Connect with us

ದೇಶ

ಜಟಿಂಗ’ ಎಂಬ ‘ಹಕ್ಕಿ ಆತ್ಮಹತ್ಯೆ ಕಣಿವೆ’: ಸಂಶೋಧಕರಿಗೂ ಅಚ್ಚರಿ ತಂದ ಘಟನೆ; ಹೀಗೊಂದು ನಿಗೂಢ ಹಳ್ಳಿ!

Published

on

ಗುವಾಹಟಿ, ಅಸ್ಸಾಂ: ಕಳೆದ ಐದಾರು ದಶಕಗಳಿಂದ ಅಸ್ಸಾಂನ ಜಟಿಂಗದಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಮಾನವು ನಿಗೂಢ ಹಾಗೂ ಊಹಾಪೋಹಕ್ಕೆ ಕಾರಣವಾಗಿದೆ. ಈಶಾನ್ಯ ಭಾರತದ ಅಸ್ಸಾಂನ ಸುಂದರ ದಿಮಾ ಹಸಾವೊ ಜಿಲ್ಲೆಯಲ್ಲಿರುವ ಜಟಿಂಗಾ ಗ್ರಾಮವು ಈ ವಿಚಿತ್ರ ಘಟನೆಯಿಂದಾಗಿ ಜಾಗತಿಕ ಗಮನ ಸೆಳೆದಿತ್ತು. ಜಟಿಂಗಾದಲ್ಲಿ 70 ರಿಂದ 90ರ ದಶಕದಲ್ಲಿ ಸಂಭವಿಸಿದ ವಲಸೆ ಹಕ್ಕಿಗಳ ಹಿಂಡುಗಳು ಸಾವು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೇ, ಇದು ನಿಗೂಢವಾಗಿಯೇ ಉಳಿದಿತ್ತು. ಇನ್ನೊಂದೆಡೆ, ಪಕ್ಷಿಗಳ ಸಾವಿನ ಬಗ್ಗೆ ಹಲವಾರು ನಿಗೂಢ ಕಥೆಗಳೂ ಇವೆ.

ಕೆಲವರು ಇದನ್ನು ಅಲೌಕಿಕ ವಿದ್ಯಮಾನ ಎಂದೇ ನಂಬಿದ್ದರೆ, ಹಲವರು ವಿದ್ಯುತ್ಕಾಂತೀಯ ಶಕ್ತಿಗಳೇ ಪಕ್ಷಿಗಳ ಸಾವಿಗೆ ಕಾರಣ ಎಂದು ಹೇಳಿದ್ದರು. ಈ ಕುತೂಹಲಕಾರಿ ಘಟನೆಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ನಂತಹ ಪ್ರಸಿದ್ಧ ಸಂಸ್ಥೆಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪಕ್ಷಿವಿಜ್ಞಾನಿಗಳ ಗಮನ ಸೆಳೆಯಿತು. ಈ ರಹಸ್ಯ ಬೇಧಿಸುವುದು ಒಂದು ಮಹತ್ವದ ಸವಾಲಾಗಿತ್ತು ಕೂಡಾ. ಅಲೌಕಿಕ ಶಕ್ತಿಗಳ ಕುರಿತಂತೆ ಸ್ಥಳೀಯ ಬುಡಕಟ್ಟು ಸಮುದಾಯಗಳಲ್ಲಿ ಆಳವಾಗಿ ಬೇರೂರಿರುವ ನಂಬಿಕೆಯೂ ಕೂಡ ಈ ಘಟನೆಯ ಸುತ್ತ ಆವರಿಸಿಕೊಂಡಿದೆ.

ಜಟಿಂಗ ಪಕ್ಷಿಗಳ ಆತ್ಮಹತ್ಯೆಯ ವಿಶ್ವಪ್ರಸಿದ್ಧ ಕೇಂದ್ರವಾಗಿದ್ದು ಹೇಗೆ?: ಜಟಿಂಗವು ಸುತ್ತಲೂ ಬೆಟ್ಟಗಳಿಂದ ಕೂಡಿರುವ ಕಣಿವೆ ಪ್ರದೇಶವಾಗಿದೆ. 70 ಮತ್ತು 80ರ ದಶಕದಲ್ಲಿ, ಜಟಿಂಗದಲ್ಲಿ ಒಂದು ವಿಚಿತ್ರ ವಿದ್ಯಮಾನ ಘಟಿಸಿತು. ಪ್ರತಿ ವರ್ಷ ಆಗಸ್ಟ್ ಅಂತ್ಯದಿಂದ ನವೆಂಬರ್​​ವರೆಗೆ ಬರುವ ವಲಸೆ ಹಕ್ಕಿಗಳ ಹಿಂಡು, ರಾತ್ರಿಯಲ್ಲಿ ಕೃತಕ ದೀಪಗಳಿಗೆ ಆಕರ್ಷಿತವಾಗಿ, ಬಳಿಕ ನೆಲಕ್ಕೆ ಅಪ್ಪಳಿಸಿ ಸಾಯುತ್ತಿದ್ದವು. ಇದು ಸ್ಥಳೀಯ ಜನರಿಗೆ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿತ್ತು.

