Connect with us

ದೇಶ

World War ದ ಭೀತಿ ತಪ್ಪಿತೇ? ಇರಾನ್ ಮೇಲಿನ ದಾಳಿಯನ್ನು ಕೊನೇ ಕ್ಷಣದಲ್ಲಿ ರದ್ದು

Published

on

ವಾಷಿಂಗ್ಟನ್: World War ಇರಾನ್ ವಿರುದ್ಧ ಭಾರೀ ಸೇನಾ ದಾಳಿ ನಡೆಸಲು ಸಜ್ಜಾಗಿದ್ದ ಅಮೆರಿಕ ಕೊನೆಯ ಕ್ಷಣದಲ್ಲಿ ತನ್ನ ನಿರ್ಧಾರವನ್ನು ಬದಲಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಜೊತೆ ಹೊಸ ಸುತ್ತಿನ ಮಾತುಕತೆ ಸೋಮವಾರದಿಂದ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ತಗ್ಗುವ ನಿರೀಕ್ಷೆ ಮೂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲೂ ಗಮನಾರ್ಹ ಪರಿಣಾಮ ಕಂಡುಬಂದಿದೆ.

ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿ “ದ್ವಿತೀಯ ವಿಶ್ವಯುದ್ಧದ ನಂತರದ ಅತಿದೊಡ್ಡ ದಾಳಿ” ಆಗುತ್ತಿತ್ತು ಎಂದು ಹೇಳಿದರು. ಆದರೆ ಇರಾನ್ ಹಾಗೂ ಮಧ್ಯಪ್ರಾಚ್ಯದ ಅಮೆರಿಕದ ಮಿತ್ರ ರಾಷ್ಟ್ರಗಳ ಮನವಿಯ ಹಿನ್ನೆಲೆಯಲ್ಲಿ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

“ನಾವು ಯಾವುದೇ ಕ್ಷಣದಲ್ಲೂ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ. ಆದರೆ ಜನರನ್ನು ಕೊಲ್ಲುವುದು ನಮ್ಮ ಉದ್ದೇಶವಲ್ಲ. ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಬಯಸುತ್ತೇವೆ,” ಎಂದು ಟ್ರಂಪ್ ಹೇಳಿದರು.

ಇರಾನ್ ಜೊತೆ ನಡೆಯಲಿರುವ ಮಾತುಕತೆ ಯಾವ ದೇಶದಲ್ಲಿ ನಡೆಯಲಿದೆ ಅಥವಾ ಯಾರು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಟ್ರಂಪ್ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್ ಸೇರಿದಂತೆ ಹಲವು ಮಿತ್ರ ರಾಷ್ಟ್ರಗಳು ದಾಳಿ ನಡೆಸದಂತೆ ಮನವಿ ಮಾಡಿದ್ದವು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ Truth Socialನಲ್ಲಿ, ಇರಾನ್ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳು ದಾಳಿ ಮುಂದೂಡಲು ವಿನಂತಿಸಿಕೊಂಡಿದ್ದರಿಂದ ಶಾಂತಿ ಒಪ್ಪಂದದ ಚೌಕಟ್ಟು ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಆದರೆ ಟ್ರಂಪ್ ಅವರ ಈ ಹೇಳಿಕೆಯನ್ನು ಇರಾನ್ ತಳ್ಳಿ ಹಾಕಿದೆ. ಇರಾನ್‌ನ Mehr News Agency ವರದಿ ಪ್ರಕಾರ, ಅಮೆರಿಕದ ದಾಳಿಯನ್ನು ಮುಂದೂಡಲು ಇರಾನ್ ಯಾವುದೇ ಮನವಿ ಮಾಡಿಲ್ಲ. ಟ್ರಂಪ್ ಹೇಳಿಕೆ “ಹೊಸ ಸುಳ್ಳು” ಎಂದು ಆ ಸಂಸ್ಥೆ ಟೀಕಿಸಿದೆ.

ಇನ್ನೊಂದೆಡೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಹೋರ್ಮುಜ್ ಜಲಸಂಧಿ ಕುರಿತ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಹೋರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಸುಮಾರು 20% ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಾಟವಾಗುವುದರಿಂದ ಅಲ್ಲಿನ ಬೆಳವಣಿಗೆಗಳ ಮೇಲೆ ಜಾಗತಿಕ ಮಾರುಕಟ್ಟೆಯ ಕಣ್ಣಿದೆ.

