Connect with us

ದೇಶ

ರಾತ್ರಿ ಪ್ರಯಾಣ ಸುರಕ್ಷಿತವೇ? ಸರ್ಕಾರಿ ಅಂಕಿ ಹೇಳುವ ಸತ್ಯ ಇಲ್ಲಿದೆ

ಬೆಂಗಳೂರು: ಹೆದ್ದಾರಿಯಲ್ಲಿ ರಾತ್ರಿ ಪ್ರಯಾಣ ಸುಲಭ ಮತ್ತು ಸುರಕ್ಷಿತ ಎಂದು ಹಲವರ ನಂಬಿಕೆ. ಆದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ಈ ಕಲ್ಪನೆಗೆ ದೊಡ್ಡ ತಿರುವು ನೀಡಿವೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ದರೋಡೆ ಮತ್ತು ಸುಲಿಗೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ನಡೆಯುತ್ತಿವೆ ಎಂದು ಅಧಿಕೃತ ವರದಿ ಬಹಿರಂಗಪಡಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 403 ದರೋಡೆ ಮತ್ತು ಸುಲಿಗೆ ಪ್ರಕರಣಗಳು ಹೆದ್ದಾರಿಗಳಲ್ಲಿ ದಾಖಲಾಗಿವೆ. ಈ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸ್ವಲ್ಪ ಕಡಿಮೆಯಾಗುತ್ತಿದರೂ, ಅವುಗಳ ಪ್ರಮಾಣ ಇನ್ನೂ ಗಂಭೀರವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಕರಣಗಳ ಅಂಕಿಅಂಶ:

  • 2023: 81 ಸುಲಿಗೆ, 23 ದರೋಡೆ
  • 2024: 66 ಸುಲಿಗೆ, 16 ದರೋಡೆ
  • 2025 (ನವೆಂಬರ್ 15ರವರೆಗೆ): 51 ಸುಲಿಗೆ, 14 ದರೋಡೆ

ರಾಜ್ಯ ಹೆದ್ದಾರಿ ಪ್ರಕರಣಗಳ ಅಂಕಿಅಂಶ:

  • 2023: 39 ಸುಲಿಗೆ, 17 ದರೋಡೆ
  • 2024: 35 ಸುಲಿಗೆ, 22 ದರೋಡೆ
  • 2025: 20 ಸುಲಿಗೆ, 19 ದರೋಡೆ

ಈ ಅಂಕಿಅಂಶಗಳು ರಾಜ್ಯದ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಪ್ರಯಾಣ ಸಂಪೂರ್ಣ ಸುರಕ್ಷಿತ ಎಂಬ ನಂಬಿಕೆಗೆ ಪ್ರಶ್ನಾರ್ಹವಾಗಿದೆ.

ಅಪರಾಧ ತಡೆಗೆ ಪೊಲೀಸರು ಕೈಗೊಂಡಿರುವ ಕ್ರಮಗಳು

ಪೊಲೀಸರು ಹೆದ್ದಾರಿ ಸುರಕ್ಷತೆಗಾಗಿ ಹಲವು ತುರ್ತು ಕ್ರಮಗಳನ್ನು ಜಾರಿಗೆ ತಂದಿದ್ದಾರೆ.

  • ಹೆದ್ದಾರಿ ಚೆಕ್‌ಪೋಸ್ಟ್‌ಗಳಲ್ಲಿ ಸಂಶಯಾಸ್ಪದ ವಾಹನಗಳ ತಪಾಸಣೆ.
  • ಪ್ರತೀ ಠಾಣೆಗೆ ಸರ್ಕಾರಿ ದ್ವಿಚಕ್ರ ವಾಹನ ನೀಡಿ ರಾತ್ರಿ ಗಸ್ತು ಬಲಪಡಿಕೆ.
  • ವಾಹನಗಳಲ್ಲಿ ಸೈರನ್ ಮತ್ತು ರೆಡ್ ಲೈಟ್ ಬಳಸಿ ಎಚ್ಚರಿಕೆ ಜಾರಿ.
  • 24 ಗಂಟೆಗಳಲ್ಲೂ 112 ಗಸ್ತು ವಾಹನಗಳು ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಣೆ.
  • ಸುಲಿಗೆ ಮತ್ತು ದರೋಡೆಗಳಲ್ಲಿ ತೊಡಗಿದವರ ಮೇಲೆ MOB ಕಾರ್ಡ್ ತೆಗೆಯಲು ಕ್ರಮ.
  • ನೆರೆ ರಾಜ್ಯ/ಜಿಲ್ಲೆಗಳೊಂದಿಗೆ ಅಪರಾಧಿಗಳ ಮಾಹಿತಿ ಹಂಚಿಕೆ.
  • ಟೋಲ್ ಪ್ಲಾಜಾಗಳ ಸಿಸಿಟಿವಿ ಪರಿಶೀಲನೆ ಹಾಗೂ ಗಸ್ತು ಸಿಬ್ಬಂದಿಗೆ ಆಯುಧಗಳ ಕಡ್ಡಾಯ ವಹಿಸುವಿಕೆ.