ಈಗ ಜಟಿಂಗದಲ್ಲಿ ವಲಸೆ ಹಕ್ಕಿಗಳ ಸಂರಕ್ಷಣೆ ಮತ್ತು ರಕ್ಷಣೆಯಲ್ಲಿ ತೊಡಗಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜೋಸ್ರಿಂಗ್‌ಡಾವೊ ಫೋಂಗ್ಲೋ ಅವರು ಹಳೆಯ ಸ್ಥಳೀಯ ಕಥೆಯೊಂದನ್ನು ‘ಈಟಿವಿ ಭಾರತ’ದೊಂದಿಗೆ ಹಂಚಿಕೊಂಡಿದ್ದಾರೆ. ”ದಶಕಗಳ ಹಿಂದೆ, ಜಟಿಂಗದಲ್ಲಿ ಗ್ರಾಮಸ್ಥರು ಉರುವಲಿನ ಮೇಲೆ ಆಹಾರ ಬೇಯಿಸುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಪಕ್ಷಿ ಬೆಂಕಿಗೆ ಬಿದ್ದು ಸತ್ತಿತು. ತದನಂತರ, ಅನೇಕ ಪಕ್ಷಿಗಳು ಅದನ್ನು ಅನುಸರಿಸಿ, ಬೆಂಕಿಗೆ ಹಾರಿ ನಾಶವಾದವು. ಆಗ, ಅಲೌಕಿಕ ಶಕ್ತಿಗೆ ಹೆದರಿದ ಗ್ರಾಮಸ್ಥರು ಗ್ರಾಮವನ್ನೇ ತೊರೆದರು. ಈ ಘಟನೆಯು ಜಟಿಂಗನಲ್ಲಿನ ಪಕ್ಷಿಗಳ ಆತ್ಮಹತ್ಯೆಯ ವಿದ್ಯಮಾನವನ್ನು ಬೆಳಕಿಗೆ ತಂದಿತು. ಅಲ್ಲದೆ, ಅದೊಂದು ತೀವ್ರ ನಿಗೂಢ ವಿಷಯವಾಗಿ ಮಾರ್ಪಟ್ಟಿತು” ಎನ್ನುತ್ತಾರೆ ಜೋಸ್ರಿಂಗ್‌ಡಾವೊ ಫೋಂಗ್ಲೋ.

ಜಟಿಂಗ ವಿದ್ಯಮಾನ ಎಂದರೇನು?: ಭೌಗೋಳಿಕ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಜಟಿಂಗವು ವಿಶೇಷ ಆಕರ್ಷಕ ಸ್ಥಳವಾಗಿದೆ. 90ರ ದಶಕದವರೆಗೆ, BNHS ವಿಜ್ಞಾನಿಗಳು ಮತ್ತು ಇತರ ಸಂಶೋಧಕರ ತಂಡವು ಈ ವಿದ್ಯಮಾನದ ಅಧ್ಯಯನಕ್ಕೆ ಆಗಮಿಸಿದಾಗ, ಜಟಿಂಗದಲ್ಲಿನ ಪಕ್ಷಿಗಳ ಆತ್ಮಹತ್ಯೆಯು ಬರ್ಮುಡಾ ಟ್ರಯಾಂಗಲ್​ನ್ನು ಹೋಲುವ ನಿಗೂಢ ಘಟನೆಯಂತೆ ಕಂಡು ಬಂದಿತ್ತು. ಜೊತೆಗೆ, ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಹೆಚ್ಚಾಗಿ ಆಕರ್ಷಿಸಿತ್ತು. ಹಲವು ವರ್ಷಗಳಿಂದ, ಪಕ್ಷಿಶಾಸ್ತ್ರಜ್ಞರು ಮತ್ತು ತಜ್ಞರು ಈ ವಲಸೆ ಹಕ್ಕಿಗಳ ಸಾವಿಗೆ ಕಾರಣ, ವಿವರಣೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, ‘ಪಕ್ಷಿ ಆತ್ಮಹತ್ಯೆಗಳು’ ಎಂದೇ ಕರೆಯಲ್ಪಟ್ಟಿತು.

