ದೇಶ
ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್ ಚಿನ್ನ!
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ (Bank of England) ಸುಮಾರು 100 ಟನ್ ಅಥವಾ 1 ಲಕ್ಷ ಕೆಜಿ ಚಿನ್ನವನ್ನು (Gold) ಮರಳಿ ಭಾರತಕ್ಕೆ (India) ತಂದಿದೆ. 1991ರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್‌ಬಿಐ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು.
2023-24ರ ತನ್ನ ಹಣಕಾಸು ವರದಿಯಲ್ಲಿ ಆರ್‌ಬಿಐ ಈ ವಿವರ ಪ್ರಕಟಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನ ತರಲಾಗುವುದು ಎಂದು ಹೇಳಿದೆ. ತಂದ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆರ್‌ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತ್ತು. ವಿದೇಶದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ವಿದೇಶದಲ್ಲಿ ಆರ್‌ಬಿಐ 413.8 ಟನ್ ಚಿನ್ನವನ್ನು ಇಟ್ಟಿದೆ. ಕೆಲ ವರ್ಷಗಳ ಹಿಂದೆ ಆರ್‌ಬಿಐ ವಿದೇಶಗಳಿಂದ ಚಿನ್ನ ಖರೀದಿಯಲ್ಲಿ ತೊಡಗಿದೆ. ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ಆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಈ ಕಾರಣಕ್ಕೆ ಆರ್‌ಬಿಐ ಚಿನ್ನದ ಸಂಗ್ರಹ ಮಾಡಲು ಮುಂದಾಗಿದೆ.
ಇಂಗ್ಲೆಂಡ್‌ನಲ್ಲಿ ಇರಿಸಿದ್ದು ಯಾಕೆ?
1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ ಆರ್‌ಬಿಐ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್ ಸಾಲ ಪಡೆದುಕೊಂಡಿತ್ತು.
ಪ್ಲ್ಯಾನ್ ಹೇಗಿತ್ತು?
100 ಟನ್ ಚಿನ್ನವನ್ನು ತರಲು ತಿಂಗಳುಗಟ್ಟಲೇ ಪ್ಲ್ಯಾನಿಂಗ್ ಮಾಡಿ ಎಲ್ಲಿಯೂ ಈ ವಿಚಾರ ಸೋರಿಕೆ ಆಗದಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯ, ಸರ್ಕಾರದ ಇತರೇ ಇಲಾಖೆಗಳ ಸಂಪೂರ್ಣ ಸಹಕಾರದಿಂದ ವಿಶೇಷ ವಿಮಾನದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ತರಲಾಗಿದೆ. ದೇಶದ ʼಸಾರ್ವಭೌಮ ಆಸ್ತಿʼಯಾಗಿದ್ದ ಕಾರಣ ಈ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.
ಚಿನ್ನ ತಂದಿದ್ದು ಯಾಕೆ?
ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇಟ್ಟಿದೆ. ವಿಶ್ವದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಮತ್ತು ಕರೆನ್ಸಿ ಮೌಲ್ಯದ ಏರಿಳಿತದ ಭೀತಿಯಿಂದಾಗಿ ಆರ್‌ಬಿಐ ಈಗ ಚಿನ್ನವನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದೆ.
ಇಂಗ್ಲೆಂಡ್‌ನಲ್ಲಿ ದೇಶಗಳು ಚಿನ್ನ ಇಡೋದು ಯಾಕೆ?
ಈ ಹಿಂದಿನಿಂದಲೂ ಬಹುತೇಕ ದೇಶಗಳು ಯನೈಟೆಡ್ ಕಿಂಗ್‌ಡಮ್ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟುಕೊಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಭದ್ರತೆ. ಭಾರೀ ಪ್ರಮಾಣದ ಚಿನ್ನ ಸಂಗ್ರಹಿಸಲು ಸುರಕ್ಷಿತ ವ್ಯವಸ್ಥೆ, ಸಂಗ್ರಹಾಲಯಗಳು ಇಲ್ಲದೇ ಇದ್ದಾಗ ದೇಶಗಳು ಯುಕೆ ಬ್ಯಾಂಕ್‌ನಲ್ಲಿ ಇಡುತ್ತಿವೆ. ಈ ರೀತಿಯಾಗಿ ಚಿನ್ನವನ್ನು ಇರಿಸಿದ್ದಕ್ಕೆ ದೇಶಗಳು ಗೌರವ ಧನ ನೀಡಬೇಕಾಗುತ್ತದೆ.
