ದೇಶ
ದ್ವೇಷ ಭಾಷಣ ಮಸೂದೆಗೆ ವಿರೋಧಿಸುವವರೇ ಪ್ರಚೋದನಕಾರಿ ಭಾಷಣ ಮಾಡುವವರು: ಸಿಎಂ ಸಿದ್ದರಾಮಯ್ಯ
ಮೈಸೂರು: ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ವಿಧೇಯಕವನ್ನು ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದ್ದಾರೆ. ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, “ಸುಮ್ಮನೆ ಯಾರ ವಿರುದ್ಧವೂ ಪ್ರಕರಣ ದಾಖಲಿಸುವುದಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
“ಈ ಮಸೂದೆ ಎಲ್ಲಾ ಪಕ್ಷದವರಿಗೂ ಅನ್ವಯವಾಗುತ್ತದೆ. ಏಕೆ ಬಿಜೆಪಿಯವರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ? ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ?” ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಸಮಾಜದಲ್ಲಿ ಶಾಂತಿ ಹಾಗೂ ಭಾತೃತ್ವ ಕಾಪಾಡಲು ಈ ಮಸೂದೆ ಜಾರಿಗೆ ತರಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣಗಳು ಹೆಚ್ಚಾಗುತ್ತಿದ್ದು, ಅವನ್ನು ನಿಯಂತ್ರಿಸುವ ಉದ್ದೇಶದಿಂದಲೇ ಈ ಕಾನೂನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮಿ ಯೋಜನೆಯ ಹಣ ಲಪಟಾಯಿಸಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿರುವಾಗ ಲಪಟಾಯಿಸುವ ಪ್ರಶ್ನೆಯೇ ಇಲ್ಲ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆ ಆಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು. ಖಜಾನೆ ಖಾಲಿಯಾಗಿದ್ದರೆ 23 ತಿಂಗಳು ಗೃಹಲಕ್ಷ್ಮಿ ಹಣ ನೀಡಲು ಸಾಧ್ಯವಾಗುತ್ತಿತ್ತೇ?” ಎಂದು ತಿರುಗೇಟು ನೀಡಿದರು.
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅದು ಒಪ್ಪಬೇಕಾದ ವಿಚಾರ. ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್ ಗಾಂಧಿ ತೀರ್ಮಾನ ಮಾಡಬೇಕು. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ವಿಚಾರದ ಬಗ್ಗೆ, “ಅವರು ಕೆಪಿಸಿಸಿ ಅಧ್ಯಕ್ಷರು. ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ?” ಎಂದು ಸಿಎಂ ಸ್ಪಷ್ಟಪಡಿಸಿದರು.