Connect with us

ದೇಶ

ಚೆನ್ನೈನಲ್ಲಿ ಹಕ್ಕಿ ಜ್ವರ ಭೀತಿ: ನೂರಾರು ಕಾಗೆಗಳ ಸಾವು, H5N1 ವೈರಸ್ ದೃಢ

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಏಕಾಏಕಿ ನೂರಾರು ಕಾಗೆಗಳು ಸತ್ತು ಬಿದ್ದಿರುವ ಘಟನೆ ಆತಂಕ ಮೂಡಿಸಿದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಈ ಸಾವಿಗೆ ಕಾರಣ H5N1 ವೈರಸ್ ಎಂದು ದೃಢಪಟ್ಟಿದ್ದು, ನಗರದಲ್ಲಿ ಹಕ್ಕಿ ಜ್ವರ (Bird Flu) ಹರಡುವ ಭೀತಿಯು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ತ್ವರಿತ ಕ್ರಮಕ್ಕೆ ಮುಂದಾಗಿದೆ.

ಹಕ್ಕಿ ಜ್ವರ ಹರಡುವಿಕೆಯನ್ನು ನಿಯಂತ್ರಿಸಲು ಜೈವಿಕ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಸತ್ತ ಕಾಗೆಗಳು ಹಾಗೂ ಕೋಳಿಗಳ ಶವಗಳನ್ನು ಸುಡುವುದು ಅಥವಾ ಆಳವಾಗಿ ಹೂಳುವಂತೆ ಆರೋಗ್ಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಸತ್ತ ಪಕ್ಷಿಗಳನ್ನು ಮುಟ್ಟಬಾರದು ಅಥವಾ ಅವುಗಳ ಬಳಿಗೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಹೊಸದಾಗಿ ಸತ್ತ ಪಕ್ಷಿಗಳು ಕಂಡುಬಂದರೆ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಚೆನ್ನೈ ನಗರದ ಅಡ್ಯಾರ್ ಪ್ರದೇಶದಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಹಕ್ಕಿ ಜ್ವರ ಪಾಸಿಟಿವ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಶುಸಂಗೋಪನಾ ಸಚಿವಾಲಯವು ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ತಕ್ಷಣ ಸಮಗ್ರ ಕ್ಷೇತ್ರ ಕಣ್ಗಾವಲು ನಡೆಸುವಂತೆ ಸೂಚಿಸಿದೆ. ಹೈ ಪ್ಯಾಥೋಜೆನಿಕ್ ಏವಿಯನ್ ಇನ್‌ಫ್ಲುಯೆನ್ಸ (HPAI) ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ, ಪ್ರಾಣಿ ಮತ್ತು ಮಾನವ ಆರೋಗ್ಯ ಎರಡನ್ನೂ ರಕ್ಷಿಸಲು ‘ಒನ್ ಹೆಲ್ತ್’ ವಿಧಾನ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ ಒತ್ತಾಯಿಸಿದೆ.

ಸದ್ಯ, ಚೆನ್ನೈನಲ್ಲಿ ಕಾಗೆಗಳ ಸಾವು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು, ಮಾನವರಲ್ಲಿ ಹಕ್ಕಿ ಜ್ವರ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಜಾಗೃತಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ.


ಏನಿದು H5N1 ವೈರಸ್?

H5N1 ಇನ್ಫ್ಲುಯೆನ್ಸ A ವೈರಸ್‌ನ ಅತ್ಯಂತ ರೋಗಕಾರಕ ತಳಿಯಾಗಿದ್ದು, ಇದು ಮುಖ್ಯವಾಗಿ ಕೋಳಿ ಹಾಗೂ ಕಾಡು ಪಕ್ಷಿಗಳಿಗೆ ಸೋಂಕು ತರುತ್ತದೆ. ಸಾಮಾನ್ಯವಾಗಿ ‘ಹಕ್ಕಿ ಜ್ವರ’ ಎಂದು ಕರೆಯಲಾಗುವ ಈ ವೈರಸ್ ಪಕ್ಷಿಗಳಲ್ಲಿ ವೇಗವಾಗಿ ಹರಡಿ ಹೆಚ್ಚಿನ ಮರಣ ಪ್ರಮಾಣ ಉಂಟುಮಾಡುತ್ತದೆ.

ಹಕ್ಕಿ ಜ್ವರ ಮಾನವರಿಗೆ ಅಪಾಯಕಾರಿಯೇ?

H5N1 ವೈರಸ್ ಮಾನವರಿಗೆ ಹರಡುವ ಸಾಧ್ಯತೆ ಕಡಿಮೆ. ಆದರೆ ಸೋಂಕಿತ ಪಕ್ಷಿಗಳ ನೇರ ಸಂಪರ್ಕ, ಅವುಗಳ ಹಿಕ್ಕೆಗಳು, ಲಾಲಾರಸ ಅಥವಾ ಕಲುಷಿತ ಮೇಲ್ಮೈಗಳ ಮೂಲಕ ಕೆಲವೊಮ್ಮೆ ಮಾನವರಿಗೆ ಹರಡುವ ಸಾಧ್ಯತೆ ಇದೆ. ವಿಶೇಷವಾಗಿ ಕೋಳಿ ಸಾಕಾಣಿಕೆ ಮಾಡುವವರು ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ದೇಶ

LATEST NEWS “ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ”: ಅಮೆರಿಕಾ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಅಮೆರಿಕದೊಂದಿಗೆ ನಡೆದ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಭಾರತ ಯಾರಿಂದ ತೈಲ ಖರೀದಿಸಬೇಕು ಎಂಬುದನ್ನೂ ಅಮೆರಿಕ ನಿರ್ಧರಿಸುತ್ತಿದೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲವೇ?” ಎಂದು ಪ್ರಶ್ನಿಸಿದರು.