ಆರ್‌ಬಿಐ ಬಳಿ ಎಷ್ಟು ಚಿನ್ನವಿದೆ?
ಮಾರ್ಚ್ 2023 ರ ಮಾಹಿತಿಯ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. 15 ವರ್ಷಗಳ ಹಿಂದೆ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 200 ಟನ್ ಚಿನ್ನವನ್ನು ಖರೀದಿಸಿತ್ತು.
2019ರಲ್ಲಿ ಚಿನ್ನ ಸಂಗ್ರಹ 618.2 ಟನ್‌ಗೆ ಏರಿಕೆಯಾಗಿದ್ದರೆ 2020ರ ವೇಳೆಗೆ ಇದು 661.4 ಟನ್‌ಗೆ ಏರಿಕೆಯಾಗಿತ್ತು. 2021ರ ವೇಳೆಗೆ 695.3 ಟನ್, 2022ಕ್ಕೆ 760.4 ಟನ್, 2023ಕ್ಕೆ 794.6 ಟನ್ ಹಾಗೂ 2024ರ ವೇಳೆಗೆ ಬರೋಬ್ಬರಿ 822.1 ಟನ್ ಚಿನ್ನದ ಸಂಗ್ರಹ ಹೊಂದಿದೆ.
ಕ್ರೀಡೆ
ಕೃಣಾಲ್ ಪಾಂಡ್ಯ ಬೌಲಿಂಗ್‌ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್
ಹೈದರಾಬಾದ್: Indian Premier League 2026ನಲ್ಲಿ ಶುಕ್ರವಾರ ನಡೆದ Sunrisers Hyderabad ಹಾಗೂ Royal Challengers Bengaluru ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಸ್ಪಿನ್ನರ್ Krunal Pandya ಎಸೆದ ಬೌನ್ಸರ್‌ಗಳಿಗೆ ಸನ್‌ರೈಸರ್ಸ್ ತಂಡದ ಸಿಇಒ ಹಾಗೂ ಮಾಲಕಿ Kavya Maran ಆಕ್ಷೇಪ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಸತತವಾಗಿ ವೇಗದ ಬೌನ್ಸರ್‌ಗಳನ್ನು ಎಸೆದರು. ಸ್ಪಿನ್ನರ್ ಆಗಿದ್ದರೂ ಗಂಟೆಗೆ 120-130 ಕಿ.ಮೀ ವೇಗದಲ್ಲಿ ಚೆಂಡು ಎಸೆಯುತ್ತಿರುವುದರ ಬಗ್ಗೆ ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದರು. Ravichandran Ashwin ಸೇರಿ ಕೆಲ ದಿಗ್ಗಜರು ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು.
ಪಂದ್ಯದ ವೇಳೆ ಕೃಣಾಲ್ ಎಸೆದ ಬೌನ್ಸರ್ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದ ಕಾವ್ಯ ಮಾರನ್ ಅಸಮಾಧಾನ ವ್ಯಕ್ತಪಡಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. “ಅವರು ಸರಿಯಾಗಿ ಬೌಲಿಂಗ್ ಮಾಡುತ್ತಿಲ್ಲ, ಚೆಂಡನ್ನು ಎಸೆಯುತ್ತಿದ್ದಾರೆ” ಎಂಬ ಅರ್ಥ ಬರುವ ರೀತಿಯಲ್ಲಿ ಸಹ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೊ ಈಗ ಭಾರೀ ವೈರಲ್ ಆಗಿದೆ. ಕೆಲ ಅಭಿಮಾನಿಗಳು ಕಾವ್ಯ ಅವರಿಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ಇದು ಕ್ರಿಕೆಟ್‌ನ ಭಾಗವೇ ಎಂದು ಪ್ರತಿಕ್ರಿಯಿಸಿದ್ದಾರೆ.
ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. Abhishek Sharma (56), Ishan Kishan (79) ಮತ್ತು Heinrich Klaasen (51) ಅರ್ಧಶತಕದ ನೆರವಿನಿಂದ ಎಸ್‌ಆರ್‌ಎಚ್ 255 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಗುರಿ ಬೆನ್ನಟ್ಟಿದ ಆರ್‌ಸಿಬಿಗೆ Venkatesh Iyer ವೇಗದ ಆರಂಭ ನೀಡಿದರೂ, Virat Kohli ಮತ್ತು Devdutt Padikkal ಬೇಗ ಔಟಾದರು. ನಾಯಕ Rajat Patidar ಹಾಗೂ ಕೃಣಾಲ್ ಪಾಂಡ್ಯ ಹೋರಾಟ ನಡೆಸಿದರೂ ತಂಡ 200 ರನ್‌ಗಳಿಗೆ ಸೀಮಿತವಾಯಿತು.
ದೇಶ
Cockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಇದೀಗ Bengaluru City Police ದೊಡ್ಡ ಶಾಕ್ ನೀಡಿದೆ. ಮೇ 24ರಂದು ಟೌನ್ ಹಾಲ್ ಬಳಿ ಆಯೋಜಿಸಲು ಯೋಜಿಸಲಾಗಿದ್ದ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್‌ಗಳಲ್ಲಿ, ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ಬಳಿ ಮಾನವ ಸರಪಳಿ ನಿರ್ಮಿಸಲು ಕರೆ ನೀಡಲಾಗಿತ್ತು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮನವಿ ಪೊಲೀಸ್ ಇಲಾಖೆಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿದರೂ ಟೌನ್ ಹಾಲ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Town Hall Bengaluru ಬಳಿ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆಗಳಿಗೆ ಅನುಮತಿ ನೀಡಬಾರದು ಎಂಬ High Court of Karnataka ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ Freedom Park ಹೊರತುಪಡಿಸಿ ನಗರದ ಬೇರೆ ಭಾಗಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು Abhijeet Dipke ಸ್ಥಾಪಿಸಿದ್ದು, ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಪಕ್ಷದ ಎಕ್ಸ್ ಖಾತೆ ಒಂದೇ ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿತ್ತು. ನಂತರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೂಚನೆಯ ಮೇರೆಗೆ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ Surya Kant ಯುವಕರನ್ನು ‘ಜಿರಳೆ’ಗಳಿಗೆ ಹೋಲಿಸಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮೀಮ್ಸ್ ಮತ್ತು ಟ್ರೋಲಿಂಗ್‌ಗಳ ನಡುವೆ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್ ಆಗಿತ್ತು.
ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಗೆ 5 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಸೇರಿದ್ದು, ವೆಬ್‌ಸೈಟ್‌ನಲ್ಲಿ ಲಕ್ಷಾಂತರ ಮಂದಿ ನೋಂದಾಯಿಸಿಕೊಂಡಿದ್ದರು. ಇದೀಗ ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಹೊಸ ಚರ್ಚೆಗೆ ಕಾರಣವಾಗಿದೆ.
ದೇಶ
ಮೋದಿ ಸರ್ಕಾರದ 2025 ರಿಪೋರ್ಟ್ ಕಾರ್ಡ್ ಬಿಡುಗಡೆ! ಯಾವ ಸಚಿವಾಲಯ ಟಾಪ್, ಯಾವುದು ಹಿಂದುಳಿತು?
ನವದೆಹಲಿ: Government of India ತನ್ನ ವಿವಿಧ ಸಚಿವಾಲಯಗಳು ಮತ್ತು ಕೇಂದ್ರ ಯೋಜನೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ 2025ರ ಅಧಿಕೃತ “ರಿಪೋರ್ಟ್ ಕಾರ್ಡ್” ಬಿಡುಗಡೆ ಮಾಡಿದೆ. ಪ್ರಧಾನಿ Narendra Modi ನೇತೃತ್ವದಲ್ಲಿ ನಡೆದ ಮಹತ್ವದ ಮಂತ್ರಿಮಂಡಲ ಸಭೆಯಲ್ಲಿ ಈ ಮೌಲ್ಯಮಾಪನ ವರದಿ ಪ್ರಕಟವಾಗಿದ್ದು, ಹಲವು ಸಚಿವಾಲಯಗಳ ಸಾಧನೆಗೆ ಶ್ಲಾಘನೆ ವ್ಯಕ್ತವಾಗಿದೆ.
