಸಿಎಂ ತಿಳಿಸಿದರು.

ದೇಶ

“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್‌ ಟಾಂಗ್‌, ದಾವಣಗೆರೆ ರಾಜಕೀಯ ಕುತೂಹಲ

Published

on

By

ದಾವಣಗೆರೆ ದಕ್ಷಿಣ ಉಪಚುನಾವಣೆ ರಾಜಕೀಯ ಕಣ ದಿನೇದಿನೇ ರಂಗೇರುತ್ತಿದ್ದು, ಸಚಿವ ಜಮೀರ್‌ ಅಹ್ಮದ್‌ ಖಾನ್ ಅವರ ಆಗಮನದಿಂದ ಹೊಸ ತಿರುವು ಪಡೆದುಕೊಂಡಿದೆ. ಹಲವು ದಿನಗಳಿಂದ ಮುಂದುವರಿದಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಅವರು ಕೊನೆಗೂ ದಾವಣಗೆರೆಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ.

ಟಿಕೆಟ್‌ ಹಂಚಿಕೆ ವೇಳೆ ಉಂಟಾದ ಗಲಾಟೆ ಸಂದರ್ಭದಲ್ಲಿ ಎಸ್‌ಎಸ್‌ ಮಲ್ಲಿಕಾರ್ಜುನ್ ಅವರು “ಯಾರ್ರಿ ಜಮೀರ್‌ ದಾವಣಗೆರೆ ಬಗ್ಗೆ ಮಾತನಾಡಲು” ಎಂದು ಹೇಳಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಜಮೀರ್‌ ಅಸಮಾಧಾನಗೊಂಡಿದ್ದರು.

ಆದರೆ ಇದೀಗ ರಾಜಕೀಯ ವಾತಾವರಣ ಬದಲಾಗಿದ್ದು, ಜಮೀರ್‌ ಅವರನ್ನು ಸ್ವತಃ ಮಲ್ಲಿಕಾರ್ಜುನ್‌ ಅವರು ಸ್ವಾಗತಿಸಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್‌, “ನಾವಿಬ್ಬರೂ ಸ್ನೇಹಿತರು. ಯಾವುದೇ ಬೇಸರ ಇಲ್ಲ. ಸಿಟ್ಟಿನಲ್ಲಿ ಹೇಳಿದ ಮಾತು ಅಷ್ಟೇ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಅವರು ಪರೋಕ್ಷವಾಗಿ ಟಾಂಗ್ ಕೊಡುತ್ತಾ, “ನನ್ನ ಕ್ಷೇತ್ರ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನು ಸುಮ್ಮನೆ ಇರ್ತಿನಾ?” ಎಂದು ಪ್ರತಿಕ್ರಿಯೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್‌, “ಈಗ ಎಲ್ಲವೂ ಬಗೆಹರಿದಿದೆ. ನಾವು ಬಹಳ ವರ್ಷಗಳಿಂದ ಸ್ನೇಹಿತರು,” ಎಂದು ಹೇಳಿದರು.

ಈ ಬೆಳವಣಿಗೆ ದಾವಣಗೆರೆ ರಾಜಕೀಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದಂತೆ ಕಾಣುತ್ತಿದೆ.

Continue Reading

ದೇಶ

ಜಮೀರ್ ಅಹ್ಮದ್‌ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!

