ಅಪರಾಧ
ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!
ಲಕ್ನೋ: ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ (Chhangur Baba), ಹಿಂದೂ ಯುವತಿಯರಿಗೆ ಬಲೆ ಬೀಸಿ ಲವ್ ಜಿಹಾದ್ (Love Jihad) ನಡೆಸಲು 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಸ್ಫೋಟಕ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಡವರು, ವಿಧವೆಯರು ಮತ್ತು ದುರ್ಬಲ ಮನಸ್ಥಿತಿಯ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮತಾಂತರ ನಡೆಸಲಾಗುತ್ತಿತ್ತು. ಇದಕ್ಕೆ ಕಳೆದ ಮೂರು ವರ್ಷದಲ್ಲಿ ಮುಸ್ಲಿಂ ರಾಷ್ಟ್ರಗಳಿಂದ ಸುಮಾರು 500 ಕೋಟಿ ರೂ. ಪಡೆದಿದ್ದ. ಯುವಕರನ್ನು ಬಳಸಿಕೊಂಡು ಬಡ ಕುಟುಂಬದ ಯುವತಿಯರಿಗೆ, ವಿಧವೆಯರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ಒಡ್ಡಿ ಮತಾಂತರಿಸಲಾಗುತ್ತಿತ್ತು.
ಇನ್ನು ಹಿಂದೂ ಯುವತಿಯರನ್ನು ಮತಾಂತರಿಸಿದ್ದಕ್ಕಾಗಿ ಛಂಗೂರ್ ಬಾಬಾ ಭಾರತ-ನೇಪಾಳ ಗಡಿಯಲ್ಲಿ ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮುಸ್ಲಿಂ ಪುರುಷರಿಗೆ ಹಣ ಪಾವತಿಯನ್ನೂ ಮಾಡಿದ್ದಾನೆ. ಛಂಗೂರ್ ಬಾಬಾ ಜೊತೆಗೆ ಆತನ ಸಹಚರ ನೀತು ಅಲಿಯಾಸ್ ನಸ್ರೀನ್‌ನನ್ನು ಸಹ ಬಂಧಿಸಿ ಏಳು ದಿನಗಳ ಎಟಿಎಸ್ ಕಸ್ಟಡಿಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ ಹಣವನ್ನು ನೀತು ನಸ್ರೀನ್ ನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಮತಾಂತರ ಮಾತ್ರವಲ್ಲದೇ ಛಂಗೂರ್ ಬಾಬಾ ನೇಪಾಳಕ್ಕೆ ತೆರಳಿದ್ದು, ಪಾಕ್ ಜೊತೆಗಿನ ಸಂಬಂಧವನ್ನು ಬಲಪಡಿಸಲು ಅಲ್ಲಿನ ಪಾಕ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಿ ಐಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.