ಕ್ಯಾಬಿನೆಟ್ ಕಾರ್ಯದರ್ಶಿ T. V. Somanathan ಸಚಿವಾಲಯಗಳ ಕಾರ್ಯಕ್ಷಮತೆ ವರದಿ ಬಿಡುಗಡೆ ಮಾಡಿದರು. ವರದಿ ಪ್ರಕಾರ ಗ್ರಾಹಕ ವ್ಯವಹಾರಗಳು, ಕಲ್ಲಿದ್ದಲು, ವಿದ್ಯುತ್ ಹಾಗೂ ಆರೋಗ್ಯ ಸಚಿವಾಲಯಗಳು ಅತ್ಯುತ್ತಮ ಸಾಧನೆ ತೋರಿದ ಇಲಾಖೆಗಳಾಗಿ ಹೊರಹೊಮ್ಮಿವೆ. ವಿಶೇಷವಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಕುಂದುಕೊರತೆ ಪರಿಹಾರ ಮತ್ತು ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ನಿರ್ವಹಣೆಯಲ್ಲಿ ಮೆಚ್ಚುಗೆ ಪಡೆದಿದೆ.
ಫೈಲ್ ವಿಲೇವಾರಿ ಮತ್ತು ಆಡಳಿತ ನಿರ್ವಹಣೆಯಲ್ಲಿ ಕಲ್ಲಿದ್ದಲು ಸಚಿವಾಲಯ ಅತ್ಯಧಿಕ ಅಂಕ ಗಳಿಸಿದ್ದು, ವಿದ್ಯುತ್ ಮತ್ತು ಆರೋಗ್ಯ ಸಚಿವಾಲಯಗಳ ಕಾರ್ಯಕ್ಷಮತೆಯೂ ಗಮನಸೆಳೆದಿದೆ. ಕೆಲವು ಇಲಾಖೆಗಳನ್ನು ಕಳಪೆ ಸಾಧನೆ ತೋರಿದ ಸಚಿವಾಲಯಗಳ ಪಟ್ಟಿಯಲ್ಲೂ ಸೇರಿಸಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ಪ್ರಧಾನಿ ಮೋದಿ ಸಚಿವರು ಮತ್ತು ಅಧಿಕಾರಿಗಳಿಗೆ ವೆಚ್ಚ ನಿಯಂತ್ರಣದ ಕುರಿತು ವಿಶೇಷ ಸೂಚನೆ ನೀಡಿದ್ದಾರೆ. ದೇಶದ ಹಿತಾಸಕ್ತಿಗೆ ಅಗತ್ಯವಿಲ್ಲದ ವಿದೇಶಿ ಪ್ರವಾಸಗಳನ್ನು ತಪ್ಪಿಸಲು ಸೂಚಿಸಿದ್ದು, ದೊಡ್ಡ ಬೆಂಗಾವಲು ಪಡೆಗಳ ಬಳಕೆ ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ. ಜೊತೆಗೆ ಹಲವು ಅಂತರರಾಷ್ಟ್ರೀಯ ಶೃಂಗಸಭೆಗಳನ್ನು ರದ್ದುಗೊಳಿಸುವ ವಿಚಾರವನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಹಾಗೂ ಜಾಗತಿಕ ಇಂಧನ ಪೂರೈಕೆಯ ಅಡಚಣೆ ಹಿನ್ನೆಲೆಯಲ್ಲಿ ಜೈವಿಕ ಅನಿಲ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.
ಜೂನ್ 9ರಂದು ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ವರ್ಷದ ಸಂಭ್ರಮಕ್ಕೆ ಮುನ್ನ ನಡೆದ ಈ ಸಭೆ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು.
