Connect with us

ಸಿನಿಮಾ

ಗಲ್ಲಾಪೆಟ್ಟಿಗೆಯಲ್ಲಿ ಎಲ್ಲ ದಾಖಲೆ ಮುರಿದ ಗದರ್ 2…. ‘ಜವಾನ್’ಗೂ ಶುರುವಾಗಿದೆ ಢವಢವʼ

‘ಗದರ್ 2’ ಚಿತ್ರದ ಎರಡನೇ ಭಾಗವನ್ನು ಜನ ಮೆಚ್ಚಿಕೊಂಡಿದ್ದಾರೆ. ಶೀಘ್ರದಲ್ಲೇ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ರೆಕಾರ್ಡ್  ಕೂಡ ಮಾಡಲಿದೆ. ಮೂರನೇ ವಾರದಲ್ಲಿಯೇ 500 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಸಂಚಲನ ಮೂಡಿಸಿದೆ.

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಇತ್ತೀಚಿನ ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ್ದಾರೆ. ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಗದರ್ 2’ ಚಿತ್ರವು ಇನ್ನೂ ಕೂಡ ಬಾಕ್ಸ್ ಆಫೀಸ್ ಅನ್ನು ಆಳುತ್ತಿದೆ. ಚಿತ್ರದ ಒಟ್ಟು ಗಳಿಕೆಯನ್ನು ನೋಡಿದರೆ ಸನ್ನಿ ಡಿಯೋಲ್ ಶೀಘ್ರದಲ್ಲೇ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸವನ್ನು ಸೃಷ್ಟಿಸಲಿದ್ದಾರೆ.

ಬಾಲಿವುಡ್ ಹಂಗಾಮಾದ ಅಂಕಿ ಅಂಶಗಳ ಪ್ರಕಾರ, ‘ಗದರ್ 2’ ಮೂರನೇ ವಾರದಲ್ಲಿಯೇ 500 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಬಾಕ್ಸ್ ಆಫೀಸ್​ನಲ್ಲಿ ಇದುವರೆಗಿನ ಒಟ್ಟು 501.17 ಕೋಟಿ ರೂ. ಗಳಿಕೆ ಮಾಡಿದೆ. ಇನ್ನೊಂದೆಡೆ ಶಾರುಖ್ ಖಾನ್ ಅಭಿನಯದ ‘ಪಠಾಣ್’ ದಾಖಲೆಯನ್ನು ಮುರಿದಿದೆ ಎನ್ನುವ ಮಾತು ಕೇಳಿ ರ‍್ತಿದೆ. ‘ಗದರ್ 2’ ವೇಗವನ್ನು ನೋಡಿದರೆ, ಶೀಘ್ರದಲ್ಲೇ ಬಾಲಿವುಡ್ ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಬಹುದು. ಮತ್ತೊಂದೆಡೆ, ಶಾರುಖ್ ಅವರ ಬಹುನಿರೀಕ್ಷಿತ ಚಿತ್ರ ‘ಜವಾನ್’ ಕೂಡ ಸೆಪ್ಟೆಂಬರ್ 7 ರಂದು ಥಿಯೇಟರ್ಗಳಿಗೆ ಬರಲಿದೆ. ಹೀಗಿರುವಾಗ ಬಾಕ್ಸ್ ಆಫೀಸ್ ನಲ್ಲಿ ಗದರ್ 2 ಚಿತ್ರಕ್ಕೆ ‘ಜವಾನ್’ ಕೂಡ ಪೈಪೋಟಿ ನೀಡಬೇಕಿದೆ. ಗದರ್ 2’ ಚಿತ್ರದ ಗಳಿಕೆಯ ವೇಗವನ್ನು ನೋಡಿದರೆ ‘ಜವಾನ್’ ಗಳಿಕೆಯ ಮೇಲೆ ಸ್ವಲ್ಪವಾದರೂ ಪ್ರಭಾವ ಬೀರಬಹುದು ಎನ್ನುವ ಮಾತು ಕೇಳಿಬರ್ತಿದೆ.ಜವಾನ್ ಸಿನಿಮಾ ಗದರ್ ದಾಖಲೆ ಮುರಿಯುತ್ತಾ ಎಂದು ಶಾರುಖ್ ಫ್ಯಾನ್ಸ್ ಕಾಯ್ತಿದ್ದಾರೆ.