ವಾಸ್ತವದಲ್ಲಿ, ವಲಸೆ ಹಕ್ಕಿಗಳು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಜಟಿಂಗಕ್ಕೆ ಆಗಮಿಸುತ್ತವೆ. ಆದರೂ ಈ ಪ್ರದೇಶದಲ್ಲಿನ ಮಂಜಿನ ರಾತ್ರಿಗಳು, ಜನವಸತಿ ಪ್ರದೇಶಗಳಲ್ಲಿನ ಕೃತಕ ಬೆಳಕಿನ ಮೂಲಗಳು ಈ ಪಕ್ಷಿಗಳನ್ನು ಆಕರ್ಷಿಸಿವೆ. ಅವು ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹಾರುವಾಗ, ದೀಪಗಳ ಸೆಳೆತಕ್ಕೆ ಒಳಗಾಗುವುದಲ್ಲದೇ, ದಟ್ಟ ಕಾಡುಗಳಲ್ಲಿನ ಮರಗಳು ಮತ್ತು ಬಿದಿರುಗಳಿಗೆ ಡಿಕ್ಕಿ ಹೊಡೆಯುತ್ತವೆ. ಆಗ ಈ ಹಕ್ಕಿಗಳು, ದಿಗ್ಭ್ರಮೆಗೊಳ್ಳುವುದಲ್ಲದೇ, ಗಾಯಗೊಂಡು ಹಾರಲಾಗದೆ ಪ್ರಾಣ ಬಿಟ್ಟಿವೆ. ಬೆಳಕಿನ ಮೂಲಗಳ ಮೇಲಿನ ಆಕರ್ಷಣೆಯೇ ಈ ವಿದ್ಯಮಾನಕ್ಕೆ ಮೂಲ ಕಾರಣವಾಗಿದೆ.

ವಲಸೆ ಹಕ್ಕಿಗಳು ಜಟಿಂಗದತ್ತ ಸೆಳೆಯಲ್ಪಡುವುದು ಏಕೆ?: ಜಟಿಂಗ ಬೆಟ್ಟಗಳಿಂದ ಸುತ್ತುವರಿದ ಕಿರಿದಾದ ಕಣಿವೆ ಪ್ರದೇಶ. ಒಂದು ಕಡೆ ಅಸ್ಸಾಂನ ಬರಾಕ್ ಕಣಿವೆ ಮತ್ತು ಇನ್ನೊಂದು ಕಡೆ ನಾಗಾವ್ ಬಯಲು ಪ್ರದೇಶವಿದೆ. ಇತರ ಎರಡು ಬದಿಗಳು ಚಿರಾಪುಂಜಿ ಮತ್ತು ಮಣಿಪುರದಂತೆಯೇ ಮೇಘಾಲಯದ ಮಳೆ ಸಮೃದ್ಧ ಪ್ರದೇಶಗಳ ಗಡಿಗಳಾಗಿವೆ. ವಲಸೆ ಹಕ್ಕಿಗಳು ವರ್ಷದ ನಿರ್ದಿಷ್ಟ ಸಮಯದಲ್ಲಿ ಇಲ್ಲಿಗೆ ಬಂದು ಸೇರುತ್ತವೆ. ಆದರೆ, ದೂರದ ಹಾರಾಟದ ಸಾಮರ್ಥ್ಯ ಹೊಂದಿರುವ ಈ ಪಕ್ಷಿಗಳು ಜಟಿಂಗದಲ್ಲಿ ಏಕೆ ದುರ್ಬಲಗೊಳ್ಳುತ್ತವೆ ಮತ್ತು ಬೆಳಕಿಗೆ ಬಲಿಯಾಗುತ್ತವೆ? ಎಂಬುದು ಪ್ರಶ್ನೆಯಾಗಿದೆ.

ಈ ಬಗ್ಗೆ ಹೆಸರಾಂತ ನಿಸರ್ಗಶಾಸ್ತ್ರಜ್ಞ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಅಡಿಯಲ್ಲಿ ಇಂಡಿಯಾ ಬರ್ಡ್ಸ್ ಕನ್ಸರ್ವೇಶನ್ ನೆಟ್‌ವರ್ಕ್​ನ (IBCN) ಸದಸ್ಯ ಮತ್ತು ಮೆಗಾಮಿಕ್ಸ್ ನೇಚರ್ ಕ್ಲಬ್‌ನ ಸಂಚಾಲಕರಾದ ದೇಬಜಿತ್ ಫುಕನ್ ಅವರು ಹಲವಾರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಫುಕನ್ ಹೇಳುವಂತೆ, “ಜಟಿಂಗವು ಕಿರಿದಾದ, ತಗ್ಗು ಕಣಿವೆಯಾಗಿದೆ. ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚಾದಂತೆ ಆಹಾರದ ಕೊರತೆಯೂ ಉಲ್ಬಣಗೊಳ್ಳುತ್ತದೆ. ಹಸಿವಿನಿಂದ ದುರ್ಬಲಗೊಂಡ ಈ ಪಕ್ಷಿಗಳು ಈ ಪ್ರದೇಶದಲ್ಲಿ ದೀರ್ಘ ಹಾರಾಟ ಮಾಡಲು ಹಾಗೂ ದೂರವನ್ನು ಕ್ರಮಿಸಲು ಸಾಧ್ಯವಾಗುವುದಿಲ್ಲ”.