ಟ್ರಂಪ್ ಘೋಷಣೆಯ ಬೆನ್ನಲ್ಲೇ ಜಾಗತಿಕ ತೈಲ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 4.5ರಷ್ಟು ಇಳಿಕೆಯಾಗಿದ್ದರೆ, ಅಮೆರಿಕದ WTI ಕಚ್ಚಾ ತೈಲ ಕೂಡ ಶೇಕಡಾ 4.6ರಷ್ಟು ಕುಸಿದಿದೆ.

ಇರಾನ್‌ನ ಹಂಗಾಮಿ ರಕ್ಷಣಾ ಸಚಿವ ಮಜೀದ್ ಇಬ್ನ್ ಅಲ್-ರೆಜಾ ಪ್ರತಿಕ್ರಿಯಿಸಿ, ಶತ್ರು ರಾಷ್ಟ್ರಗಳಿಂದ ಬರುವ ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. “ನಾವು ಯಾವುದೇ ದಾಳಿಗೆ ಸಿದ್ಧರಾಗಿದ್ದೇವೆ. ನಮ್ಮನ್ನು ಅಚ್ಚರಿಗೊಳಿಸಲು ಯಾರಿಗೂ ಸಾಧ್ಯವಿಲ್ಲ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷದ ನಡುವೆ ಈ ಹೊಸ ಮಾತುಕತೆಗಳು ಯಶಸ್ವಿಯಾದರೆ, ಜಾಗತಿಕ ತೈಲ ಮಾರುಕಟ್ಟೆ ಮತ್ತು ಪ್ರಾದೇಶಿಕ ಭದ್ರತಾ ಪರಿಸ್ಥಿತಿಗೆ ಮಹತ್ವದ ತಿರುವು ಸಿಗುವ ಸಾಧ್ಯತೆ ಇದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru ಸ್ವಚ್ಛತೆಗೆ ಹೊಸ ಪ್ಲ್ಯಾನ್? 5 ನಗರ ಪಾಲಿಕೆಗಳಿಗೆ ಅಧಿಕಾರ ಹಂಚಿಕೆ ಯಾಕೆ?

Published

on

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ (GBA) ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಆಡಳಿತಾತ್ಮಕ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಘನತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆ ಮತ್ತು ಸಾಗಣೆ ಜವಾಬ್ದಾರಿಯನ್ನು ಐದು ನಗರ ಪಾಲಿಕೆಗಳು ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (BSWML) ನಡುವೆ ಹಂಚಿಕೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಬಿಎ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಬಿಬಿಎಂಪಿ (BBMP) ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಪಾಲಿಕೆಯೇ ನಿರ್ವಹಿಸುತ್ತಿತ್ತು. ನಂತರ ಗ್ರೇಟರ್ ಬೆಂಗಳೂರು ಆಡಳಿತ (GBA) ರಚನೆಯಾದ ಬಳಿಕ ಈ ಜವಾಬ್ದಾರಿಯನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮಕ್ಕೆ (BSWML) ವಹಿಸಲಾಗಿತ್ತು. ಇದೀಗ ಹೊಸ ಆದೇಶದಂತೆ, ಘನತ್ಯಾಜ್ಯ ನಿರ್ವಹಣಾ ಉಪಕರ (SWM Cess) ಹಾಗೂ ಬಳಕೆದಾರರ ಸೇವಾ ಶುಲ್ಕವನ್ನು ನಗರ ಪಾಲಿಕೆಗಳೇ ಸಂಗ್ರಹಿಸುತ್ತಿರುವುದರಿಂದ, ಕಾರ್ಯನಿರ್ವಹಣೆಯ ಹೊಣೆಗಾರಿಕೆಯನ್ನೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ.

ಪಾಲಿಕೆಗಳೇ ಭರಿಸಲಿವೆ ಬಿಲ್ ವೆಚ್ಚ

ಹೊಸ ವ್ಯವಸ್ಥೆಯಡಿ ನಗರ ಪಾಲಿಕೆಗಳು ಸಂಗ್ರಹಿಸುವ SWM ಸೆಸ್ ಮತ್ತು ಸೇವಾ ಶುಲ್ಕದಿಂದಲೇ ಮಾಸಿಕ ಕಾರ್ಯಾಚರಣೆ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ. ಇದರಿಂದ ಆರ್ಥಿಕ ಹೊಣೆಗಾರಿಕೆಯೂ ಪಾಲಿಕೆಗಳ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸಲಾಗುತ್ತದೆ.