Published

on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರಿಯ ನಾಯಕನಾಗಿ ಹೊರಹೊಮ್ಮುತ್ತಿರುವ ವಸತಿ ಸಚಿವ Zameer Ahmed Khan ಅವರಿಗೆ ಎಐಸಿಸಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಅವರ ಪ್ರಭಾವವನ್ನು ಗಮನಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಸ್ತುತ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಜಮೀರ್ ಅಹ್ಮದ್, ರಾಜ್ಯದ ಉಪಚುನಾವಣೆಗಳ ಪ್ರಚಾರಕ್ಕೆ ಬರಲು ಸಾಧ್ಯವಾಗದೇ ಬ್ಯುಸಿಯಾಗಿದ್ದಾರೆ. ಕೇರಳದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಅಲ್ಲಿಯೇ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾಗವಹಿಸಲು ಜಮೀರ್ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಕೇರಳದ ಪ್ರಚಾರ ಕಾರ್ಯದಿಂದ ಬಿಡುವಿಲ್ಲ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ Siddaramaiah ಸೂಚನೆ ಇದ್ದರೂ, ಎಐಸಿಸಿ ನಾಯಕತ್ವದಿಂದಲೇ ತಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೂ ನಡುವೆ, ಎಐಸಿಸಿ ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನ ಸದಸ್ಯರಾಗಿ ಜಮೀರ್ ಅಹ್ಮದ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿಗೆ ಕೇರಳದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ನಾಯಕತ್ವದ ಮಟ್ಟದಲ್ಲೂ ಬದಲಾವಣೆ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ.

ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಈ ನೇಮಕಾತಿ ನಡೆದಿದ್ದು, ಜಮೀರ್ ಅವರ ಜನಪ್ರಿಯತೆ ದಿನೇದಿನೇ ಏರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲೂ ಉಪಚುನಾವಣೆಗಳ ನಡುವೆ ಅವರ ಗೈರುಹಾಜರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ಸೋಮಣ್ಣ ವಿರುದ್ಧ ಸಿಎಂ ಸಿಡಿತ: “ಕೆಲಸವಿಲ್ಲದ ಮಂತ್ರಿ!”

Published

on

By

ಬಾಗಲಕೋಟೆ: ಬಿಜೆಪಿ ನಾಯಕ V. Somanna ವಿರುದ್ಧ ಮುಖ್ಯಮಂತ್ರಿ Siddaramaiah ತೀವ್ರ ವಾಗ್ದಾಳಿ ನಡೆಸಿದ್ದು, “ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ, ಅವರಿಗೆ ಯಾವುದೇ ಕಡತ ಹೋಗುವುದಿಲ್ಲ” ಎಂದು ಟೀಕಿಸಿದರು.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ನಾವು ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯವಿಲ್ಲ” ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳ ಸ್ಥಾನ ಕುರಿತು ಬಿಜೆಪಿ ನಾಯಕರು ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ, ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದರು.

ಬಿಜೆಪಿಯ ಮೇಲೆ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, “ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಾತಿನಲ್ಲಿ ಸತ್ಯವಿಲ್ಲ, ನಡೆದಲ್ಲಿ ನಂಬಿಕೆ ಇಲ್ಲ” ಎಂದು ಟೀಕಿಸಿದರು. ಜೊತೆಗೆ, ಪಕ್ಷದಿಂದ ಉಚ್ಛಾಟನೆಯಾದ Basanagouda Patil Yatnal ಅವರನ್ನು ಮತ್ತೆ ಪ್ರಚಾರಕ್ಕೆ ಕರೆತಂದು ಬಳಸಿಕೊಳ್ಳುತ್ತಿರುವುದು ಬಿಜೆಪಿ ದ್ವಂದ್ವ ನೀತಿಗೆ ಉದಾಹರಣೆ ಎಂದು ಹೇಳಿದರು.

ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಮಾತನಾಡಿದ ಅವರು, “ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇವಲ ವಿತರಣೆಯನ್ನು ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ Narendra Modi ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂಬ ಹೇಳಿಕೆಯನ್ನೂ ನೀಡಿದರು.

ಇನ್ನೂ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, Rahul Gandhi, Sonia Gandhi, Mallikarjun Kharge ಮತ್ತು Priyanka Gandhi ಅವರೇ ಪಕ್ಷದ ಹೈಕಮಾಂಡ್ ಎಂದು ಹೇಳಿದರು.

ಒಟ್ಟಿನಲ್ಲಿ, ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.

Continue Reading

Trending