ಎರಡನೆಯದಾಗಿ, ವಲಸೆಯ ಋತುವಿನಲ್ಲಿ ಜಟಿಂಗದಲ್ಲಿನ ತೇವಾಂಶದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸಾಕಷ್ಟು ಆಮ್ಲಜನಕವಿಲ್ಲದೇ ಪಕ್ಷಿಗಳು ದುರ್ಬಲಗೊಂಡಿರುತ್ತವೆಯಲ್ಲದೆ, ಗಾಳಿಯ ಹುಡುಕಾಟದಲ್ಲಿ ಮೇಲಕ್ಕೆ ಏರುತ್ತವೆ. ಆದರೆ, ಸಮತಟ್ಟಾದ ಭೂಪ್ರದೇಶಗಳಲ್ಲಿ ಗಾಳಿ ಸಿಗದೆ ಮತ್ತಷ್ಟು ಶಕ್ತಿಹೀನಗೊಳ್ಳುತ್ತವೆ. ಪರಿಣಾಮ, ಯಾವುದೇ ಬೆಳಕು ಈ ನಿಶ್ಯಕ್ತಗೊಂಡ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಅವು ದಿಗ್ಭ್ರಮೆಗೊಳ್ಳುವುದಲ್ಲದೆ, ಮತ್ತಷ್ಟು ದುರ್ಬಲವಾಗುತ್ತವೆ. ಹಿಂದೆ, ಸ್ಥಳೀಯರು ಆಹಾರ ಮತ್ತು ಬೇಟೆಯ ಆನಂದಕ್ಕಾಗಿ ಈ ಪಕ್ಷಿಗಳನ್ನು ಬಲೆಗೆ ಬೀಳಿಸಿ ಕೊಲ್ಲುತ್ತಿದ್ದರು. ಇದು ನಿಜವಾಗಿಯೂ ಪಕ್ಷಿ ಆತ್ಮಹತ್ಯೆ ಅಲ್ಲ, ಬದಲಿಗೆ ಭೌಗೋಳಿಕ ಮತ್ತು ಹವಾಮಾನ ಅಂಶಗಳ ಪರಿಣಾಮವಾಗಿದೆ” ಎಂದು ಪುಕನ್​ ಹೇಳಿದ್ದಾರೆ.

ಹಕ್ಕಿ ಆತ್ಮಹತ್ಯೆಯ ಹಿಂದಿನ ರಹಸ್ಯವೇನು?: “ಬೆಳಕಿನ ಮೂಲಗಳಿಂದ ಆಕರ್ಷಿತವಾದ ದುರ್ಬಲ ಪಕ್ಷಿಗಳು ಮನುಷ್ಯರಿಂದಲೇ ಕೊಲ್ಲಲ್ಪಟ್ಟವು. ಸ್ಥಳೀಯರು ಈ ಪಕ್ಷಿಗಳನ್ನು ಆಹಾರಕ್ಕಾಗಿ ಬೇಟೆಯಾಡುವ ಸಾಂಪ್ರದಾಯಿಕ ಅಭ್ಯಾಸವನ್ನೂ ಕೂಡ ಹೊಂದಿದ್ದರು. ವೈಜ್ಞಾನಿಕ ತಿಳುವಳಿಕೆಯ ಕೊರತೆಯು ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂಬ ವ್ಯಾಪಕ ನಂಬಿಕೆಗೆ ಕಾರಣವಾಯಿತು” ಎಂದು ದೇಬಜಿತ್ ಫುಕನ್ ವಿವರಿಸುತ್ತಾರೆ.

ಸ್ಥಳೀಯ ಸಂರಕ್ಷಣಾಕಾರ ಜೋಸ್ರಿಂಗ್ಡಾವೊ ಫೋಂಗ್ಲೋ ಪ್ರಕಾರ, “ಹಿಂದೆ, ಜಟಿಂಗದ ಗ್ರಾಮಸ್ಥರು ಆಹಾರಕ್ಕಾಗಿ ಪಕ್ಷಿಗಳನ್ನು ಬಲೆಗೆ ಬೀಳಿಸಿ ಕೊಲ್ಲುತ್ತಿದ್ದರು. ಅಲ್ಲದೆ, ಬೇಟೆಯಾಡುವ ಪಕ್ಷಿಗಳು ಮನರಂಜನಾ ಚಟುವಟಿಕೆಯಾಗಿಯೂ ಮಾರ್ಪಟ್ಟವು. ಜನರು ಪಕ್ಷಿಗಳನ್ನು ಆಕರ್ಷಿಸಲು ಸೀಮೆಎಣ್ಣೆ ದೀಪಗಳು ಮತ್ತು ಶಕ್ತಿಯುತ ಹ್ಯಾಲೊಜೆನ್ ದೀಪಗಳನ್ನು ಬಳಸಿ ಬಲೆಗೆ ಬೀಳಿಸುತ್ತಿದ್ದರು”.