ಸಮಾನ ಪ್ರಯೋಜನಗಳನ್ನು ಪಡೆಯದೇ ಒಪ್ಪಂದ ಮಾಡಿಕೊಂಡಿರುವುದು ಸರ್ಕಾರದ ಶರಣಾಗತಿ ರಾಜಕೀಯ ಎಂದು ಅವರು ಆರೋಪಿಸಿದರು. ಈ ಹಿಂದೆ ಭಾರತದ ಉತ್ಪನ್ನಗಳಿಗೆ 3% ಟ್ಯಾರಿಫ್ ಇದ್ದದ್ದು, ಈಗ ಅದನ್ನು 18%ಕ್ಕೆ ಏರಿಸಲಾಗಿದೆ. ಇದನ್ನು ಸರ್ಕಾರ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ಟೀಕಿಸಿದರು.

ಟೆಕ್ಸ್‌ಟೈಲ್ ವಸ್ತುಗಳಿಗೆ ಭಾರತಕ್ಕೆ 18% ಟ್ಯಾರಿಫ್ ವಿಧಿಸಿರುವಾಗ, ಬಾಂಗ್ಲಾದೇಶಕ್ಕೆ 0% ಟ್ಯಾರಿಫ್ ನೀಡಲಾಗಿದೆ. “ಇದು ಭಾರತೀಯ ಕೈಗಾರಿಕೆಗಳಿಗೆ ಹಿನ್ನಡೆಯಾಗಿದೆ. ಟ್ರಂಪ್ ಮೋದಿ ಮೇಲೆ ಬಿಗಿಪಟ್ಟು ಹಾಕಿದ್ದಾರೆ” ಎಂದು ಹೇಳಿದರು.

ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಿದ ರಾಹುಲ್, “ಅಮೆರಿಕಕ್ಕೆ ಭಾರತದ ಬಗ್ಗೆ ಬದ್ಧತೆ ಇಲ್ಲ. ಆದರೆ ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿದೆ. ನಾವು ಮೂರ್ಖರಂತೆ ನಿಂತಿದ್ದೇವೆ” ಎಂದು ಕಿಡಿಕಾರಿದರು.

Continue Reading

ದೇಶ

BIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್‌, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.

600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಷ್ಕರದ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್‌, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಹಾಗೂ ವಿವಿಧ ಗುತ್ತಿಗೆ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಪ್ರತಿಭಟನೆಗಳಲ್ಲಿ ಭಾಗಿಯಾಗಲಿವೆ.

ನವೆಂಬರ್ 2025ರಲ್ಲಿ ಸೂಚಿಸಲಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ. ಒಡಿಶಾ ಮತ್ತು ಅಸ್ಸಾಂ ರಾಜ್ಯಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಾಲೆ-ಕಾಲೇಜುಗಳ ಮುಚ್ಚುವಿಕೆ ಕುರಿತು ಅಧಿಕೃತ ಘೋಷಣೆ ಇಲ್ಲದಿದ್ದರೂ, ಕೆಲವು ರಾಜ್ಯಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಸಾರ್ವಜನಿಕ ಸಾರಿಗೆ ಸೇವೆಗಳು ಅಸ್ತವ್ಯಸ್ತವಾಗಬಹುದು. ಆದರೆ ಹಾಲು, ಆಸ್ಪತ್ರೆ, ಮೆಡಿಕಲ್‌, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

Continue Reading

ದೇಶ

638 ಕನ್ನಡ ಶಾಲೆ ಮುಚ್ಚಿದ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ

ನವದೆಹಲಿ: ರಾಜ್ಯದಾದ್ಯಂತ 638 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿರುವುದು ಕನ್ನಡ ಮತ್ತು ಕನ್ನಡ ಶಿಕ್ಷಣದ ವಿರುದ್ಧದ ಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು. “ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ” ಎಂದು ಹೇಳಿದರು. ಈ ನಿರ್ಧಾರದಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ಬದ್ಧವಾಗಿರಬೇಕು. ಆದರೆ ಪ್ರಸ್ತುತ ಸರ್ಕಾರದ ನಡೆ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದ ಬೊಮ್ಮಾಯಿ, ಕೂಡಲೇ ಮುಚ್ಚಿರುವ ಎಲ್ಲಾ ಕನ್ನಡ ಶಾಲೆಗಳನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಜೊತೆಗೆ, ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ನಿರಂತರ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಹತಾಶಗೊಂಡಿದೆ” ಎಂದು ಹೇಳಿದರು. ಸಂಸತ್ತಿನಲ್ಲಿ ಬೆಂಚ್‌ಗಳ ಮೇಲೆ ನಿಂತು ಗದ್ದಲ ಮಾಡುವುದು, ಸ್ಪೀಕರ್ ವಿರುದ್ಧ ದಾಳಿ ನಡೆಸುವುದು ಹಾಗೂ ಪ್ರಧಾನಮಂತ್ರಿಯ ಆಸನದವರೆಗೆ ತೆರಳಿ ತಡೆ ಮಾಡುವ ಪ್ರಯತ್ನ ಮಿತಿಮೀರಿದ ವರ್ತನೆ ಎಂದು ಅವರು ಆರೋಪಿಸಿದರು.

ರಾಜಕೀಯದಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಗದ್ದಲ ಹಾಗೂ ಅಶಾಂತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.

Continue Reading

Trending