Continue Reading

ದೇಶ

ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮತ್ತೊಂದು ಸಂಕಷ್ಟ: ಕ್ರೈಸ್ತ ಧರ್ಮಕ್ಕೆ ಅಪಮಾನ ಆರೋಪ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು

ಬೆಂಗಳೂರು: ನಟ ಯಶ್ (Yash) ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ (Toxic Cinema) ಚಿತ್ರಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟೀಸರ್‌ನಲ್ಲಿನ ಅಶ್ಲೀಲ ದೃಶ್ಯಗಳನ್ನು ಖಂಡಿಸಿ ಮಹಿಳಾ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಟಾಕ್ಸಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಮುಜುಗರ ಉಂಟುಮಾಡಲಾಗಿದೆ ಎಂದು ಆರೋಪಿಸಿ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National Christian Federation) ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೆ ದೂರು ಸಲ್ಲಿಸಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್‌ ಅವರಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಆ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಸಂತ ಮಿಕಯೇಲ್‌ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದುಹಾಕಿ, ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಟಾಕ್ಸಿಕ್ ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳಾ ಒಕ್ಕೂಟಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ಟೀಸರ್‌ನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಮಾಡಲಾಗಿತ್ತು.

ಒಟ್ಟಾರೆ, ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭಾರೀ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಚಿತ್ರತಂಡದ ನಡೆ ಮಹತ್ವ ಪಡೆದುಕೊಂಡಿದೆ.

Continue Reading

ದೇಶ

ಭಾರತೀಯ OTT ಇತಿಹಾಸದಲ್ಲೇ ಅಪರೂಪದ ಘಟನೆ

ಬೆಂಗಳೂರು: ಪ್ರಭಾಸ್ (Prabhas) ಎಂದರೆ ಕೇವಲ ಸ್ಟಾರ್ ಅಲ್ಲ, ಅದು ಒಂದು ಬ್ರ್ಯಾಂಡ್. ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರಿಗೆ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಹೇಗೇ ಇರಲಿ, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡುವುದು ಈಗ ಸಾಮಾನ್ಯವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಕೂಡ ಅದಕ್ಕೆ ಹೊರತಲ್ಲ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ನಿರೀಕ್ಷಿಸಿದ ಮಟ್ಟದ ಮೆಚ್ಚುಗೆ ಪಡೆಯಲಿಲ್ಲ. ಕಥೆ, ಚಿತ್ರಕಥೆ ಹಾಗೂ ವಿಎಫ್‌ಎಕ್ಸ್ ಬಗ್ಗೆ ಟೀಕೆಗಳು ಕೇಳಿಬಂದರೂ, ಸಿನಿಮಾ ಮೊದಲ ವಾರದಲ್ಲೇ ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿತ್ತು. ಇದರಿಂದಲೇ ಪ್ರಭಾಸ್ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಇದೀಗ ‘ದಿ ರಾಜಾ ಸಾಬ್’ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಇಲ್ಲಿ ಕೂಡ ಬಿಡುಗಡೆಯಿಗೂ ಮುಂಚೆಯೇ ದಾಖಲೆ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್ನಲ್ಲಿ ಫೆಬ್ರವರಿ 6ರಿಂದ ಪ್ರಸಾರವಾಗಲಿದೆ. ಒಟಿಟಿ ಪ್ಲಾಟ್‌ಫಾರ್ಮ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಯಂತೆ, ಲಕ್ಷಾಂತರ ಮಂದಿ ‘Remind Me’ ಬಟನ್ ಕ್ಲಿಕ್ ಮಾಡಿದ್ದಾರೆ. ಈ ಭಾರೀ ಟ್ರಾಫಿಕ್ ನಿಭಾಯಿಸಲು ಜಿಯೋ ಹಾಟ್‌ಸ್ಟಾರ್ ತನ್ನ ಸರ್ವರ್‌ಗಳನ್ನು ಅಪ್‌ಗ್ರೇಡ್ ಮಾಡಿರುವುದು ಭಾರತೀಯ ಒಟಿಟಿ ಇತಿಹಾಸದಲ್ಲೇ ಅಪರೂಪದ ಘಟನೆ ಎನ್ನಲಾಗಿದೆ.

ಒಟಿಟಿ ಆವೃತ್ತಿಯಲ್ಲಿ ಪ್ರೇಕ್ಷಕರಿಗೆ ವಿಶೇಷ ಉಡುಗೊರೆಯೂ ಇದೆ. ಚಿತ್ರಮಂದಿರಗಳಲ್ಲಿ ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದ್ದ 4 ರಿಂದ 8 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗಿದೆ. ಇದರಲ್ಲಿ ಪ್ರಭಾಸ್ ಅವರ ‘ಓಲ್ಡ್ ಗೆಟಪ್’ ಹಾಗೂ ಒಂದು ಸಾಹಸ ದೃಶ್ಯ ಪ್ರಮುಖ ಆಕರ್ಷಣೆಯಾಗಲಿದೆ.

ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ದಿ ರಾಜಾ ಸಾಬ್’ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.