2010ರಲ್ಲಿ, ಬ್ಲೂ ಹಿಲ್ಸ್ ಸೊಸೈಟಿ, ಎನ್‌ಜಿಒ, ಅರಣ್ಯ ಇಲಾಖೆ, ನಾರ್ತ್ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿ ಮತ್ತು ಜಿಲ್ಲಾಡಳಿತದ ಸಹಯೋಗದ ಪ್ರಯತ್ನವು ಪಕ್ಷಿಗಳ ಬೇಟೆಯ ವಿರುದ್ಧ ಜಾಗೃತಿ ಅಭಿಯಾನಗಳನ್ನು ಹುಟ್ಟುಹಾಕಿತು. ಇದರ ಪರಿಣಾಮವಾಗಿ, ಜಟಿಂಗದಲ್ಲೀಗ ಪಕ್ಷಿಗಳ ಬೇಟೆ ಇದೀಗ ಗಣನೀಯವಾಗಿ ಕಡಿಮೆಯಾಗಿದೆ.

ಮತ್ತಷ್ಟು ವಿವರಣೆ ನೀಡಿದ ಫೋಂಗ್ಲೋ, “ಜಿಲ್ಲಾಡಳಿತವು ಪಕ್ಷಿ ಬೇಟೆಯ ಮೇಲೆ ನಿಷೇಧ ವಿಧಿಸಿದೆ, ಇದು ಪಕ್ಷಿಗಳ ಸಾವಿನ ಇಳಿಕೆಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಉತ್ತರ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿಯು ವಲಸೆ ಹಕ್ಕಿ ಸಂರಕ್ಷಣೆ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜಟಿಂಗ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವವು ಕ್ರಮೇಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿದೆ”.

ಜಟಿಂಗ ಇನ್ನೂ ನಿಗೂಢವೇ?: ಜಟಿಂಗವು ಈಗ ಪಕ್ಷಿ ಆತ್ಮಹತ್ಯೆಗಳ ಕೇಂದ್ರ ಎಂಬ ನಿಗೂಢತೆಯಿಂದ ಹೊರಬಂದಿದೆ. ವಲಸೆ ಹಕ್ಕಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಸ್ಥಳೀಯ ಪ್ರಯತ್ನಗಳು ನಡೆಯುತ್ತಿವೆ. ಎರಡು ದಶಕಗಳ ಹಿಂದೆಯೇ ಈ ನಿಗೂಢವನ್ನು ಪರಿಹರಿಸಲಾಗಿದ್ದರೂ, ಜಟಿಂಗದಲ್ಲಿ ಪಕ್ಷಿ ಸಂರಕ್ಷಣೆಗೆ ಸಾಕಷ್ಟು ಸವಾಲುಗಳಿವೆ. ತಂತ್ರಜ್ಞಾನ ಮತ್ತು ಮಾನವನ ಅತಿಕ್ರಮಣದಿಂದ ಜಟಿಂಗದಲ್ಲಿ ವಲಸೆ ಹಕ್ಕಿಗಳ ಆವಾಸಸ್ಥಾನವು ಈ ಮೊದಲಿನಂತಿಲ್ಲ.

ಜೋಸ್ರಿಂಗ್‌ಡಾವೊ ಫೋಂಗ್ಲೊ ಪ್ರಕಾರ, “ಜಟಿಂಗಕ್ಕೆ ಭೇಟಿ ನೀಡುವ ವಲಸೆ ಹಕ್ಕಿಗಳ ಸಂಖ್ಯೆ ಹಿಂದಿನದಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ. ಪಕ್ಷಿಗಳ ವಲಸೆಯು ಜಟಿಂಗಕ್ಕೆ ಸಮೀಪವಿರುವ ದೋಹಿಂಗ್ ಗ್ರಾಮದತ್ತ ಬದಲಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳೂ ಕೂಡ ಈ ಬದಲಾವಣೆಗೆ ಪ್ರಾಥಮಿಕ ಕಾರಣಗಳಾಗಿವೆ”.

ದೇಬಜಿತ್ ಫುಕನ್ ಹೇಳುವಂತೆ, “ಹವಾಮಾನ ಬದಲಾವಣೆಯಿಂದಾಗಿ ತೇವಾಂಶದ ಮಟ್ಟ ಕಡಿಮೆಯಾಗುವುದು ಮತ್ತು ಕಡಿಮೆ ಮಳೆಯು ವಲಸೆ ಹಕ್ಕಿಗಳ ಜನಸಂಖ್ಯೆಯಲ್ಲಿ ಇಳಿಮುಖಕ್ಕೆ ಕಾರಣವಾಗಿದೆ. ಮಾನವ ಚಟುವಟಿಕೆಗಳು ಜಟಿಂಗದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿವೆ.”