ಪೊಲೀಸರಿಂದ ಕ್ರಮಗಳು ಬಲಗೊಂಡಿದ್ದರೂ, ಹೆದ್ದಾರಿಗಳಲ್ಲಿ ರಾತ್ರಿ ಪ್ರಯಾಣಿಸುವವರು ಎಚ್ಚರಿಕೆಯಿಂದ ಇರಬೇಕೆಂಬ ಸೂಚನೆ ಪರಿಣಿತರದ್ದಾಗಿದೆ.

Continue Reading
Click to comment

Leave a Reply

Your email address will not be published. Required fields are marked *

ದೇಶ

ACTOR SRI LEELA : ಬಹುಭಾಷಾ ನಟಿ ಶ್ರೀಲೀಲಾ ಎಂಬಿಬಿಎಸ್ ಪದವಿ ಪೂರ್ಣ

ಬೆಂಗಳೂರು/ಮುಂಬೈ: ಬಹುಭಾಷಾ ನಟಿ ಶ್ರೀಲೀಲಾ ತಮ್ಮ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಂಬೈನ ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಪದವಿ ಸ್ವೀಕರಿಸಿದ್ದಾರೆ. ಫೆಬ್ರವರಿ 10ರಂದು ನಡೆದ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆ ಹರಿದುಬಂದಿದೆ.

24 ವರ್ಷದ ನಟಿ ಮೆರೂನ್ ಬಣ್ಣದ ಪದವಿ ಗೌನ್ ಮತ್ತು ಕ್ಯಾಪ್ ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ದೃಶ್ಯಗಳು ಅಭಿಮಾನಿಗಳ ಮನಸೆಳೆದಿವೆ. ಒಂದು ವಿಡಿಯೋದಲ್ಲಿ ತಮ್ಮ ಹೆಸರನ್ನು ಘೋಷಿಸುವ ಮೊದಲು ಸಹಪಾಠಿಗಳೊಂದಿಗೆ ಸಾಲಿನಲ್ಲಿ ನಿಂತು ಕಾಯುತ್ತಿರುವುದು ಕಾಣಿಸುತ್ತದೆ. ನಂತರ ಪ್ರಮಾಣಪತ್ರವನ್ನು ನಗುಮೊಗದಿಂದ ಸ್ವೀಕರಿಸಿದ ಅವರು, ವೇದಿಕೆಯಿಂದ ಇಳಿಯುವಾಗ ಕುಟುಂಬ ಸದಸ್ಯರನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು.

ಬಿಡುವಿಲ್ಲದ ಚಿತ್ರರಂಗದ ವೃತ್ತಿಜೀವನದ ನಡುವೆಯೂ ವೈದ್ಯಕೀಯ ಶಿಕ್ಷಣವನ್ನು ಸಮತೋಲನಗೊಳಿಸಿರುವ ಶ್ರೀಲೀಲಾ ಅವರ ಸಾಧನೆಗೆ ಅಭಿಮಾನಿಗಳು ಹಾಗೂ ಸಿನಿ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಹಲವು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ವಿದ್ಯಾಭ್ಯಾಸವನ್ನು ಕಡೆಗಣಿಸದೇ ಯಶಸ್ವಿಯಾಗಿ ಮುಗಿಸಿರುವುದು ಯುವಜನತೆಗೆ ಸ್ಪೂರ್ತಿಯಾಗಿದೆ.

ನಟನೆ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಅವರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, “ಡಾಕ್ಟರ್ ಶ್ರೀಲೀಲಾ” ಎಂದು ಅಭಿಮಾನಿಗಳು ಕರೆದಾಡುತ್ತಿದ್ದಾರೆ.