ಜಂಟಿ ಆಯುಕ್ತ ಮಟ್ಟದ ಅಧಿಕಾರಿಗಳ ನೇಮಕ

ಈ ಕಾರ್ಯದ ಸಮರ್ಪಕ ನಿರ್ವಹಣೆಗಾಗಿ ಪ್ರತಿಯೊಂದು ನಗರ ಪಾಲಿಕೆಯಲ್ಲಿ ಜಂಟಿ ಆಯುಕ್ತರ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಬಿಲ್ ಪಾವತಿ ಜವಾಬ್ದಾರಿಗಾಗಿ ನೇಮಕ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಇನ್ನೊಂದೆಡೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (BSWML) ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಪ್ರಾಥಮಿಕ ಸಂಗ್ರಹಣೆ ಹಾಗೂ ದ್ವಿತೀಯ ಹಂತದ ತ್ಯಾಜ್ಯ ಸಾಗಣೆ ಕಾರ್ಯಾಚರಣೆಯನ್ನು ಮುಂದುವರಿಸಲಿದೆ.

ಆರೋಗ್ಯ ಮತ್ತು ನೈರ್ಮಲ್ಯ ಸಿಬ್ಬಂದಿಗೆ ಹೊಸ ಆಡಳಿತ ವ್ಯವಸ್ಥೆ

ಆಯಾ ನಗರ ಪಾಲಿಕೆಗಳ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಆರೋಗ್ಯ ಮೇಲ್ವಿಚಾರಕರು, ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು, ಮಾರ್ಷಲ್‌ಗಳು, ಸಂಪರ್ಕ ಕಾರ್ಯಕರ್ತೆಯರು ಮತ್ತು ಸಮುದಾಯ ಸಂಚಾಲಕರು ಇನ್ನು ಮುಂದೆ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಅಥವಾ ಕಾರ್ಯಪಾಲಕ ಅಭಿಯಂತರರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ತ್ಯಾಜ್ಯ ನಿರ್ವಹಣೆಗೆ ಹೊಸ ದಿಕ್ಕು

ಈ ಹೊಸ ಆಡಳಿತ ವ್ಯವಸ್ಥೆಯಿಂದ ಘನತ್ಯಾಜ್ಯ ನಿರ್ವಹಣೆಯಲ್ಲಿ ಜವಾಬ್ದಾರಿಗಳ ಸ್ಪಷ್ಟ ಹಂಚಿಕೆ ಸಾಧ್ಯವಾಗಲಿದ್ದು, ನಗರ ಸ್ವಚ್ಛತೆ, ಸೇವೆಗಳ ವೇಗ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Continue Reading

ರಾಜ್ಯ

BIG NEWS Karnataka Cabinet Expansion 2026 ಶಾಸಕರಿಗೆ ಸಚಿವ ಸ್ಥಾನ; ಟಿ.ಬಿ. ಜಯಚಂದ್ರ ಸ್ಪೀಕರ್‌, ಇಂದು ಪ್ರಮಾಣವಚನ

Published

on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ D K Shiv Kumar ನೇತೃತ್ವದ Karnataka Cabinet Expansion 2026 ಗೆ ಕೊನೆಗೂ ತೆರೆ ಬಿದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಅಂತಿಮ ಪಟ್ಟಿ ಅನುಮೋದನೆಗೊಂಡಿದೆ. ಈ ಹಿನ್ನೆಲೆಯಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದರ ಜೊತೆಗೆ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸ್ಥಾನಕ್ಕೆ ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳೂ ಕೇಳಿಬಂದಿದ್ದರೂ, ಅಂತಿಮವಾಗಿ ಹೈಕಮಾಂಡ್ ಟಿ.ಬಿ. ಜಯಚಂದ್ರ ಅವರಿಗೆ ಅವಕಾಶ ನೀಡಿದೆ.

ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲರ ಸಮ್ಮುಖದಲ್ಲಿ ಸಚಿವರು ಅಧಿಕಾರ ಸ್ವೀಕರಿಸಲಿದ್ದಾರೆ.

