ಆರೋಗ್ಯ
ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ… ಸಾವನ್ನು ತಡೆ ಗಟ್ಟಿ..!!
ದಿನವೊಂದಕ್ಕೆ ಕನಿಷ್ಠ ಸಾವಿರ ಹೆಜ್ಜೆ ಹಾಕುವುದರಿಂದ ಶೇ 15 ರಷ್ಟು ಸಾವುಗಳನ್ನು ತಡೆಗಟ್ಟಬಹುದಂತೆ. ಹೀಗಂತಾ ಈ ಬಗ್ಗೆ ಅಧ್ಯಯನಗಳು ಬಹಿರಂಗ ಪಡಿಸಿವೆ.
ನಿತ್ಯ ಅಗತ್ಯ ವಾಕಿಂಗ್ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ.
ದಿನಕ್ಕೆ ಕನಿಷ್ಠ 3967 ಹೆಜ್ಜೆಗಳನ್ನು ಹಾಕುವುದರಿಂದ ನಿಮ್ಮ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು ಅನ್ನುತ್ತಿದೆ ಈ ಅಧ್ಯಯನ.
ನಿತ್ಯ ನೀವು ಕನಿಷ್ಠ 2337 ಹೆಜ್ಜೆಗಳನ್ನು ಹಾಕಿದರೆ ಹೃದಯ ಸಂಬಂಧಿ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ಸಂಬಂಧ ಸಂಶೋಧಕರು ಸುಮಾರು 2,26,889 ಜನರ ಮೇಲೆ ಈ ಅಧ್ಯಯನ ನಡೆಸಿ, ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಿನವೂ ಬಿರುಸಿನ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹಿರಂಗ ಕೂಡಾ ಆಗಿದೆ. ವಿವಿಧ 17 ಬಗೆಯ ಪ್ರಯೋಗಗಳನ್ನ ಇವರೆಲ್ಲ ಮೇಲೆ ಮಾಡಿ, ಈ ಅಂಶಗಳನ್ನು ಗುರುತಿಸಲಾಗಿದೆ.
ನೀವು ನಾಲ್ಕು ಸಾವಿರ ಹೆಜ್ಜೆಗಳನ್ನೇ ಹಾಕಬೇಕೆಂದೇನೂ ಇಲ್ಲ. ಜಸ್ಟ್ ಸಾವಿರ ಹೆಜ್ಜೆಗಳನ್ನು ದಿನವೂ ಹಾಕಿದರೆ ಸಾಕು ಶೇ 15 ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಅನ್ನುತ್ತಾರೆ ತಜ್ಞರು. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 500 ರಿಂದ 1,000 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯ ಕಾಯಿಲೆಗಳಿಂದ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಅಂಶವನ್ನು ಗಮನಿಸಲಾಗಿದೆ.
500 ಹೆಜ್ಜೆ ನಡುಗೆ ಶೇ 7 ರಷ್ಟು ಮರಣ ಪ್ರಮಾಣ ಕಡಿಮೆ: ದಿನವೊಂದಕ್ಕೆ 1000 ಹೆಜ್ಜೆ ನಡೆಯುವುದರಿಂದ ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಖಚಿತ ಪಡಿಸಿದೆ. ಮತ್ತೊಂದೆಡೆ, ನಿತ್ಯ ಕನಿಷ್ಠ 500 ಹೆಜ್ಜೆ ನಡೆಯುವುದರಿಂದ ಹೃದ್ರೋಗದಿಂದ ಉಂಟಾಗುವ ಮರಣವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಬಹುದು ಅನ್ನುತ್ತೆ ಈ ವರದಿ.
ಯಾವುದೇ ಕಾರಣದಿಂದ ಸಾವುಗಳನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 4000 ಹೆಜ್ಜೆಗಳಷ್ಟು ನಡೆಯುವುದರಿಂದ ಎಲ್ಲ ರೋಗಗಳಿಂದ ದೂರು ಇರಬಹುದು ಅಂತಾರೆ ಪೋಲೆಂಡ್‌ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮಾಸಿಜ್ ಬನಾಚ್. ವಾಕಿಂಗ್ ಮಾಡುವುದು ಪುರುಷರು ಮತ್ತು ಮಹಿಳೆಯಲ್ಲಿ ಸಮಾನ ಪ್ರಭಾವ ಬೀರುತ್ತದೆ ಎನ್ನುತಾರೆ ಅವರು.