Continue Reading

ದೇಶ

BHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ

ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಇಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಸುಮಾರು 30 ಕೋಟಿ ಕಾರ್ಮಿಕರನ್ನು ಸಜ್ಜುಗೊಳಿಸಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ನಡೆಯುತ್ತಿರುವ ಈ ಮುಷ್ಕರಕ್ಕೆ ಅಸ್ಸಾಂ, ತಮಿಳುನಾಡು, ಪಾಂಡಿಚೇರಿ, ಕೇರಳ, ಒಡಿಶಾ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಕಡೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.

ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಅವರು ದೇಶಾದ್ಯಂತ ಉತ್ತಮ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.


ಮುಷ್ಕರದ ಪ್ರಮುಖ ಬೇಡಿಕೆಗಳು:

• ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು
• ಬೀಜ ಕರಡು ಮಸೂದೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳಬೇಕು
• ಖಾಸಗೀಕರಣ ಹಾಗೂ ಕಾರ್ಪೊರೇಟ್ ಸ್ನೇಹಿ ಸುಧಾರಣೆಗಳಿಗೆ ವಿರೋಧ
• ಮನರೇಗಾ ಯೋಜನೆ ಕುರಿತ ನಿರ್ಧಾರಗಳನ್ನು ಹಿಂತೆಗೆದುಕೊಳ್ಳಬೇಕು

ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಎಚ್‌ಎಂಎಸ್ ಸೇರಿದಂತೆ ಹಲವು ಪ್ರಮುಖ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.


ರಾಜ್ಯವಾರು ಬಂದ್ ಪರಿಣಾಮ

ನವದೆಹಲಿ: ಕೈಗಾರಿಕಾ ಪ್ರದೇಶಗಳಲ್ಲಿ ಪ್ರತಿಭಟನೆ; ಬ್ಯಾಂಕಿಂಗ್, ವಿಮೆ, ಅಂಚೆ, ಸಾರಿಗೆ, ಆರೋಗ್ಯ ಹಾಗೂ ಗಣಿಗಾರಿಕೆ ಕ್ಷೇತ್ರಗಳಿಗೆ ಪರಿಣಾಮ.

ತಮಿಳುನಾಡು – ಕೇರಳ: ಬಸ್ ಸಂಚಾರದಲ್ಲಿ ವ್ಯತ್ಯಯ; ಕೆಲವು ಕಡೆ ಸರ್ಕಾರದ ಬೆಂಬಲ.

ಗೋವಾ: ಮಿಶ್ರ ಪ್ರತಿಕ್ರಿಯೆ; ಬ್ಯಾಂಕಿಂಗ್ ಸೇವೆಗಳ ಮೇಲೆ ಭಾಗಶಃ ಪರಿಣಾಮ.

ಪಶ್ಚಿಮ ಬಂಗಾಳ: ಜನಜೀವನ ಬಹುತೇಕ ಸಾಮಾನ್ಯ.

ಮಧ್ಯ ಪ್ರದೇಶ: ರಕ್ಷಣಾ ಸಂಸ್ಥೆಗಳ 25 ಸಾವಿರಕ್ಕೂ ಹೆಚ್ಚು ನೌಕರರು ತಡವಾಗಿ ಕರ್ತವ್ಯಕ್ಕೆ ಹಾಜರಾದರು.

ದೇಶಾದ್ಯಂತ ಮುಷ್ಕರದ ಪರಿಣಾಮ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿದ್ದು, ಜನಜೀವನದ ಮೇಲೆ ಮಿಶ್ರ ಪರಿಣಾಮ ಕಂಡುಬಂದಿದೆ.

Continue Reading

ಕ್ರೀಡೆ

ಕನ್ನಡದ ಹೆಮ್ಮೆ ಜಿಆರ್ ವಿಶ್ವನಾಥ್‌ಗೆ ಜನ್ಮದಿನ ಸಂಭ್ರಮ: ವಿಶಿಯ ಕಲಾತ್ಮಕ ಬ್ಯಾಟಿಂಗ್‌ಗೆ 77ನೇ ವಸಂತ

ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದ ಕಲಾತ್ಮಕ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಗುಂಡಪ್ಪ ರಂಗನಾಥ್ ವಿಶ್ವನಾಥ್ (GR Vishwanath) ಅವರಿಗೆ ಫೆಬ್ರವರಿ 12ರಂದು ಜನ್ಮದಿನ ಸಂಭ್ರಮ. ವಿಶಿ ಕ್ರೀಸಿಗೆ ಬಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಶತಕ ಸಿಡಿಸಿದ ಯಾವುದೇ ಪಂದ್ಯದಲ್ಲಿ ಭಾರತ ಸೋತ ಉದಾಹರಣೆ ಇಲ್ಲ — ಒಂದೋ ಗೆಲುವು, ಇಲ್ಲವೇ ಡ್ರಾ!

