ದೇಶ

ಅಮೆರಿಕದ ‘ಸೆಕೆಂಡ್​ ಲೇಡಿ’ ಗೌರವಕ್ಕೆ ಪಾತ್ರರಾದ ತೆಲುಗು ಮಹಿಳೆ: ಯಾರೀ ಉಷಾ ಚಿಲುಕುರಿ?

ಹೈದರಾಬಾದ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಿಪಬ್ಲಿಕನ್​ ಪಕ್ಷದ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್​​ ಪಕ್ಷದ ಕಮಲಾ ಹ್ಯಾರಿಸ್​ ಅವರು ಸೋಲು ಅನುಭವಿಸಿದ್ದಾರೆ. ಇವರ ಮಧ್ಯೆ ಭಾರತ ಮೂಲದ ಮಹಿಳೆಯೊಬ್ಬರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಅವರ ಹೆಸರು ಉಷಾ ಚಿಲುಕುರಿ. ತೆಲುಗು ಭಾಷಿಕರಾದ ಇವರು ಅಮೆರಿಕದಲ್ಲಿ ಹುಟ್ಟಿ ಬೆಳೆದರೂ, ಅವರ ಮೂಲ ಮಾತ್ರ ಭಾರತದ ಆಂಧ್ರಪ್ರದೇಶ. ಉಷಾ ಅವರು ಅಮೆರಿಕ ಚುನಾವಣೆ ಬಳಿಕ ಚಾಲ್ತಿಗೆ ಬರಲು ಕಾರಣ ಅವರ ಪತಿ ಜೆ.ಡಿ. ವ್ಯಾನ್ಸ್​. ಇವರು ಡೊನಾಲ್ಡ್​​ ಟ್ರಂಪ್​ ಅವರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಮೆರಿಕದ ಅಧ್ಯಕ್ಷರ ಪತ್ನಿಯನ್ನು ಪ್ರಥಮ ಮಹಿಳೆ (ಫಸ್ಟ್​ ಲೇಡಿ) ಎಂದು ಗೌರವಯುತವಾಗಿ ಕರೆಯುವ ಪದ್ಧತಿ ಇದೆ. ಜೆ.ಡಿ. ವ್ಯಾನ್ಸ್​ ಅವರು ಉಪಾಧ್ಯಕ್ಷರಾದ್ದರಿಂದ ಅವರ ಪತ್ನಿ ಉಷಾ ಅವರು ‘ಸೆಕೆಂಡ್​ ಲೇಡಿ’ ಎಂಬ ಅಭಿದಾನಕ್ಕೆ ಪಾತ್ರವಾಗಲಿದ್ದಾರೆ.

ಯಾರು ಈ ಉಷಾ ಚಿಲುಕುರಿ?: ಉಷಾ ಚಿಲುಕುರಿ ಅವರ ಪೂರ್ವಜರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಾಮರ್ರು ಬಳಿಯ ಹಳ್ಳಿಯೊಂದರ ನಿವಾಸಿಗಳಾಗಿದ್ದರು. ಈಕೆಯ ತಂದೆ ರಾಧಾಕೃಷ್ಣ ಮತ್ತು ತಾಯಿ ಲಕ್ಷ್ಮಿ ಅವರು 1980ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು.

ಉಷಾ ಅವರ ತಾಯಿ ಲಕ್ಷ್ಮಿ ಅವರು ಜೀವರಸಾಯನಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಪ್ರಸ್ತುತ ಅವರು, ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ರಾಧಾಕೃಷ್ಣ ಚಿಲುಕುರಿ ಅವರು ಏರೋಸ್ಪೇಸ್ ಎಂಜಿನಿಯರ್. ಯುನೈಟೆಡ್ ಟೆಕ್ನಾಲಜೀಸ್ ಏರೋಸ್ಪೇಸ್ ಸಿಸ್ಟಮ್ಸ್‌ನಲ್ಲಿ ಏರೋಡೈನಾಮಿಕ್ಸ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ನಂತರ, ಅವರು ಕಾಲಿನ್ಸ್ ಏರೋಸ್ಪೇಸ್‌ನಲ್ಲಿ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಕ್ರಿಶ್​ ಚಿಲುಕುರಿ ಎಂದೇ ಪ್ರಸಿದ್ಧರಾಗಿದ್ದಾರೆ.

ಕಾನೂನು ಪದವೀಧರೆಯಾಗಿರುವ ಉಷಾ ಅವರು, ಕಾಲೇಜು ಹಂತದಲ್ಲಿ ವ್ಯಾನ್ಸ್​ ಅವರನ್ನು ಭೇಟಿಯಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ 2014 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಚಿಲುಕುರಿ ಅವರು ಈ ಮೊದಲು ಡೆಮಾಕ್ರಟಿಕ್​ ಪಕ್ಷದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಬಳಿಕ ರಿಪಬ್ಲಿಕ್​​ ಪಕ್ಷ ಸೇರಿಕೊಂಡು, ಪತಿಯ ಪರವಾಗಿ ಸೆನೆಟರ್​​ ಚುನಾವಣೆಯಲ್ಲಿ ಪ್ರಚಾರ ಕೂಡ ನಡೆಸಿದ್ದರು. ಸದ್ಯ ಅವರ ಕುಟುಂಬವು ಓಹಿಯೋದ ಸಿನ್ಸಿನಾಟಿಯಲ್ಲಿ ನೆಲೆಸಿದೆ.

Leave a Reply

Your email address will not be published. Required fields are marked *

Trending

Exit mobile version