ಕಾಲುಭಾಗದಷ್ಟು ಜನ ದೈಹಿಕ ಚಟುವಟಿಕೆಯನ್ನೇ ಮಾಡಲ್ಲ: ದುರ್ದೈವದ ಸಂಗತಿ ಎಂದರೆ ವಿಶ್ವದ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನರು ದೈಹಿಕ ಚಟುವಟಿಕೆಯನ್ನೇ ಮಾಡುವುದಿಲ್ಲ ಎನ್ನುತ್ತವೆ ಸಾಕಷ್ಟು ಅಧ್ಯಯನದ ವರದಿಗಳು. ಅಧ್ಯಯನದ ಪ್ರಕಾರ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ್ತು ಕಡಿಮೆ ಆದಾಯದ ದೇಶಗಳಿಗಿಂತ ಹೆಚ್ಚಿನ ಆದಾಯದ ದೇಶಗಳಲ್ಲಿ ಹೆಚ್ಚಿನ ಜನರು ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ – ಅಂಶಗಳ ಪ್ರಕಾರ, ದೈಹಿಕ ಚಟುವಟಿಕೆ ಕೊರತೆ ವಿಶ್ವದಲ್ಲಿ ಸಾವಿಗೆ ನಾಲ್ಕನೇ ಅತಿ ದೊಡ್ಡ ಕಾರಣವಾಗಿದೆ. ದೈಹಿಕ ಚಟುವಟಿಕೆಯ ಕೊರತೆಯು ಪ್ರತಿ ವರ್ಷ 3.2 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆಯಂತೆ.
ಸುಮಾರು 7 ವರ್ಷಗಳ ಕಾಲ ವಿಶ್ಲೇಷಣೆ ನಡೆಸಿರುವ ಸಂಶೋಧಕರು ಈ ಎಲ್ಲ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ಇದರಲ್ಲಿ 64 ವರ್ಷ ವಯೋಮಿತಿಯ ಶೇ.49 ರಷ್ಟು ಮಹಿಳೆಯರು ಭಾಗವಹಿಸಿದ್ದರು. ಇನ್ನು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾವಿನ ಅಪಾಯವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗಿಂತ ಕಡಿಮೆ ಎಂದು ಅಧ್ಯಯನವು ಕಂಡು ಹಿಡಿದಿದೆ.
ದಿನಕ್ಕೆ 6,000 ರಿಂದ 10,000 ಹೆಜ್ಜೆಗಳನ್ನು ನಡೆದ ಹಿರಿಯ ವಯಸ್ಕರು ತಮ್ಮ ಸಾವಿನ ಅಪಾಯವನ್ನು 42 ಪ್ರತಿಶತದಷ್ಟು ಕಡಿಮೆಗೊಳಿಸಿದರೆ, ದಿನಕ್ಕೆ 7,000 ರಿಂದ 13,000 ಹೆಜ್ಜೆಗಳನ್ನು ನಡೆದ ಕಿರಿಯ ವಯಸ್ಕರು ತಮ್ಮ ಸಾವಿನ ಅಪಾಯವನ್ನು 49 ಪ್ರತಿಶತದಷ್ಟು ಕಡಿಮೆ ಮಾಡಿದ್ದಾರೆ.
ಆರೋಗ್ಯ
Bengaluru ಹೆಚ್‌ಸಿಜಿ ಆಸ್ಪತ್ರೆಗೆ ಕೇಂದ್ರದ ಕಠಿಣ ಶಾಕ್: 2 ವರ್ಷ ಹೊಸ ಕ್ಲಿನಿಕಲ್ ಟ್ರಯಲ್‌ಗೆ ಬ್ರೇಕ್!
ಬೆಂಗಳೂರು: ನಗರದ ಪ್ರತಿಷ್ಠಿತ ಹೆಚ್‌ಸಿಜಿ (HCG) ಕ್ಯಾನ್ಸರ್ ಆಸ್ಪತ್ರೆಯ ನೈತಿಕ ಸಮಿತಿಗೆ (Ethics Committee) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಭಾರೀ ಆಘಾತ ನೀಡಿದೆ. ಮಾನವ ಪ್ರಯೋಗಗಳ (Clinical Trials) ವೇಳೆ ಗಂಭೀರ ನಿಯಮ ಉಲ್ಲಂಘನೆಗಳು ಹಾಗೂ ಸುರಕ್ಷತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಮುಂದಿನ 24 ತಿಂಗಳುಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳು ಜಂಟಿ ತನಿಖೆ ನಡೆಸಿದ್ದವು. ತನಿಖೆಯಲ್ಲಿ ಹಲವು ಗಂಭೀರ ಅಕ್ರಮಗಳು ಬೆಳಕಿಗೆ ಬಂದಿದ್ದು, ನೈತಿಕ ಸಮಿತಿಯು ನಿಯಮಾವಳಿಗಳನ್ನು ಪಾಲಿಸದಿರುವುದು ದೃಢಪಟ್ಟಿದೆ.