1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ವಿಶಿ, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆದರೂ, ಎರಡನೇ ಇನ್ನಿಂಗ್ಸ್‌ನಲ್ಲಿ 25 ಬೌಂಡರಿಗಳೊಂದಿಗೆ 137 ರನ್ ಸಿಡಿಸಿ ಕ್ರಿಕೆಟ್ ಲೋಕದ ಗಮನ ಸೆಳೆದರು. ಅವರ ಸ್ಕ್ವೇರ್ ಕಟ್ ಶಾಟ್ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿತ್ತು.

ಗವಾಸ್ಕರ್ ಪ್ರಶಂಸೆ, ಹೆಲ್ಮೆಟ್ ಇಲ್ಲದೆ ವೇಗದ ಬೌಲರ್ ಎದುರಿಸಿದ ಧೈರ್ಯ

“ನನ್ನಂತಹ ನೂರು ಗವಾಸ್ಕರ್ ಬರಬಹುದು, ಆದರೆ ವಿಶಿಯಂತವರು ಬರಲಾರರು” ಎಂಬ ಸುನಿಲ್ ಗವಾಸ್ಕರ್ ಮಾತುಗಳು ವಿಶಿಯ ಮಹತ್ವ ಸಾರುತ್ತವೆ. ಆಂಡಿ ರಾಬರ್ಟ್ಸ್, ಜೆಫ್ ಥಾಂಪ್ಸನ್‌ಂತಹ ವೇಗದ ಬೌಲರ್‌ಗಳನ್ನು ಹೆಲ್ಮೆಟ್ ಇಲ್ಲದೆ ಎದುರಿಸಿದ ಧೈರ್ಯವೂ ವಿಶಿಯ ವಿಶೇಷ.

ಕ್ರೀಡಾಸ್ಪೂರ್ತಿಗೆ ಮಾದರಿ

1980ರ ಸುವರ್ಣ ಮಹೋತ್ಸವ ಟೆಸ್ಟ್‌ನಲ್ಲಿ ಅಂಪೈರ್ ತಪ್ಪು ತೀರ್ಪು ನೀಡಿದಾಗ ಬಾಬ್ ಟೇಲರ್ ಅವರನ್ನು ಮರು ಕ್ರೀಸಿಗೆ ಕರೆಸಿದ ವಿಶಿಯ ಕ್ರೀಡಾಸ್ಫೂರ್ತಿ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ.

ರಣಜಿ ಫೈನಲ್‌ಗೂ ಮದುವೆಯೂ ಒಂದೇ ಸಮಯ

1978ರಲ್ಲಿ ಗವಾಸ್ಕರ್ ಸಹೋದರಿ ಕವಿತಾ ಅವರನ್ನು ಮದುವೆಯಾದ ವಿಶಿ, ಮದುವೆಯ ಬಳಿಕ ನೇರವಾಗಿ ಮೈದಾನಕ್ಕಿಳಿದು ರಣಜಿ ಫೈನಲ್‌ನಲ್ಲಿ 247 ರನ್ ಸಿಡಿಸಿ ಕರ್ನಾಟಕಕ್ಕೆ ಕಿರೀಟ ತಂದುಕೊಟ್ಟರು.

ವಿಶಿಯ ಮೂರು ಸ್ಮರಣೀಯ ಇನ್ನಿಂಗ್ಸ್

  • 1975, ಮದ್ರಾಸ್: ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್
  • 1969, ಕಾನ್ಪುರ: ಪಾದಾರ್ಪಣೆ ಪಂದ್ಯದಲ್ಲೇ 137 ರನ್
  • 1981, ಎಂಸಿಜಿ: ಆಸ್ಟ್ರೇಲಿಯಾ ವಿರುದ್ಧ 114 ರನ್

77ನೇ ವಸಂತಕ್ಕೆ ಕಾಲಿಡುತ್ತಿರುವ ಕನ್ನಡದ ಹೆಮ್ಮೆ ಜಿಆರ್ ವಿಶ್ವನಾಥ್ ಅವರಿಗೆ ಹಾರ್ದಿಕ ಶುಭಾಶಯಗಳು.

Continue Reading

Trending