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

Yathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ Yathindra Siddaramaiah ಅವರು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಸಕ್ರಿಯರಾಗುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಯತೀಂದ್ರ ಭೇಟಿ ಮಾಡಿರುವುದು ಇದೀಗ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಯತೀಂದ್ರ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಸೌಹಾರ್ದಯುತ ಭೇಟಿಯೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಬಗ್ಗೆ ಇದೀಗ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಆಪ್ತರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ?

ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಯತೀಂದ್ರ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ವಿಶೇಷವಾಗಿ, ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ಕೆಲವು ವಿಚಾರಗಳಲ್ಲಿ ಅಂತರ ಕಾಯ್ದುಕೊಂಡಿದ್ದ ನಾಯಕರೊಂದಿಗೂ ಯತೀಂದ್ರ ಮತ್ತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭೇಟಿಯನ್ನು ನೋಡಲಾಗುತ್ತಿದೆ.

ಇದಕ್ಕೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೂ ಯತೀಂದ್ರ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಖಾನ್ ಅವರಂತಹ ಪ್ರಮುಖ ನಾಯಕರನ್ನು ಯತೀಂದ್ರ ಸತತವಾಗಿ ಭೇಟಿ ಮಾಡುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ.

ಭೇಟಿಗಳ ಹಿಂದೆ ರಾಜಕೀಯ ಕಾರ್ಯತಂತ್ರ?

ಯತೀಂದ್ರ ಅವರ ಈ ಭೇಟಿಗಳನ್ನು ಸದ್ಯಕ್ಕೆ ಸಾಮಾನ್ಯ ಸೌಹಾರ್ದಯುತ ಭೇಟಿಗಳೆಂದು ಹೇಳಲಾಗುತ್ತಿದ್ದರೂ, ರಾಜಕೀಯ ಬೆಳವಣಿಗೆಗಳು ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಸಮೀಕರಣಗಳು ಹೇಗೆ ಬದಲಾಗಲಿವೆ ಎಂಬುದು ಕುತೂಹಲ ಮೂಡಿಸಿರುವ ಸಂದರ್ಭದಲ್ಲೇ ಯತೀಂದ್ರ ಅವರ ಚಟುವಟಿಕೆಗಳು ಹೆಚ್ಚಾಗಿವೆ.

ತಂದೆ ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಮತ್ತು ಪ್ರಭಾವವನ್ನು ಬಳಸಿಕೊಂಡು ಪಕ್ಷದ ಪ್ರಮುಖ ನಾಯಕರೊಂದಿಗೆ ಬಾಂಧವ್ಯ ಬಲಪಡಿಸುವ ಪ್ರಯತ್ನ ಇದಾಗಿರಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಆದರೆ, ಜಮೀರ್ ಅಹ್ಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗಿನ ಯತೀಂದ್ರ ಸಿದ್ದರಾಮಯ್ಯ ಅವರ ಭೇಟಿಗಳ ನಿಖರ ರಾಜಕೀಯ ಉದ್ದೇಶವೇನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಹೀಗಾಗಿ ಈ ಸರಣಿ ಭೇಟಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

ದೇಶ

Indian Army ಗೆ ಅಮೆರಿಕದ ಜಾವೆಲಿನ್ ಕ್ಷಿಪಣಿ! ಚೀನಾ-ಪಾಕ್‌ ಗಡಿಗೆ ಮತ್ತಷ್ಟು ಬಲ; ದೊಡ್ಡ ಘೋಷಣೆ

Published

on

ನವದೆಹಲಿ: Indian Army ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಯುದ್ಧಭೂಮಿಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿರುವ ಜಾವೆಲಿನ್ ಆಂಟಿ-ಟ್ಯಾಂಕ್ ಕ್ಷಿಪಣಿ ವ್ಯವಸ್ಥೆಯನ್ನು ಅಮೆರಿಕದಿಂದ ಖರೀದಿಸಲು ಭಾರತ ಯೋಜಿಸುತ್ತಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ತಿಳಿಸಿದ್ದಾರೆ.

ಒಬ್ಬ ಸೈನಿಕನೇ ಹೊತ್ತೊಯ್ಯಬಹುದಾದ ಮಧ್ಯಮ ಶ್ರೇಣಿಯ ಜಾವೆಲಿನ್ ಕ್ಷಿಪಣಿ ವ್ಯವಸ್ಥೆಯು ‘ಫೈರ್ ಆ್ಯಂಡ್ ಫರ್ಗೆಟ್’ ತಂತ್ರಜ್ಞಾನವನ್ನು ಹೊಂದಿದೆ. ಅಂದರೆ ಕ್ಷಿಪಣಿಯನ್ನು ಗುರಿಯತ್ತ ಉಡಾಯಿಸಿದ ಬಳಿಕ ಅದನ್ನು ನಿರಂತರವಾಗಿ ನಿಯಂತ್ರಿಸುವ ಅಗತ್ಯವಿಲ್ಲ. ಈ ಸಾಮರ್ಥ್ಯವು ಆಧುನಿಕ ಯುದ್ಧಭೂಮಿಯಲ್ಲಿ ಮಹತ್ವದ್ದಾಗಿದೆ.

ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ FGM-148 Javelin ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕದ ವಿದೇಶಾಂಗ ಇಲಾಖೆ ಕಳೆದ ವರ್ಷದ ನವೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.

ಜಾವೆಲಿನ್ ಖರೀದಿ ಕುರಿತು ಅಮೆರಿಕದಿಂದ ಮಾಹಿತಿ

ಈ ಕುರಿತು ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯುದ್ಧ-ಪರೀಕ್ಷಿತ ಜಾವೆಲಿನ್ ಆಂಟಿ-ಟ್ಯಾಂಕ್ ವ್ಯವಸ್ಥೆಯನ್ನು ಖರೀದಿಸಲು ಭಾರತ ಯೋಜಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮೇ 2026ರಲ್ಲಿ ನಡೆದ ಶಾಂಗ್ರಿ-ಲಾ ಸಂವಾದದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರಸ್ತಾಪಿಸಿದ ರಕ್ಷಣಾ ಸಹಕಾರದ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎಂದು ಗೋರ್ ಹೇಳಿದ್ದಾರೆ.

ಜಾವೆಲಿನ್ ವ್ಯವಸ್ಥೆಯ ಖರೀದಿಯು ಅಮೆರಿಕ-ಭಾರತ ರಕ್ಷಣಾ ಸಂಬಂಧದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಅಲ್ಲದೆ, ಭವಿಷ್ಯದಲ್ಲಿ ಈ ಶಸ್ತ್ರಾಸ್ತ್ರ ವ್ಯವಸ್ಥೆಯ ಜಂಟಿ ಉತ್ಪಾದನೆಗೆ ಅವಕಾಶಗಳನ್ನು ತೆರೆಯಬಹುದು ಎಂದು ಅವರು ತಿಳಿಸಿದ್ದಾರೆ.

ಎಷ್ಟು ಜಾವೆಲಿನ್ ಕ್ಷಿಪಣಿ ಖರೀದಿ?

ಸದ್ಯ ಭಾರತವು ಎಷ್ಟು ಸಂಖ್ಯೆಯ ಜಾವೆಲಿನ್ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲಿದೆ ಎಂಬ ನಿಖರ ಮಾಹಿತಿ ಬಹಿರಂಗವಾಗಿಲ್ಲ. ಇದೇ ರೀತಿ ಒಪ್ಪಂದದ ಒಟ್ಟು ಮೌಲ್ಯ ಎಷ್ಟು ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ.

ಜಾವೆಲಿನ್ ಕ್ಷಿಪಣಿ ವ್ಯವಸ್ಥೆಯನ್ನು ಮುಖ್ಯವಾಗಿ ಶತ್ರುಗಳ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಗುರಿಯಾಗಿಸಲು ಬಳಸಲಾಗುತ್ತದೆ. ಅದರ ಸಾಗಾಟದ ಸುಲಭತೆ ಹಾಗೂ ‘ಫೈರ್ ಆ್ಯಂಡ್ ಫರ್ಗೆಟ್’ ಸಾಮರ್ಥ್ಯದಿಂದಾಗಿ ಸೈನಿಕರಿಗೆ ಯುದ್ಧಭೂಮಿಯಲ್ಲಿ ಹೆಚ್ಚಿನ ಚಲನೆಯ ಸ್ವಾತಂತ್ರ್ಯ ದೊರೆಯುತ್ತದೆ.

ಭಾರತ ಈಗಾಗಲೇ ತನ್ನ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿವಿಧ ದೇಶಗಳಿಂದ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಪಡೆಯುವುದರ ಜೊತೆಗೆ ದೇಶೀಯವಾಗಿ ಶಸ್ತ್ರಾಸ್ತ್ರಗಳ ಉತ್ಪಾದನೆಗೂ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜಾವೆಲಿನ್ ವ್ಯವಸ್ಥೆಯ ಖರೀದಿ ಹಾಗೂ ಭವಿಷ್ಯದಲ್ಲಿ ಜಂಟಿ ಉತ್ಪಾದನೆಯ ಸಾಧ್ಯತೆಗಳು ಭಾರತ-ಅಮೆರಿಕ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.

Continue Reading

ರಾಜ್ಯ

Mysuru Dasara ಗಜಪಡೆ ಅರಮನೆಗೆ ಎಂಟ್ರಿ; ಜನಸಂದಣಿ ಕಂಡು ಶ್ರೀರಾಮ ಆನೆ ಗಾಬರಿ, ಬಳಿಕ ಏನಾಯ್ತು?