ಸಚಿವ ಸಂಪುಟ ಸೇರಿರುವ 20 ನಾಯಕರು

ಸಚಿವ ಸ್ಥಾನ ಪಡೆದಿರುವವರಲ್ಲಿ ಲಕ್ಷ್ಮಣ ಸವದಿ (ಅಥಣಿ), ಎಚ್.ಸಿ. ಬಾಲಕೃಷ್ಣ (ಮಾಗಡಿ), ವಿಜಯಾನಂದ ಕಾಶಪ್ಪನವರ್ (ಹುನಗುಂದ), ಶಿವರಾಜ್ ತಂಗಡಗಿ (ಕನಕಗಿರಿ), ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ ಉತ್ತರ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಸಂತೋಷ್ ಲಾಡ್ (ಕಲಘಟಗಿ), ಡಾ. ಅಜಯ್ ಸಿಂಗ್ (ಜೇವರ್ಗಿ), ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ), ರಿಜ್ವಾನ್ ಅರ್ಷದ್ (ಶಿವಾಜಿನಗರ), ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ), ರುದ್ರಪ್ಪ ಲಮಾಣಿ, ಶಿವಲಿಂಗೇಗೌಡ (ಅರಸೀಕೆರೆ), ಚೆಲುವರಾಯಸ್ವಾಮಿ (ನಾಗಮಂಗಲ), ಬಸವರಾಜ ರಾಯರೆಡ್ಡಿ (ಯಲಬುರ್ಗಾ), ಟಿ. ರಘುಮೂರ್ತಿ (ಚಳ್ಳಕೆರೆ), ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಮಂಕಾಳು ವೈದ್ಯ, ಬಸವಂತಪ್ಪ (ಮಾಯಕೊಂಡ) ಹಾಗೂ ಮಧು ಬಂಗಾರಪ್ಪ (ಸೊರಬ) ಸೇರಿದ್ದಾರೆ.

ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನಕ್ಕೆ ಒತ್ತು

ಈ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಜೊತೆಗೆ ವಿವಿಧ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸಿದೆ ಎನ್ನಲಾಗಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಬಲ

ಸಚಿವ ಸಂಪುಟ ವಿಸ್ತರಣೆಯೊಂದಿಗೆ ಆಡಳಿತಕ್ಕೆ ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದ್ದು, ವಿವಿಧ ಇಲಾಖೆಗಳ ಜವಾಬ್ದಾರಿಗಳನ್ನು ಶೀಘ್ರದಲ್ಲೇ ಹಂಚಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಡಳಿತದ ವೇಗ ಹೆಚ್ಚಿಸುವ ಜೊತೆಗೆ ಅಭಿವೃದ್ಧಿ ಯೋಜನೆಗಳಿಗೆ ಹೊಸ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.

Continue Reading

ದೇಶ

SIIMA 2026ಕ್ಕೆ ಕೌಂಟ್‌ಡೌನ್! ಬೆಂಗಳೂರಿನಲ್ಲಿ ಅದ್ಧೂರಿ ಘೋಷಣೆ – ಶ್ರೀಮುರಳಿ ಹೇಳಿದ್ದೇನು?

Published

on

ಬೆಂಗಳೂರು: ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2026ಕ್ಕೆ ಅಧಿಕೃತ ಚಾಲನೆ ದೊರೆತಿದೆ. 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 11 ಮತ್ತು 12ರಂದು ಅದ್ಧೂರಿಯಾಗಿ ನಡೆಯಲಿದ್ದು, ಈ ಕುರಿತು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು ಮಹತ್ವದ ಮಾಹಿತಿ ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ Brinda Prasad, ಕನ್ನಡ ನಟ Sri Murali , ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದರು. ಈ ವರ್ಷದ ಸೈಮಾ ಸಮಾರಂಭವನ್ನು ಮತ್ತಷ್ಟು ವೈಭವಯುತವಾಗಿ ಆಯೋಜಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.