ವರದಿಗಳ ಪ್ರಕಾರ, ಔಷಧ ಸಂಶೋಧನಾ ಪ್ರಯೋಗಗಳ ಸಂದರ್ಭದಲ್ಲಿ ಕೆಲವು ರೋಗಿಗಳು ಮೃತಪಟ್ಟಿದ್ದರೂ, ಆ ಮಾಹಿತಿಯನ್ನು ನಿಯಂತ್ರಣ ಸಂಸ್ಥೆಗೆ ನಿಗದಿತ ಅವಧಿಯಲ್ಲಿ ಸಲ್ಲಿಸಲಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಸಾವಿನ ವರದಿಗಳನ್ನೇ ದಾಖಲಿಸದೇ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಪ್ರಯೋಗಗಳಿಂದ ಹಾನಿಗೊಳಗಾದ ಅಥವಾ ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಧನ ವಿತರಣೆ ಕುರಿತು ಅಗತ್ಯ ದಾಖಲೆಗಳ ಕೊರತೆಯೂ ಕಂಡುಬಂದಿದೆ.
ಹೊಸ ಔಷಧ ಪ್ರಯೋಗಗಳಿಗೆ ಒಳಗಾಗುವ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ಆರೈಕೆಯನ್ನು ಖಚಿತಪಡಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ ಎಂದು ತನಿಖಾ ವರದಿ ಉಲ್ಲೇಖಿಸಿದೆ. ಇದರ ಹಿನ್ನೆಲೆಯಲ್ಲಿ ಸಿಡಿಎಸ್‌ಸಿಒ ಕಠಿಣ ಕ್ರಮ ಕೈಗೊಂಡಿದೆ.
ಆದರೆ, ಈ ನಿಷೇಧವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆಸ್ಪತ್ರೆಯ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆ, ತಪಾಸಣೆ ಹಾಗೂ ಈಗಾಗಲೇ ನಡೆಯುತ್ತಿರುವ ಪ್ರಯೋಗಗಳು ಮುಂದುವರಿಯಲಿವೆ. ಆದರೆ ಚಾಲ್ತಿಯಲ್ಲಿರುವ ಎಲ್ಲಾ ಪ್ರಯೋಗಗಳ ಕುರಿತು ಪ್ರತಿ ತಿಂಗಳು ರೋಗಿಗಳ ಸುರಕ್ಷತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.
ಸಿಡಿಎಸ್‌ಸಿಒ ಆದೇಶವನ್ನು ಪರಿಶೀಲಿಸುತ್ತಿರುವ ಹೆಚ್‌ಸಿಜಿ ಆಡಳಿತ ಮಂಡಳಿ, ಮುಂದಿನ ಕಾನೂನು ಕ್ರಮಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ
ಫಾಸ್ಟ್ ಲೈಫ್‌ನಲ್ಲಿ ಯೋಗದ ಮಹತ್ವ ಹೆಚ್ಚಳ: ಆರೋಗ್ಯಕರ ಬದುಕಿಗೆ ಯೋಗವೇ ಮಂತ್ರ
ನಾಳೆ ಜಗತ್ತಿನಾದ್ಯಂತ International Day of Yogaವನ್ನು ಆಚರಿಸಲಾಗುತ್ತಿದೆ. ಆಧುನಿಕ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ಸಮಯದ ಕೊರತೆ, ಮಾನಸಿಕ ಆತಂಕ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಪರಿಣಾಮಕಾರಿ ಮಾರ್ಗವಾಗಿ ಹೊರಹೊಮ್ಮಿದೆ.ತಜ್ಞರ ಪ್ರಕಾರ, ಪ್ರತಿದಿನ ಕೇವಲ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ದೇಹದ ಲವಚಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಯೋಗದ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು, ಏಕಾಗ್ರತೆಯನ್ನು ವೃದ್ಧಿಸಬಹುದು ಹಾಗೂ ಉತ್ತಮ ನಿದ್ರೆಯನ್ನು ಪಡೆಯಬಹುದು.ಇಂದಿನ ವೇಗದ ಬದುಕಿನಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಯುವಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಯೋಗ ಮತ್ತು ಪ್ರಾಣಾಯಾಮ ಅಭ್ಯಾಸಗಳು ಈ ಸಮಸ್ಯೆಗಳನ್ನು ನಿಯಂತ್ರಿಸಲು ನೆರವಾಗುತ್ತವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಾಳೆಯ ಯೋಗ ದಿನಾಚರಣೆಯ ಅಂಗವಾಗಿ ದೇಶದ ವಿವಿಧ ನಗರಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ವಿಶೇಷ ಕಾರ್ಯಾಗಾರಗಳು ನಡೆಯಲಿವೆ. ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳು ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ವರದಿ: ಯೋಗವು ಕೇವಲ ವ್ಯಾಯಾಮವಲ್ಲ; ಅದು ಆರೋಗ್ಯಕರ ಮತ್ತು ಸಂತೋಷದಾಯಕ ಜೀವನದತ್ತ ಕೊಂಡೊಯ್ಯುವ ಜೀವನಶೈಲಿಯಾಗಿದೆ.
“ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಮತೋಲನಯುತ ಜೀವನಕ್ಕಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು” ಎಂಬ ಸಂದೇಶದೊಂದಿಗೆ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಆರೋಗ್ಯ
ಮಧುಮೇಹಿಗಳು ಎಚ್ಚರ! ಉಳಿದವರಿಗೆ ಲಾಭ: ಹಲಸಿನ ಹಣ್ಣಿನ ಆರೋಗ್ಯಕರ ವಿಶೇಷತೆಗಳು
ಹಲಸಿನ ಹಣ್ಣು ಹಲಸಿನ ಹಣ್ಣು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರ ಪ್ರಮುಖ ಲಾಭಗಳು ಹೀಗಿವೆ:
ರೋಗನಿರೋಧಕ ಶಕ್ತಿ ಹೆಚ್ಚಳ – ವಿಟಮಿನ್ C ಸಮೃದ್ಧವಾಗಿದ್ದು ದೇಹದ ರಕ್ಷಣಾ ಶಕ್ತಿಯನ್ನು ಬಲಪಡಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ – ಹೆಚ್ಚಿನ ನಾರಿನಾಂಶ (ಫೈಬರ್) ಜೀರ್ಣಕ್ರಿಯೆಗೆ ಸಹಾಯ ಮಾಡಿ ಮಲಬದ್ಧತೆ ತಡೆಯುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು – ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗಬಹುದು.
ತ್ವರಿತ ಶಕ್ತಿ ನೀಡುತ್ತದೆ – ನೈಸರ್ಗಿಕ ಕಾರ್ಬೊಹೈಡ್ರೇಟ್‌ಗಳ ಉತ್ತಮ ಮೂಲ.
ಚರ್ಮದ ಆರೈಕೆ – ವಿಟಮಿನ್ A ಮತ್ತು ಆಂಟಿಆಕ್ಸಿಡೆಂಟ್‌ಗಳು ಚರ್ಮದ ಆರೋಗ್ಯ ಕಾಪಾಡುತ್ತವೆ.
ಎಲುಬುಗಳನ್ನು ಬಲಪಡಿಸುತ್ತದೆ – ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಎಲುಬಿನ ಆರೋಗ್ಯಕ್ಕೆ ಸಹಕಾರಿ.
ಕಣ್ಣಿನ ಆರೋಗ್ಯಕ್ಕೆ ಲಾಭಕಾರಿ – ವಿಟಮಿನ್ A ದೃಷ್ಟಿ ಶಕ್ತಿಯನ್ನು ಬೆಂಬಲಿಸುತ್ತದೆ.
ಪೌಷ್ಟಿಕಾಂಶಗಳ ಭಂಡಾರ – ದೇಹಕ್ಕೆ ಅಗತ್ಯವಾದ ಹಲವು ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.
ಗಮನಿಸಬೇಕಾದ ಅಂಶ:ಹಲಸಿನ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.ಮಧುಮೇಹ ಇರುವವರು ವೈದ್ಯರ ಸಲಹೆಯಂತೆ ಸೇವಿಸಬೇಕು.
ಸಾರಾಂಶ: ಹಲಸಿನ ಹಣ್ಣು ರುಚಿ ಮತ್ತು ಆರೋಗ್ಯ ಎರಡರಲ್ಲೂ ಉತ್ತಮ ಆಯ್ಕೆಯಾಗಿದ್ದು, ಸಮತೋಲಿತ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಲು ಯೋಗ್ಯವಾದ ಹಣ್ಣಾಗಿದೆ.
