ದೇಶ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್

ಈ ವರ್ಷಾಂತ್ಯ ಬಹುನಿರೀಕ್ಷಿತ ಸಿನಿಮಾವೊಂದು ಅದ್ಭುತ ಸಿನಿಮೀಯ ಅನುಭವ ನೀಡಲಿದೆ. ‘ಪುಷ್ಪ 2: ದಿ ರೂಲ್’ ಥಿಯೇಟರ್ಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಾದ್ಯಂತ ಸಾಕಷ್ಟು ಸದ್ದು ಮಾಡಿದೆ. ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಪ್ರಮೋಶನ್ಸ್, ಅನೌನ್ಸ್ಮೆಂಟ್ಸ್ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ಡಿಸೆಂಬರ್ನಲ್ಲಿ ಅದ್ಧೂರಿಯಾಗಿ ತೆರೆಗಪ್ಪಳಿಸಲು ಸಿದ್ಧವಾಗಿದೆ.
ಬಹುನಿರೀಕ್ಷಿತ ಚಿತ್ರದ ಟ್ರೇಲರ್ಗಾಗಿ ಸಿನಿಪ್ರಿಯರು ಕಾತರರಾಗಿದ್ದರು. ಟ್ರೇಲರ್ ಬಿಡುಗಡೆ ದಿನಾಂಕವನ್ನು ಇಂದು ಸಂಜೆ 4.05ಕ್ಕೆ ಪ್ರಕಟಿಸಲಾಗಿದೆ. ‘ಪುಷ್ಪ 2: ದಿ ರೂಲ್’ ನಿರ್ಮಾಪಕರು ಟ್ರೇಲರ್ ಬಿಡುಗಡೆ ದಿನಾಂಕವನ್ನು ಸಂಜೆ ಘೋಷಿಸಲಾಗುವುದು ಎಂದು ಸುಳಿವನ್ನು ಬೆಳಗ್ಗೆ ನೀಡಿದ್ದರು. ಕೊಟ್ಟ ಭರವಸೆಯಂತೆ ಮೈತ್ರಿ ಮೂವೀ ಮೇಕರ್ಸ್ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ‘ಪುಷ್ಪ 2: ದಿ ರೂಲ್’ ಟ್ರೇಲರ್ ಇದೇ ನವೆಂಬರ್ 17ರ ಸಂಜೆ 6.03ಕ್ಕೆ ಪಾಟ್ನಾದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
‘ಪುಷ್ಪ 2: ದಿ ರೂಲ್’ ವೀಕ್ಷಿಸಲು ಭಾರತದ ಮೂಲೆ ಮೂಲೆಗಳಲ್ಲೂ ಪ್ರೇಕ್ಷಕರು ಸಜ್ಜಾಗಿದ್ದಾರೆ. ಸಿನಿಮಾವನ್ನು ಭಾರತದಾದ್ಯಂತ ತಲುಪಿಸುವ ಪ್ರಯತ್ನದಲ್ಲಿ ಚಿತ್ರತಂಡ ಪಾಟ್ನಾ, ಕೋಲ್ಕತ್ತಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಲ್ಲಿ ಪ್ರಚಾರ ಕೈಗೊಳ್ಳಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಜನಪ್ರಿಯ ಟಾಕ್ ಶೋ ಎನ್ಬಿಕೆ ಅನ್‌ಸ್ಟಾಪಬಲ್‌ನಲ್ಲಿ ಅಲ್ಲು ಅರ್ಜುನ್ ಭಾಗಿಯಾಗುವುದರೊಂದಿಗೆ ‘ಪುಷ್ಪ 2’ ಪ್ರಚಾರ ಈಗಾಗಲೇ ಶುರುವಾಗಿದ್ದು, ಈ ಎಪಿಸೋಡ್ ನವೆಂಬರ್ 15ರಂದು ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಇಂದು ಚಿತ್ರದ ಟ್ರೇಲರ್ ಬಗ್ಗೆಯೂ ಅಪ್ಡೇಟ್ ಹೊರಬಿದ್ದಿದೆ.
ಈ ಮೊದಲು ಸಿನಿಮಾವನ್ನು ಆಗಸ್ಟ್ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಚಿತ್ರ ತಯಾರಕರು ಬಿಡುಗಡೆ ದಿನಾಂಕವನ್ನು ಡಿಸೆಂಬರ್ 6ಕ್ಕೆ ಮುಂದೂಡಿದರು. ಇದೀಗ ಸಿನಿಮಾ ಒಂದು ದಿನ ಮೊದಲೇ ತೆರೆಕಾಣಲು ಸಜ್ಜಾಗಿದೆ. ಡಿಸೆಂಬರ್ 5, 2024ಕ್ಕೆ ಪುಷ್ಪ 2 ಚಿತ್ರಮಂದಿರ ಪ್ರವೇಶಿಸಲಿದೆ. ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಪುಷ್ಪ 2ರ ಸುತ್ತಲಿನ ಈ ಉತ್ಸಾಹ ಮೊದಲ ಭಾಗದ ಯಶಸ್ಸು ಮತ್ತು ತಾರೆಯರಿಂದಾಗಿದೆ. ಅಲ್ಲು ಅರ್ಜುನ್ ಅವರು ಪುಷ್ಪ ರಾಜ್ ಪಾತ್ರದಲ್ಲಿ ಮರಳಲಿದ್ದಾರೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮುಂದುವರಿಯಲಿದ್ದಾರೆ. ಫಹಾದ್ ಫಾಸಿಲ್ ಖಳನಾಯಕ ಭನ್ವರ್ ಸಿಂಗ್ ಶೆಕಾವತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೇ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ (ಅತ್ಯುತ್ತಮ ನಟ) ಲಭಿಸಿತ್ತು. ಸೀಕ್ವೆಲ್ನಲ್ಲಿ ಅವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಸಹಜವಾಗಿ ಹೆಚ್ಚಿನವರಲ್ಲಿ ಮನೆಮಾಡಿದೆ.