Continue Reading

ಬೆಂಗಳೂರು

‘ಮಂಡ್ಯದ ಗಂಡು’ ಅಂಬರೀಷ್ ಊಟದ ಶೈಲಿ ಹೇಗಿತ್ತು? ಮೈಕೋ ನಾಗರಾಜ್ ಹೇಳಿದ ಅಚ್ಚರಿಯ ನೆನಪು

ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟ, ‘ಮಂಡ್ಯದ ಗಂಡು’ ಎಂದೇ ಖ್ಯಾತರಾಗಿದ್ದ ರೇಬಲ್ ಸ್ಟಾರ್ ಅಂಬರೀಷ್ (Ambareesh) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಅಭಿನಯದ ಜೊತೆಗೆ ವ್ಯಕ್ತಿತ್ವ, ಸ್ನೇಹ, ಆಹಾರದ ಮೇಲಿನ ಪ್ರೀತಿ ಕೂಡ ಸದಾ ಚರ್ಚೆಯ ವಿಷಯವಾಗುತ್ತಿತ್ತು. ಇದೀಗ ನಟ ಮೈಕೋ ನಾಗರಾಜ್ ಅವರು ಅಂಬರೀಷ್ ಅವರ ಜೀವನದ ಒಂದು ಅಪರೂಪದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ಕಲಾ ಮಾಧ್ಯಮ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೈಕೋ ನಾಗರಾಜ್, ಅಂಬರೀಷ್ ಅವರ ಆಹಾರ ಶೈಲಿ ಎಷ್ಟು ವಿಭಿನ್ನವಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಅಂಬರೀಷ್ ಅವರಿಗೆ ಊಟದ ಮೇಲೆ ವಿಶೇಷ ಆಸಕ್ತಿ ಇತ್ತು. ಅದರಲ್ಲೂ ಬಾಡೂಟ ಎಂದರೆ ಅವರಿಗೆ ಬಹಳ ಇಷ್ಟವಾಗುತ್ತಿತ್ತು. ಸಹ ಕಲಾವಿದರನ್ನು ಜೊತೆಗೆ ಕೂರಿಸಿಕೊಂಡು ಊಟ ಮಾಡಿಸುವುದು ಅವರ ಅಭ್ಯಾಸವಾಗಿತ್ತು.

ಒಂದು ಸಿನಿಮಾ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡ ನಾಗರಾಜ್, “ಎಲ್ಲಿ ಊಟ ಮಾಡಿದೆ ಎಂದು ಕೇಳಿದರು. ಸೆಟ್‌ನಲ್ಲೇ ಊಟ ಮಾಡಿದ್ದೇನೆ ಎಂದೆ. ನಾಳೆ ನನ್ನ ಜೊತೆ ಊಟಕ್ಕೆ ಬರಬೇಕು ಎಂದು ಅಂಬರೀಷ್ ಹೇಳಿದರು” ಎಂದು ತಿಳಿಸಿದ್ದಾರೆ.

ಮರುದಿನ ಅಂಬರೀಷ್ ಜೊತೆ ಊಟಕ್ಕೆ ಹೋದಾಗ, ಅಲ್ಲಿ ಇದ್ದ ಭೋಜನ ನೋಡಿ ತಾವು ಅಚ್ಚರಿಗೊಂಡಿದ್ದಾಗಿ ಹೇಳಿದ್ದಾರೆ. “ಸುಮಾರು 25 ಬಗೆಯ ಪದಾರ್ಥಗಳು ಇದ್ದವು. ಎಲ್ಲವೂ ನನ್ನ ಬಟ್ಟಲಿಗೆ ಹಾಕಿಸಿದ್ದರು. ಇದನ್ನೆಲ್ಲಾ ತಿನ್ನಬೇಕು ಎಂದು ಹೇಳಿದರು” ಎಂದು ನಾಗರಾಜ್ ಹೇಳಿದ್ದಾರೆ.

ಊಟದ ವೇಳೆ ಅಂಬರೀಷ್ ಅವರ ಸರಳತೆ ಮತ್ತು ನೇರ ಮಾತುಗಳು ಗಮನ ಸೆಳೆದಿದ್ದವು. “ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು, ಎಲ್ಲರೂ ಒಂದೇ” ಎನ್ನುವ ಅವರ ಜೀವನ ತತ್ವ ಸ್ಪಷ್ಟವಾಗಿ ಕಾಣಿಸುತ್ತಿತ್ತಂತೆ.

ಇದೇ ಸಂದರ್ಶನದಲ್ಲಿ, ಅಂಬರೀಷ್ ಅವರ ತತ್ವದ ನಿಲುವಿನ ಬಗ್ಗೆ ಮಾತನಾಡಿರುವ ನಾಗರಾಜ್, ರಾಜಕೀಯ ಜೀವನದಲ್ಲಿ ನಂಬಿಕೆ ಭಂಗವಾದ ಕೆಲವರ ಬಗ್ಗೆ ಅಂಬರೀಷ್ ಯಾವುದೇ ಸಂಧಾನ ಮಾಡಿಕೊಳ್ಳಲಿಲ್ಲ ಎಂಬ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಇದು ಅಂಬರೀಷ್ ಅವರ ನೇರ ಮತ್ತು ತತ್ವಬದ್ಧ ವ್ಯಕ್ತಿತ್ವಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

Continue Reading

Trending