Published

on

ಮೈಸೂರು: ವಿಶ್ವವಿಖ್ಯಾತ Mysuru Dasara 2026 ಹಿನ್ನೆಲೆಯಲ್ಲಿ ದಸರಾ ಗಜಪಡೆಗಳಿಗೆ ಮೈಸೂರು ಅರಣ್ಯ ಭವನದಲ್ಲಿ ಇಂದು ಬೆಳಗ್ಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಒಟ್ಟು 9 ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗಜಪಡೆಗಳು ಮೈಸೂರು ಅರಮನೆಯತ್ತ ಪ್ರಯಾಣ ಬೆಳೆಸಿದವು.

ಅರಮನೆ ದ್ವಾರಕ್ಕೆ ಆಗಮಿಸಿದ ದಸರಾ ಗಜಪಡೆಗಳನ್ನು ಮೈಸೂರು ಜಿಲ್ಲಾಡಳಿತ ವತಿಯಿಂದ ಸಂಪ್ರದಾಯಬದ್ಧವಾಗಿ ಸ್ವಾಗತಿಸಲಾಯಿತು. ಶುಭ ಲಗ್ನದಲ್ಲಿ ಆನೆಗಳು ಅರಮನೆ ಪ್ರವೇಶಿಸಬೇಕಿದ್ದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಾಂಪ್ರದಾಯಿಕ ಪೂಜೆ ಹಾಗೂ ಸ್ವಾಗತದ ಬಳಿಕ ದಸರಾ ಆನೆಗಳು ಅರಮನೆ ಆವರಣ ಪ್ರವೇಶಿಸಿದವು.

ಅರಮನೆ ಪ್ರವೇಶದ ವೇಳೆ ಶ್ರೀರಾಮ ಆನೆಗೆ ಗಾಬರಿ

ಇದೇ ವೇಳೆ ಮೈಸೂರು ಅಂಬಾವಿಲಾಸ ಅರಮನೆ ಪ್ರವೇಶಿಸುವ ಸಂದರ್ಭದಲ್ಲಿ ಶ್ರೀರಾಮ ಆನೆ ಏಕಾಏಕಿ ಗಾಬರಿಗೊಂಡ ಘಟನೆ ನಡೆದಿದೆ. ಅರಮನೆ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಕಂಡು ಆನೆ ಕೆಲಕಾಲ ಬೆಚ್ಚಿಬಿದ್ದು ಹಿಂದಕ್ಕೆ ಸರಿಯಲು ಯತ್ನಿಸಿತು.

ಅರಮನೆ ದ್ವಾರದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು, ಜನರ ಚಲನವಲನ ಹಾಗೂ ಸುತ್ತಮುತ್ತಲಿನ ಗದ್ದಲದಿಂದ ಶ್ರೀರಾಮ ಆನೆ ಮತ್ತಷ್ಟು ಆತಂಕಗೊಂಡಿತು. ಇದರ ನಡುವೆ ಕೇಳಿಬಂದ ನಾದಸ್ವರದ ಸದ್ದಿಗೂ ಆನೆ ಪ್ರತಿಕ್ರಿಯಿಸಿ, ಅರಮನೆ ಆವರಣ ಪ್ರವೇಶಿಸಲು ಹಿಂದೇಟು ಹಾಕಿತು.

ಶ್ರೀರಾಮ ಆನೆ ಗಾಬರಿಗೊಂಡಿದ್ದರಿಂದ ಸ್ಥಳದಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ಗಮನಿಸಿದ ಮಾವುತರು ಹಾಗೂ ಕಾವಾಡಿಗರು ತಕ್ಷಣವೇ ಆನೆಯನ್ನು ನಿಯಂತ್ರಣಕ್ಕೆ ತರಲು ಮುಂದಾದರು.

ಮಾವುತರು, ಕಾವಾಡಿಗರಿಂದ ಆನೆ ಹತೋಟಿ

ಮಾವುತರು ಮತ್ತು ಕಾವಾಡಿಗರು ಆನೆಯನ್ನು ಸಮಾಧಾನಪಡಿಸಿ ಹತೋಟಿಗೆ ತಂದ ಬಳಿಕ, ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಅರಮನೆ ಆವರಣದೊಳಗೆ ಕರೆದುಕೊಂಡು ಹೋದರು. ಇದರಿಂದ ಸ್ಥಳದಲ್ಲಿದ್ದವರು ನಿಟ್ಟುಸಿರು ಬಿಟ್ಟರು.

ಮೈಸೂರು ದಸರಾ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಆಗಮನದೊಂದಿಗೆ ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಆನೆಗಳ ಆರೋಗ್ಯ, ಸುರಕ್ಷತೆ ಮತ್ತು ತರಬೇತಿಗೆ ಅರಣ್ಯ ಇಲಾಖೆ ಹಾಗೂ ಮಾವುತರು ವಿಶೇಷ ಗಮನ ಹರಿಸುತ್ತಿದ್ದಾರೆ.

Continue Reading

Trending