ಈ ವೇಳೆ ಮಾತನಾಡಿದ ನಟ ಶ್ರೀಮುರಳಿ, “ಈ ಬಾರಿ ಸೈಮಾ ಪರವಾಗಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ. ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಈ ಕಾರ್ಯಕ್ರಮ ಪ್ರತಿಯೊಬ್ಬ ಕಲಾವಿದನಿಗೂ ವಿಶೇಷವಾಗಿದೆ. ಈ ವರ್ಷದ ಸಮಾರಂಭವೂ ಅದ್ಧೂರಿಯಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ತಮ್ಮ ಕುಟುಂಬ ಮತ್ತು ಸೈಮಾ ನಡುವಿನ ಸಂಬಂಧವನ್ನು ಸ್ಮರಿಸಿದ ಶ್ರೀಮುರಳಿ, “ಕಳೆದ 14 ವರ್ಷಗಳಿಂದ ನಮ್ಮ ಕುಟುಂಬಕ್ಕೂ ಸೈಮಾಗೂ ವಿಶೇಷ ಬಾಂಧವ್ಯವಿದೆ. ನನ್ನ ಕಸಿನ್ ಡಾ. ಪುನೀತ್ ರಾಜ್‌ಕುಮಾರ್ (ಅಪ್ಪು) ನಾಲ್ಕು ಬಾರಿ, ಡಾ. ಶಿವರಾಜ್‌ಕುಮಾರ್ ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ನನ್ನ ಅಣ್ಣ ವಿಜಯ್ ರಾಘವೇಂದ್ರ ಎರಡು ಬಾರಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ನನಗೂ ಮಫ್ತಿ ಚಿತ್ರದ ಅಭಿನಯಕ್ಕಾಗಿ ‘ಬೆಸ್ಟ್ ಲೀಡ್ (ಕ್ರಿಟಿಕ್ಸ್)’ ಪ್ರಶಸ್ತಿ ದೊರೆತಿತ್ತು. ಇದು ನನ್ನ ಜೀವನದ ಮರೆಯಲಾಗದ ಕ್ಷಣ” ಎಂದು ಭಾವುಕರಾದರು.

“ಸಾಮಾನ್ಯವಾಗಿ ಅಭಿಮಾನಿಗಳು ಸಿನಿಮಾ ತಾರೆಯರನ್ನು ಬೆಳ್ಳಿತೆರೆಯಲ್ಲಷ್ಟೇ ನೋಡುತ್ತಾರೆ. ಆದರೆ ಸೈಮಾ ಎಲ್ಲಾ ಭಾಷೆಗಳ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುತ್ತದೆ. ಒಬ್ಬ ಕಲಾವಿದನಿಗೆ ಪ್ರಶಸ್ತಿ ಎನ್ನುವುದು ಕೇವಲ ಗೌರವವಲ್ಲ, ಅವರ ಪರಿಶ್ರಮಕ್ಕೆ ಸಿಗುವ ದೊಡ್ಡ ಮಾನ್ಯತೆ” ಎಂದು ಅವರು ಹೇಳಿದರು.

ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, “ಸೈಮಾ ಸಂಸ್ಥೆ ನಂಬಿಕೆ, ಬದ್ಧತೆ ಮತ್ತು ನಿರಂತರತೆಯ ಆಧಾರದ ಮೇಲೆ ಬೆಳೆದಿದೆ. ಇಂದು ಇದು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ಪ್ರಶಸ್ತಿ ವೇದಿಕೆಯಾಗಿದೆ” ಎಂದು ಹೇಳಿದರು.

“ನಮ್ಮ ಬೆಳವಣಿಗೆಯಲ್ಲಿ ಪಾಲುದಾರರು, ಚಿತ್ರರಂಗದ ಗಣ್ಯರು, ಮಾಧ್ಯಮ ಮಿತ್ರರು ಹಾಗೂ ಅಭಿಮಾನಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ವರ್ಷವೂ Maruti Suzuki NEXA ಸತತ ನಾಲ್ಕನೇ ವರ್ಷ ಸಹಭಾಗಿತ್ವ ವಹಿಸಿರುವುದು ಸಂತಸದ ಸಂಗತಿ. ಅವರ ಬೆಂಬಲದಿಂದ ಈ ವರ್ಷದ ಕಾರ್ಯಕ್ರಮವನ್ನು ಮತ್ತಷ್ಟು ಭವ್ಯವಾಗಿ ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.

ಈ ವರ್ಷದ ಸೈಮಾ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ತಾರೆಯರು, ತಾಂತ್ರಿಕ ತಜ್ಞರು ಮತ್ತು ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಪ್ರಮುಖ ವೇದಿಕೆಯಾಗಿರುವ ಸೈಮಾ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆಯಲು ಸಜ್ಜಾಗಿದೆ.

Continue Reading

Trending